ಬೆಂಗಳೂರು : ಭಾರತೀಯ ಪ್ರದರ್ಶನ ಕಲಾಪ್ರಕಾರಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ SEPI ಇದರ ಸಹಸಂಸ್ಥೆಯಾದ ‘ಸಂಗಮವು’ ಆಯೋಜಿಸಿದ ‘ಸುದರ್ಶನ ಗರ್ವಭಂಗ’ ಯಕ್ಷಗಾನ ಪ್ರದರ್ಶನವು ದಿನಾಂಕ 20-04-2024ರಂದು ಬೆಂಗಳೂರು ದೊಂಬ್ಲೂರಿನಲ್ಲಿರುವ ‘ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್’ನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಇನ್ಫೋಸಿಸ್ ಸಹ ಸಂಸ್ಥಾಪಕರಲೊಬ್ಬರಾದ ಶಿಬುಲಾಲ್‌ರವರು ದೀಪ ಹಚ್ಚುವ ಮೂಲಕ ಉದ್ಘಾಟಿಸಿದರು. ಜೊತೆಯಲ್ಲಿ ಶಿಬುಲಾಲ್‌ರವರ ಪತ್ನಿ ಕುಮಾರಿ ಶಿಬುಲಾಲ್ ಯಕ್ಷದೇಗುಲದ ಕೋಟ ಸುದರ್ಶನ ಉರಾಳ, ಭಾಗವತ ಲಂಬೋದರ ಹೆಗಡೆ, ಯಕ್ಷಗುರು ಪ್ರಿಯಾಂಕ ಕೆ. ಮೋಹನ್ ಉಪಸ್ಥಿತರಿದ್ದರು.
‘ಯಕ್ಷದೇಗುಲ’ ಬೆಂಗಳೂರು ತಂಡದವರಿಂದ ನಡೆದ ಈ ಪ್ರದರ್ಶನದಲ್ಲಿ ನುರಿತ ಕಲಾವಿದರಾದ ಲಂಬೋದರ ಹೆಗಡೆ, ರಾಜೇಶ್ ಆಚಾರ್ಯ, ತಮ್ಮಣ್ಣ ಗಾಂವ್ಕರ್, ಆದಿತ್ಯ ಭಟ್, ಮನೋಜ್ ಭಟ್, ಶ್ರೀನಿಧಿ, ಉದಯ ಭೋವಿ, ಪನ್ನಗ ಮಯ್ಯ, ಶ್ರೀರಾಮ ಹೆಬ್ಬಾರ್ ಇವರಿಂದ ಕೆ. ಮೋಹನ್ ನಿರ್ದೇಶನದಲ್ಲಿ ಮಧುಕುಮಾರ್ ಬೋಳಾರ್ ವಿರಚಿತ “ಸುದರ್ಶನ ಗರ್ವಭಂಗ” ಯಕ್ಷಗಾನ ಪ್ರದರ್ಶನ ಪ್ರೇಕ್ಷಕರನ್ನು ಬಲುವಾಗಿ ರಂಜಿಸಿತು. ಮೊದಲಿಗೆ ಪ್ರಿಯಾಂಕ ಕೆ. ಮೋಹನ್ ನಿರ್ದೇಶನದಲ್ಲಿ ‘ಧೀರ ವೈಯ್ಯಾರೋ ಬಹುಪರಾಕ್’ ಎಂದು ಬಹುಪರಾಕ್ ಹಾಕುತ್ತಾ ಮಕ್ಕಳು ಕೋಡಂಗಿ ನೃತ್ಯ ಮಾಡಿದರು. ಮಕ್ಕಳಾದ ಮಹೇಶ್ವರ, ತೇಜಸ್, ಸಾನ್ವಿ, ಶಾಂಭವಿ, ಕ್ರಿಷಾ ಭಾಗವಹಿಸಿದರು. ಶ್ರೀ ವಿದ್ಯಾ ಹಾಗೂ ಸರಸ್ವತಿ ವಸ್ತ್ರಾಲಂಕಾರದಲ್ಲಿ ಸಹಕರಿಸಿದರು. ಕೋಟ ಸುದರ್ಶನ ಉರಾಳ ಕಾರ್ಯಕ್ರಮವನ್ನು ಸಂಯೋಜಿಸಿದರು. ಪ್ರವೇಶ ದರ ಇರುವ ಈ ಪ್ರದರ್ಶನಕ್ಕೆ ಕಿಕ್ಕಿರಿದು ಪ್ರೇಕ್ಷಕರು ಸೇರಿರುವುದು ವಿಶೇಷವಾಗಿತ್ತು.
ಇನ್ಫೋಸಿಸ್ ಸಹ ಸಂಸ್ಥಾಪಕರಲೊಬ್ಬರಾದ ಶಿಬುಲಾಲ್ ಇವರು 1998ರಲ್ಲಿ ಕೇರಳದ ಅವರ ತವರೂರಿನಲ್ಲಿ ವಿದ್ಯಾರ್ಥಿವೇತನ ಯೋಜನೆ ಸ್ಥಾಪಿಸುವುದರ ಮೂಲಕ SEPI ಸಂಸ್ಥೆಯನ್ನು ಪ್ರಾರಂಭಿಸಿ ಪತ್ನಿ ಕುಮಾರಿ ಶಿಬುಲಾಲ್ ಜೊತೆ ಸೇರಿ ಶಿಕ್ಷಣ, ಆರೋಗ್ಯ, ಸಾವಯವ ಕೃಷಿ, ಸಾಮಾಜಿಕ ಕಲ್ಯಾಣ ಸೇರಿದಂತೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಭಾರತದಾದ್ಯಂತ ಕಾರ್ಯರೂಪಕ್ಕೆ ತಂದು, ಈಗ ಬಹಳ ಪ್ರಸಿದ್ಧಿ ಪಡೆದು, ಹಲವಾರು ಕುಟುಂಬಗಳಿಗೆ ನೆರವಾಗಿದ್ದು ಸಾವಿರಾರು ಜನರಿಗೆ ಉದ್ಯೋಗ ಅವಕಾಶ ನೀಡಿದ್ದಾರೆ.