ಕನ್ನಡದ ಪಾಲಿಗೆ ಪೌರಾಣಿಕ ಕಾದಂಬರಿಗಳು ಹೊಸತೇನಲ್ಲ. ದೇವುಡು ಅವರಿಂದ ತೊಡಗಿ ಎಸ್.ಎಲ್. ಭೈರಪ್ಪನವರೆಗೆ ಅವುಗಳ ವ್ಯಾಪ್ತಿ ಇದೆ. ಮಾಸ್ತಿ, ಕುವೆಂಪು, ಪು.ತಿ.ನ., ಗೋಪಾಲಕೃಷ್ಣ ಅಡಿಗ ಮುಂತಾದವರು ಕತೆ, ಕಾವ್ಯ, ಮಹಾಕಾವ್ಯ, ನಾಟಕಗಳ ಮೂಲಕ ಪುರಾಣ ಕಥನವನ್ನು ಆಧುನಿಕ ಕಾಲಕ್ಕೆ ತಂದಿದ್ದಾರೆ. ಪೌರಾಣಿಕ ಪ್ರಸಂಗಗಳನ್ನು ಆಧರಿಸಿದ ಸಂಸ್ಕೃತ ಕೃತಿಗಳ ಅನುವಾದಗಳೊಂದಿಗೆ ಮೂಲ ಪುರಾಣಗಳ ಭಾಷಾಂತರಗಳಲ್ಲದೆ ಅವುಗಳನ್ನು ಕುರಿತ ಸಂಶೋಧನೆ, ವಿಮರ್ಶೆಗಳೂ ಅಧ್ಯಯನ ಯೋಗ್ಯವಾಗಿವೆ.
ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ತೆಕ್ಕುಂಜ ಅವರ ‘ಮಂಡೋದರಿ’ ಎಂಬ ಕಾದಂಬರಿಯನ್ನು ಯಕ್ಷಗಾನ ಪರಂಪರೆಯ ಆಧಾರದಲ್ಲಿ ಮೂಡಿ ಬಂದ ರಚನೆ ಎನ್ನಬಹುದು. ಆದ್ದರಿಂದ ಅವರಿಗೆ ರಾಮಾಯಣದ ಪಾತ್ರಗಳ ಅತಿಮಾನುಷ ಗುಣಗಳನ್ನು ಬದಿಗಿರಿಸದೆ, ಅವರನ್ನು ಶಕ್ತಿ ದೌರ್ಬಲ್ಯಗಳಿರುವ ಸಾಮಾನ್ಯ ಮನುಷ್ಯರಂತೆ ಕಾಣದೆ ಮೂಲಕ್ಕೆ ಹೆಚ್ಚು ನಿಷ್ಠರಾಗಿದ್ದುಕೊಂಡೇ ಪಾತ್ರಗಳನ್ನು ಚಿತ್ರಿಸಲು ಸಾಧ್ಯವಾಗಿದೆ. ಇದರ ಹಿಂದೆ ಲೇಖಕರ ವಿಶೇಷ ಧ್ಯಾನ- ಅಧ್ಯಯನ, ಇತಿಹಾಸ ಪ್ರಜ್ಞೆ, ಪುರಾಣಾದಿ ಸಾಹಿತ್ಯಗಳು ಮೂಡಿಸಿದ ಭಾರತೀಯ ಸಂಸ್ಕೃತಿಯ ಪ್ರಭಾವಗಳು ಕೆಲಸ ಮಾಡಿವೆ. ಅನಲೆಯ ಪಾತ್ರ ಚಿತ್ರಣಕ್ಕೆ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’, ಲಂಕಿಣಿಯ ಕತೆಗೆ ದೇರಾಜೆ ಸೀತಾರಾಮಯ್ಯನವರ ‘ಶ್ರೀರಾಮ ಚರಿತಾಮೃತಂ’, ಚಿತ್ರಸೇನೆಯ ಅಪಹರಣ ಪ್ರಸಂಗಕ್ಕೆ ನರಸಿಂಹ ಪುರಾಣದ ‘ಅಷ್ಟಾಕರೀ ಮಹಿಮೆ’ ಮುಂತಾದ ಆಕರ ಗ್ರಂಥಗಳ ನೆರವಿದ್ದರೂ ಅವುಗಳಿಗೆ ವಾಲ್ಮೀಕಿ ರಾಮಾಯಣವೇ ಮೂಲವಾಗಿರುವುದರಿಂದ ‘ಮಂಡೋದರಿ’ಯನ್ನು ಆ ನೆರಳಿನಲ್ಲಿಯೇ ನೋಡಬೇಕಾಗುತ್ತದೆ. ಸರಮೆ, ಅನಲೆ, ಶೂರ್ಪನಖಿಯರ ಪಾತ್ರಗಳ ಬೆಳವಣಿಗೆ, ವಿಭೀಷಣನ ಪಾತ್ರಕ್ಕೆ ದೊರೆತ ಹೊಸ ಆಯಾಮಗಳು ಅವರ ಸೃಷ್ಟಿ ಶಕ್ತಿಗೆ ನಿದರ್ಶನಗಳಾಗಿವೆ. ಯಕ್ಷಗಾನ ಪ್ರಸಂಗಗಳ ಹರಹು, ಅರ್ಥಗಾರಿಕೆಯ ಶೈಲಿಗಳಿಂದ ಕೂಡಿದ ಧಾಟಿಯಿಂದಾಗಿ ಕಥನವು ಹಲವೆಡೆ ವಾಚ್ಯವಾಗಿದ್ದರೂ ವರದಿಯಂತೆ ಸಾಗದೆ, ಮಂಡೋದರಿಯ ದಿನಚರಿಯ ಬರವಣಿಗೆಯಾಗದೆ ಕಾವ್ಯಾನುಭವವನ್ನು ಉಂಟು ಮಾಡುತ್ತದೆ. ಪುರಾಣ ಪ್ರಜ್ಞೆಯೊಂದಿಗೆ ವಾಸ್ತವ ಪ್ರಜ್ಞೆಯೂ ಹದವಾಗಿ ಮೇಳೈಸಿ ಸಮತೂಕವನ್ನು ದಕ್ಕಿಸಿಕೊಳ್ಳುತ್ತದೆ.
ಕಾವ್ಯ – ಇತಿಹಾಸ – ಪುರಾಣಗಳ ಮಿಶ್ರಣವಾದ ರಾಮಾಯಣವನ್ನು ಆಧುನಿಕ ಸಾಹಿತ್ಯ ಪ್ರಕಾರವಾದ ಕಾದಂಬರಿಯಲ್ಲಿ ಪುನರ್ ಸೃಷ್ಟಿಸುವುದಷ್ಟೇ ಲೇಖಕರ ಆಶಯವಾಗಿಲ್ಲ. ಮೂಲ ಕೃತಿಗಳನ್ನು ಅಲೌಕಿಕ ಅಂಶಗಳಿಂದ ಪಾರುಗೊಳಿಸಿ ಸಾಮಾನ್ಯರನ್ನೂ ಅಸಾಮಾನ್ಯರನ್ನೂ ಒಂದೇ ದೃಷ್ಟಿಯಿಂದ ನೋಡಿ, ಯಾವುದೋ ಕಾಲದ ವ್ಯಕ್ತಿ ಸಂಗತಿಗಳನ್ನು ನಮ್ಮ ಕಾಲದವರಾಗಿ, ನಮಗೆ ತೀರಾ ಹತ್ತಿರದವರಾಗಿ ಮಾರ್ಪಡಿಸುವ ಉದ್ದೇಶವೂ ಇಲ್ಲ. ಆದ್ದರಿಂದ ಪುರಾಣವನ್ನು ಪೌರಾಣಿಕತೆಯಿಂದ ಕಳಚದೆ, ಇದ್ದುದನ್ನು ಇದ್ದಂತೆ ಸ್ವೀಕರಿಸಿ, ತಮ್ಮ ಪ್ರತಿಭೆಯಿಂದ ಉಳಿಸಿ ಬೆಳೆಸಿರುವುದರಿಂದ ಲೇಖಕರಿಗೆ ಹೊಸ ನೋಟವನ್ನು ಒದಗಿಸಲು ಸಾಧ್ಯವಾಗಿದೆ.
ಸಂಸ್ಕೃತಿಯೊಂದಕ್ಕೆ ನಿರಂತರ ಪ್ರಾಣಶಕ್ತಿಯನ್ನು ಒದಗಿಸುವ ಪುರಾಣವು ಕೇವಲ ಕಲ್ಪನೆ ಊಹೆಗಳಿಂದ ಕೂಡಿದ ಕಟ್ಟುಕತೆಗಳಲ್ಲ. ಅವುಗಳಿಗೆ ಇತಿಹಾಸದ ಶಿಷ್ಟ ಗುಣಗಳಿವೆ. ತರ್ಕ, ಅರ್ಥ ಮತ್ತು ವಾಸ್ತವಗಳ ಬಲವಿದೆ. ಆದರೆ ಸಾರ್ವಕಾಲಿಕ ಮಹತ್ವವನ್ನು ಹೊಂದಿದ ರಾಮಾಯಣದ ಮೂಲಕ ಸಮಕಾಲೀನ ಮನುಷ್ಯನಿಗೆ ಸಂಬಂಧಿಸಿದ ಸಮಸ್ಯೆಗಳನ್ನೂ ಕಾಣಬೇಕಿದ್ದರೆ ಕೆಲವು ಬದಲಾವಣೆಗಳು ಮತ್ತು ಕೂಡಿ ಕಳೆಯುವ ಕ್ರಿಯೆಗಳು ಅನಿವಾರ್ಯವಾಗುತ್ತವೆ. ರಾಮನು ವಿಷ್ಣುವಿನ ಅವತಾರ ಎಂಬ ದೇವತೆಗಳ ಹೊಗಳಿಕೆಯನ್ನು ಲೆಕ್ಕಿಸದೆ ಆತನನ್ನು ಮನುಷ್ಯನನ್ನಾಗಿ ಕಲ್ಪಿಸಿದ್ದು, ತನ್ನ ಗಂಡನನ್ನು ಕೊಂದು, ಮನಸ್ಸಿಗೊಪ್ಪದ ಖರನೊಂದಿಗೆ ಮದುವೆ ಮಾಡಿಸಿದ ರಾವಣನ ಅಂತ್ಯವನ್ನು ಕಾಣಲು ಶೂರ್ಪನಖಿಯು ಕರಡಿಯ ವೇಷ ತೊಟ್ಟು ರಣರಂಗದ ಸಮೀಪದ ಬೆಟ್ಟದ ತುದಿಯಲ್ಲಿ ಕುಳಿತಂತೆ ಚಿತ್ರಿಸಿದ್ದು, ರಾಮನೊಂದಿಗಿನ ಯುದ್ಧದಲ್ಲಿ ಎಲ್ಲರನ್ನು ಕಳೆದುಕೊಂಡು ಒಂಟಿಯಾದ ರಾವಣನು ತನ್ನ ಪರವಾಗಿ ಹೋರಾಡಲು ಯಾರೂ ಉಳಿಯದಿರುವ ಹೊತ್ತಿನಲ್ಲಿ ಕುಂಭಕರ್ಣನನ್ನು ಯುದ್ಧಕ್ಕೆ ಕಳುಹಿಸುವಂತೆ ಚಿತ್ರಿಸುವ ಮೂಲಕ ಸೋದರ ವಾತ್ಸಲ್ಯದ ಉತ್ಕಟತೆಯನ್ನು ಮನಗಾಣಿಸಿದ್ದು ಇದಕ್ಕೆ ಉದಾಹರಣೆಗಳಾಗಿವೆ.
ಹೆಣ್ಣು ಮತ್ತು ಭೂಮಿಯನ್ನು ನಮ್ಮ ದೇಶದಲ್ಲಿ ಬೇರೆ ಎಂದು ಭಾವಿಸಿಲ್ಲ. ಹೆಣ್ಣನ್ನು ಗೆಲ್ಲುವುದೆಂದರೆ ಭೂಮಿಯನ್ನು ಗೆದ್ದಂತೆ ಎಂಬ ದೃಷ್ಟಿಯು ಬಹುತೇಕ ಕಥನಗಳಲ್ಲಿವೆ. ಯಾವುದೇ ಹೆಣ್ಣು ಅಥವಾ ಭೂಮಿಯನ್ನು ಗೆಲ್ಲಬಲ್ಲೆ ಎಂಬ ಅಹಂಕಾರದಿಂದ ರಾವಣನು ಸೀತೆಯನ್ನು ಅಪಹರಿಸುತ್ತಾನೆ. ಆದರೆ ಆಕೆಯು ರಾವಣನಿಗೆ ಒಲಿಯುವುದಿರಲಿ ಕಣ್ಣೆತ್ತಿ ಕೂಡ ನೋಡುವುದಿಲ್ಲ. ಪ್ರಲೋಭನೆ, ಆಕರ್ಷಣೆ ಮತ್ತು ಬಲ ಪ್ರಯೋಗಗಳಿಗೆ ಮಣಿಯುವುದಿಲ್ಲ. ರಾವಣನೊಡನೆ ಮಾತನಾಡುವಾಗ ಆಕೆಯು ಹುಲ್ಲಿನ ದಳವನ್ನು ಎದುರಿಟ್ಟುಕೊಂಡು ನುಡಿಯುವ ಮೂಲಕ ರಾವಣನ ಸಾಮ್ರಾಜ್ಯದ ವೈಭವವು ತೃಣ ಸಮಾನವೆಂದು ತೋರಿಸುತ್ತಾಳೆ. ರಾವಣನು ಸೀತೆಯ ಮೈ ಮುಟ್ಟಲು ಹೊರಟಾಗ ಆಕೆಯ ಕ್ರೋಧಾಗ್ನಿಯು ಆ ಹುಲ್ಲುಕಡ್ಡಿಯನ್ನೇ ಸುಟ್ಟುಬಿಡುವ ಸನ್ನಿವೇಶವು ಆಕೆಯು ಭಾರತೀಯ ಪರಂಪರೆಯ ಶಕ್ತಿಯ ಪ್ರತೀಕ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಹೆಣ್ಣು ಭೂಮಿಯಷ್ಟೇ ಸಹನಾಮಯಿಯಾಗಿದ್ದರೂ ಆತ್ಮಾಭಿಮಾನಕ್ಕೆ ಭಂಗವುಂಟಾದಾಗ ತೀಕ್ಣ ಪ್ರತಿಕ್ರಿಯೆಯನ್ನು ತೋರಿದ ಪ್ರಸಂಗವು ರಾಮಾಯಣದಲ್ಲೇ ದೊರಕುತ್ತದೆ ಎಂಬುದಕ್ಕೆ ಈ ಸಂದರ್ಭವು ಸಾಕ್ಷಿಯಾಗುತ್ತದೆ.
ಸೀತೆಯನ್ನು ಅಪಹರಿಸಿದ ರಾವಣನು ರಾಮನೊಂದಿಗೆ ಯುದ್ಧ ಮಾಡಲು ನಿರ್ಧರಿಸಿದಾಗ ಅಣ್ಣನ ಧೋರಣೆಯನ್ನು ವಿರೋಧಿಸಿದ ವಿಭೀಷಣನು ಆತನ ಕೋಪಕ್ಕೆ ಗುರಿಯಾಗಿ, ಲಂಕೆಯನ್ನು ತೊರೆದು, ರಾಮನ ಪಕ್ಷವನ್ನು ಸೇರಿದಾಗ ವಿಭೀಷಣನ ಹೆಂಡತಿ ಮಕ್ಕಳ ಪರಿಸ್ಥಿತಿ ಏನಾಗಿತ್ತು ಎಂಬುದರ ಕಡೆಗೆ ಲೇಖಕರ ಮನಸ್ಸು ಹರಿದಿದೆ. ರಾವಣನ ಉನ್ನತಿ ಅವನತಿಗಳೆರಡೂ ಅವನ ನಡೆಯನ್ನೇ ಅವಲಂಬಿಸಿವೆ. ಮಾನವತೆ ದಾನವತೆಗಳೆರಡಕ್ಕೂ ಅವನ ಹೃದಯದಲ್ಲಿ ಸ್ಥಾನವಿದೆ. ಗಂಡು ಮಕ್ಕಳೇ ಮೆರೆಯುತ್ತಿದ್ದ ರಾವಣನ ಕುಟುಂಬದಲ್ಲಿ ಮಗಳ ಜಾಗವನ್ನು ತುಂಬಿದ ವಿಭೀಷಣನ ಮಗಳು ಅನಲೆಯ ಮೇಲೆ ಅವನಿಗೆ ಅಕ್ಕರೆಯಿದೆ. ತಂದೆಯ ಜೊತೆ ನಾನೂ ಹೋಗುತ್ತೇನೆ ಎಂದವಳ ಬಳಿ “ಅನಲಾ ನೀನು ನನಗೂ ಮಗಳಲ್ಲವೇ? ಈ ರೀತಿ ನೊಂದುಕೊಳ್ಳಬೇಡ. ನಿನಗೆ ವಿಹಾರ ಹೋಗಬೇಕೆಂಬ ಬಯಕೆಯೇ? ಗಿರಿ ಕಂದರಗಳಲ್ಲಿ ಅಡ್ಡಾಡಬೇಕೇ? ಅಥವಾ ಅಜ್ಜ ಶೈಲೂಷನನ್ನು ಕಾಣಲು ಗಂಧರ್ವ ನಾಡಿಗೆ ಹೋಗುವ ಬಯಕೆಯೇ? ಹೋಗಿ ಬಾ ಎಂದು ಪುಷ್ಪಕದಲ್ಲಿ ಕಳುಹಿಸಿ ಕೊಟ್ಟನು. ಆದರೆ ಗೊತ್ತುಗುರಿಯಿಲ್ಲದೆಡೆಗೆ ಹೊರಟ ನಿನ್ನ ತಂದೆಯ ಜೊತೆಯಲ್ಲಿ ತೆರಳಬೇಡ” (ಪುಟ 21) ಎಂದ ರಾವಣನ ಮಾತಿನಲ್ಲಿ ದೊಡ್ಡಪ್ಪ ಮತ್ತು ಮಗಳ ನಡುವೆ ವಾತ್ಸಲ್ಯದ ತಂತು ಬೆಸೆದಿದೆ. ಹೆಣ್ಣೆಂದರೆ ಭೋಗವಸ್ತು ಎಂದು ನಂಬಿಕೊಂಡು ಬ್ರಹ್ಮರ್ಷಿ ಕುಶಧ್ವಜನ ಮಗಳು ವೇದಾವತಿ, ಕುಬೇರನ ಮಗನಾದ ನಲಕೂಬರನನ್ನು ಮದುವೆಯಾಗಬೇಕಿದ್ದ ರಂಭೆ ಮುಂತಾದವರನ್ನು ಅಮಾನುಷವಾಗಿ ಬಲಾತ್ಕರಿಸಿದ ರಾವಣನಿಗೂ ತನ್ನ ಎದೆಯ ಬೇಗುದಿಯನ್ನು ಕಡಿಮೆಗೊಳಿಸಲು ಮುದ್ದು ಮಗಳ ಅಕ್ಕರೆಯ ತಂಪು, ಆರೈಕೆ ಮತ್ತು ಸವಿ ನುಡಿಗಳು ಬೇಕು. ಅಣ್ಣನ ಮೇಲೆ ಗೌರವವಿದ್ದರೂ ರಾಜಕೀಯದಲ್ಲಿ ಆತನನ್ನು ವಿರೋಧಿಸುವ ವಿಭೀಷಣ, ‘ಲಂಕೆಯ ಒಳಿತನ್ನು ಮಾತ್ರ ಬಯಸುವವಳು ನಾನು’ ಎನ್ನುತ್ತಾ ವಿಭೀಷಣನತ್ತ ಮೃದು ಭಾವನೆಯನ್ನು ತೋರುವ ಮಂಡೋದರಿ, ‘ರಾಮನ ಜೊತೆ ಸೇರಿ ನನ್ನನ್ನು ಸಾಯಿಸಿ ಲಂಕಾಧಿಪತಿಯಾಗ ಬಯಸುವ ದೇಶದ್ರೋಹಿ’ ಎಂದು ರೊಚ್ಚಿಗೇಳುವ ರಾವಣ ಮುಂತಾದವರು ನಿರ್ಮಿಸುವ ವಾತಾವರಣದ ಸಂಕೀರ್ಣತೆಯಲ್ಲಿ ಲೇಖಕರ ಕಲ್ಪನೆಗಳು ಮನಸ್ಸನ್ನು ಪ್ರಭಾವಿಸುತ್ತವೆ. ಸರಮೆಯ ಮಾತಿನಲ್ಲಿ ವ್ಯಕ್ತವಾಗುವ ಕ್ರಿಯೆಯ ನಾಟಕೀಯತೆ ಮತ್ತು ಧ್ವನಿಶಕ್ತಿ ಮನಮುಟ್ಟುತ್ತದೆ. “ತನ್ನೆರಡೂ ಬಾಹುಗಳನ್ನು ಹಿಡಿದ ಶಕ್ತಿಶಾಲಿ ರಾಕ್ಷಸರನ್ನು ಎತ್ತಿ ಉನ್ನತವಾದ ಪ್ರಾಕಾರವೊಂದಕ್ಕೆ ನೆಗೆದು ಅಲ್ಲಿಂದ ತನ್ನ ಕೈಗಳನ್ನು ಕೊಡವಿ ನಾಲ್ವರನ್ನೂ ಕೆಡಹಿದನಂತೆ. ಪ್ರಾಕಾರದಲ್ಲಿ ಶೋಭಿಸುತ್ತಿದ್ದ ಸ್ವರ್ಣಕಳಶವನ್ನು ಒದ್ದು ಪುಡಿ ಮಾಡಿ ‘ಶ್ರೀರಾಮನ ಸಂದೇಶವನ್ನು ಎಂದಿಗೂ ಮರೆಯದಿರು’ ಎನ್ನುತ್ತಾ ಅಲ್ಲಿಂದ ನೆಗೆದನಂತೆ” (ಪುಟ 27) ಎಂಬ ಮಾತು ಅಂಗದನ ಭವ್ಯತೆಯನ್ನು ಕಣ್ಣಿಗೆ ಕಟ್ಟುವಂತೆ ಮಾಡುತ್ತದೆ. ರಾಮನೊಂದಿಗೆ ನಡೆಯಲಿರುವ ಯುದ್ಧದಲ್ಲಿ ಗೆಲ್ಲಲು ರಾವಣನು ಪಾತಾಳ ಮಾರ್ಗದ ಗುಹೆಯಲ್ಲಿ ನಡೆಸುತ್ತಿದ್ದ ಹೋಮವನ್ನು ಭಂಗಗೊಳಿಸುವ ಉದ್ದೇಶದಿಂದ ವಾನರರು ಮಂಡೋದರಿಯ ಕೂದಲಿಗೆ ಕೈಯಿಕ್ಕಿದಾಗ ಆತನ ಧ್ಯಾನಭಂಗವಾಗಿ ವಾನರರನ್ನು ಆಕ್ರಮಿಸಲು ಮುಂದಾಗುತ್ತಾನೆ. ತನ್ನ ಉತ್ತರೀಯವನ್ನು ಅವಳ ಮೈತುಂಬ ಸುತ್ತಿಕೊಂಡು ಅಂತಃಪುರಕ್ಕೆ ಕರೆತರುವಾಗ “ನಿಮ್ಮ ಪತ್ನಿಯ ಮಾನಹಾನಿಗೈದವನ ಮೇಲೆ ಇಷ್ಟೊಂದು ರೋಷ ನಿಮಗಿದೆಯಾದರೆ ಸೀತೆಯನ್ನು ಅಪಹರಿಸಿ ಬಂಧನದಲ್ಲಿಟ್ಟು ಹಿಂಸಿಸುತ್ತಿರುವ ನಿಮ್ಮ ಮೇಲೆ ಅತೀವವಾದ ರೋಷ ರಾಮನಲ್ಲಿದ್ದರೆ ತಪ್ಪೇನು?” (ಪುಟ 92) ಎಂಬ ಮಂಡೋದರಿಯ ಮಾತು ಆಕೆಯ ವ್ಯಕ್ತಿತ್ವವನ್ನು ಪ್ರಕಟಪಡಿಸುವುದರೊಂದಿಗೆ, ತಮ್ಮ ಗೆಲುವೇ ಮುಖ್ಯವಾದಾಗ ಇತರರ ಬದುಕನ್ನು ಹಾಳುಗೆಡಹಲು ಯಾರೂ ಹಿಂಜರಿಯುವುದಿಲ್ಲ ಎಂಬುದಕ್ಕೆ ರಾಮನ ಕಡೆಯವರೂ ಉದಾಹರಣೆಯಾಗುವ ವಿರೋಧಾಭಾಸವನ್ನು ವ್ಯಕ್ತಪಡಿಸುತ್ತದೆ.
ರಾವಣನ ಕುಟುಂಬದೊಳಗಿನ ಸಂಘರ್ಷದ ರೂಪವನ್ನು ತಿಳಿಸುತ್ತಾ ಮನುಷ್ಯರ ಮನಸ್ಸಿನ ಸಂಕೀರ್ಣತೆಗಳನ್ನು ದೂರದಿಂದ ತಿಳಿದುಕೊಳ್ಳುವ ಲೇಖಕರ ಆಸಕ್ತಿಯು ಇಲ್ಲಿ ಪ್ರಕಟಗೊಂಡಿದೆ. ಮಂಡೋದರಿಯ ಕ್ರಿಯೆ – ಪ್ರತಿಕ್ರಿಯೆ, ಮಾತು – ಸ್ವಗತಗಳ ಮೂಲಕ ಸಾಮ್ರಾಜ್ಯವೊಂದರ ದುರಂತ ಬೆಳಕಿಗೆ ಬರುತ್ತದೆ. ಕೌಟುಂಬಿಕ ಸಂಬಂಧಗಳ ಬಂಧನದಲ್ಲಿ ಸಿಲುಕಿಕೊಳ್ಳುವ ಆಕೆಗೆ ಕೊನೆಯವರೆಗೂ ಅವುಗಳಿಂದ ಬಿಡಿಸಿಕೊಳ್ಳಲಾಗುವುದಿಲ್ಲ. ಅಧಿಕಾರದ ದರ್ಪ, ದುರಹಂಕಾರ ಮತ್ತು ಲಂಪಟತನದ ಪ್ರತೀಕವೆನಿಸಿದ ರಾವಣನ ಜೊತೆಯಲ್ಲಿ ಸಾಗುವುದು ಆಕೆಗೆ ಅನಿವಾರ್ಯವಾಗುತ್ತದೆ. ಲಂಕೆಯ ಅರಸಿಯಾದರೂ ತನ್ನ ಒಳದನಿಯ ಸಮಾಧಾನಕ್ಕಾಗಿ ಸಾಮಾನ್ಯಳೆಂಬಂತೆ ಬದುಕುತ್ತಾ, ಕಳೆದುಹೋಗುತ್ತಿರುವ ಸಂಬಂಧಗಳನ್ನು, ಹಾಳಾಗುತ್ತಿರುವ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಒದ್ದಾಡುವ, ಅಧಿಕಾರದ ಮದವನ್ನು ಬಿಟ್ಟುಬಿಡಲು ಪ್ರೇರೇಪಿಸುವ ಗುಣಾತ್ಮಕ ಪಾತ್ರವಾಗಿ ಮೂಡಿ ಬಂದಿದ್ದಾಳೆ. ರಾವಣನ ಕುಟುಂಬದೊಂದಿಗೆ ಬೇಯುತ್ತಾ, ತಣಿಯುತ್ತಾ ಪಾಕವಾಗುವ, ಪಕ್ವಗೊಳ್ಳುವ ಮಂಡೋದರಿಯು ನಿರ್ಲಿಪ್ತ, ಪ್ರಾಮಾಣಿಕ ನಡೆ ನುಡಿಯ ಪ್ರತಿನಿಧಿ. ಆಕೆಯೊಳಗಿನ ಮಾನವೀಯತೆಯು ಇತರರ ನೋವುಗಳಿಗೆ ಸ್ಪಂದಿಸುತ್ತದೆ. ಆದರೆ ಲೋಕ ವ್ಯವಹಾರದ ಒಳ ಸತ್ಯಗಳಿಗೂ ಮುಕ್ತ ಮನಸ್ಸು ಬಯಸುವ ಆದರ್ಶಗಳಿಗೂ ಗಾಢ ಅಂತರವಿರುವುದರಿಂದ ಅದು ವಿಭೀಷಣ, ಸರಮೆ, ಅನಲೆಯರನ್ನು ಹೊರತುಪಡಿಸಿ ಇತರರ ಹೃದಯದೊಳಗೆ ಇಳಿಯುವುದಿಲ್ಲ. ರಾವಣನ ದುರಂತವನ್ನು ಮೊದಲೇ ಕಂಡಿದ್ದ ಆಕೆಯ ಮನದೊಳಗೆ ಅಪ್ಪಳಿಸುವ ಪ್ರತಿಕ್ರಿಯೆಯ ಅಲೆಗಳ ಸದ್ದಿನೊಂದಿಗೆ ಅಂತರಂಗದ ಆತ್ಮರೋದನವು ಕೇಳಿಸುತ್ತದೆ. ಆಕೆಯ ವಿಹ್ವಲತೆಯು ಆಧುನಿಕ ಹೆಣ್ಣಿನ ವೇದನೆಯ ಪ್ರತಿಫಲನವೂ ಆಗುತ್ತದೆ.
ರಾಮಾಯಣದ ಬಹುಪಾಲು ಪುನರ್ಸೃಷ್ಟಿಗಳು ಆ ಕೃತಿಯನ್ನು ವಿಮರ್ಶಕವಾಗಿ ಕಂಡರಿಸಲು ತವಕಿಸಿವೆ ಎಂಬುದು ನಮ್ಮ ದೇಶದ ಕಾವ್ಯ ಪರಂಪರೆಯ ಬಹು ದೊಡ್ಡ ಸಿದ್ಧಿಯಾಗಿದೆ. ರಾಮಾಯಣವು ಕೇವಲ ಮಹಾಕಾವ್ಯವಾಗಿರದೆ ನಮ್ಮ ಪಾಲಿನ ಪುರಾಣವೂ ಇತಿಹಾಸವೂ ಆಗಿದೆ. ಭಾರತೀಯ ಸಂಸ್ಕೃತಿಯ ಆಧಾರ ಶ್ರುತಿಯಾಗಿರುವ ಈ ಜೀವಂತ ಕೃತಿಗೆ ಒದಗಿರುವ ಹೊಸ ಸಂವೇದನೆಯನ್ನು ಹೇಗೆ ಗ್ರಹಿಸಿಕೊಳ್ಳಬೇಕೆಂಬ ಪ್ರಶ್ನೆಗೆ ಉತ್ತರವು ಸುಲಭವಲ್ಲ. ಈ ಕಾದಂಬರಿಗೆ ರಾಮಾಯಣದ ಮೌಲ್ಯಗಳನ್ನು ಪರಿಶೀಲಿಸುವ ಉದ್ದೇಶವಿಲ್ಲದಿದ್ದರೂ ವಿಭೀಷಣನ ರಾಜ್ಯತ್ಯಾಗ, ಶೂರ್ಪನಖಿಯ ಗುಣನಡತೆ ಮತ್ತು ಚಿತ್ರಸೇನೆಯ ಅಪಹರಣಗಳಲ್ಲಿ ಸೂಕ್ಷ್ಮ ವಿಮರ್ಶೆಯು ಇರುವುದನ್ನು ಅಲ್ಲಗೆಳೆಯುವಂತಿಲ್ಲ. ಮಂಡೋದರಿಯ ದೃಷ್ಟಿಯೇ ಮುಖ್ಯವಾದರೂ ರಾವಣನ ಸ್ವಗತಗಳನ್ನೂ ಒಳಗೊಂಡಿರುವುದರಿಂದ ಕಾದಂಬರಿಗೆ ಸರ್ವಸಾಕ್ಷಿತ್ವದ ನಿರೂಪಣೆಯು ಸಿದ್ಧಿಸಿದೆ. ವಿಭೀಷಣ, ಸರಮೆ, ಅನಲೆಯರ ಮಾತುಕತೆಗಳ ಮೂಲಕ ಸಾಗುವ ಕಥಾನಕವು ಮೊದಲ ಓದಿಗೇ ಸುಲಭವಾಗಿ ತೆರೆದುಕೊಂಡು ಮಂಡೋದರಿಯ ತುಮುಲದೊಂದಿಗೆ ಆರೋಗ್ಯಕರ ಧರ್ಮ ಜಿಜ್ಞಾಸೆಯನ್ನು ಪ್ರಕಟಿಸುತ್ತದೆ. ತನ್ನ ಮಡದಿ ಚಿತ್ರಸೇನೆಯು ಇಂದ್ರನಿಂದ ಅಪಹರಣಕ್ಕೆ ಒಳಗಾದಾಗ ಆಕೆಯ ವಿಯೋಗದಿಂದ ಕಂಗೆಟ್ಟ ಕುಬೇರನ ನೋವನ್ನು ಕಣ್ಣಾರೆ ಕಂಡ ಮಂಡೋದರಿಯ ಚಿಂತೆ – ಚಿಂತನೆಗಳು ಕೃತಿಗೆ ತಾರ್ಕಿಕ ಚೌಕಟ್ಟನ್ನು ಒದಗಿಸುತ್ತವೆ. ರಾವಣ ವಧೆಯ ಬಳಿಕವೂ ಹೆಣ್ಣಿನ ಅಪಹರಣಗಳು ಕೊನೆಗೊಂಡವೇ? ಎಂಬ ಪ್ರಶ್ನೆಯನ್ನು ಎತ್ತುತ್ತದೆ. ಚಿತ್ರಸೇನೆಯನ್ನು ಪತ್ತೆಹಚ್ಚಲು ಹೊರಟ ಕುಬೇರನ ಗುಪ್ತಚಾರಿಣಿ ನಾಡೀಜಂಘೆಯನ್ನು ಕೊಲ್ಲುವ ಇಂದ್ರನ ನಿಷ್ಕರುಣ ಮನಸ್ಥಿತಿಯು ದೇವತೆಗಳ ಮನಸ್ಸಿನಲ್ಲಿ ಅಡಗಿರುವ ಲಂಪಟತನ ಮತ್ತು ಕ್ರೌರ್ಯವನ್ನು ಅನಾವರಣಗೊಳಿಸುತ್ತದೆ. ರಾಮನಂಥ ಮಾನವನು ದೇವನಂತೆಯೂ, ಇಂದ್ರನಂಥ ದೇವನು ಮಾನವನಂತೆಯೂ ವರ್ತಿಸುವ ಅಚ್ಚರಿಯನ್ನು ಮನಗಾಣಿಸುತ್ತವೆ. ಶತಮಾನಗಳು ಉರುಳಿದರೂ ಕಾಲ ದೇಶಗಳನ್ನು ಮೀರಿ ನಡೆಯುತ್ತಿರುವ ಹೆಣ್ಣಿನ ಮೇಲಿನ ತಿರಸ್ಕಾರ, ದೌರ್ಜನ್ಯ, ದಬ್ಬಾಳಿಕೆಯ ರೂಪಗಳು ಹೊಸ ಕಾಲದಲ್ಲೂ ಸ್ಥಿತ್ಯಂತರಗೊಂಡಿರುವ ಹೊತ್ತಿನಲ್ಲಿ ನಾಡೀಜಂಘೆಯ ಬಲಿದಾನವು ಕಾದಂಬರಿಯನ್ನು ಆಧುನಿಕ ದೃಷ್ಟಿಯಲ್ಲಿ ನೋಡಲು ಒತ್ತಾಯಿಸುತ್ತದೆ. ರಾಮನನ್ನೂ ರಾಮಾಯಣವನ್ನೂ ಮಂಡೋದರಿಯ ಕಣ್ಣಿನಲ್ಲಿ ಕಂಡರಿಸಲು ಹೊರಟ ಕೃತಿಯು ಬೌದ್ಧಿಕ ವ್ಯಾಯಾಮವಾಗಿ ಉಳಿಯದೆ ಕಾವ್ಯದ ಭಿತ್ತಿಯಲ್ಲಿ ನಡೆದಿರುವ ರಸ ವ್ಯಾಪಾರ ಎನಿಸಿಕೊಳ್ಳುತ್ತದೆ.
ಪುಸ್ತಕದ ಹೆಸರು : ಮಂಡೋದರಿ (ಕಾದಂಬರಿ)
ವರ್ಷ : 2017
ಲೇಖಕರು : ಕುಮಾರಸ್ವಾಮಿ ತೆಕ್ಕುಂಜ
ಪ್ರಕಾಶಕರು : ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ) ಮಂಗಳೂರು
ಪುಟಗಳು : 110
ಬೆಲೆ ರೂ : 100
ಡಾ. ಸುಭಾಷ್ ಪಟ್ಟಾಜೆ :
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡಿನ ಸರಕಾರಿ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ, ಡಾ. ಯು. ಮಹೇಶ್ವರಿಯವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು: ಒಂದು ತೌಲನಿಕ ಅಧ್ಯಯನ’ ಸಂಶೋಧನ ಮಹಾ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಬರೆದ ಕತೆ, ಕವನ, ಲೇಖನ ಮತ್ತು ಸುಮಾರು 200ಕ್ಕೂ ಹೆಚ್ಚು ಪುಸ್ತಕ ವಿಮರ್ಶೆಗಳು ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ ಮತ್ತು ಅಂತರ್ಜಾಲ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರವಾಗಿವೆ.
ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ), ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್ (ವ್ಯಕ್ತಿ ಚಿತ್ರಣ), ಕಥನ ಕಾರಣ (ಸಂಶೋಧನ ಕೃತಿ), ನುಡಿದು ಸೂತಕಿಗಳಲ್ಲ (ಸಂಪಾದಿತ) ಎಂಬ ಕೃತಿಗಳನ್ನು ಪ್ರಕಟಿಸಿರುವ ಇವರು ಕಾಸರಗೋಡು ಜಿಲ್ಲೆಯ ಶೇಣಿ ಗ್ರಾಮದ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯಾಪಕವಾದ ಓದು, ವಿಸ್ತಾರವಾದ ಅಧ್ಯಯನಕ್ಕೆ ಹೆಸರಾಗಿರುವ ಇವರು ಉತ್ಸಾಹಿ ಸಂಘಟಕರಾಗಿದ್ದು ನಾಡಿನ ವಿವಿಧೆಡೆಗಳಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಮುಂಚೂಣಿಯ ಪಾತ್ರವನ್ನು ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ವೇದಿಕೆಯ ಸಂಚಾಲಕರಲ್ಲಿ ಒಬ್ಬರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.
ಲೇಖಕ ಕುಮಾರಸ್ವಾಮಿ ತೆಕ್ಕುಂಜ ಅವರು ಇಲೆಕ್ಟಿಕಲ್ ಇಂಜಿನಿಯರಿಂಗ್ ಪದವೀಧರರು. ಸುಮಾರು ಇಪ್ಪತ್ತು ವರ್ಷಗಳ ಕಾಲ ಮುಂಬಯಿಯಲ್ಲಿ ‘ಫಿಯಟ್ ಅಟೊಮೊಬೈಲ್ ಕಂಪೆನಿ’ಯ ತಾಂತ್ರಿಕ ವಿಭಾಗದಲ್ಲಿ ಮತ್ತು ಐದು ವರ್ಷ ಮಹಾರಾಷ್ಟ್ರದ ನಾಸಿಕದಲ್ಲಿ ‘ಮಹೀಂದ್ರ ಮತ್ತು ಮಹೀಂದ್ರ ಕಂಪೆನಿ’ಯಲ್ಲಿ ಕೆಲಸಮಾಡಿ ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿರುವ ‘ಜನರಲ್ ಮೋಟರ್ ಟೆಕ್ನಿಕಲ್ ಸೆಂಟರ್’ನಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನೆಲೆ ನಿಂತ ಮೇಲೆ, ಹವಿಗನ್ನಡದ ಬ್ಲೊಗುಚ್ಛ ‘ಒಪ್ಪಣ್ಣ.ಕಾಂ’ನಲ್ಲಿ 2011ರಿಂದ ಬರೆಯಲು ಆರಂಭಿಸಿದ್ದು, ಇದೀಗ, ನಿವೃತ್ತಿಯ ಅಂಚಿನಲ್ಲಿರುವ ಸಮಯದಲ್ಲಿ ಕನ್ನಡದಲ್ಲಿಯೂ ಬರೆಯಲು ತೊಡಗಿಸಿಕೊಂಡಿದ್ದಾರೆ. ಕನ್ನಡ ಪೌರಾಣಿಕ ಕಾದಂಬರಿ ‘ಮಂಡೋದರಿ’ ಬಿಡುಗಡೆಗೊಂಡಿದೆ. ಈ ಕಾದಂಬರಿಯಲ್ಲಿ ರಾವಣನ ಮಡದಿ ಮಂಡೋದರಿಯ ಚಿತ್ರಣವಿದೆ. ಜೊತೆಗೆ ರಾಮಾಯಣ ಯುದ್ಧ ಕಾಲದಲ್ಲಿ ರಾವಣಾಂತಪುರದ ಸ್ತ್ರೀಯರ ಪಾಡುಗಳು, ಸೀತಾಪಹಾರವಾದ ನಂತರದಲ್ಲಿ ಶೂರ್ಪಣಖಿ ಏನಾದಳು ಎಂಬ ಜಿಜ್ಞಾಸೆಯೂ ಸೇರಿವೆ. ಅಪಹರಿಸಿ ತಂದ ಸೀತೆಯನ್ನು ಮರಳಿಸುವಂತೆ ರಾವಣನ ಮನಃಪರಿವರ್ತನೆಗೆ ಏನೆಲ್ಲ ಪ್ರಯತ್ನವನ್ನು ಮಂಡೋದರಿ ನಡೆಸಿರಬಹುದು ಎಂಬ ವಿವರಣೆಯಿದೆ. ‘ಪಾರುಪತಿಯ ಪಾರುಪತ್ಯ’ ಎಂಬ ಹವಿಗನ್ನಡ ಕೃತಿ ಅಚ್ಚಿನಲ್ಲಿದೆ.