ಮೂಡುಬಿದಿರೆ : ಯಕ್ಷರಂಗದ ಮೇರು ಕಲಾವಿದ ಸೂರಿಕುಮೇರಿ ಕೆ. ಗೋವಿಂದ ಭಟ್ ಇವರಿಗೆ ಮೂಡುಬಿದಿರೆ ಸಮೀಪದ ಮಾರೂರು ನೂಯಿಯಲ್ಲಿರುವ ಬಲಿಪ ಭಾಗವತರ ಮನೆಯ ಆವರಣದಲ್ಲಿ ದಿನಾಂಕ 06-04-2024ರಂದು ನಡೆದ ಕಟೀಲು ಮೇಳದ ಹರಕೆ ಬಯಲಾಟದ ವೇದಿಕೆಯಲ್ಲಿ ‘ಬಲಿಪ ಭಾಗವತ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಪ್ರಶಸ್ತಿಯು ರೂ.10,000/- ನಗದು, ಪ್ರಶಸ್ತಿ ಪತ್ರ ಮತ್ತು ಸಮ್ಮಾನವನ್ನು ಒಳಗೊಂಡಿದೆ. ಕಲಾವಿದ ಕೊಂಕಣಾಜೆ ಚಂದ್ರಶೇಖರ ಭಟ್ ಪ್ರಶಸ್ತಿ ಪತ್ರ ವಾಚಿಸಿದರು. ಶ್ರೀಹರಿ ನಾರಾಯಣದಾಸ ಆಸ್ರಣ್ಣ ಮಾತನಾಡಿ, “ಬಲಿಪ ನಾರಾಯಣರು ‘ಭಾಗವತ ಬಲಿಪ’ರಾದರೆ, ಹಳತನ್ನು ಬದಿಗಿಡದೆ, ಹೊಸತನ್ನು ಅರಳಿಸುತ್ತ ಯಕ್ಷ ರಂಗವನ್ನು ತುಂಬಿಕೊಡುತ್ತ ಬಂದಿರುವ ಗೋವಿಂದ ಭಟ್ಟರು ‘ವೇಷಧಾರಿ ಬಲಿಪ’ ಸ್ಥಾನದಲ್ಲಿರುವವರು” ಎಂದು ಉದ್ಗರಿಸಿ ಉಭಯರನ್ನೂ ಕೊಂಡಾಡಿದರು.
ಬಲಿಪ ಭಾಗವತರೊಂದಿಗೆ ಬಾಲ್ಯದ ಒಡನಾಟ ನೆನಪಿಸಿಕೊಂಡ ಗೋವಿಂದ ಭಟ್ಟರು “ಯಕ್ಷಗಾನ ಎಂದರೆ ಬಲಿಪರು, ಬಲಿಪರೆಂದರೆ ಯಕ್ಷಗಾನ ಎಂದು ತಿಳಿಸಿ, ಪ್ರಶಸ್ತಿಗಾಗಿ ತನ್ನನ್ನು ಆರಿಸಿರುವುದು ತನ್ನ ಜೀವನದ ಧನ್ಯತೆಯ ಕ್ಷಣವಾಗಿದೆ.” ಎಂದರು.
ದಿ. ಬಲಿಪ ಪ್ರಸಾದ್ ಭಾಗವತರ ಪುತ್ರಿ ಅಪರ್ಣಾ ಅವರಿಗೆ ಉಚಿತ ಶಿಕ್ಷಣಾವಕಾಶ ಕಲ್ಪಿಸಿರುವ ಎಕ್ಸಲೆಂಟ್ ಸಂಸ್ಥೆಯ ಯುವರಾಜ-ರಶ್ಮಿತಾ ದಂಪತಿಯನ್ನು ವಿಶೇಷವಾಗಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಮಾರೂರು ಖಂಡಿಗ ರಾಮದಾಸ ಆಸ್ರಣ್ಣ, ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಉದ್ಯಮಿ ಕೆ. ಶ್ರೀಪತಿ ಭಟ್, ಕಲ್ಲಬೆಟ್ಟು ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಕೋಟೆ ರಾಮಭಟ್, ಬಲಿಪ ಮಾಧವ ಭಟ್ ಮತ್ತು ಮನೆಯವರು ಉಪಸ್ಥಿತರಿದ್ದರು. ವತ್ಸ ಭಟ್ ಮತ್ತು ಕರ್ಪೆ ನೀಲಕಂಠ ಭಟ್ ನಿರೂಪಿಸಿದರು.