ಮಂಗಳೂರು : ರಂಗ ಸ್ವರೂಪ (ರಿ.) ಕುಂಜತ್ತಬೈಲ್ ಇದರ ವತಿಯಿಂದ ‘ರಂಗೋತ್ಸವ’ ಮಕ್ಕಳ ಬೇಸಿಗೆ ಶಿಬಿರವನ್ನು ಕುಂಜತ್ತಬೈಲ್ ಮರಕಡದ ದ.ಕ.ಜಿ.ಪಂ.ಮಾ.ಹಿ.ಪ್ರಾ. ಶಾಲೆಯಲ್ಲಿ ದಿನಾಂಕ 01-05-2024ರಿಂದ 04-05-2024ರವರೆಗೆ ಹಮ್ಮಿಕೊಳ್ಳಲಾಗಿದೆ. ದಿನಾಂಕ 04-05-2024ರಂದು ಸಂಜೆ ಗಂಟೆ 5-00ರಿಂದ ಪ್ರತಿಭಾ ಪ್ರದರ್ಶನ, ಸಮಾರೋಪ ಸಮಾರಂಭ ಹಾಗೂ ಶಿಬಿರಾರ್ಥಿಗಳಿಂದ ‘ಸಾಂಸ್ಕೃತಿಕ ಸಂಜೆ’ ಕಾರ್ಯಕ್ರಮಗಳು ನಡೆಯಲಿದೆ.
ರಂಗಸ್ವರೂಪ ಕುಂಜತ್ತಬೈಲ್ ನಡೆದು ಬಂದ ದಾರಿ : ರಂಗ ಸ್ವರೂಪ ಹೆಸರೇ ಸೂಚಿಸುವಂತೆ ಸ್ವರೂಪ ವಠಾರದಲ್ಲಿ ಹುಟ್ಟಿ ಬೆಳೆದ ಉತ್ಸಾಹಿ ಹಾಗೂ ಕ್ರಿಯಾತ್ಮಕ ವ್ಯಕ್ತಿತ್ವವುಳ್ಳ ಯುವಕ ಯುವತಿಯರ ಬಳಗ ಜಿಲ್ಲೆಯ ಹಿರಿಯ ಕಲಾವಿದರು ಶೈಕ್ಷಣಿಕ ಚಿಂತಕರೂ ಆಗಿರುವ ಗೋಪಾಡ್ಕರ್ ಅವರ ಮಾರ್ಗದರ್ಶನದಲ್ಲಿ ಕಳೆದ 15 ವರ್ಷಗಳಿಂದ ವೈವಿಧ್ಯಮಯ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ.
ಕುಂಜತ್ತಬೈಲ್ ಪರಿಸರದ ವಿವಿಧ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ರೂಪುಗೊಂಡ ರಂಗಸ್ವರೂಪ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ರಕ್ತದಾನ ಶಿಬಿರ, ಸ್ವಚ್ಛತಾ ಆಂದೋಲನ, ಭಿತ್ತಿ ಚಿತ್ತಾರ, ಚಿತ್ರಕಲಾ ಪ್ರದರ್ಶನ, ಸಾಮಾಜಿಕ ಜಾಗೃತಿ ಕಾರ್ಯಕ್ರಮ, ಶ್ರಮದಾನ ಹಾಗೂ ಹಲವಾರು ಪುಸ್ತಕ ಪ್ರೀತಿ ಕಾರ್ಯಕ್ರಮಗಳ ಮೂಲಕ ತನ್ನನ್ನು ತಾನು ಗುರುತಿಸಿಕೊಂಡಿದೆ.
ಎಪ್ರಿಲ್ ತಿಂಗಳಲ್ಲಿ ರಂಗಸ್ವರೂಪದ ಚಟುವಟಿಕೆ ವೇಗ ಪಡೆದುಕೊಳ್ಳುತ್ತದೆ. ಕುಂಜತ್ತಬೈಲ್ ಪರಿಸರದ ಮಕ್ಕಳು ರಜಾ ಕಾಲದ ಶಿಬಿರಕ್ಕೆ ಆತುರದಿಂದ ಕಾಯುತ್ತಿರುತ್ತಾರೆ. ಮರಕಡದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯೇ ಈ ಶಿಬಿರದ ಕೇಂದ್ರ ಸ್ಥಾನ. ಪ್ರತೀ ವರ್ಷವೂ ನಾಲ್ಕು ದಿನಗಳ ಕಾಲ ನಡೆಸುತ್ತಾ ಬರುತ್ತಿರುವ ಈ ಶಿಬಿರದಲ್ಲಿ ಸರಾಸರಿ 100ರಿಂದ 150 ಮಕ್ಕಳು ಭಾಗವಹಿಸಿ ತಮ್ಮ ಉತ್ಸಾಹವನ್ನು ಹೆಚ್ಚಿಸಿಕೊಂಡು ಸಂತಸವನ್ನು ಹಂಚಿಕೊಳ್ಳುತ್ತಾರೆ. ರಂಗ ಸ್ವರೂಪದ ಪ್ರತಿಯೋರ್ವ ಸದಸ್ಯರು ಒಂದಲ್ಲ ಒಂದು ರೀತಿಯಲ್ಲಿ ಪ್ರತಿಭಾನ್ವಿತರು ಹಾಗೂ ಸಂಪನ್ಮೂಲ ವ್ಯಕ್ತಿಗಳು. ಈ ಶಿಬಿರಕ್ಕೆ ರಂಗಸ್ಥರೂಪದ ಸದಸ್ಯರೇ ಸಂಪನ್ಮೂಲ ವ್ಯಕ್ತಿಗಳು. ಇವರೊಂದಿಗೆ ಜಿಲ್ಲೆಯ ಹಲವಾರು ಪ್ರಸಿದ್ಧ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಮಕ್ಕಳಿಗೆ ತರಬೇತಿಯನ್ನು ನೀಡಲಾಗುತ್ತಿದೆ.
ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳನ್ನು ವೇದಿಕೆಗೆ ಪರಿಚಯಿಸುವುದು ಈ ಶಿಬಿರದ ವೈಶಿಷ್ಟ್ಯ. ಶಿಬಿರದ ಆರಂಭದ ದಿನದ ಅಳಕು ಮರೆಯಾಗುತ್ತಾ ಮುಕ್ತಾಯದ ದಿನದಂದು ಮಕ್ಕಳು ಅತ್ಮವಿಶ್ವಾಸದೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುವುದರ ಹಿಂದೆ ಎಲ್ಲಾ ಸಂಪನ್ಮೂಲ ವ್ಯಕ್ತಿಗಳ ಪ್ರೀತಿ, ಸ್ನೇಹ, ವಿಶ್ವಾಸ, ತಾಳ್ಮೆ ಹಾಗೂ ಕಾಳಜಿ ಇದೆಯೆಂದರೆ ಅತಿಶಯೋಕ್ತಿ ಅಲ್ಲ.
ಪ್ರತೀವರ್ಷವೂ ಸಮಾರೋಪ ಸಮಾರಂಭವನ್ನು ವಿಶಿಷ್ಠವಾಗಿ ನಡೆಸಲಾಗುತ್ತಿದ್ದು, ಶಿಬಿರಾರ್ಥಿಗಳಿಗೆ ತಮ್ಮ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಕುಂಜತ್ತಬೈಲ್ ಪರಿಸರದಲ್ಲಿರುವ ವಿಶಿಷ್ಠ ವ್ಯಕ್ತಿಗಳ ಸಾಮಾಜಿಕ ಸೇವೆಯನ್ನು ಪರಿಗಣಿಸಿ ‘ರಂಗಸ್ವರೂಪ ಪ್ರಶಸ್ತಿ’ ನೀಡುತ್ತಿರುವುದು ಈ ದಿನದ ವಿಶೇಷತೆ. ಕಳೆದ 4-5 ವರ್ಷಗಳಿಂದ ಈ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯುತ್ತಿದ್ದು, ಖ್ಯಾತ ಕಲಾವಿದ ಶ್ರೀ ಗೋಪಾಡ್ಕರ್, ಖ್ಯಾತ ಕವಿಗಳಾಗಿರುವ ಡಾ. ವಸಂತ ಕುಮಾರ್ ಪೆರ್ಲ, ಜನಪ್ರಿಯ ವೈದ್ಯರಾದ ಡಾ. ಸತೀಶ್ ಕಲ್ಲಿಮಾರ್, ಜನ ಮೆಚ್ಚಿದ ಶಿಕ್ಷಕಿ ಶ್ರೀಮತಿ ನತಾಲಿಯಾ ಮೇರಿ ಪಿಂಟೋ, ಸಾಮಾಜಿಕ ಸೇವಾ ಕಾರ್ಯಕರ್ತರಾದ ಶ್ರೀ ನಾರಾಯಣ ಸಾಲ್ಯಾನ್, ಬಹುಮುಖ ಪ್ರತಿಭೆಯ ಕಲಾವಿದ ಮೈಮ್ ರಾಮ್ ದಾಸ್ ಇವರೆಲ್ಲರೂ ‘ರಂಗ ಸ್ವರೂಪ ಪ್ರಶಸ್ತಿ’ಗೆ ಪಾತ್ರರಾಗಿರುತ್ತಾರೆ. ಈ ಬಾರಿಯ ‘ರಂಗಸ್ವರೂಪ ಪ್ರಶಸ್ತಿ’ಯನ್ನು ನಿವೃತ್ತ ಶಿಕ್ಷಕಿ ಶ್ರೀಮತಿ ಎ.ಪಿ. ಸುಮತಿ ಶೆಣೈ ಇವರಿಗೆ ನೀಡಿ ಗೌರವಿಸಲಾಗುತ್ತಿದೆ.
ಹೆಮ್ಮರವೊಂದು ಸಣ್ಣ ಬೀಜದಿಂದ ಹುಟ್ಟಿರುತ್ತದೆ. ಇಂದು ನೆಟ್ಟ ಸಸಿ ನಾಳೆ ಮರವಾಗಿ ಫಲ ನೀಡುತ್ತದೆ. ಕಳೆದ 15 ವರ್ಷಗಳಿಂದ ಸ್ವರೂಪ ವಠಾರದಲ್ಲಿ ಹಾಡಿದ, ನರ್ತಿಸಿದ ಅಭಿನಯಿಸಿದ, ಮಾತನಾಡಿದ, ಬರೆದ, ಚಿತ್ರಿಸಿದ ಅನುಭವಗಳು ಈಗ ಒಂದು ಸಾಮಾಜಿಕ ಕೊಡುಗೆಯಾಗಿ ಪರಿಣಮಿಸಿದೆ ಎನ್ನುವುದಕ್ಕೆ ಈ ರಂಗ ಸ್ವರೂಪದ ಸದಸ್ಯರೇ ಸಾಕ್ಷಿ.