ಪುತ್ತೂರು : ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದ ಶಿವರಾಮ ಕಾರಂತ ಅಧ್ಯಯನ ಕೇಂದ್ರದಿಂದ ನೀಡುವ ‘ನಿರಂಜನ ಪ್ರಶಸ್ತಿ’ಯನ್ನು ಈ ವರ್ಷ ನಿವೃತ್ತ ಪ್ರಾಧ್ಯಾಪಕರು ಮತ್ತು ಸಾಹಿತಿಗಳಾದ ಪ್ರೊ. ವಿ.ಬಿ. ಅರ್ತಿಕಜೆ ಅವರಿಗೆ ಹಾಗೂ ‘ಶಂಕರ ಸಾಹಿತ್ಯ ಪ್ರಶಸ್ತಿ’ಯನ್ನು ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ (ರಿ.) ಇವರಿಗೆ ನೀಡುವುದೆಂದು ನಿರ್ಧರಿಸಲಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿಯು ತಿಳಿಸಿದೆ.
ಪ್ರೊ. ವಿ.ಬಿ. ಅರ್ತಿಕಜೆ ಇವರು ಪುತ್ತೂರು ಬಳಿಯ ಈಶ್ವರಮಂಗಲದ ಅರ್ತಿಕಜೆ ಶ್ಯಾಮ ಭಟ್ಟ ಹಾಗೂ ಸಾವಿತ್ರಿ ದಂಪತಿಯ ಸುಪುತ್ರರು. ಇವರ ಆಸಕ್ತಿಯ ಕ್ಷೇತ್ರ ಅಧ್ಯಾಪನ, ಪತ್ರಿಕೋದ್ಯಮ, ಸಾಹಿತ್ಯ ಹಾಗೂ ಸಂಘಟನೆ. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ 33 ವರ್ಷಗಳ ಕಾಲ ಇತಿಹಾಸ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದ ಇವರು ಪ್ರೌಢಶಾಲಾ ದಿನಗಳಲ್ಲಿ ನವೋದಯ, ಸುಪ್ರಭಾತ ಮತ್ತು ನವರಸ ಹಸ್ತಪತ್ರಿಕೆಗಳನ್ನು ಆರಂಭಿಸಿದವರು. ತನ್ನ ಆಡುಭಾಷೆ ಹವ್ಯಕವನ್ನು ಅಂಕಣದಲ್ಲಿ ಉಪಯೋಗಿಸಿದ, ಆ ಭಾಷೆಯಲ್ಲೇ ಸಾಹಿತ್ಯ ಸೃಷ್ಟಿಸಿದ ಹಿರಿಮೆ ಇವರದು.
ತಮ್ಮ ಅಪಾರವಾದ ಅಧ್ಯಯನ, ಅನುಭವಗಳನ್ನು ಅತ್ಯಂತ ರಸವತ್ತಾಗಿ ಉಣಬಡಿಸಿದ ಇವರು ಪತ್ರಕರ್ತರಾಗಿ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ತನ್ನ ವರದಿಗಾರಿಕೆ ಹಾಗೂ ವಿಪುಲ ಅಂಕಣ ಬರೆಹಗಳ ಮೂಲಕವಾಗಿ ಅನೇಕ ಹಿರಿಯ ಕಿರಿಯ ಸಾಹಿತಿಗಳಿಗೆ ಪ್ರಚಾರ ಪ್ರಸಿದ್ಧಿ ತಂದುಕೊಟ್ಟವರು. ಪುತ್ತೂರಿನ ಸಾಹಿತ್ಯಿಕ, ಸಾಂಸ್ಕೃತಿಕ ಸಂಸ್ಥೆಗಳಲ್ಲೂ ಸಕ್ರಿಯರಾಗಿ ಸಂಘಟನ ಕೌಶಲವನ್ನು ಸಾಬೀತುಪಡಿಸಿರುವ ಇವರು ಅಲ್ಲಿಯೂ ಪ್ರತಿಭಾಶಾಲಿಗಳಿಗೆ ಅವಕಾಶ ನೀಡಿ ಪ್ರೋತ್ಸಾಹಿಸಿದವರು. ಇವರು ವಿವೇಕಾನಂದ ಕಾಲೇಜಿನಲ್ಲಿ ಹುಟ್ಟು ಹಾಕಿದ ಪತ್ರಿಕಾ ಶಿಬಿರಗಳಿಂದ ಬದುಕು ರೂಪಿಸಿಕೊಂಡವರ ಸಂಖ್ಯೆಯೇನೂ ಸಣ್ಣದಲ್ಲ.
ಇವರು ನಾದಪೂಜೆ, ಅಪರೂಪ, ಅನನ್ಯ ಸಾಧಕ, ಜೇನಹನಿ, ಪುಸ್ತಕ ಪ್ರೀತಿಗೆ ರೂಪಕ: ಬೋಳಂತಕೋಡಿ ಈಶ್ವರ ಭಟ್ಟ, ಹೀಗೊಂದು ವೃತ್ತಾಂತ, ಮಾರ್ದನಿ, ಮಾರುದನಿ, ಹೊಸ ಮಾರ್ದನಿ, ಚಿಂತನ ಮುಕುರ, ಸಾವಿರದ ಗಾದೆಗಳು, ಕಥಾ ರಶ್ಮಿ, ಬಾಳಿಗೆ ಬೆಳಕು, ರಾಮಾಯಣ ನೀತಿಸಾರ, ಹಾಸ್ಯೋಲ್ಲಾಸ, ನಗೆಮಿಂಚು, ಪತ್ರಿಕಾ ರಂಗ ಪ್ರವೇಶ ಮೊದಲಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ ‘ನೂರೆಂಟು ನೆನಪು’ ಆತ್ಮಕಥನ ಉದಾರ ವ್ಯಕ್ತಿತ್ವದ ಪ್ರತಿಕೃತಿಯಾಗಿದೆ.
ಪುತ್ತೂರು ಸೀಮೆಯ ಹಿರಿಯ ವೈದಿಕ ವಿದ್ವಾಂಸರೂ ಪುರೋಹಿತರೂ ಆದ ದಿವಂಗತ ಮಿತ್ತೂರು ತಿಮ್ಮಯ್ಯ ಭಟ್ಟರ ಹೆಸರಿನಲ್ಲಿ ಅವರ ಮರಣಾನಂತರ ಅವರ ಶಿಷ್ಯವರ್ಗದವರೂ ಬಂಧುಗಳೂ ಸೇರಿ 1993ರಲ್ಲಿ ಸ್ಥಾಪಿಸಿದ ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನವೆಂಬ ನೋಂದಾಯಿತ ಸಂಸ್ಥೆಗೆ ಈಗ ಮೂವತ್ತನೆಯ ವರ್ಷ. ಸಂಸ್ಕೃತ ಭಾಷೆ, ವೈದಿಕ ವಿಷಯಗಳು ನಮ್ಮ ಸಂಸ್ಕೃತಿ-ಪರಂಪರೆ-ಇವುಗಳ ಅಧ್ಯಯನ ಮತ್ತು ಪ್ರಸಾರದೊಂದಿಗೆ ಸಾಮಾಜಿಕ ಸಮುನ್ನತಿಯ ಧ್ಯೇಯಗಳನ್ನೂ ಹೊಂದಿರುವ ಸಂಸ್ಥೆಯು ಕಳೆದ ಮೂವತ್ತು ವರ್ಷಗಳಿಂದ ಪರಿಸರದ ಶಾಲಾ ಕಾಲೇಜುಗಳಲ್ಲಿ ಸಂಸ್ಕೃತಾಧ್ಯಯನದಲ್ಲಿ ತರಗತಿಗೆ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಪ್ರೋತ್ಸಾಹಧನ ಪ್ರದಾನದೊಂದಿಗೆ ನಡೆಸುತ್ತಿದೆ. ಸದಭಿರುಚಿಯ ಗ್ರಂಥಗಳನ್ನು ಪ್ರಕಟಿಸುತ್ತಿದ್ದು, ಈಗಾಗಲೇ 52 ಪುಸ್ತಕಗಳನ್ನು ಪ್ರಕಟಿಸಿರುತ್ತದೆ. ವೈದಿಕ ವಿದ್ವಾಂಸರನ್ನೂ, ಶಾಸ್ತ್ರ ವಿದ್ವಾಂಸರನ್ನೂ, ನಿಘಂಟು ರಚಕರನ್ನೂ ಮತ್ತು ಯುವ ಸಂಗೀತಜ್ಞರನ್ನು ಪುರಸ್ಕರಿಸಿ ಗೌರವಿಸಿದೆ. ದಶಮಾನೋತ್ಸವ, ವಿಂಶೋತ್ಸವ ಸಂದರ್ಭಗಳಲ್ಲಿ ಉಪನ್ಯಾಸ ಮಾಲಿಕೆಗಳನ್ನು ಏರ್ಪಡಿಸಿ ಅವುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದೆ. ಕನ್ನಡ ಸಂಧ್ಯಾಭಾಷ್ಯ, ಆದಿತ್ಯಾದಿ ನವಗ್ರಹ ಪೂಜಾವಿಧಿ, ಶಾರದಾರಾಧನಮ್, ಗೋದಾನಾದಿ ವಿಧಾನಮ್, ವೇದವೇದಾಂಗ ಪರಿವಾರ, ಹಿರಿಯರಿವರು, ಪುರಾಣ ಲೋಕ, ಜ್ಯೋತಿಷ ಸಂವಾದ, ಭಾಗವತ ಸಪ್ತಾಹ ಯಜ್ಞ ಫೇರಂಡ ಸಂಹಿತಾ, ಹಠ ಪ್ರದೀಪಿಕಾ, ಶಿವಯೋಗದೀಪಿಕಾ ಮೊದಲಾದ ಸತ್ಕೃತಿಗಳನ್ನು ಪ್ರಕಟಿಸಿ ವಿದ್ವತ್ ಲೋಕಕ್ಕೆ ನೀಡಿದೆ. ಕಲಾಪ್ರೋತ್ಸಾಹ ದೃಷ್ಟಿಯಿಂದ ತಾಳಮದ್ದಳೆ ಕೂಟಗಳನ್ನು ಏರ್ಪಡಿಸಿದೆ. ಗ್ರಂಥಗಳು ತಪ್ಪಿಲ್ಲದೆ ಪ್ರಕಟಗೊಳ್ಳಬೇಕೆಂದು ಸಂಪ್ರತಿಷ್ಠಾನವು ಹೆಚ್ಚು ಕಾಳಜಿ ವಹಿಸುತ್ತಿದ್ದು, ಈ ವರ್ಷ ತನ್ನ ಚಟುವಟಿಕೆಗಳಿಗಾಗಿ ಸ್ವಂತ ಕಾರ್ಯ ಭವನನ್ನು ಹೊಂದಿದೆ.