ಮಂಗಳೂರು : ಕಲಾಭಿ ಮಂಗಳೂರು ಹಾಗೂ ಕೆನರಾ ಕಲ್ಚರಲ್ ಅಕಾಡೆಮಿಯ ಆಶ್ರಯದಲ್ಲಿ ಮೂಡಿಬಂದ ‘ಅರಳು 2024’ ಎಂಬ ಮಕ್ಕಳ ರಂಗಭೂಮಿಯ ವಿಶೇಷ ಕಾರ್ಯಾಗಾರದ ‘ಮಕ್ಕಳ ನಾಟಕೋತ್ಸವ’ವು ಕೆನರಾ ಪದವಿ ಪೂರ್ವ ಕಾಲೇಜಿನ ಬಯಲು ರಂಗಮಂದಿರದಲ್ಲಿ ದಿನಾಂಕ 21-04-2024ರಂದು ಸಂಪನ್ನಗೊಂಡಿತು.
ಅಂತರಾಷ್ಟ್ರೀಯ ಮಟ್ಟದ ಜಾದೂಗಾರ ಕುದ್ರೋಳಿ ಗಣೇಶ್ ಅವರು ಸಮಾರೋಪ ಭಾಷಣ ಮಾಡಿದರು. ನಿರ್ದೇಶಕ ಹಾಗೂ ನಟ ರಾಹುಲ್ ಅಮೀನ್ ಮುಖ್ಯ ಅತಿಥಿಯಾಗಿದ್ದರು. ಸಿ.ಎಚ್.ಎಸ್. ಅಸೋಸಿಯೇಶನ್ ಆಡಳಿತ ಮಂಡಳಿ ಸದಸ್ಯೆ ಅಶ್ವಿನಿ ಕಾಮತ್, ಕೆನರಾ ಪದವಿ ಪೂರ್ವ ಕಾಲೇಜಿನ ಡೀನ್ ಗೋಪಾಲ್ ಶೆಟ್ಟಿ, ಕೆನರಾ ಹಿ.ಪ್ರಾ. ಶಾಲೆಯ ಮುಖ್ಯೋಪಧ್ಯಾಯಿನಿ ಕವಿತಾ ಮೌರ್ಯ, ಕಲಾಭಿ ಗೌರವಾಧ್ಯಕ್ಷ ಸುರೇಶ್ ವರ್ಕಾಡಿ, ಅಧ್ಯಕ್ಷೆ ಡಾ. ಮೀನಾಕ್ಷಿ ರಾಮಚಂದ್ರ ಉಪಸ್ಥಿತರಿದ್ದರು.
ಕಾರ್ಯಕ್ರಮವು ಶಿಬಿರದ ಮಕ್ಕಳು, ನಿರ್ದೇಶಕರು, ಸಹಾಯಕ ನಿರ್ದೇಶಕರು ಹಾಗೂ ಅರಳು ಕಾರ್ಯಾಗಾರದಲ್ಲಿ ಭಾಗವಹಿಸಿದ ಕಲಾವಿದರು ಒಟ್ಟಾಗಿ ಹಾಡಿದ ರಂಗ ಸಂಗೀತಗಳೊಂದಿಗೆ ಆರಂಭವಾಯಿತು. ಶ್ರೇಯಸ್ ಸಾಲ್ಯಾನ್ ನಿರೂಪಿಸಿ, ಕಾರ್ಯಾಗಾರ ಸಂಯೋಜಕ ಉಜ್ವಲ್ ಯು.ವಿ. ವಂದಿಸಿದರು. ಎರಡು ನಾಟಕಗಳಾದ ರಾಜು ಮಣಿಪಾಲ್ ನಿರ್ದೇಶನದ ‘ಹಾಕ್ಕಿಹಾಡು’ ಹಾಗೂ ರಮೇಶ್ ಕೆ. ನಿರ್ದೇಶನದ ‘ಕಪಟ ಸನ್ಯಾಸಿ ಮಾರ್ಜಾಲ ಮತ್ತು ಮೂಷಕ ಕುಲ’ ಎಂಬ ನಾಟಕಗಳನ್ನು ಕಾರ್ಯಾಗಾರದಲ್ಲಿ ಭಾಗವಹಿಸಿದ್ದ 30 ಮಕ್ಕಳು ಸೇರಿ ನಿರ್ದೇಶಕರ ಮಾರ್ಗದರ್ಶನದಲ್ಲಿ ಪ್ರಸ್ತುತಪಡಿಸಿದರು. ಕಾರ್ಯಾಗಾರದ ನಿರ್ದೇಶಕ ಭುವನ್ ಮಣಿಪಾಲ್ ಸಹಕರಿಸಿದರು.