ಮಂಗಳೂರು : ಉರ್ವಸ್ಟೋರ್ ಪರಿಸರದಲ್ಲಿ ಹಲವು ದಶಕಗಳಿಂದ ಯಕ್ಷಗಾನ ಕಲಾ ಸೇವೆ ಮಾಡುತ್ತಿದ್ದ ಶ್ರೀ ಶಾರದಾಂಬಾ ಯಕ್ಷಗಾನ ಮಂಡಳಿಯನ್ನು ಉರ್ವಸ್ಟೋರ್‌ನ ಶ್ರೀ ಮಹಾಗಣಪತಿ ದೇವಸ್ಥಾನ ಸನ್ನಿಧಿಯಲ್ಲಿ ಮಂಡಳಿಯ ಯಕ್ಷಗಾನ ತಾಳಮದ್ದಳೆ ಸೇವೆಯೊಂದಿಗೆ ದಿನಾಂಕ 10-04-2024ರಂದು ಪುನರಾರಂಭ ಮಾಡಲಾಯಿತು.
ಮಂಡಳಿಯ ಅಧ್ಯಕ್ಷ ಕದ್ರಿ ನವನೀತ ಶೆಟ್ಟಿ ಮಾತನಾಡಿ, “1932ರಲ್ಲಿ ದಿ. ಹೂವಪ್ಪ ಮಡಿವಾಳರಿಂದ ಪ್ರಾರಂಭಿಸಲ್ಪಟ್ಟ ಈ ಮಂಡಳಿ ಮುಂದೆ ದಿ. ಕೃಷ್ಣಪ್ಪ ಕರ್ಕೇರರ ಸಂಚಾಲಕತ್ವದಲ್ಲಿ ಹಲವು ವರ್ಷ ಮುನ್ನಡೆಯಿತು. ಇತ್ತೀಚಿನ ಕೆಲವು ಸಮಯಗಳಿಂದ ಸ್ಥಗಿತಗೊಂಡಿದ್ದ ಈ ಮಂಡಳಿಗೆ ಈಗ ಶ್ರೀ ಮಹಾಗಣಪತಿ ದೇವರ ಸನ್ನಿಧಾನದಲ್ಲಿ ಯಕ್ಷಗಾನದ ಮೂಲಕ ಪುರಾಣ ಕಥೆಗಳ ಪ್ರಚಾರ ಸೇವೆಯನ್ನು ಮಾಡುವ ಭಾಗ್ಯ ದೊರಕಿದೆ.” ಹಲವು ಕಲಾವಿದರನ್ನು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಈ ಮಂಡಳಿಗೆ ಬೆಂಬಲ ನೀಡಿ ಇನ್ನಷ್ಟು ಕಲಾವಿದರು ರೂಪುಗೊಳ್ಳಲು ಅನುವು ಮಾಡಿಕೊಟ್ಟ ದೇವಸ್ಥಾನದ ಆಡಳಿತ ಮಂಡಳಿಗೆ ಕೃತಜ್ಞತೆ ಸೂಚಿಸಿದರು.
ವಿದ್ವಾಂಸ ಎಂ. ಪ್ರಭಾಕರ ಜೋಷಿ ಮತ್ತು ದೇವಸ್ಥಾನದ ಅಧ್ಯಕ್ಷ ಸುರೇಂದ್ರ ರಾವ್ ಮಾತನಾಡಿದರು. ಕೆನರಾ ಪದವಿ ಪೂರ್ವ ವಿದ್ಯಾಲಯದ ನಿವೃತ್ತ ಉಪನ್ಯಾಸಕ ಜಿ.ಕೆ. ಭಟ್ ಸೇರಾಜೆ, ಹಿರಿಯ ನ್ಯಾಯವಾದಿ ಹರಿದಾಸ ಕೂಡ್ಲು ಮಹಾಬಲ ಶೆಟ್ಟಿ, ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀಧರ ಮಣಿಯಾಣಿ, ಶ್ರೀ ಶಾರದಾಂಬಾ ಯಕ್ಷಗಾನ ಮಂಡಳಿ ಗೌರವಾಧ್ಯಕ್ಷ ಕೆ.ಎಲ್. ಜಯಪ್ರಕಾಶ್ ರಾವ್, ಎ.ಸಿ. ಭಂಡಾರಿ, ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಅಧ್ಯಕ್ಷ ಶ್ರೀನಾಥ್ ಎನ್. ಪ್ರಭು ಉಪಸ್ಥಿತರಿದ್ದರು.
ಮಂಡಳಿಯ ಕಾರ್ಯಾಧ್ಯಕ್ಷ ಶಿವಪ್ರಸಾದ್ ಪ್ರಭು ಸ್ವಾಗತಿಸಿ. ಸಂಘಟಕ ಜಯರಾಮ ಉರ್ವಸ್ಟೋರ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ‘ಶರಸೇತು ಬಂಧನ’ ತಾಳಮದ್ದಳೆ ಜರುಗಿತು. ಭಾಗವತರಾಗಿ ಅಶೋಕ ಬೋಳೂರು, ಚೆಂಡೆ ಮದ್ದಳೆಯಲ್ಲಿ ಶಿವಪ್ರಸಾದ್ ಪ್ರಭು, ರವಿಕಿರಣ್ ಕಾವೂರು, ಪ್ರೀತಮ್ ಭಟ್ ಸೇರಾಜೆ, ಪುರುಷೋತ್ತಮ ಆಚಾರ್ ಬೆಳ್ಳಣ್, ವಿಘ್ನೇಶ್ ಬೋಳೂರು ಸಹಕರಿಸಿದರು. ಅರ್ಥಧಾರಿಗಳಾಗಿ ಜಿ.ಕೆ. ಭಟ್ ಸೇರಾಜೆ, ಮಹಾಬಲ ಶೆಟ್ಟಿ ಕೂಡ್ಲು, ಕದ್ರಿ ನವನೀತ ಶೆಟ್ಟಿ, ರಾಧಾಕೃಷ್ಣ ಭಟ್, ರಮೇಶ್ ಆಚಾರ್ಯ ಕಾವೂರು ಸಹಕರಿಸಿದರು.