ಪುತ್ತೂರು : ಚಿಗುರೆಲೆ ಸಾಹಿತ್ಯ ಬಳಗದ ದ್ವಿತೀಯ ವಾರ್ಷಿಕೋತ್ಸವವು ದಿನಾಂಕ 14-4-2024ರ ಭಾನುವಾರ ಪುತ್ತೂರಿನ ಅನುರಾಗ ವಠಾರದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಪುತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಅಂಬೇಡ್ಕರ್ ದಿನಾಚರಣೆ, ದಿವ್ಯಾಂಗ ಚೇತನರಿಗೆ ಕವಿಗೋಷ್ಠಿ ಮತ್ತು ಕೃತಿ ಬಿಡುಗಡೆ ಸಮಾರಂಭವು ಸಂಪನ್ನಗೊಂಡಿತು.
ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ, ಗಿಡಕ್ಕೆ ನೀರುಣಿಸಿ ಉದ್ಘಾಟಿಸಿದ ಹಿರಿಯ ಸಾಹಿತಿಗಳು ಮತ್ತು ಕರ್ನಾಟಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಬಿ. ಪುರಂದರ ಭಟ್ ಮಾತನಾಡಿ “ಸಾಧನೆಯ ಹಾದಿಯಲ್ಲಿ ಎಲ್ಲರೂ ಏಕಾಂಗಿಯಾಗಿ ಇರುತ್ತಾರೆ, ಮುಂದಕ್ಕೆ ಹೋದಂತೆ ಸಮಾನ ಮನಸ್ಕರು ಸೇರಿಕೊಳ್ಳುತ್ತಾರೆ “ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿವೇಕಾನಂದ ಕಾಲೇಜು ಪುತ್ತೂರು ಇಲ್ಲಿನ ಪರೀಕ್ಷಾಂಗ ಕುಲಸಚಿವರಾದ ಡಾ. ಹೆಚ್. ಜಿ. ಶ್ರೀಧರ್ ಮಾತನಾಡಿ “ಸಾಹಿತ್ಯದಲ್ಲಿ ಪ್ರಾಸ ಮಾತ್ರವಲ್ಲ ಲಯ, ಛಂದಸ್ಸು, ಮಾತ್ರೆ ಹಾಗೂ ಗಣಗಳನ್ನು ಒಳಗೊಂಡು ಕೃತಿ ರಚಿಸಲು ಪ್ರಬುದ್ಧರಾಗಬೇಕಾದರೆ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಕಾವ್ಯ ಕಮ್ಮಟಗಳು ಆಯೋಜನೆಯಾಗಬೇಕಿದೆ.” ಎಂದರು.
ರಂಗಕರ್ಮಿ ಮತ್ತು ಪತ್ರಕರ್ತರಾದ ಸಂಶುದ್ದೀನ್ ಸಂಪ್ಯ ಮಾತನಾಡಿ “ಚಿಗುರೆಲೆ ಸಾಹಿತ್ಯ ಬಳಗದ ಮೂಲಕ ಹಲವಾರು ಪ್ರತಿಭೆಗಳು ಹೊರ ಬರುತ್ತಿರುವುದು ಹೆಮ್ಮೆಯ ವಿಚಾರ. ಇಂದಿನ ಸಮಾಜಕ್ಕೆ ಕಲೆ ಮತ್ತು ಸಾಹಿತ್ಯ ಮನಸ್ಸಿನ ಸಂತೋಷ ಇಮ್ಮಡಿಗೊಳಿಸಲು ಪೂರಕವಾಗಿದೆ.” ಎಂದು ಶುಭ ಹಾರೈಸಿದರು. ಚಿಗುರೆಲೆ ಸಾಹಿತ್ಯ ಬಳಗದ ಸ್ಥಾಪಕಾಧ್ಯಕ್ಷರಾದ ಶ್ರೀ ಚಂದ್ರ ಮೌಳಿ ಕಡಂದೇಲು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಸುನೀತಾ ಶ್ರೀರಾಮ್ ಕೊಯಿಲ ಇವರ ‘ಆಶಯ’ ಚೊಚ್ಚಲ ಕವನ ಸಂಕಲನವನ್ನು ಹಿರಿಯ ಸಾಹಿತಿಗಳು ಹಾಗೂ ಮಧು ಪ್ರಪಂಚ ಪತ್ರಿಕೆಯ ಪ್ರಧಾನ ಸಂಪಾದಕರಾಗಿರುವ ಶ್ರೀ ನಾರಾಯಣ ರೈ ಕುಕ್ಕುವಳ್ಳಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಕುಮಾರಿ ಪಾವನಿ. ಬಿ. ನಲ್ಕ ಇವರ ‘ಸಪ್ತಮಿ’ ಚೊಚ್ಚಲ ಕವನಸಂಕಲನವನ್ನು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಪರಿಮಳ ಮಹೇಶ್ ರಾವ್ ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು.
ಸಾಹಿತಿ ನಾರಾಯಣ ಕುಂಬ್ರ ಸಾಹಿತ್ಯದ ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ್ ರೈ ನಿರ್ಮಾಣದ ಪುತ್ತೂರು ಮಹಾಲಿಂಗೇಶ್ವರ ದೇವರ ಭಕ್ತಿ ಧ್ವನಿ ಸುರುಳಿ ‘ಬಿಲ್ವಾರ್ಚನೆ’ಯನ್ನು ನಾಟ್ಯ ಮಯೂರಿ ಬಿರುದಾಂಕಿತ ಕು. ಶ್ರೇಯಾ ಮೇರ್ಕಜೆ ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ವಿಶೇಷ ಚೇತನ ಪ್ರತಿಭೆಗಳಾದ ಕು. ಧನ್ಯಶ್ರೀ, ಕು. ಮಾನ್ಯ ಮತ್ತು ಶ್ರೀಮತಿ ಮಲ್ಲಿಕಾ ಐ. ಹಿರೇಬಂಡಾಡಿಯವರಿಂದ ಕವಿಗೋಷ್ಠಿ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಮಾತನಾಡಿ “ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರಿನ ದೊಡ್ಡ ಶಕ್ತಿ ಚಿಗುರೆಲೆ ಸಾಹಿತ್ಯ ಬಳಗ ಆಗಿದ್ದು, ಸಾಹಿತ್ಯ ಪರಿಷತ್ತಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಕೈ ಜೋಡಿಸುತ್ತಿದೆ”. ಎಂದರು.
ಯುವ ಸಾಹಿತಿ ಸುಪ್ರೀತಾ ಚರಣ್ ಪಾಲಪ್ಪೆಯವರ ಪರಿಕಲ್ಪನೆಯಲ್ಲಿ ಸಭಾ ಕಾರ್ಯಕ್ರಮಕ್ಕೆ ಮೊದಲು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಇವರ ಭಾವಚಿತ್ರಕ್ಕೆ ಪುಷ್ಪ ನಮನದೊಂದಿಗೆ ಗಣ್ಯರು ಗೌರವ ಸಲ್ಲಿಸಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಯಿತು. ಸಮಾರಂಭ ಉದ್ಘಾಟನೆಯನ್ನು ಹಸಿರು ಗಿಡಕ್ಕೆ ನೀರೆರೆಯುವ ಮೂಲಕ ಹಾಗೂ ಗಣ್ಯರ ಗೌರವ ಸಮರ್ಪಣೆಯಲ್ಲಿ ಸ್ಮರಣಿಕೆ ಬದಲು ಹೂವಿನ ಗಿಡ ನೀಡಲಾಯಿತು.
ಶ್ರೀ ಸುರೇಶ ಚಾರ್ವಾಕ ಪ್ರಾರ್ಥನೆಯೊಂದಿಗೆ, ಪೂರ್ಣಿಮಾ ಪೆರ್ಲಂಪಾಡಿ ಸ್ವಾಗತಿಸಿ, ನಾರಾಯಣ ಕುಂಬ್ರ ಪ್ರಸ್ತಾವನೆ ಮತ್ತು ವರದಿ ಮಂದಿಸಿ, ಪ್ರತೀಕ್ಷಾ ಆರ್. ಕಾವು ವಂದನಾರ್ಪಣೆಗೈದು ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.