ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಎರಡು ಪ್ರತಿಷ್ಟಿತ ದತ್ತಿ ಪ್ರಶಸ್ತಿಗಳಾದ ‘ಡಾ. ರಾಜ ಕುಮಾರ್ ಸಂಸ್ಕೃತಿ ದತ್ತಿ’ ಮತ್ತು ‘ಪ್ರೊ. ಸಿ.ಎಚ್. ಮರಿದೇವರು ಪ್ರತಿಷ್ಠಾನ ದತ್ತಿ’ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 20-04-2024ರಂದು ನಡೆಯಿತು.
ಈ ಸಮಾರಂಭದಲ್ಲಿ ಪ್ರಸ್ತಾವಿಕ ಭಾಷಣವನ್ನು ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು “ಡಾ. ರಾಜ್ ಕುಮಾರ್ ಅವರು ಕನ್ನಡ ಸಂಸ್ಕೃತಿಯ ಪ್ರತೀಕದಂತಿದ್ದರು. ಕನ್ನಡಕ್ಕೊಬ್ಬನೇ ರಾಜ್ ಕುಮಾರ್ ಎನ್ನಿಸಿದ ಅವರು ತಮ್ಮ ಅಭಿನಯ ಮತ್ತು ಬದುಕಿನ ರೀತಿಯಿಂದ ಮಾದರಿ ಎನ್ನಿಸಿಕೊಂಡಿದ್ದರು. ಐವತ್ತಕ್ಕೂ ಹೆಚ್ಚು ಸಂದರ್ಭಗಳಲ್ಲಿ ರಾಜ್ ಕುಮಾರ್ ಅವರ ಒಡನಾಟ ತಮಗೆ ದೊರಕಿದ್ದನ್ನು ಸ್ಮರಿಸಿಕೊಂಡ ಅವರು ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರ ಸ್ವೀಕಾರ ಸಂದರ್ಭದಲ್ಲಿ ನಾಲ್ಕು ದಿನ ದೊರಕಿದ ನಿಕಟ ಒಡನಾಟದ ಅನುಭವವನ್ನು ನೆನಪು ಮಾಡಿಕೊಂಡು ರಾಜ್ ಕುಮಾರ್ ಅವರಿಗೆ ಅಧ್ಯಾತ್ಮದಲ್ಲಿ ಆಸಕ್ತಿ ಇತ್ತು. ಹಠ ಯೋಗವನ್ನೂ ಅವರು ಸಾಧಿಸಿದ್ದರು. ಅವರ ಯೋಗ ಗುರುಗಳಾದ ನಾಯ್ಕರ್ ಅವರ ಗುರುಗಳ ಮೇಲೆ ಶಿಶುನಾಳ ಶರೀಫರ ಪ್ರಭಾವವಿತ್ತು. ಸಂತ ಶ್ರೇಷ್ಟರಾದ ಕನಕದಾಸ, ಪುರಂದರ ದಾಸ, ಸರ್ವಜ್ಞ, ತುಕಾರಂ, ಕಬೀರ ಮೊದಲಾದವರ ಪಾತ್ರಗಳಿಗೆ ಜೀವ ತುಂಬಿದ ಹಾಗೆ ಇಮ್ಮಡಿ ಪುಲಕೇಶಿ, ಮಯೂರ, ಶ್ರೀಕೃಷ್ಣದೇವರಾಯ ಮೊದಲಾದ ಕನ್ನಡ ನಾಡಿನ ವೀರರನ್ನು ಬೆಳ್ಳಿತೆರೆಯ ಮೂಲಕ ಜೀವಂತವಾಗಿಸಿದರು, ರಾಮ, ಕೃಷ್ಣ, ನಾರದ ಮೊದಲಾದ ಪುರಾಣ ಪಾತ್ರಗಳನ್ನೂ ಅಭಿನಯಿಸಿದರು, ಬಾಂಡ್ ನಿಂದ ಭಕ್ತನವರೆಗೆ, ಚಮ್ಮಾರನಿಂದ ಚಕ್ರವರ್ತಿಯವರೆಗೆ ಎಲ್ಲಾ ಮಾದರಿಯ ಪಾತ್ರಗಳನ್ನು ಮಾಡಿ ರಾಜ್ ಕುಮಾರ್ ಕನ್ನಡ ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರಶಸ್ತಿಗಳನ್ನು ಅರ್ಹತೆ ಮತ್ತು ಯೋಗ್ಯತೆಯ ಮೇಲೆ ನೀಡಲಾಗುವುದು, ಇವತ್ತು ಪುರಸ್ಕಾರ ಪಡೆಯುತ್ತಿರುವವರು ನಾಡಿನ ಎಲ್ಲಾ ಭಾಗಗಳಿಂದ ಬಂದಿರುವುದೇ ಪುರಸ್ಕಾರದ ಪಾರದರ್ಶಕತೆಗೆ ಸಾಕ್ಷಿಯಾಗಿದೆ” ಎಂದರು.
ಇದು ನನ್ನ ಪಾಲಿಗೆ ಶುಭದಿನ ಎಂದೇ ಮಾತನ್ನು ಆರಂಭಿಸಿದ ಕಲಾವಿದ, ನಿರ್ಮಾಪಕ ರಮೇಶ್ ಭಟ್ ಅವರು “ಕನ್ನಡ ಸಾಹಿತ್ಯ ಪರಿಷತ್ತಿನ ಇದೇ ಸಭಾಂಗಣ ನನ್ನ ರಂಗಭೂಮಿ ಪ್ರವೇಶಕ್ಕೂ ಕಾರಣವಾಯಿತು, ಬೆಳವಣಿಗೆಗೂ ವೇದಿಕೆಯಾಯಿತು. ಇಲ್ಲಿ ರಾಜ್ ಕುಮಾರ್ ಅವರ ಹೆಸರಿನ ಬಹು ದೊಡ್ಡ ಪ್ರಶಸ್ತಿಯನ್ನು ಪ್ರದಾನ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯವೆಂದರು. ಇತ್ತೀಚೆಗೆ ಪ್ರಶಸ್ತಿ ಕೂಡ ಮಾರಾಟದ ವಸ್ತುವಾಗಿದೆ, ಆದರೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇದು ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದ್ದು ಇದಕ್ಕೆ ವಿಶೇಷ ಮಹತ್ವವಿದೆ” ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಿರ್ಮಾಪಕ ಎಸ್.ಎ. ಚಿನ್ನೇಗೌಡರು ಮಾತನಾಡಿ “ಇಂದಿನ ಕಾರ್ಯಕ್ರಮದಲ್ಲಿ ಸಿನಿಮಾ ಮತ್ತು ಸಾಹಿತ್ಯ ಬೆರೆತಿರುವುದು ವಿಶೇಷ, ಇಂತಹ ಅನುಬಂಧ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಾತ್ರ ಸಾಧ್ಯ” ಎಂದರು. ಪ್ರೊ. ಎಂ.ಎಚ್. ಮರಿದೇವರು ಪ್ರಶಸ್ತಿ ದಾನಿಗಳ ಪರವಾಗಿ ಮಾತನಾಡಿದ ಎಸ್. ರಾಜಶೇಖರ್ ಪುರಸ್ಕಾರದ ಮಹತ್ವವನ್ನು ವಿವರಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಲಾವಿದ ಎಂ.ಎಸ್. ಉಮೇಶ್ “ರಂಗಭೂಮಿ ದಿನಗಳಿಂದಲೂ ತಮಗೆ ದೊರೆತ ರಾಜ್ ಕುಮಾರ್ ಅವರ ಒಡನಾಟವನ್ನು ನೆನಪು ಮಾಡಿಕೊಂಡು ಅವರ ಹೆಸರಿನ ಪ್ರಶಸ್ತಿ ತಮಗೆ ದೊರಕುತ್ತಿರುವುದು ಧನ್ಯತೆಯ ಭಾವವನ್ನು ತಂದಿದೆ” ಎಂದರು. ಪ್ರೊ. ಸಿ.ಎಚ್. ಮರಿದೇವರು ಪುರಸ್ಕಾರವನ್ನು ಪಡೆದ ಡಾ. ಬಿ. ನಂಜಂಡ ಸ್ವಾಮಿ, ಡಾ. ಕವಿತಾ ಮಿಶ್ರ, ಮಲ್ಲಿಕಾರ್ಜನ ಕೆಂಕೆರೆ, ನಿಸರ್ಗ ಸಂಗೀತ ವಿದ್ಯಾಲಯದ ಪರವಾಗಿ ಮಲ್ಲಯ್ಯ ಕೊಮಾರಿಯವರು ತಮ್ಮ ಭಾವನೆಗಳನ್ನು ಹಂಚಿಕೊಂಡರು. ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಬಿ.ಎಂ. ಪಟೇಲ ಪಾಂಡು ಅವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರೆ ಗೌರವ ಕಾರ್ಯದರ್ಶಿಗಳಾದ ಡಾ. ಪದ್ಮಿನಿ ನಾಗರಾಜು ಸ್ವಾಗತಿಸಿದರೆ ನೇ.ಭ.ರಾಮಲಿಂಗ ಶೆಟ್ಟಿಯವರು ವಂದಿಸಿದರು.