ಇಂದು ವಿಶ್ವ ಪುಸ್ತಕ ದಿನ. ಪುಸ್ತಕಗಳು ಜ್ಞಾನದ ಭಂಡಾರ ಆಗಿವೆ. ಪುಸ್ತಕ ದಿನವೆಂದರೆ ಜ್ಞಾನ ದಿನವೇ ಆಗಿದೆ. ಅಂದರೆ ಜ್ಞಾನದ ಆರಾಧನೆಯೇ ಪುಸ್ತಕ ದಿನದ ಆಶಯವಾಗಿದೆ. ಪುಸ್ತಕದಲ್ಲಿ ಜ್ಞಾನ ಅಡಕವಾಗಿದೆ. ಆದರೆ ಜ್ಞಾನವು ಪುಸ್ತಕ ರೂಪದಲ್ಲಿ ಮಾತ್ರವೇ ಇರಬೇಕಾಗಿಲ್ಲ. ಪುಸ್ತಕವು ಜ್ಞಾನವನ್ನು ಸಂರಕ್ಷಿಸಿ ಇಟ್ಟುಕೊಂಡಿರುವ ಒಂದು ಮಾಧ್ಯಮವಾಗಿದೆ. ಆಧುನಿಕ ಕಾಲದಲ್ಲಿ ಒಂದು ಮಹತ್ವದ ಮತ್ತು ಶಕ್ತಿಯುತ ಮಾಧ್ಯಮವೂ ಹೌದು. ಹಿಂದಿನ ಕಾಲದಲ್ಲಿ ಸಾಹಿತ್ಯವನ್ನು ಅಕ್ಷರ ರೂಪದಲ್ಲಿ ಬರೆದಿಡುವ ವ್ಯವಸ್ಥೆ ಇರಲಿಲ್ಲ. ಎಲ್ಲವನ್ನೂ ನೆನಪಿನ ರೂಪದಲ್ಲಿ ಸಂರಕ್ಷಿಸಬೇಕಾಗಿತ್ತು. ಅವುಗಳನ್ನು ಶ್ರುತಿ ಮತ್ತು ಸ್ಮೃತಿ ಎಂಬುದಾಗಿ ಕರೆದರು.
ಶ್ರುತಿ ಎಂದರೆ ವೇದ ಸಾಹಿತ್ಯ ಶ್ರೋತ್ರೀಯ ವ್ಯವಸ್ಥೆಯ ಮೂಲಕ ಅಂದರೆ ಬಾಯ್ದೆರೆಯಾಗಿ ಕಂಠಪಾಠ ಮಾಡಿ ಗುರು ಶಿಷ್ಯ ಪರಂಪರೆಯ ಮೂಲಕ ತಲೆಮಾರಿನಿಂದ ತಲೆಮಾರಿಗೆ ದಾಟಿಸಲಾಗುತ್ತಿತ್ತು. ಸ್ಮೃತಿ ಎಂದರೆ ಇತರ ಎಲ್ಲಾ ಜ್ಞಾನ ಶಾಖೆಗಳು. ಇವು ಕೂಡ ತಂದೆಯಿಂದ ಮಗನಿಗೆ ಹರಿದು ಬಂದವು. ಆಗ ಗುಹೆಗಳಲ್ಲಿ ವಾಸಿಸುತ್ತಿದ್ದ ಮನುಷ್ಯ ಗುಹೆಗಳ ಗೋಡೆಗಳಲ್ಲಿ ಚಿತ್ರ ಲಿಪಿಗಳನ್ನು ಕೆತ್ತಿದ. ಆನಂತರ ಎಷ್ಟೋ ಕಾಲವಾದ ಮೇಲೆ ಅಕ್ಷರಗಳು ಸ್ವಲ್ಪ ಪರಿಷ್ಕಾರಗೊಂಡು ಶಿಲೆಗಳಲ್ಲಿ ಶಾಸನಗಳನ್ನು ಕೆತ್ತತೊಡಗಿದ. ಶಿಲಾ ಶಾಸನಗಳ ಕಾಲ ಮುಗಿದ ಬಳಿಕ ತಾಮ್ರಪಟಗಳು ಬಂದವು. ತಾಮ್ರಪಟಗಳ ಕಾಲ ಮುಗಿದು ತಾಳೆಗರಿಯಲ್ಲಿ ಬರೆಯುವ ದಿನಗಳು ಬಂದವು.
ಹಾಳೆಗಳ (paper) ಆವಿಷ್ಕಾರವಾಗಿ ಕೇವಲ ಇನ್ನೂರ ಐವತ್ತು ವರ್ಷಗಳಷ್ಟೇ ಆಗಿದೆ. ಹಾಳೆಗಳ ಮೇಲೆ ಬರೆದು ಪುಸ್ತಕಗಳನ್ನಾಗಿ ಮಾಡುವ ವಿದ್ಯಮಾನ ಸುಮಾರು ಇನ್ನೂರು ವರ್ಷಗಳಷ್ಟು ಹಿಂದಿನದು. ಅಕ್ಷರಗಳನ್ನು ಮೊಳೆಗಳಾಗಿ ಕೊರೆದು ಮುದ್ರಿಸುವ ಪದ್ಧತಿ ಆಧುನಿಕ ಕಾಲದಲ್ಲಿ ಬಹು ಜನಪ್ರಿಯವಾಯಿತು. ಅಕ್ಷರಗಳಿಗೆ ಏಕರೂಪತೆ ಬಂತು. ಸಾಮೂಹಿಕ ಸಂವಹನಕ್ಕಾಗಿ ವ್ಯವಹಾರ ಭಾಷೆಯಲ್ಲಿ ಏಕರೂಪತೆ ಬಂತು. ಕಳೆದ ಸುಮಾರು ನೂರಾ ಐವತ್ತು ವರ್ಷಗಳಿಂದ ಈಚೆಗೆ ಜಗತ್ತಿನಾದ್ಯಾಂತ ಅಕ್ಷರ ಕ್ರಾಂತಿಯಾಗಿ ಎಲ್ಲಾ ಜ್ಞಾನವೂ ಮುದ್ರಿತ ಪುಸ್ತಕಗಳಲ್ಲಿ ದಾಖಲಾದುದು ಒಂದು ಚೋದ್ಯವೇ ಸರಿ.
ಮನುಷ್ಯನ ಜ್ಞಾನವು ಕೆಲವು ಸಾವಿರ ವರ್ಷಗಳಿಂದ ಹರಿದು ಬಂದಿದ್ದರೂ, ಪುಸ್ತಕ ರೂಪದಲ್ಲಿ ಅದು ದಾಖಲಾಗಿರುವುದು ಕೇವಲ ನೂರೈವತ್ತು ವರ್ಷಗಳ ಈಚೆಯಿಂದ. ಅಂದರೆ ಪುಸ್ತಕಗಳ ಇತಿಹಾಸ ಎಷ್ಟು ಕಡಿಮೆ ಎಂಬುದು ಮನವರಿಕೆಯಾದೀತು. ಇಷ್ಟಾಗಿಯೂ ಮನುಷ್ಯನ ಒಟ್ಟು ಸಂಕಲಿತ ಜ್ಞಾನದ ಶೇ.10 ಪಾಲು ಕೂಡ ಪುಸ್ತಕ ರೂಪದಲ್ಲಿ ಮುದ್ರಿತವಾಗಿರಲಾರದು. ಶೇ.90 ಭಾಗ ಪ್ರಕಟವಾಗಿಲ್ಲ. ಅಂದರೆ ಮನುಷ್ಯನ ಒಟ್ಟು ಜ್ಞಾನ ಎಷ್ಟು ಅಗಾಧವಾದದ್ದು ಎಂಬುದು ತಿಳಿದೀತು. ಪುಸ್ತಕದ ಆಯುಸ್ಸು ಕೇವಲ ಮೂವತ್ತು ನಲವತ್ತು ವರ್ಷಗಳು. ಅನಂತರ ಹಾಳೆಗಳು ಹಳತಾಗಿ, ಪುಡಿಯಾಗಿ ಪುಸ್ತಕ ಹಾಳಾಗುತ್ತದೆ. ಆಗ ಮರು ಮುದ್ರಣ ಮಾಡಿ ಆ ಪುಸ್ತಕದಲ್ಲಿರುವ ಜ್ಞಾನವನ್ನು ಉಳಿಸಿಕೊಳ್ಳಬೇಕಾಗುತ್ತದೆ. ಹಾಳೆಗಳ ಆಯುಸ್ಸು ತುಂಬ ಮಿತವಾಗಿರುವುದರಿಂದ ಅದೇ ರೂಪದಲ್ಲಿ ಜ್ಞಾನವನ್ನು ಮುಂದಿನ ತಲೆಮಾರುಗಳಿಗೆ ದಾಟಿಸುವುದು ಒಂದು ಸವಾಲಿನ ವಿಚಾರವಾಗಿದೆ.
ಜ್ಞಾನಕ್ಕೆ ಅಳಿವಿಲ್ಲ. ಆದರೆ ಆ ಜ್ಞಾನವನ್ನು ಕಾಪಿಟ್ಟುಕೊಳ್ಳುವ ಮಾಧ್ಯಮಕ್ಕೆ ಅಳಿವು ಇರುತ್ತದೆ. ಶಿಲಾಲೇಖ, ತಾಮ್ರಪಟ, ತಾಳೆಗರಿ, ಪುಸ್ತಕಗಳು ಈ ಯಾವುದೂ ಶಾಶ್ವತವಲ್ಲ. ಕಾಲದ ಪ್ರವಾಹದಲ್ಲಿ ನಾಶವಾಗಿ ಹೋಗುತ್ತವೆ. ಈ ನಾಲ್ಕು ಹಂತಗಳನ್ನು ದಾಟಿ ಈಗ ನಾವು ಡಿಜಿಟಲ್ ಯುಗಕ್ಕೆ ಕಾಲಿಟ್ಟಿದ್ದೇವೆ. ಪುಸ್ತಕಗಳ ಯುಗ ಇನ್ನು ಸುಮಾರು ನಲವತ್ತು ಐವತ್ತು ವರ್ಷಗಳು ಇರಬಹುದು. ಮುಂದಿನ ಎರಡು ತಲೆಮಾರುಗಳ ಆಚೆ ಪುಸ್ತಕಗಳು ಇರಬಹುದು ಎಂಬಂತಿಲ್ಲ. ಎಲ್ಲಾ ವ್ಯವಹಾರಗಳು, ಜ್ಞಾನದ ದಾಖಲಾತಿ, ಸಾಹಿತ್ಯ ಬರವಣಿಗೆ ಎಲ್ಲವೂ ಡಿಜಿಟಲ್ ರೂಪದಲ್ಲಿ ಇರಬಹುದು. ಅಂದರೆ ಅಕ್ಷರ ಶಾಶ್ವತ ; ಜ್ಞಾನ ಶಾಶ್ವತ, ಅದನ್ನು ದಾಖಲು ಮಾಡುವ ಮಾಧ್ಯಮ ಕಾಲಕಾಲಕ್ಕೆ ವ್ಯತ್ಯಾಸಗೊಳ್ಳುತ್ತ ಹೋಗುತ್ತದೆ ಎಂದಂತಾಯಿತು.
ಆದರೆ ಜ್ಞಾನದ ಈ ನಿರಂತರ ಹರಿವಿನಲ್ಲಿ ಪುಸ್ತಕದ ಪ್ರಾಮುಖ್ಯವನ್ನು ಅಲ್ಲಗಳೆಯಲಾಗದು. ಕೋಟಿ ಕೋಟಿ ಗ್ರಂಥಗಳು ಈ ಇನ್ನೂರು ವರ್ಷಗಳಲ್ಲಿ ಮುದ್ರಣಗೊಂಡು ನಮ್ಮ ಜ್ಞಾನದ ಹಸಿವನ್ನು ಹಿಂಗಿಸಿವೆ. ಪುಸ್ತಕಗಳ ಮೂಲಕವೇ ನಾವು ವಿದ್ಯಾವಂತರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಅಭಿವ್ಯಕ್ತಿಗಳನ್ನು ಪುಸ್ತಕ ರೂಪದಲ್ಲಿ ಮಾಡಿದ್ದೇವೆ. ಅದನ್ನೇ ಸರಸ್ವತಿ ಎಂದು ಪೂಜಿಸುತ್ತ ಬಂದಿದ್ದೇವೆ. ಪುಸ್ತಕಗಳ ಪ್ರಪಂಚ ಒಂದು ಮಾಯಾಲೋಕವೇ ಸರಿ. ಪ್ರತಿಯೊಂದು ಭಾಷೆಯಲ್ಲೂ ಲಕ್ಷಗಟ್ಟಲೆ ಪುಸ್ತಕಗಳು ಪ್ರಕಟಗೊಂಡಿವೆ. ಪುಸ್ತಕ ಮುದ್ರಣಗೊಳ್ಳುವ ಭಾಷೆಗಳ ಸಂಖ್ಯೆ ಪ್ರಪಂಚದಾದ್ಯಂತ ಸುಮಾರು 2,650. ಇಷ್ಟು ಭಾಷೆಗಳಲ್ಲಿ ಪ್ರತಿ ವರ್ಷ ಎಷ್ಟು ಕೃತಿಗಳು ಮುದ್ರಣಗೊಂಡವು ಎಂಬ ಸಂಖ್ಯೆಯೇ ನಮ್ಮನ್ನು ಆಶ್ಚರ್ಯಗೊಳಿಸದೆ ಇರಲಾರದು !
“ನಿಧಿ ತುಂಬಿದ ದ್ವೀಪವೊಂದನ್ನು ದರೋಡೆಕೋರರು ಲೂಟಿ ಮಾಡಿದಾಗ ಸಿಗುವ ಸಂಪತ್ತಿಗಿಂತ ಅಧಿಕ ಜ್ಞಾನವು ಪುಸ್ತಕಗಳಿಂದ ದೊರೆಯುತ್ತದೆ.” ಎಂದು ವಾಲ್ಟ್ ಡಿಸ್ನಿ ಎಂಬ ಸುಪ್ರಸಿದ್ಧ ಇಂಗ್ಲೀಷ್ ಲೇಖಕ ಹಾಗೂ ಸಿನಿಮಾ ನಿರ್ಮಾಪಕ ಹೇಳಿದ್ದಾರೆ. ಇದು ಪುಸ್ತಕದ ಮಹತ್ವವನ್ನು ಮತ್ತು ಪ್ರಾಮುಖ್ಯವನ್ನು ಹೇಳುವ ಅತಿರಂಜಿತ ಹೇಳಿಕೆಯಾದರೂ ಅಷ್ಟೇ ಅಮೂಲ್ಯವಾದ ಮಾತೂ ಹೌದು. ಒಂದು ಪುಟ್ಟ ಪುಸ್ತಕ ಭಂಡಾರ ಪ್ರತಿಯೊಂದು ಮನೆಯಲ್ಲಿಯೂ ಇರಬೇಕು. ಇದು ಅವರ ಆಸಕ್ತಿ ಅಭಿರುಚಿ ಮತ್ತು ಸಂಸ್ಕಾರವನ್ನು ತೋರಿಸುವ ಅಂಶವಾಗಿದೆ. ಪುಸ್ತಕದ ಓದಿನ ಮೂಲಕವೇ ಒಂದು ಜನಾಂಗ ಸುಸಂಸ್ಕೃತವಾಗಿ ಜ್ಞಾನವಂತರಾಗಿ ಮುಂದಕ್ಕೆ ಸಾಗುವರು.
ಪುಸ್ತಕಗಳು ನಮ್ಮ ಅರಿವಿನ ಗುರು, ಪುಸ್ತಕಗಳಿಲ್ಲದಿದ್ದರೆ ನಮ್ಮ ಬದುಕು ಬರಡು ಅನ್ನುವುದು ನಿಸ್ಸಂಶಯ. ಶಿಲಾಶಾಸನಗಳನ್ನು. ತಾಮ್ರಪಟಗಳನ್ನು, ತಾಳೆಗರಿಗಳನ್ನು ಹೇಗೆ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇಡಲಾಗಿದೆಯೋ ಹಾಗೆ, ನೂರಿನ್ನೂರು ವರ್ಷಗಳ ಬಳಿಕ ಪುಸ್ತಕಗಳನ್ನು ನಮ್ಮ ಮುಂದಿನ ಜನಾಂಗಕ್ಕೆ ತೋರಿಸುವ ದಿನಗಳು ಬರಬಹುದು. ಆದರೆ ಅವು ಜ್ಞಾನದ ಯಾತ್ರೆಯಲ್ಲಿ ಹತ್ತಾರು ತಲೆಮಾರುಗಳಿಗೆ ಜ್ಞಾನದ ದೀವಿಗೆಯನ್ನು ಹಿಡಿದಿವೆ ಎಂಬುದನ್ನು ಮರೆಯುವಂತಿಲ್ಲ. ಪುಸ್ತಕ ಓದಿಯೇ ಮಸ್ತಿಷ್ಕ ಬೆಳೆಸಿಕೊಂಡಿರುವವರು ನಾವು. ಆ ಪರಂಪರೆಯನ್ನು ಮುಂದುವರಿಸೋಣ.
ಡಾ. ವಸಂತ ಕುಮಾರ ಪೆರ್ಲ :
ಕಾವ್ಯ, ಕಥೆ, ಕಾದಂಬರಿ, ವಿಮರ್ಶೆ, ಸಂಶೋಧನೆ, ಸಂಪಾದನೆ, ವ್ಯಕ್ತಿಚಿತ್ರ, ಅಂಕಣ, ಚಾರಣ, ಪ್ರವಾಸ ಮತ್ತು ಅನುವಾದ ಮುಂತಾಗಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಐವತ್ತಕ್ಕಿಂತ ಹೆಚ್ಚು ಕೃತಿ ರಚನೆ ಮಾಡಿರುವ ಡಾ. ವಸಂತಕುಮಾರ ಪೆರ್ಲ ಅವರು ಸಾಹಿತ್ಯ ಮಾತ್ರವೇ ಅಲ್ಲದೆ ಸಮೂಹ ಮಾಧ್ಯಮ, ರಂಗಭೂಮಿ, ಸಿನಿಮಾ, ಸಂಘಟನೆ, ಸಮಾಜಸೇವೆ ಮೊದಲಾದ ಇತರ ಕ್ಷೇತ್ರಗಳಲ್ಲಿಯೂ ತನ್ನನ್ನು ಕ್ರಿಯಾಶೀಲವಾಗಿ ತೊಡಗಿಸಿಕೊಂಡವರು. ಭಾಷೆ, ವ್ಯಾಕರಣ, ಕಾವ್ಯಮೀಮಾಂಸೆ, ಸಂಸ್ಕೃತಿ ಅಧ್ಯಯನ ಮೊದಲಾದವು ಡಾ. ಪೆರ್ಲರ ಆಸಕ್ತಿಯ ಕ್ಷೇತ್ರಗಳು. ಇವರ ಕಥೆ ಕವನಗಳು ತುಳು, ಕೊಂಕಣಿ, ಮಲಯಾಳಂ, ತಮಿಳು, ತೆಲುಗು, ಹಿಂದಿ, ಪಂಜಾಬಿ, ನೇಪಾಳಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ಅನುವಾದವಾಗಿವೆ. ಇತ್ತೀಚೆಗೆ ಅವರ ‘ವಿಷ್ಣುಮಂಗಲ’ ಎಂಬ ಇಂಗ್ಲೀಷ್ ಕಥಾಸಂಕಲನ (ಅವರದೇ ಸಣ್ಣಕಥೆಗಳ ಅನುವಾದ) ಪ್ರಕಟವಾಗಿ ಹೆಸರಾಗಿದೆ. ರಂಗಭೂಮಿ ಬಗ್ಗೆ ಡಾಕ್ಟೊರೇಟ್ ಅಧ್ಯಯನ ಮಾಡಿರುವ ಇವರು ಆಕಾಶವಾಣಿಯ ಹಲವು ಕೇಂದ್ರಗಳಲ್ಲಿ ಸುಮಾರು ಮೂವತ್ತು ವರ್ಷ ಕಾಲ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾಗಿದ್ದಾರೆ. ಸುಮಾರು ಇಪ್ಪತ್ತಕ್ಕಿಂತ ಹೆಚ್ಚು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಇವರು ಸರಕಾರದ ಹಲವು ಸಮಿತಿಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಶ್ರೀಮತಿ ಹಾಗೂ ಮಕ್ಕಳು ಕೂಡ ಕವಿ, ಲೇಖಕರಾಗಿ, ಭರತನಾಟ್ಯ ಕಲಾವಿದರಾಗಿ ಹೆಸರಾಗಿದ್ದಾರೆ.