ಉಡುಪಿ : ಪಲಿಮಾರು ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ ಗುರುಗಳಾದ ಶ್ರೀ ವಿದ್ಯಾಮಾನ್ಯ ಶ್ರೀಪಾದರ ಹೆಸರಿನಲ್ಲಿ ಪ್ರತೀವರ್ಷ ಕೊಡಮಾಡುವ ‘ಶ್ರೀ ವಿದ್ಯಾಮಾನ್ಯ ಯಕ್ಷಕಲಾ’ ಪ್ರಶಸ್ತಿಯನ್ನು ಬಡಗುತಿಟ್ಟಿನ ಶ್ರೇಷ್ಠ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆಯವರಿಗೆ ದಿನಾಂಕ 23-04-2024 ರಂದು ಪಲಿಮಾರಿನಲ್ಲಿ ನಡೆದ ಹನುಮ ಜಯಂತಿಯ ಸಂದರ್ಭದಲ್ಲಿ ಪ್ರದಾನ ಮಾಡಿದರು. ಈ ಪ್ರಶಸ್ತಿಯು 50,000/- ನಗದು ಪುರಸ್ಕಾರಗಳನ್ನೊಳಗೊಂಡಿದೆ.
ಕಾರ್ಯಕ್ರಮದಲ್ಲಿ ಶ್ರೀ ಕಾಣಿಯೂರು, ಶ್ರೀ ಸೋದೆ, ಶ್ರೀ ಭೀಮನಕಟ್ಟೆ ಹಾಗೂ ಪಲಿಮಾರು ಕಿರಿಯ ಶ್ರೀಪಾದಂಗಳವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಪಲಿಮಾರು ಶ್ರೀಗಳು “ಎರಡು ದಶಕಗಳ ಹಿಂದೆ ಕೊಂಡದಕುಳಿಯವರು ನಿರ್ವಹಿಸಿದ ಹನುಮಂತನ ಪಾತ್ರ ಇಂದಿಗೂ ನನ್ನ ಮನಸ್ಸಿನಲ್ಲಿ ಹಸಿರಾಗಿದೆ. ಇಂತಹ ಶ್ರೇಷ್ಠ ಕಲಾವಿದ ಇನ್ನಷ್ಟು ಸಮಯ ರಂಗದಲ್ಲಿ ಪಾತ್ರನಿರ್ವಹಿಸುವಂತಾಗಲಿ.” ಎಂದು ತಮ್ಮ ಅನುಗ್ರಹ ಸಂದೇಶದಲ್ಲಿ ನುಡಿದರು.
ಪ್ರಶಸ್ತಿ ಸ್ವೀಕರಿಸಿದ ಕೊಂಡದಕುಳಿಯವರು ಮಾತನಾಡಿ “ಈ ದಿನ ನನ್ನ ಪಾಲಿಗೆ ಸಂತಸದ ಕ್ಷಣ. ಕಲಾವಿದನಾದವನು ಅಧ್ಯಯನಶೀಲನಾಗಿರಬೇಕು. ಕಲಾವಿದರು ತಪಸ್ವಿಗಳು ಎಂದು ಪೇಜಾವರ ವಿಶ್ವೇಶ ತೀರ್ಥರು ಹೇಳಿದ್ದರು. ಶ್ರದ್ಧೆ ಮತ್ತು ದುಡಿಮೆ ಕಲಾವಿದನನ್ನು ಎತ್ತರಕ್ಕೇರಿಸುತ್ತದೆ.” ಎಂದರು.
ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಅಭಿನಂದನೆಯ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಕೊಂಡದಕುಳಿಯವರ ಪತ್ನಿ ಚೇತನಾ ಹೆಗಡೆ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಉಪಸ್ಥಿತರಿದ್ದರು.