ಮಹಾಭಾರತವನ್ನು ಆಧಾರವಾಗಿಟ್ಟುಕೊಂಡು ‘ಪರ್ವ’ವನ್ನು ಬರೆದ ಎಸ್.ಎಲ್. ಭೈರಪ್ಪನವರು ರಾಮಾಯಣದ ಸೀತೆಯ ಬದುಕು ಮತ್ತು ಚಿಂತನೆಗಳ ಆಧಾರದಲ್ಲಿ ‘ಉತ್ತರಕಾಂಡ’ ಎಂಬ ಕಾದಂಬರಿಯನ್ನು ರಚಿಸಿದ್ದಾರೆ. ರಾಮಾಯಣದ ಪಾತ್ರಗಳ ಅತಿಮಾನುಷ ಗುಣಗಳನ್ನು ಬದಿಗಿಟ್ಟು ಅವರನ್ನು ಶಕ್ತಿ ದೌರ್ಬಲ್ಯಗಳಿರುವ ಸಾಮಾನ್ಯ ಮನುಷ್ಯರಂತೆ ಚಿತ್ರಿಸಿದ್ದಾರೆ. ಇದರ ಹಿಂದೆ ಲೇಖಕರ ಧ್ಯಾನ- ಅಧ್ಯಯನ, ಇತಿಹಾಸ ಪ್ರಜ್ಞೆ, ಪುರಾಣಾದಿ ಸಾಹಿತ್ಯಗಳು ಮೂಡಿಸಿದ ಭಾರತೀಯ ಸಂಸ್ಕೃತಿಯ ಪ್ರಭಾವಗಳು ಕೆಲಸ ಮಾಡಿವೆ. ರಾಮಾಯಣವನ್ನು ಹಿನ್ನೆಲೆಯಾಗಿಟ್ಟುಕೊಂಡು ಬದುಕಿನ ಸಂಘರ್ಷಗಳನ್ನು ಅವಲೋಕಿಸಿದ ಲೇಖಕರು ಸೀತೆಯ ಮನೋವೇದನೆಗಳನ್ನು ಸಾಮಾನ್ಯ ಹೆಣ್ಣಿನ ಬದುಕಿನೊಂದಿಗೆ ಸಮೀಕರಿಸಿ ಆಧುನಿಕ ಸಮಾಜವನ್ನು ವಿಮರ್ಶಿಸಿದ್ದಾರೆ.
ವ್ಯಾಪಾರಿ ಮೌಲ್ಯಗಳು ಸಮಾಜವನ್ನು ಮುನ್ನಡೆಸುತ್ತಿರುವ ಈ ಸಂದರ್ಭದಲ್ಲಿ ಸತ್ಯ, ಸೌಂದರ್ಯ, ಪ್ರೀತಿ ವಿಶ್ವಾಸಗಳು ಬೆಲೆ ಕಳೆದುಕೊಳ್ಳುತ್ತಿವೆ. ವೈರತ್ವ ವಿಜೃಂಭಿಸುತ್ತಿದೆ. ಪ್ರತಿಯೊಬ್ಬರೂ ಗುಂಪಿನಲ್ಲಿ ಒಂಟಿಯಾಗುತ್ತಾರೆ ಎಂಬ ಸತ್ಯವನ್ನರಿತುಕೊಂಡ ಲೇಖಕರು ಹೆಜ್ಜೆಹೆಜ್ಜೆಗೂ ನೋವಿನ ಮಡುವಿನೊಳಗೆ ಮುಳುಗೇಳುವ ಸೀತೆಯನ್ನು ತಮ್ಮ ಕಾದಂಬರಿಯ ನಾಯಕಿಯನ್ನಾಗಿಸಿದ್ದಾರೆ. ಅವಳ ತಳಮಳ, ತುಡಿತ, ಪುರುಷ ಪ್ರಧಾನ ಸಮಾಜಕ್ಕೆ ಕೊಡುವ ತೀಕ್ಷ್ಣ ಪ್ರತಿಕ್ರಿಯೆಗಳು ಮುಖ್ಯವಾಗುತ್ತವೆ. ಆಕೆ ಅನುಭವಿಸುವ ತಬ್ಬಲಿತನದ ನೋವು ಇಡೀ ಹೆಣ್ಣಿನ ಸಮುದಾಯ ಅನುಭವಿಸುತ್ತಿರುವ ಒಂಟಿತನದ ನೋವಿಗೆ ಸಂಕೇತವಾಗಿದೆ. ಅನಾಥಪ್ರಜ್ಞೆಯಿಂದ ನರಳುವ ‘ಗೃಹಭಂಗ’ದ ನಂಜಮ್ಮ, ‘ದಾಟು’ವಿನ ಸತ್ಯಭಾಮೆ, ‘ಮಂದ್ರ’ದ ಮಧುಮಿತಾ, ರಾಮಕುಮಾರಿ, ‘ಪರ್ವ’ದ ಕುಂತಿ, ದ್ರೌಪದಿಯರ ಮುಂದುವರಿಕೆಯಾಗಿ ‘ಉತ್ತರಕಾಂಡ’ದ ಸೀತೆ ಕಾಣಿಸಿಕೊಳ್ಳುತ್ತಾಳೆ.
ಕೌಟುಂಬಿಕ ಸಂಬಂಧ ಮತ್ತು ಶಾಸ್ತ್ರದ ಕಟ್ಟುಪಾಡಿನಲ್ಲಿ ಸಿಕ್ಕಿಕೊಳ್ಳುವ ಸೀತೆಗೆ ಕೊನೆಯವರೆಗೂ ಅವುಗಳಿಂದ ಬಿಡಿಸಿಕೊಳ್ಳಲಾಗುವುದಿಲ್ಲ. ಅದಕ್ಕಾಗಿ ಪಟ್ಟ ಪ್ರಯತ್ನ ಮತ್ತು ಪ್ರತಿಭಟನೆಯ ದನಿಗೆ ಉತ್ತರವಾಗಿ ಲಭಿಸಿದ್ದು ಶ್ರೀರಾಮನ ಉಪೇಕ್ಷೆ, ಪ್ರಜೆಗಳ ಅನಾದರ, ಚೌಕಟ್ಟಿನೊಳಗೆಯೇ ಇರಬೇಕೆಂಬ ಒತ್ತಡ. ಆದ್ದರಿಂದ ಸ್ವತಂತ್ರ ಮನೋಭಾವದ ಹೆಣ್ಣಾಗಿದ್ದರೂ ಗಂಡನನ್ನು ಅನುಸರಿಸುವುದು ಅವಳಿಗೆ ಅನಿವಾರ್ಯವಾಗುತ್ತದೆ. ಪ್ರೀತಿಯು ಅವಳನ್ನು ಹಲವು ಬಾರಿ ಅಧೀರಳನ್ನಾಗಿಸುತ್ತದೆ. ದೋಣಿಗೆ ಹತ್ತಿಸಲು ಕೈಚಾಚಿದ, ಪಾದಕ್ಕೆ ಚುಚ್ಚಿದ ಮುಳ್ಳನ್ನು ಕಿತ್ತು ತೆಗೆದ ಲಕ್ಷ್ಮಣನ ಮೇಲೆ ಅಳುಕುತ್ತಲೇ ಅಕ್ಕರೆ ವಾತ್ಸಲ್ಯಗಳನ್ನು ತೋರುತ್ತಾಳೆ. ಲಕ್ಷ್ಮಣನ ಪಾದವನ್ನು ತನ್ನ ಮಡಿಲಲ್ಲಿಟ್ಟು ಅವನ ಕಾಲಡಿಗೆ ಚುಚ್ಚಿದ ಮುಳ್ಳನ್ನು ತೆಗೆಯಬೇಕೆನಿಸುತ್ತಿದ್ದರೂ ಗಂಡ ಏನೆಂದುಕೊಳ್ಳುವನೋ ಎಂಬ ಭಯ ಅವಳನ್ನು ಕಾಡುತ್ತದೆ. ‘ವನವಾಸವು ಕೃತಯುಗದ ಜೀವನ. ಆ ಯುಗದಲ್ಲಿ ಕೃಷಿ ಇರಲಿಲ್ಲ. ಹಾಗಾಗಿ ವನವಾಸಿಗಳಾದ ನಾವು ಕೃಷಿಯಲ್ಲಿ ತೊಡಗಬಾರದು. ಕೃಷಿಯಿಂದ ಬೆಳೆದುದನ್ನು ತಿನ್ನಬಾರದು’ ಎಂಬುದು ರಾಮನ ಕಟ್ಟುನಿಟ್ಟಿನ ಧೋರಣೆ. ಆದರೆ ಆಹಾರ ಸಮಸ್ಯೆಗೆ ಪರಿಹಾರ ಹುಡುಕಲು ಕೃಷಿ ಮಾಡಲು ನಿರ್ಧರಿಸುವ ಲಕ್ಷ್ಮಣನದ್ದು ಪ್ರಾಯೋಗಿಕ ಬದುಕು. ರಾಗಿ ನವಣೆಗಳನ್ನು ಹೆಕ್ಕಲು ಅವನ ಜೊತೆ ಕಾಡಿಗೆ ಹೋಗುವ ಸೀತೆಗೆ ತನ್ನ ಗಂಡನೊಂದಿಗೆ ಹಸುರಿನ ಚೆಲುವನ್ನು ನೋಡುತ್ತಾ ಮೈಮರೆಯುವುದಕ್ಕಿಂತ ಇದೇ ಘನಿಷ್ಠ ಚೆಲುವಿನ ಅನುಭವ ಎಂದೆನಿಸುತ್ತದೆ. ಇದು ಅವಳಿಗೆ ದೊರಕುವ ಹೊಸ ಅರಿವು. ಕೊನೆಗೆ ರಾಮನಿಂದ ಪರಿತ್ಯಕ್ತಳಾಗಿ ಬದುಕುವಾಗ ವಾಲ್ಮೀಕಿ ಆಶ್ರಮದಲ್ಲಿ ಉಳುಮೆ ಮಾಡುವ ಮೂಲಕ ಸ್ವತಂತ್ರ ಅಸ್ತಿತ್ವವನ್ನು ಸ್ಥಾಪಿಸಲು ಅವಳಿಗೆ ಸಹಾಯಕವಾಗುವುದೂ ಇದೇ ಅನುಭವ “ಸ್ವಯಂ ಹಿಂಸೆ. ಅವಲಂಬಿತರ ಹಿಂಸೆಯೇ ನಿನ್ನ ಧರ್ಮದ ತಿರುಳೇನು? ಯಾಕೆ ಇಷ್ಟು ಅತಿ ಸೂಕ್ಷ್ಮವಾಗ್ತೀಯ?” (ಪುಟ 203) ಎಂದು ರಾಮನನ್ನು ಪ್ರಶ್ನಿಸುವ ಲಕ್ಷ್ಮಣನ ಮಾತುಗಳು ಅವಳ ಭಾವನೆಗಳ ಅಭಿವ್ಯಕ್ತಿಯೇ ಆಗಿವೆ. ಸೀತೆಯನ್ನು ಲಕ್ಷ್ಮಣನಷ್ಟು ಚೆನ್ನಾಗಿ ರಾಮ ಅರ್ಥ ಮಾಡಿಕೊಂಡಿಲ್ಲ ಎಂಬ ಧ್ವನಿ ಇಲ್ಲಿದೆ. ರಾಮನ ದಾಂಪತ್ಯದ ಅಧಿಕಾರಕ್ಕಿಂತ ಲಕ್ಷ್ಮಣನ ಅಕ್ಕರೆಯೇ ಸೀತೆಗೆ ಮಿಗಿಲೆನಿಸುತ್ತದೆ. ಕುಟುಂಬ ಜೀವನವು ಅವಳ ಕನಸಾಗಿತ್ತು. ಆದರೆ ಗಂಡನ ಶ್ರೇಯಸ್ಸಿಗಾಗಿ ಅವಳು ವೈಯಕ್ತಿಕ ಆಸೆಗಳನ್ನು ತಿರಸ್ಕರಿಸಿದ್ದಳು. ಕೊನೆಗೆ ಅವಳಿಗೆ ಸಿಕ್ಕಿದ್ದೇನು? ಸ್ವತಂತ್ರನಾಗಿ ಹುಟ್ಟುವ ಮನುಷ್ಯನು ಕಾಣದ ಸಂಕೋಲೆಗಳಿಂದ ಸುತ್ತುವರಿದಿರುತ್ತಾನೆ ಎಂಬ ದಾರ್ಶನಿಕ ವಿಚಾರವನ್ನು ಲೇಖಕರು ಸೀತೆ ಮತ್ತು ರಾಮನ ಚಿತ್ರಣದ ಮೂಲಕ ಗಟ್ಟಿಗೊಳಿಸಿದ್ದಾರೆ.
ಅರ್ಹ ವ್ಯಕ್ತಿಗೆ ಮನ್ನಣೆಯಿಲ್ಲ ಎಂಬ ವಿಚಾರವನ್ನು ‘ಉತ್ತರಕಾಂಡ’ವು ಆಳವಾಗಿ ವಿಶ್ಲೇಷಿಸುತ್ತದೆ. ಯುವರಾಜನಾಗಿ ಪಟ್ಟಾಭಿಷಿಕ್ತನಾಗಬೇಕಿದ್ದ ರಾಮನು ಕೈಕೇಯಿಯ ಕುಮ್ಮಕ್ಕಿನಿಂದಾಗಿ ವನವಾಸಕ್ಕೆ ತೆರಳಬೇಕಾಗುವ ಸಂದರ್ಭವು ಇದಕ್ಕೊಂದು ನಿದರ್ಶನ. ರಾಮನಿಗೆ ಅಯೋಧ್ಯೆಯ ಸಿಂಹಾಸನವು ಸಿಗದಿರುವ ಹಿಂದಿನ ಅನ್ಯಾಯಗಳನ್ನು ತರ್ಕಬದ್ಧವಾಗಿ ವಿವೇಚಿಸುವ ಕಾದಂಬರಿಯು ಆಧುನಿಕ ಸಮಾಜದಲ್ಲೂ ಇದೇ ರೀತಿಯ ಮೋಸ, ವಂಚನೆ, ಅಧಿಕಾರ ಲಾಲಸೆ, ಹಿಂಬಾಗಿಲ ಪ್ರವೇಶ, ಅರ್ಹ ವ್ಯಕ್ತಿಯನ್ನು ಪದಚ್ಯುತಗೊಳಿಸುವ ತಂತ್ರಗಳು ಮೇಲುಗೈ ಪಡೆಯುತ್ತಿರುವ ವಿದ್ಯಮಾನಗಳನ್ನು ನೆನಪಿಸುತ್ತವೆ. ತಮ್ಮ ನೆಲೆಯೇ ಮುಖ್ಯವಾದಾಗ ಸಹಜೀವಿಗಳ ಬದುಕನ್ನು ಹೋಮಮಾಡಲು ಯಾರೂ ಹಿಂದೆಮುಂದೆ ನೋಡುವುದಿಲ್ಲ ಎಂಬುದಕ್ಕೆ ಕೈಕೇಯಿಯಂತೆ ರಾಮನೂ ಒಳ್ಳೆಯ ಉದಾಹರಣೆಯಾಗುತ್ತಾನೆ. “ಜನಕ ರಾಜಪುತ್ರೀ, ನಿನ್ನನ್ನು ಹೊತ್ತೊಯ್ದ ರಾವಣನನ್ನು ಕೊಂದು ನನ್ನ ವಂಶದ ಗೌರವವನ್ನು ಕಾಪಾಡಿಕೊಂಡಿದ್ದೇನೆ. ನಾನು ನಿನಗಾಗಿ ಯುದ್ಧ ಮಾಡಲಿಲ್ಲ. ವಂಶದ ಕೀರ್ತಿಯನ್ನುಳಿಸಿಕೊಳ್ಳಲು ಮಾಡಿದೆ. ರಾವಣನಂಥ ಕಾಮಿಯ ಅಧೀನದಲ್ಲಿದ್ದ ನಿನ್ನ ಮೇಲೆ ನನಗೆ ನಂಬಿಕೆಯಿಲ್ಲ. ನೀನು ಎಲ್ಲಿ ಬೇಕಾದರೂ ಹೇಗೆ ಬೇಕಾದರೂ ಇರಬಹುದು” (ಪುಟ 271) ಎನ್ನುತ್ತಾನೆ. ಅನಿರೀಕ್ಷಿತ ಆಘಾತ, ದುಃಖ, ಯಾತನೆಗಳಿಂದ ನೊಂದ ಸೀತೆಯು “ಇಂಥ ಅಸಂಸ್ಕೃತ ಮಾತು ಬರಲು ನಿನ್ನ ತಲೆಯಲ್ಲಿ ರಾವಣನ ಪ್ರೇತ ಕೂತಿದೆಯೋ? ಸಾಕ್ಷಿ ಬೇಕಾದರೆ ನಿನ್ನೆದುರು ನಿಂತಿರುವ ವಿಭೀಷಣನ ಪತ್ನಿ ಸರಮೆಯನ್ನು ಕೇಳು” (ಪುಟ 272) ಎಂದು ದಿಟ್ಟತನದಿಂದ ಹೇಳಿದಾಗ “ಅವರು ಹೇಗೂ ರಾವಣನಿಂದ ನೊಂದವರು. ನಿನ್ನಿಂದ ಉಪಕೃತರು” (ಪುಟ 272) ಎನ್ನುತ್ತಾನೆ. ಸೀತೆ ಉದ್ವಿಗ್ನಳಾಗಿ ಬೆಂಕಿಗೆ ಹಾರಲು ಸಿದ್ಧಳಾದಾಗ ಅವಳನ್ನು ತಡೆದ ಲಕ್ಷ್ಮಣನ ಮಾತುಗಳು ಗಮನಾರ್ಹ. “ಅಣ್ಣಾ ನೀನು ನಿನ್ನ ಹೆಂಡತಿಯನ್ನು ಶಂಕಿಸಿದೆ. ತಾನು ರಾವಣನ ಅಧೀನದಲ್ಲಿದ್ದಾಗ ನೀನು ಶುದ್ಧವಾಗಿದ್ದುದಕ್ಕೆ ಏನು ಸಾಕ್ಷಿ ಅಂತ ಅವಳು ಕೇಳಿದರೆ ನೀನು ಏನು ಹೇಳುತ್ತೀ? ನನ್ನ ತಮ್ಮ ಲಕ್ಷ್ಮಣನೇ ಸಾಕ್ಷಿ. ಸುಗ್ರೀವ ಹನುಮಂತರೇ ಸಾಕ್ಷಿ ಅಂತೀಯಾ? ಲಕ್ಷ್ಮಣ ನಿನ್ನ ತಮ್ಮ. ಸುಗ್ರೀವ ನಿನ್ನಿಂದ ಉಪಕೃತ ಅಂದರೆ ನಿನ್ನ ಉತ್ತರವೇನು?” (ಪುಟ 273) ಈ ಮಾತುಗಳು ಕೇವಲ ಭಾವುಕ ದೃಶ್ಯಗಳ ನಿರ್ಮಾಣಕ್ಕೆ ವೇದಿಕೆಯನ್ನು ಕಲ್ಪಿಸದೆ ವಿವಿಧ ನೆಲೆಗಳಲ್ಲಿ ಚಿಂತನೆಗೀಡು ಮಾಡುವಂಥ ದನಿಗಳನ್ನು ಎಬ್ಬಿಸುತ್ತದೆ. ರಾವಣವಧೆಯ ಬಳಿಕ ಲೋಕಾಪವಾದಕ್ಕೆ ಮಣಿದು ಕಾಡುಪಾಲಾದ ಸೀತೆ ಹೀಗೆನ್ನುತ್ತಾಳೆ “ಕೋಪ ಬರುತ್ತೆ. ನನ್ನೆಲ್ಲ ಸಂಕಟಗಳಿಗೆ ನನ್ನ ಮಕ್ಕಳ ಅನಾಥಸ್ಥಿತಿಗೆ ಕಾರಣನಾದವನ ಮೇಲೆ ಬೇರೆ ಯಾವ ಭಾವನೆ ಬರಲು ಸಾಧ್ಯ? ಮನಸಾರೆ ವ್ಯಭಿಚಾರ ಮಾಡಿದ ಅಹಲ್ಯೆಯ ಪಶ್ಚಾತ್ತಾಪವನ್ನು ಮುಂದು ಮಾಡಿ ಅವಳ ಗಂಡನ ಮನಸ್ಸನ್ನು ತನ್ನ ಹದಿನೆಂಟನೇ ವಯಸ್ಸಿನಲ್ಲೇ ಕರಗಿಸಿದ ಕರುಣಾಳುವಿಗೆ ಮನಸ್ಸಿನಲ್ಲೂ ತಪ್ಪು ಮಾಡದ ಹೆಂಡತಿಯನ್ನು ಹೀಗೆ ಶಿಕ್ಷಿಸುವ ಅಧರ್ಮದ ಕಾಠಿಣ್ಯ ಮೂವತ್ತೈದನೇ ವಯಸ್ಸಿನಲ್ಲಿ ಹೇಗೆ ಬಂತು? (ಪುಟ 116) ಪ್ರಕ್ಷುಬ್ಧ ಮನಸ್ಸಿನೊಳಗೆ ಪ್ರತಿಕ್ರಿಯೆಯ ಅಲೆಗಳು ಅಪ್ಪಳಿಸುತ್ತಿದ್ದಂತೆ ಸೀತೆಯ ಆತ್ಮರೋದನ ಕೇಳಿಸುತ್ತದೆ. ಬಹಿರಂಗದ ಯುದ್ಧದಂತೆ ಅಂತರಂಗದ ಯುದ್ಧವೂ ಸರ್ವನಾಶಕ್ಕೆ ಕಾರಣವಾಗುತ್ತದೆ ಎಂದು ರಾಮ ಸೀತೆಯರ ದುರಂತವನ್ನು ಅವಲೋಕಿಸಿದಾಗ ತಿಳಿಯುತ್ತದೆ. ಕಥನವು ಸೀತೆಯ ಸ್ವಗತದ ಮೂಲಕ ಹರಿಯುತ್ತಿರುವುದರಿಂದ ವಿಚಾರಗಳು ಅವಳ ದೃಷ್ಟಿಕೋನಗಳಿಗಷ್ಟೇ ಸೀಮಿತಗೊಂಡು ರಾಮನ ಸಂಕಟ, ಸಂದಿಗ್ಧತೆ, ಮಾನಸಿಕ ತುಮುಲಗಳನ್ನು ವಿಶ್ಲೇಷಿಸುವ ಅವಕಾಶವನ್ನು ಕಳೆದುಕೊಳ್ಳುತ್ತದೆ. ಕಾದಂಬರಿಯ ಗತಿ ಹಲವೆಡೆ ನಿಯಂತ್ರಿತವಾಗಿದ್ದು ತಾನಾಗಿಯೇ ದುರಂತದತ್ತ ಸಾಗಬಹುದಾಗಿದ್ದ ವಸ್ತುವನ್ನು ಆ ಕಡೆಗೆ ಅಸಹಜವಾಗಿ ಓಡಿಸಿಕೊಂಡು ಹೋಗಲಾಗಿದೆ.
ರಾಮಾಯಣವನ್ನು ಆಧಾರವಾಗಿಟ್ಟುಕೊಂಡು ಆಧುನಿಕ ಸಮಾಜದ ಸಮಸ್ಯೆಗಳನ್ನು ವಾಸ್ತವದ ನೆಲೆಯಲ್ಲಿ ಅವಲೋಕಿಸಿದ ಲೇಖಕರು ಸಹಜವಾಗಿಯೇ ಹಲವು ಬದಲಾವಣೆಗಳನ್ನು ಮಾಡಿದ್ದಾರೆ. ಇಲ್ಲಿ ಸೀತೆ ಭೂಮಿಪುತ್ರಿಯಲ್ಲ. ಜನಕನ ಹೊಲದಲ್ಲಿ ಉಪೇಕ್ಷಿತಳಾದ ಅನಾಥ ಕೂಸು. ಪುತ್ರಕಾಮೇಷ್ಠಿ ಯಾಗದ ಬದಲು ವೈದ್ಯನ ಮದ್ದಿನ ಮೂಲಕ ದಶರಥನಿಗೆ ಮಕ್ಕಳಾಗುತ್ತವೆ. ಜಟಾಯು-ಸಂಪಾತಿ, ಸಂಜೀವಿನಿ ಪರ್ವತ, ರಾಮಸೇತು, ಲಂಕಾದಹನ ಪ್ರಸಂಗಗಳಿಲ್ಲ. ಹನುಮಂತನೂ ಸೇರಿದಂತೆ ರಾಮನ ಸೈನ್ಯ ಸಮುದ್ರವನ್ನು ದಾಟಿ ಲಂಕೆಯನ್ನು ಪ್ರವೇಶಿಸಿದ ಬಗೆ ಪ್ರಶ್ನೆಯಾಗಿಯೇ ಉಳಿಯುವುದರಿಂದ ವಾಸ್ತವದಲ್ಲಿ ಏನು ನಡೆದಿರಬಹುದೆಂಬ ಕಲ್ಪನೆಯನ್ನು ಮಾಡಲಾಗುವುದಿಲ್ಲ. ಕಾಡುಪಾಲಾದ ಸೀತೆಯನ್ನು ಸ್ವತಃ ಶ್ರೀರಾಮನೇ ಅಂಗೀಕರಿಸಿದರೂ ಆಕೆ ಅಯೋಧ್ಯೆಯಲ್ಲಿ ಉಳಿಯಲು ನಿರಾಕರಿಸುತ್ತಾಳೆ. ಸೀತೆಯ ನೇರ ನಡೆನುಡಿ ಮತ್ತು ಉಜ್ವಲ ಕಾಂತಿಯ ಮುಂದೆ ರಾಮಾಯಣದ ಹಲವು ಪಾತ್ರಗಳ ತೇಜಸ್ಸು ಮಂಕಾದರೂ ಕೊನೆಗೆ ಅವಳ ಪಾತ್ರವೂ ಪೇಲವವಾಗುತ್ತದೆ. ದುರ್ಭರ ಪ್ರಸಂಗಗಳಲ್ಲಿ ಅಣ್ಣನ ಮಾತನ್ನು ಮೀರಿ ಸೀತೆಗೆ ಸಹಾಯ ಮಾಡುವ ಲಕ್ಷ್ಮಣ, ದೂರಾಲೋಚನೆಯನ್ನು ಹೊಂದಿದ ಚುರುಕುತನದ ಊರ್ಮಿಳೆ, ವಿಭೀಷಣನ ಹೆಂಡತಿ ಸರಮೆ ಓದುಗರ ಮನದಲ್ಲಿ ಅಚ್ಚಳಿಯದೆ ಉಳಿಯುತ್ತಾರೆ. ಭಾರತೀಯರು ಎತ್ತರದ ಸ್ಥಾನದಲ್ಲಿಟ್ಟ ಹಲವು ಪಾತ್ರಗಳು ಆಧುನಿಕ ಸಮಾಜದ ನಿಷ್ಕರುಣೆ ಮತ್ತು ಭಾವುಕತೆಗಳಿಗೆ ಸಾಕ್ಷಿಗಳಾಗಿ ಕಾದಂಬರಿಯಲ್ಲಿ ಮೈವೆತ್ತು ನಿಂತಾಗ ಲೇಖಕರ ಕಲ್ಪನಾಶಕ್ತಿ ಮತ್ತು ವೈಚಾರಿಕತೆಗಳಿಗೆ ತಲೆದೂಗುವಂತಾಗುತ್ತದೆ. ವಾಲ್ಮೀಕಿ ರಾಮಾಯಣವನ್ನು ಮತ್ತೊಮ್ಮೆ ಓದುವ ಪ್ರೇರಣೆಯುಂಟಾಗುತ್ತದೆ.
ಪುಸ್ತಕದ ಹೆಸರು : ಉತ್ತರಕಾಂಡ (ಕಾದಂಬರಿ)
ಲೇಖಕರು : ಎಸ್.ಎಲ್. ಭೈರಪ್ಪ
ಪ್ರಕಾಶಕರು : ಸಾಹಿತ್ಯ ಭಂಡಾರ, ಬಳೇಪೇಟೆ, ಬೆಂಗಳೂರು ೫೬೦೦೫೩
ಪುಟಗಳು : 329
ಬೆಲೆ : 375 ರೂಪಾಯಿಗಳು
ಡಾ. ಸುಭಾಷ್ ಪಟ್ಟಾಜೆ :
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡಿನ ಸರಕಾರಿ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ, ಡಾ. ಯು. ಮಹೇಶ್ವರಿಯವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು: ಒಂದು ತೌಲನಿಕ ಅಧ್ಯಯನ’ ಸಂಶೋಧನ ಮಹಾ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಬರೆದ ಕತೆ, ಕವನ, ಲೇಖನ ಮತ್ತು ಸುಮಾರು 200ಕ್ಕೂ ಹೆಚ್ಚು ಪುಸ್ತಕ ವಿಮರ್ಶೆಗಳು ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ ಮತ್ತು ಅಂತರ್ಜಾಲ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರವಾಗಿವೆ.
ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ), ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್ (ವ್ಯಕ್ತಿ ಚಿತ್ರಣ), ಕಥನ ಕಾರಣ (ಸಂಶೋಧನ ಕೃತಿ), ನುಡಿದು ಸೂತಕಿಗಳಲ್ಲ (ಸಂಪಾದಿತ) ಎಂಬ ಕೃತಿಗಳನ್ನು ಪ್ರಕಟಿಸಿರುವ ಇವರು ಕಾಸರಗೋಡು ಜಿಲ್ಲೆಯ ಶೇಣಿ ಗ್ರಾಮದ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯಾಪಕವಾದ ಓದು, ವಿಸ್ತಾರವಾದ ಅಧ್ಯಯನಕ್ಕೆ ಹೆಸರಾಗಿರುವ ಇವರು ಉತ್ಸಾಹಿ ಸಂಘಟಕರಾಗಿದ್ದು ನಾಡಿನ ವಿವಿಧೆಡೆಗಳಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಮುಂಚೂಣಿಯ ಪಾತ್ರವನ್ನು ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ವೇದಿಕೆಯ ಸಂಚಾಲಕರಲ್ಲಿ ಒಬ್ಬರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.
ಲೇಖಕ ಎಸ್.ಎಲ್. ಭೈರಪ್ಪ :
ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಆಧುನಿಕ ಕನ್ನಡ ಸಾಹಿತ್ಯದ ಕಾದಂಬರಿಕಾರರು ಮತ್ತು ಲೇಖಕರು. ಕನ್ನಡ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿರುವ ಇವರ ಕೃತಿಗಳು ಇಂಗ್ಲೀಷ್ ಹಾಗೂ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಭಾರತದ ಸಾಹಿತ್ಯವಲಯದಲ್ಲಿ ಹೆಸರಾಗಿದ್ದಾರೆ. ಇವರ ಕಾದಂಬರಿಗಳು ಹಲವಾರು ಮರುಮುದ್ರಣಗಳನ್ನು ಕಂಡು ಕನ್ನಡದ ಜನಪ್ರಿಯ ಬರಹಗಾರರಾಗಿದ್ದಾರೆ. ಇವರಿಗೆ ಭಾರತ ಸರ್ಕಾರವು 2023ನೇ ಸಾಲಿನಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.