ಉಡುಪಿ : ಉಡುಪಿ ಜಿಲ್ಲಾ ಹೊಟೇಲ್ ಮಾಲಕಾರ ಸಹಕಾರ ಸಂಘ, ರಂಗಭೂಮಿ ಉಡುಪಿ ಹಾಗೂ ಜಾನಪದ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಕರ್ನಾಟಕ ಯಕ್ಷಗಾನ ಅಕಾಡಮಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಯಕ್ಷಗಾನ ಕಲೆಯ ಬಗ್ಗೆ ಅತೀವ ಆಸಕ್ತಿ ಹೊಂದಿರುವ ಇವರು ಉಡುಪಿಯ ಯಕ್ಷಗಾನ ಕಲಾರಂಗದ ಅಧ್ಯಕ್ಷರಾಗಿದ್ದ ದಿನಗಳಲ್ಲಿ ತಲ್ಲೂರು ಶಿವರಾಮ ಶೆಟ್ಟರು “ಯಕ್ಷಗಾನ ಕಲಾವಿದರಲ್ಲ”ಎನ್ನುವ ಕೊಂಕು ಮಾತು ಕೇಳಿ ಬಂದಾಗ, ಅದನ್ನು ಸವಾಲಾಗಿ ಸ್ವೀಕರಿಸಿ, ತನ್ನ 60ನೇ ವಯಸ್ಸಿನಲ್ಲಿ ಯಕ್ಷಗಾನವನ್ನು ಖ್ಯಾತ ಗುರು ಬನ್ನಂಜೆ ಸಂಜೀವ ಸುವರ್ಣರಲ್ಲಿ ಅಭ್ಯಾಸ ಮಾಡಿ ಕಲಿಯುವಿಕೆಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಸಾಬೀತು ಪಡಿಸಿದರು. ಮತ್ತು ಈವರೆಗೆ 400 ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಅಭಿಮಾನಿಗಳ ಅತೀವ ಮೆಚ್ಚುಗೆಗೆ ಪಾತ್ರರಾದದ್ದು ಇವರ ಮಹತ್ತರ ಸಾಧನೆ ಎಂದರೆ ತಪ್ಪಾಗಲಾರದು. ಕಳೆದ 16 ವರ್ಷಗಳಿಂದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯುವ ಚಿಟ್ಟಾಣಿ ರಾಮಚಂದ್ರ ಹೆಗೆಡೆ ಯಕ್ಷಗಾನ ಸಪ್ತಾಹ, ಕೆ.ಗೋವಿಂದ ಭಟ್ಟ ಯಕ್ಷಗಾನ ಸಪ್ತಾಹ ಹಾಗೂ ಪ್ರಶಸ್ತಿ ಪ್ರದಾನ, ಮತ್ತು ಖ್ಯಾತ ಭಾಗವತ ಶ್ರೀ ಸುಬ್ರಹ್ಮಣ್ಯ ಧಾರೇಶ್ವರ ಅವರ `ಧಾರೇಶ್ವರ ಅಷ್ಟಾಹ’ ಕಾರ್ಯಕ್ರಮಗಳ ನೇತೃತ್ವ ವಹಿಸಿ ಮುನ್ನಡೆಸಿದ ಖ್ಯಾತಿ ಇವರದು.
ತನ್ನ ಪೂಜ್ಯ ಮಾತಾಪಿತರ ನೆನಪಿನಲ್ಲಿ ‘ತಲ್ಲೂರು ಕನಕಾ – ಅಣ್ಯಯ್ಯ ಶೆಟ್ಟಿ ಪ್ರಶಸ್ತಿ’ಯನ್ನು ಪ್ರತೀ ವರ್ಷ ನೀಡುತ್ತಾ ಬಂದಿದ್ದು ಈವರೆಗೆ 8 ಮಂದಿ ಪ್ರಸಿದ್ಧ ಯಕ್ಷಗಾನ ವಿದ್ವಾಂಸರಿಗೆ ಅರ್ಪಿಸಲಾಗಿದೆ.ಉಡುಪಿ ಕುಂಜಿಬೆಟ್ಟಿನ ಯಕ್ಷಗಾನ ಕೇಂದ್ರದ ಮುಖ್ಯ ಪೋಷಕರಾಗಿ, ಉಡುಪಿಯ ಪ್ರತಿಷ್ಠಿತ ಯಕ್ಷಗಾನ ಕಲಾರಂಗದ ಅಧ್ಯಕ್ಷರಾಗಿ ಸಂಸ್ಥೆಯನ್ನು ಮುನ್ನಡೆಸಿದ ಅನುಭವ ಇವರಿಗಿದೆ.ಸಂಸ್ಥೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸುವಂತೆ ಮಾಡಿರುವುದು ಸದ್ರಿಯವರ ಸಾಧನೆಯಲ್ಲೊಂದಾಗಿದೆ.ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಮತ್ತು ಯಕ್ಷನಿಧಿಯ ಅಧ್ಯಕ್ಷರಾದ ನಂತರ 1,000 ವಿದ್ಯಾರ್ಥಿಗಳಿಗೆ 70 ಲಕ್ಷ ರೂ. ವಿದ್ಯಾರ್ಥಿ ವೇತನ ನೀಡಿರುವುದು ದಾಖಲೆಯಾಗಿದೆ.