ಈಗಾಗಲೇ ಏಪ್ರಿಲ್ 14 ರಂದು ‘ಬಿಸು’ ಹಬ್ಬವನ್ನು ತುಳುನಾಡಿನಾದ್ಯಂತ ಆಚರಿಸಿಯಾಗಿದೆ. ದ.ಕ. ಮತ್ತು ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ, ತುಳುನಾಡು ಎಂದು ಕರೆಯುವ ವಿಸ್ತಾರ ಭೂ ಪ್ರದೇಶವನ್ನು ಹೊಂದಿದ ಮತ್ತು ತುಳುವನ್ನು ‘ಮಾತೃಭಾಷೆ ‘ಅಂತ ಕರೆಯಲ್ಪಡುವ ಒಂದು ಜನಸಮೂಹವಿದೆ. ಈ ಜನರು ಆಧುನಿಕ ಕ್ಯಾಲೆಂಡರಿನ ಪ್ರಕಾರ ವರ್ಷವನ್ನು ಆರಂಭಿಸುವುದಿಲ್ಲ. ಬದಲಾಗಿ ‘ಬಿಸು’ ಅನ್ನುವ ಹಬ್ಬದ ಆಚರಣೆಯ ಮೂಲಕ ಅವರು ತಮ್ಮ ಹೊಸ ವರ್ಷವನ್ನು ಆರಂಭಿಸುತ್ತಾರೆ.
ಇಲ್ಲಿನ ಪ್ರದೇಶದಲ್ಲಿ ತುಳುವರು ಸೌರಮಾನದ ಹಿನ್ನೆಲೆಯಲ್ಲಿ, ಸಂಕ್ರಾಂತಿಯ ನೆಲೆಯಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಭೂಮಿ, ಸೂರ್ಯನಿಗೆ ಸುತ್ತು ಬರುವ ದಿನವನ್ನು ಲೆಕ್ಕ ಹಾಕಿ, ಆ 365ದಿನಗಳನ್ನು ಒಂದು ವರ್ಷವೆಂದು ಪರಿಗಣಿಸಿ, ಅದನ್ನು ಹನ್ನೆರಡು ತಿಂಗಳುಗಳಾಗಿ ವಿಭಾಗಿಸಿ, ಒಂದು ತಿಂಗಳಿಗೆ ಒಂದು ರಾಶಿ ಎಂದು ಹೆಸರಿಟ್ಟು, ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸೂರ್ಯ ಸಂಚರಿಸಲು ತೆಗೆದುಕೊಳ್ಳುವ ಒಂದು ತಿಂಗಳಿನ ಸಮಯವಕಾಶವನ್ನು ಬದಲಾವಣೆ ಎಂದು ಗುರುತಿಸಿ, ಈ ಪದ್ಧತಿ ತಮ್ಮ ಕೃಷಿ ಚಟುವಟಿಕೆಗಳಿಗೆ ಅನುಕೂಲವೆಂದು ತಿಳಿದು, ತುಳುವರು ಸೌರಮಾನದ ಬದಲಾವಣೆಗಳೇ ತಮ್ಮ ಹಬ್ಬದ ಆಚರಣೆಗಳಿಗೆ ಸೂಕ್ತ ಎಂದು ಬಗೆದರು.
ಹೀಗಾಗಿ ಅವರು ಆರಂಭದ ಏಪ್ರಿಲ್ – ಮೇ ತಿಂಗಳ ವಸಂತ ಋತುವಿನ ಈ ದಿನಗಳನ್ನು ‘ಪಗ್ಗು’ ಎಂದು ಕರೆದರು. ಹೀಗೆ ವರ್ಷದ ಆರಂಭಕ್ಕೆ ಒಂದು ಮುಹೂರ್ತ ಬೇಕಲ್ಲ….ಅದನ್ನು ‘ಬಿಸುಕಣಿ’ ಇಡುವುದು ಎಂಬುದಾಗಿ ಆಚರಿಸಿದರು. ಈ ದಿನದಂದು ಮನೆಯ ರೈತ ಎಲ್ಲರಿಗಿಂತ ಮುಂಚೆ ಎದ್ದು ಹೊಲಕ್ಕೆ ಹೋಗಿ ಎತ್ತುಗಳ ಮೂಲಕ ಹೊಲವನ್ನು ಸ್ವಲ್ಪ ಪ್ರಮಾಣದಲ್ಲಿ ಉತ್ತು, ಬೀಜ ಬಿತ್ತುತ್ತಾರೆ. ಇದನ್ನು ತುಳುವರು ‘ಕೈ ಬಿತ್ತ್ ಪಾಡುನಿ’ ಎಂದರು. ಇದು ಕೃಷಿ ಮಾಡುವುದಕ್ಕೆ ಆರಂಭ ಅಂತರ್ಥ. ಇಲ್ಲಿಂದ ಅವರ ಕೃಷಿ ಕೆಲಸಗಳು ನಿರಂತರ ನಡೆಯುತ್ತಿರುತ್ತದೆ.
ರೈತ (ಯಜಮಾನ)ಹೊಲದಿಂದ ಬರುವಷ್ಟರಲ್ಲಿ ಮನೆಯ ಎಲ್ಲಾ ಸದಸ್ಯರೂ ಬೇಗ ಎದ್ದು ಸ್ನಾನ ಮಾಡಿ, ತಮ್ಮದೇ ಮನೆಯಲ್ಲಿ ಬೆಳೆದ ಹೂಗಳನ್ನು ಕೊಯ್ದು, ತಮ್ಮ ತೋಟದಲ್ಲಿ ಬೆಳೆದ ತರಕಾರಿಗಳನ್ನು ತಂದು, ಒಂದು ಎತ್ತರದ ಮಣೆಯ ಮೇಲೆ ಎರಡು ಬಾಳೆಎಲೆ ಹಾಕಿ ಅದರ ಮೇಲೆ ಅಕ್ಕಿ, ತೆಂಗಿನಕಾಯಿ ಇಟ್ಟು ಎದುರುಗಡೆ ಚೊಂಬಿನಲ್ಲಿ ನೀರಿಟ್ಟು ಬಲಗಡೆ ದೀಪ ಹೊತ್ತಿಸಿಟ್ಟು ವೀಳ್ಯದೆಲೆ, ಅಡಿಕೆ, ಹಿಂಗಾರ…ಹೀಗೆ ಎಲ್ಲವನ್ನೂ ಎದುರಿಗೆ ಜೋಡಿಸಿಟ್ಟು ಎಲ್ಲರೂ ಬಂದು ಕನ್ನಡಿ ನೋಡಿ ಕೈ ಮುಗಿಯುತ್ತಾರೆ. ಬಳಿಕ ಹಿರಿಯರ ಕಾಲಿಗೆ ಕಿರಿಯರು ನಾಮಸ್ಕರಿಸುತ್ತಾರೆ. ಕೆಲವು ಮನೆಗಳಲ್ಲಿ ಹಿರಿಯರು ಉಡುಗೊರೆಯನ್ನು ಕೂಡಾ ಕೊಡುತ್ತಾರೆ.
ಈ ದಿನ ತುಳುವರು ಏನೇ ಕೆಲಸ ಮಾಡಬೇಕೆಂದರೂ ಮುಹೂರ್ತ ಕೇಳುವುದಿಲ್ಲ. ಯಾವ ಒಳ್ಳೆಯ ಕೆಲಸವಾದರೂ ಇದೇ ದಿನ ಆರಂಭಿಸುತ್ತಾರೆ. ಮಕ್ಕಳಿಗೆ ಕಿವಿ ಚುಚ್ಚುವುದು ಕೂಡಾ ಇದೇ ದಿನದಂದು. ಗೃಹಪ್ರವೇಶ ಇದ್ದರೂ ಕೂಡ ಇದೇ ದಿನ ಇಡುತ್ತಾರೆ .
ಬಿಸುವಿನ ದಿನ ಬೆಳಿಗ್ಗೆ ಎದ್ದು ‘ಬಿಸುಕಣಿ ‘ನೋಡಬೇಕು ಅನ್ನುವ ಸಂಪ್ರದಾಯ ತುಳುವರಲ್ಲಿದೆ.
ಈ ಬಿಸುಕಣಿಯನ್ನು ಮನೆಯೆದುರಿನ ತುಳಸಿ ಕಟ್ಟೆ ಅಥವಾ ದೈವದ ಮನೆಯ ಪಡಸಾಲೆ ಅಥವಾ ಮನೆಯ ಚಾವಡಿಯಲ್ಲಿ ಇಡುತ್ತಾರೆ.
ಈ ದಿನ ವಿಶೇಷವಾಗಿ ಮನೆಯಲ್ಲೇ ಬೆಳೆದ ತರಕಾರಿ ಊಟ, ಗೇರುಬೀಜ ಹಾಕಿದ ಪಾಯಸ, ಮೂಡೆ, ಗುಂಡ, ದೋಸೆ…ಹೀಗೆ ಹುದುಗು ಬರಿಸಿದ ತಿಂಡಿ ಸಾಮಾನ್ಯವಾಗಿ ಇರುತ್ತದೆ.ಈ ದಿನ ಯಾರಾದರೂ ಬುಟ್ಟಿ ಹೆಣಿಗೆ ಮಾರುವವರು ಬಂದಲ್ಲಿ ಅವರಿಗೂ ಇದನ್ನೇ ಕೊಡುವ ಸಂಪ್ರದಾಯವೂ ಇದೆ.
ಪ್ರಕೃತಿಯಲ್ಲಿ ಬದುಕು ಕಟ್ಟುವ ರೈತಾಪಿ ವರ್ಗದವರ ಆಚರಣೆ ಇದಾದ್ದರಿಂದ ಇಲ್ಲಿ ಬೆಳೆದದ್ದನ್ನು ಪ್ರಕೃತಿಗೆ ಅರ್ಪಿಸುವ ಆರಂಭಿಕ ಸಂಪ್ರದಾಯವಿದು.. ಕಣಿ ಎಂದರೆ ‘ಕಾಣಿಕೆ ‘ಎಂದರ್ಥ. ಇದನ್ನೇ ಕಾಣಿಕೆ ಇಡುವುದು ಅಂತ ತುಳುವರು ಕರೆದರು.
ಬೆಳಗ್ಗಿನಿಂದ ಆರಂಭವಾಗಿ ಸಾಯಂಕಾಲ ಮುಗಿಯುವ ಈ ಹಬ್ಬದಂದು ತೆಂಗಿನ ಕಾಯಿ ಕುಟ್ಟುವ ಮನರಂಜನೆಯ ಆಟವನ್ನು ಸಂಭ್ರಮದಿಂದ ಆಡುತ್ತಾರೆ.
ಇಲ್ಲಿಂದ ತುಳುವರ ಕೃಷಿ ಕೆಲಸಗಳು ನಿತ್ಯ ಆರಂಭವಾಗುತ್ತವೆ. ಸಾಲು ಸಾಲು ಹಬ್ಬಗಳೂ ಇದರ ನಂತರವೇ ಶುರುವಾಗುವುದು.
ಆದ್ದರಿಂದ ತುಳುವರಿಗೆ ಬಿಸು ಅನ್ನುವುದು ವರ್ಷದ ಆರಂಭವಾಗಿದೆ.
ಸುಲೋಚನಾ ಪಚ್ಚಿನಡ್ಕ
ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಇವರ ಮಿಂಚುಹುಳ , ಶುಭಯಾನ,ಹಟದ ಹಕ್ಕಿಯ ದೂರ ಯಾನ, ಬಿಸಿಲುಗುದುರೆಯ ದಾರಿ ಇವು ಇವರ ಪ್ರಕಟಿತ ಕೃತಿಗಳು. ಗುಟ್ಟು ಹೇಳುವ ಬದುಕು, ತುಡರ್ ಮತ್ತು ಬೆಳದಿಂಗಳು ಪ್ರಕಟನೆಯಲ್ಲಿದೆ.