Subscribe to Updates

    Get the latest creative news from FooBar about art, design and business.

    What's Hot

    ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಸುಗಮ ಸಂಗೀತ ಕಾರ್ಯಕ್ರಮ

    May 28, 2025

    ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಡಾ. ಪ್ರಜ್ಞಾ ಮತ್ತಿಹಳ್ಳಿ ಇವರ ‘ಬೆಳದಿಂಗಳ ಸೋನೆಮಳೆ’ ಕವನ ಸಂಕಲನ ಆಯ್ಕೆ

    May 28, 2025

    ಕುಂದಾಪುರದಲ್ಲಿ ‘ಅರಿವಿನ ಬೆಳಕು’ ಉಪನ್ಯಾಸ ಮಾಲೆ-5 ಮತ್ತು ಕೃತಿ ಲೋಕಾರ್ಪಣೆ | ಮೇ 29

    May 28, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ವಿ.ಬಿ. ಅರ್ತಿಕಜೆಯವರ ‘ಪತ್ರಿಕಾ ರಂಗ ಪ್ರವೇಶ’: ಪತ್ರಿಕೆಗಳ ಲೋಕಕ್ಕೆ ಒಂದು ಪ್ರವೇಶಿಕೆ
    Article

    ಪುಸ್ತಕ ವಿಮರ್ಶೆ | ವಿ.ಬಿ. ಅರ್ತಿಕಜೆಯವರ ‘ಪತ್ರಿಕಾ ರಂಗ ಪ್ರವೇಶ’: ಪತ್ರಿಕೆಗಳ ಲೋಕಕ್ಕೆ ಒಂದು ಪ್ರವೇಶಿಕೆ

    April 26, 2024No Comments6 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕರ್ನಾಟಕದಲ್ಲಿ ಪತ್ರಿಕಾ ಮಾಧ್ಯಮಕ್ಕೆ 170 ವರ್ಷಗಳಿಗೂ ಮಿಕ್ಕ ಇತಿಹಾಸವಿದೆ. ಮಾಧ್ಯಮ ಶಿಕ್ಷಣಕ್ಕೆ 60ಕ್ಕೂ ಹೆಚ್ಚು ವರ್ಷಗಳ ಚರಿತ್ರೆಯಿದೆ. ಆರಂಭದ ಅಸ್ತಿತ್ವದ ಪ್ರಶ್ನೆಗಳಿಂದ ಅದೆಷ್ಟೋ ದೂರ ಸಾಗಿರುವ ಪತ್ರಿಕೋದ್ಯಮವು ಈಗ ಮುಖ್ಯವಾಹಿನಿಯಲ್ಲಿ ಬಂದು ನಿಂತಿದ್ದು ಕಾಲೇಜುಗಳಲ್ಲಿ ಅಧ್ಯಯನದ ಭಾಗವಾಗಿದೆ. ಕನ್ನಡ ಪತ್ರಿಕೋದ್ಯಮವನ್ನೇ ನೆಚ್ಚಿಕೊಂಡು ಬಂದವರಿಗೆ ನ್ಯಾಯ ಒದಗಿಸುವ ರೀತಿಯಲ್ಲಿ ಪರಾಮರ್ಶನ ಗ್ರಂಥಗಳು ಬೆಳೆಯದಿದ್ದರೂ ಕತ್ತಲಲ್ಲಿ ದಾರಿತೋರುವ ಪಂಜಿನಂತೆ ಅಲ್ಲಲ್ಲಿ ಪ್ರಯತ್ನಗಳು ನಡೆದಿವೆ. ಆಕಾಶವಾಣಿ, ದೂರದರ್ಶನ ಮತ್ತು ಇತರ ಆಧುನಿಕ ಸಂವಹನ ಮಾಧ್ಯಮಗಳ ನಡುವೆ ಜಗತ್ತಿನ ಅತ್ಯಂತ ಸೂಕ್ಷ್ಮವೂ, ಪರಿಣಾಮಕಾರಿಯೂ, ಸಾಂಸ್ಕೃತಿಕವೂ, ಸಾಮಾಜಿಕವೂ ಆದ ಅರಿವನ್ನು ಪ್ರಸಾರ ಮಾಡುವ ಮೂಲಕ ಜ್ಞಾನಲೋಕದಲ್ಲಿ ತನ್ನದೇ ಆದ ಸ್ಥಾನವನ್ನು ಉಳಿಸಿಕೊಂಡಿರುವ ಪತ್ರಿಕಾ ಬರವಣಿಗೆಯ ಬಗ್ಗೆ ವಿಶೇಷ ಧ್ಯಾನ-ಅಧ್ಯಯನಗಳು ಅಗತ್ಯವಾಗಿವೆ. ಸಂವಹನ ಮಾಧ್ಯಮಗಳು ಉಂಟು ಮಾಡುತ್ತಿರುವ ಮೌಲ್ಯ ಪ್ರಸಾರವು ಪ್ರಪಂಚದ ವಿವಿಧ ಸಮೂಹಗಳ ವಿಕಾಸದಲ್ಲಿ ವಹಿಸುವ ಪಾತ್ರದ ಕುರಿತು ಚಾರಿತ್ರಿಕವಾಗಿ, ಸಾಮಾಜಿಕವಾಗಿ ವಿಶ್ಲೇಷಿಸುವ ತುರ್ತು ಹೆಚ್ಚಾಗಿದೆ.

    ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವವನ್ನು ಪಡೆದು ಅಲ್ಲಿನ ಸಮಗ್ರ ಜ್ಞಾನವನ್ನು ತಮ್ಮದಾಗಿಸಿಕೊಂಡ ಹಿರಿಯ ಸಾಹಿತಿ ವಿ.ಬಿ. ಅರ್ತಿಕಜೆಯವರ ‘ಪತ್ರಿಕಾ ರಂಗ ಪ್ರವೇಶ’ ಎಂಬ ಚಿಂತನ ಪ್ರಧಾನ ಕೃತಿಯು ಪತ್ರಿಕಾ ಬರವಣಿಗೆಯ ಕ್ರಮಗಳನ್ನು ಕೂಲಂಕಷವಾಗಿ ವಿವೇಚಿಸುತ್ತದೆ. ‘ಹೀಗೊಂದು ವೃತ್ತಾಂತ’, ‘ಮಾರ್ದನಿ’, ‘ಬೆಳಕಿಂಡಿ’, ಮೊದಲಾದ ಕೃತಿಗಳಲ್ಲಿ ವ್ಯಕ್ತವಾಗುವ ಸಹೃದಯತೆ, ತನ್ಮಯತೆ ಮತ್ತು ಪ್ರಾಮಾಣಿಕತೆಗಳನ್ನು ಇಲ್ಲಿಯೂ ಕಾಣಲು ಸಾಧ್ಯ. ಸಾಹಿತ್ಯ ಕ್ಷೇತ್ರದಂತೆ ಪತ್ರಿಕೋದ್ಯಮ ವಲಯದಲ್ಲೂ ಅಪಾರ ಅಧ್ಯಯನ, ಅನುಭವ, ಪ್ರಯೋಗಶೀಲತೆಗಳನ್ನು ಮೈಗೂಡಿಸಿಕೊಂಡಿರುವ ಲೇಖಕರ ವಿಷಯ ವ್ಯಾಪ್ತಿ ಮತ್ತು ಚಿಂತನ ಸಮೃದ್ಧಿಗಳು ಪುಟಪುಟಗಳಲ್ಲೂ ಮೈವೆತ್ತಿವೆ. ಪತ್ರಿಕೆಗಳ ಪ್ರಯೋಜನ, ವರದಿಗಾರನ ಗುಣಲಕ್ಷಣಗಳು ಮತ್ತು ಕರ್ತವ್ಯಗಳು, ಯಾವುದು ಸುದ್ದಿ, ವಾರ್ತಾ ಮೌಲ್ಯಗಳು, ಸುದ್ದಿ ಮೂಲಗಳು ಮತ್ತು ಟಿಪ್ಪಣಿಗಳು, ವರದಿ ಮಾಡುವ ಕ್ರಮ, ಸಂಕ್ಷಿಪ್ತತೆಯ ರಹಸ್ಯ, ಸಂಪಾದಕರಿಗೆ ಪತ್ರ, ಶಬ್ದಚಿತ್ರ ಮತ್ತು ಅಂಕಣಗಳು, ಭಾಷಾಶುದ್ಧತೆ ಮತ್ತು ಶೈಲಿ, ವೃತ್ತಿಯಾಗಿ ಪತ್ರಿಕೋದ್ಯಮ, ಹವ್ಯಾಸಿ ಪತ್ರಿಕೋದ್ಯಮ ಎಂಬ ಹನ್ನೆರಡು ಅಧ್ಯಾಯಗಳ ಮೂಲಕ ವ್ಯಕ್ತವಾಗುವ ಲೇಖಕರ ಸರ್ವಾಂಗೀಣ ಪರಿಜ್ಞಾನ, ವಿಶ್ಲೇಷಣ ಚಾತರ್ಯಣ, ಪತ್ರಿಕೆಗಳಿಂದ ಪಡೆದುಕೊಂಡ ಜ್ಞಾನ ಮತ್ತು ಮುಟ್ಟಬಹುದಾದ ವಿಶೇಷ ಸ್ತರಗಳು ಓದುಗರ ಬುದ್ಧಿಮತ್ತೆ ಹಾಗೂ ವಿಚಾರಶಕ್ತಿಯನ್ನು ತೀಕ್ಷ್ಣವಾಗಿ, ತೀವ್ರವಾಗಿ ಪ್ರಭಾವಿಸುತ್ತವೆ. ವರದಿಗಾರನ ಗುಣಲಕ್ಷಣಗಳು, ಸುದ್ದಿಮೂಲಗಳು, ಭಾಷಾಶುದ್ಧಿಯ ಮಹತ್ವಗಳ ಬಗ್ಗೆ ಸರಳವಾಗಿ ವಿವರಿಸಿದ ಸೂಕ್ಷ್ಮ, ಸಂಕ್ಷಿಪ್ತ ವಿಚಾರಗಳು ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗುತ್ತಿರುವ ಭಾಷಾಶುದ್ಧಿ, ಪ್ರಬುದ್ಧತೆ ವಸ್ತುನಿಷ್ಠತೆಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವನ್ನು ಮನಗಾಣಿಸುವುದರೊಂದಿಗೆ ಪರಭಾಷಾ ಭ್ರಮಿತ ಕುರುಡರ ಕಣ್ಣುಗಳನ್ನು ತೆರೆಯಲು ಯತ್ನಿಸುತ್ತದೆ. ಪತ್ರಿಕೋದ್ಯಮದ ವಿವಿಧ ಮುಖಗಳ ಪರಿಚಯ ಮಾತ್ರವಲ್ಲದೆ ಅವುಗಳ ಮೂಲಗಳನ್ನು ಕೂಡ ಅಚ್ಚುಕಟ್ಟಾಗಿ ಪರಿಶೀಲಿಸುವ ಸಂದರ್ಭದಲ್ಲಿ ನಿರೂಪಣೆಯು ಕ್ಲಿಷ್ಟವಾಗದೆ, ಅಸ್ಪಷ್ಟವಾಗದೆ ಸಹಜವಾಗಿ ಹರಿಯುತ್ತದೆ. ಓದುಗರು ಮತ್ತು ಪತ್ರಿಕೆಗಳ ನಡುವಿನ ಸಂಬಂಧಗಳಿಗೆ ಆದ್ಯತೆಯನ್ನು ನೀಡುವ ‘ಸಂಪಾದಕರಿಗೆ ಪತ್ರ’ ಎಂಬ ಅಧ್ಯಾಯವು ಪತ್ರಿಕೋದ್ಯಮವನ್ನು ಕುರಿತ ಹೊಸ ಸಂವಾದಗಳಿಗೆ ದಾರಿ ಮಾಡಿ ಕೊಡುತ್ತದೆ. ಗಣಕಯಂತ್ರದ ಯುಗದಲ್ಲಿ ಊಹೆಗೂ ನಿಲುಕದ ಗತಿಯಲ್ಲಿ, ಮಿತಿಯಲ್ಲಿ, ರಭಸದಲ್ಲಿ, ಜಿದ್ದಾಜಿದ್ದಿನಲ್ಲಿ ಸಾಗುವ ಕನ್ನಡ ಸುದ್ದಿಪತ್ರಿಕೆಗಳ ಓಟದ ಹಲವು ನೋಟಗಳು ಇಣುಕುತ್ತಿದ್ದು ಆಧುನಿಕ ಪತ್ರಿಕೋದ್ಯಮದ ಕುರಿತು ಸ್ಪಷ್ಟ ಪರಿಕಲ್ಪನೆಗಳನ್ನು ರೂಪಿಸುತ್ತದೆ.

    ವೃತ್ತಿಯಾಗಿ, ಉದ್ಯಮವಾಗಿ ಕಳೆದೆರಡು ದಶಕಗಳಲ್ಲಿ ಬೃಹತ್ ಸ್ವರೂಪವನ್ನು ತಾಳಿದ ಪತ್ರಿಕೋದ್ಯಮವು ಇನ್ನಿತರ ಎಲ್ಲ ಪ್ರಬಲ ಮಾಧ್ಯಮಗಳ ಪ್ರಭಾವಕ್ಕಿಂತ ತೀಕ್ಷ್ಣವೂ ನಿರ್ಣಾಯಕವೂ ಆಗಿದ್ದು ಬದುಕಿನ ಅವಿಭಾಜ್ಯ ಅಂಗವಾಗಿದೆ. ಪತ್ರಿಕೆಯನ್ನು ಸಿದ್ಧಗೊಳಿಸುವುದು ಸಂಕೀರ್ಣ ಮತ್ತು ಸಾಮಾಜಿಕ ಜವಾಬ್ದಾರಿ. ಸುದ್ದಿ ಸಂಪಾದನೆ ಅದರ ನಿರ್ಣಾಯಕ ಹಂತ. ಸುದ್ದಿಯನ್ನು ವಿವಿಧ ಮೂಲಗಳಿಂದ ಸಂಗ್ರಹಿಸುವುದು ವರದಿಗಾರನ ಕೆಲಸ. ಅದನ್ನು ಸೂಕ್ತವಾಗಿ, ಸಮರ್ಪಕವಾಗಿ ತಿದ್ದಿ ಬರೆಯುವುದು ಕೂಡ ಅಷ್ಟೇ ಮಹತ್ವದ್ದು. ವರದಿ ತನ್ನ ಅಂತಿಮ ರೂಪು ಪಡೆದುಕೊಳ್ಳುವುದೇ ಸಂಪಾದನೆಯ ಹಂತದಲ್ಲಿ. ಆದ್ದರಿಂದ ಸುದ್ದಿ ಸಂಪಾದನೆಯ ಪ್ರಕ್ರಿಯೆಯನ್ನು ಕೂಲಂಕಷವಾಗಿ ಚರ್ಚಿಸಲಾಗಿದೆ. ವಾರ್ತಾಪ್ರಜ್ಞೆ, ಸ್ಪಷ್ಟತೆ, ವಸ್ತುನಿಷ್ಠತೆ, ನಿಖರತೆ, ಚುರುಕುತನ, ಕ್ಷಿಪ್ರತೆ, ಪ್ರಶಾಂತತೆ, ಕುತೂಹಲ, ಜಾಗರೂಕತೆ, ಸಮಯನಿಷ್ಠೆ, ತಾಳ್ಮೆ, ದೂರದೃಷ್ಟಿ, ಶಿಸ್ತು, ಪ್ರಾಮಾಣಿಕತೆ, ಧೈರ್ಯ, ದಕ್ಷತೆ, ಕ್ರಿಯಾಶೀಲತೆ, ಚಲನಶೀಲತೆ, ಕಷ್ಟಸಹಿಷ್ಣುತೆ ಮತ್ತು ಗುಣಗ್ರಾಹಿಗಳಾದವರು ಮಾತ್ರ ವಿಶ್ವಾಸಾರ್ಹ ಮತ್ತು ಅನುಸರಣೀಯ ವರದಿಗಾರರಾಗುತ್ತಾರೆ ಎಂಬ ಮಾತುಗಳು ಪತ್ರಕರ್ತರ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಬೋಧಿಸುವ ನೀತಿಸಂಹಿತೆಯಾಗುತ್ತದೆ. ‘ಯಾವುದು ಸುದ್ದಿ?’ ಮತ್ತು ‘ವಾರ್ತಾಮೌಲ್ಯಗಳು’ ಎಂಬ ಅಧ್ಯಾಯಗಳು ಇದೇ ವಿಚಾರಗಳನ್ನು ಇನ್ನಷ್ಟು ವಿಸ್ತರಿಸಿಕೊಂಡು ಪತ್ರಕರ್ತನು ಗ್ರಹಿಸಿಕೊಳ್ಳಬೇಕಾದ ಸೂಕ್ಷ್ಮ ಸಂಗತಿಗಳ ಬಗ್ಗೆ ಕಿವಿಮಾತುಗಳನ್ನು ನೀಡುತ್ತವೆ. ಕ್ಷಿಪ್ರ ಬದಲಾವಣೆ, ಆಪತ್ತು, ಅಭಿವೃದ್ಧಿ, ಜಾಗೃತಿ, ದೂರಗಾಮಿ ಪರಿಣಾಮ, ಕಾರ್ಯ ಕಾರಣ ಸಂಬಂಧ, ಹೊಸತನ, ಮಾನವೀಯ ಮಿಡಿತಗಳನ್ನು ರೂಢಿಸಿಕೊಳ್ಳುವ ಮೂಲಕ ಪತ್ರಿಕೆಗಳು ರೂಪುಗೊಳ್ಳುವ ವಿಭಿನ್ನ ನೆಲೆಗಳನ್ನು ಅವಲೋಕಿಸುತ್ತದೆ. ‘ಪತ್ರಿಕೆಗಳ ಪ್ರಯೋಜನ’ ಎಂಬ ಅಧ್ಯಾಯವು ಪತ್ರಿಕೆಗಳ ಸಾಮಾಜಿಕ ಜವಾಬ್ದಾರಿಯನ್ನು ವಿವರಿಸುತ್ತದೆ.

    ಪತ್ರಿಕೋದ್ಯಮವನ್ನು ಒಳಗೊಂಡ ಮಾಧ್ಯಮ ಕ್ಷೇತ್ರ ಬಹಳ ವಿಸ್ತಾರವಾಗಿದ್ದು ಕ್ಷಣ ಕ್ಷಣಕ್ಕೂ ಬದಲಾಗುತ್ತಾ ವ್ಯವಸ್ಥೆಯ ಎಲ್ಲಾ ಅಂಗಗಳ ಮೇಲೆ ವಿಶೇಷ ಪರಿಣಾಮವನ್ನು ಬೀರುತ್ತದೆ. ಆದರೆ ಪತ್ರಿಕೋದ್ಯಮದ ಕುರಿತು ಕನ್ನಡದಲ್ಲಿ ಬಂದ ಹೆಚ್ಚಿನ ಪುಸ್ತಕಗಳು ಸಿದ್ಧಾಂತ ಆಧಾರಿತವಾಗಿ ಇವೆಯೇ ಹೊರತು ಅನುಭವ ಆಧಾರಿತವಾಗಿ ಅಲ್ಲ. ಲೇಖಕರು ಅನುಭವಿ ಪತ್ರಕರ್ತರು. ವರದಿಗಾರರಾಗಿ ಕೆಲಸ ಮಾಡಿದವರು. ಸುದ್ದಿಕೋಣೆಯೊಳಗೆ ಕುಳಿತು ಸದ್ದಿಲ್ಲದೆ ದುಡಿದವರು. ಹೀಗೆ ಹತ್ತೂ ಕಡೆಗಳಿಂದ ಪಡೆದ ಫಲಗಳ ರಸಪಾಕವನ್ನು ನೀಡುವ ಮೂಲಕ ಲೇಖಕರು ತಮ್ಮ ಅನುಭವ, ದುಡಿಮೆ ಮತ್ತು ಶ್ರಮಗಳ ಪ್ರತಿಫಲನವನ್ನು ಅನಾವರಣಗೊಳಿಸಿದ್ದಾರೆ. ಪತ್ರಿಕೋದ್ಯಮದ ಪರಮಗುರಿಯಾದ ಸಂವಹನದ ತತ್ವ, ಆದರ್ಶ ಮತ್ತು ಸಮೂಹ ಸಂವಹನದ ಧ್ಯೇಯ, ಗುರಿ ಮತ್ತು ಮಾರ್ಗಗಳ ಪರಿಚಯಗಳನ್ನು ಮಾಡಿಸುತ್ತಾ ಪತ್ರಿಕಾವೃತ್ತಿಯಲ್ಲಿ ಆಸಕ್ತಿಯುಳ್ಳವರಿಗೆ ಮುಂದಕ್ಕೆ ಹಜ್ಜೆಯಿಡಲು ಪ್ರೇರೇಪಿಸಿದ್ದಾರೆ. ಲೇಖಕರು ಪತ್ರಿಕೋದ್ಯಮಿಗಳು ಮಾತ್ರವಲ್ಲದೆ ಹವ್ಯಾಸಿ ಲೇಖಕರೂ ಆಗಿರುವುದರಿಂದ ಅವರ ಬರವಣಿಗೆಯು ಕುಸುರಿ ಕೆಲಸದ ತಾದಾತ್ಮ್ಯದಿಂದ, ಅಕ್ಷರಗಳ ಮೇಲಿನ ಅಕ್ಕರೆಯಿಂದ ಮೂಡಿದ್ದು ಪ್ರತಿಯೊಂದು ಲೇಖನವೂ ಸೊಗಸಾದ ಪ್ರಬಂಧಗಳಂತೆ ಓದಿಸಿಕೊಂಡು ಹೋಗುತ್ತವೆ. ಆದ್ದರಿಂದ ಇದು ಮಾಧ್ಯಮ ಲೋಕದ ಮೇಲೆ ಪ್ರೀತಿ ಇರುವವರೆಲ್ಲರೂ ಓದಬಹುದಾದ ಕೃತಿಯಾಗಿದೆ. ಮಾಧ್ಯಮ ಲೋಕದ ವಿಸ್ತಾರವನ್ನು ವಿವರಿಸುವ ಲೇಖನಗಳಿಂದ ಕೂಡಿದ ಈ ಪುಸ್ತಕವು ಅನುಭವದ ಧಾರೆಗಳನ್ನು ಒಳಗೊಂಡಿರುವುದರಿಂದ ಇದರ ಮಹತ್ವ ಹೆಚ್ಚಿದೆ.

    ಮನುಷ್ಯ ಸಂಘ ಜೀವಿಯಾದಂದಿನಿಂದಲೂ ವರದಿಯು ಆತನ ಬದುಕಿನ ಅವಿಭಾಜ್ಯ ಅಂಗವಾಗಿ ಬೆಳೆದು ಬಂದಿದೆ. ವರದಿ ಮಾಡುವುದು, ಪಡೆಯುವುದು ಮತ್ತು ಅದನ್ನು ಬಳಸಿಕೊಳ್ಳುವುದರಲ್ಲಿ ಪ್ರತಿಭೆಯನ್ನು ಬೆಳೆಸಿಕೊಳ್ಳುತ್ತಲೇ ಬಂದಿದ್ದಾನೆ. ಈ ಸಾಮರ್ಥ್ಯವೇ ಇಂದು ಪತ್ರಿಕೆ, ಆಕಾಶವಾಣಿ, ದೂರದರ್ಶನ ಮುಂತಾದ ವರ್ಚಸ್ವೀ ಸಮೂಹ ಸಂವಹನ ಮಾಧ್ಯಮಗಳ ರೂಪದಲ್ಲಿ ಬೆಳೆದು ನಿಂತಿವೆ. ವೃತ್ತಿಬಾಂಧವ್ಯದಲ್ಲಿ ಇವುಗಳು ಪತ್ರಿಕೋದ್ಯಮದ ಕಿರಿಯ ಸಹೋದರರಿದ್ದಂತೆ. ಏನಿದ್ದರೂ ಜ್ಞಾನಪ್ರಸಾರವೇ ಮೂಲಧರ್ಮ. ಕಾರ್ಯತಂತ್ರ ಮಾತ್ರ ಬೇರೆಯಾಗಿದ್ದು ಪ್ರಸ್ತುತಿ ಹೆಚ್ಚು ಆಕರ್ಷಕವಾಗಿದೆ. ಆದ್ದರಿಂದ ದೂರದರ್ಶನವಿರುವಾಗ ಪತ್ರಿಕೆಯ ಅಗತ್ಯವೇನು ಎಂಬ ಪ್ರಶ್ನೆಗೆ ನೀಡುವ ಉತ್ತರವು ಪತ್ರಿಕೆಯ ಹಿರಿಮೆ, ಅನಿವಾರ್ಯದತೆ ಮತ್ತು ದೂರದರ್ಶನದ ಮಿತಿಗಳತ್ತ ಬೊಟ್ಟು ಮಾಡುತ್ತವೆ. ಬೌದ್ಧಿಕ ಪ್ರತಿಭೆ-ಕಸರತ್ತುಗಳೇ ಮೇಲುಗೈ ಪಡೆಯುವ ಈ ಮಾಧ್ಯಮಗಳನ್ನು ಲೇಖಕರು ನಿಷ್ಠೆಯ, ಜವಾಬ್ದಾರಿಯ ಕೆಲಸವನ್ನಾಗಿ ಕಂಡಿದ್ದಾರೆ. ಇದನ್ನು ಶಾಲಾ ಕಾಲೇಜುಗಳಲ್ಲಿ ಪಾಠೋಪನ್ಯಾಸಗಳ ಮೂಲಕ ಬೋಧಿಸಲಾಗುತ್ತಿದೆಯಾದರೂ ಪ್ರತ್ಯಕ್ಷ ಅನುಭವದ ಪಾಠ ಬಹಳ ಮಹತ್ವದ್ದು.

    ಕನ್ನಡ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡವರಿಗೆಲ್ಲರಿಗೂ ಬರವಣಿಗೆಯ ಸಾಮರ್ಥ್ಯ ಇರುವುದಿಲ್ಲ. ಸತತವಾದ ಓದು, ಬರವಣಿಗೆಗಳಿಂದ ಮಾತ್ರ ಪರಿಣತಿ ದೊರಕುತ್ತದೆ. ಬರೆಯುತ್ತಾ ಹೋದಂತೆ ಶೈಲಿಯು ರೂಪುಗೊಳ್ಳುತ್ತದೆ. ಪತ್ರಿಕೋದ್ಯಮಿಯಾದವನಿಗಂತೂ ವಿಪುಲವಾದ ಪದಸಂಪತ್ತು ಬೇಕಾಗುತ್ತದೆ. ಅನಗತ್ಯ ಪದಗಳ ಬದಲು ಅಗತ್ಯದ ಪದಗಳ ಮೇಲೆ ಅವನ ಯಜಮಾನಿಕೆ ಇರಬೇಕಾಗುತ್ತದೆ. ತಮ್ಮ ಸಮೃದ್ಧ ಓದಿನಿಂದ ಲೇಖಕರಿಗೆ ವಿಪುಲ ಪದಸಂಪತ್ತು ಲಭ್ಯವಾಗಿದೆ. ಉದ್ದವಾದ ಕೂದಲನ್ನು ಹೊಂದಿದವಳು ಹೇಗೆ ಕಟ್ಟಿಕೊಂಡರೂ ಚಂದವಾಗಿ ಕಾಣುವಂತೆ ಅಪಾರ ಪದಸಂಪತ್ತು ಹೊಂದಿದವನು ಹೇಗೆ ಬರೆದರೂ ಸುಂದರವಾಗಿರುತ್ತದೆ ಎಂಬುದಕ್ಕೆ ‘ಪತ್ರಿಕಾ ರಂಗ ಪ್ರವೇಶ’ವು ಸಾಕ್ಷಿಯಾಗಿದೆ. ಶೈಕ್ಷಣಿಕ ಶಿಸ್ತು, ಅಧ್ಯಯನ ಮತ್ತು ಸೃಜನಶೀಲ ಕಾರ್ಯಾನುಭವಗಳ ತ್ರಿವೇಣಿ ಸಂಗಮವಾಗಿರುವ ಈ ಕೃತಿಯು ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಆಕರ ಗ್ರಂಥವಾಗಿದೆ.

    ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಸುದೀರ್ಘ ಕಾಲ ಇತಿಹಾಸದ ಪ್ರಾಧ್ಯಾಪಕರಾಗಿದ್ದರೂ ಪತ್ರಿಕೋದ್ಯಮ ಶಿಬಿರಗಳನ್ನು ಆಯೋಜಿಸುವ ಮೂಲಕ ಕನ್ನಡ ನಾಡಿನ ಮೂಲೆ ಮೂಲೆಗಳಲ್ಲೂ ಸಮರ್ಥ ಪತ್ರಕರ್ತರನ್ನು ಅರಳಿಸಿದ ಲೇಖಕರು ಪ್ರಸಾರ ಮಾಧ್ಯಮದ ಕಾಲೇಜಿನಲ್ಲಿ ಪತ್ರಿಕೋದ್ಯಮವನ್ನು ಅಭ್ಯಾಸ ಮಾಡಿದವರಲ್ಲ. ಆದರೆ ಅಂಥ ಕಾಲೇಜಿನಲ್ಲಿ ಓದಿ ಪರಿಣತಿಯನ್ನು ಪಡೆದ ಅನುಭವಿಗಳೂ ತಲೆದೂಗುವಂಥ ಉತ್ತಮ ಕೃತಿಯೊಂದನ್ನು ನೀಡುವ ಮೂಲಕ ಅವರು ತಮ್ಮ ಬಹುಮುಖಿ ಆಸಕ್ತಿಯ ಛಾಪನ್ನು ಒತ್ತಿದ್ದಾರೆ. ಪತ್ರಿಕೋದ್ಯಮದ ಕ್ಷೇತ್ರದಲ್ಲಿ ಹಲವಾರು ವರ್ಷಗಳ ಅನುಭವವನ್ನು ಪಡೆದು ಮಾಗಿದ ಲೇಖಕರು ಪ್ರಸಾರ ಮಾಧ್ಯಮದ ಎಲ್ಲಾ ಮುಖಗಳನ್ನು ಬಲ್ಲವರು. ಪತ್ರಿಕಾ ಕ್ಷೇತ್ರದ ಮೂಲೆ ಮಗ್ಗುಲು ಆಳ ವಿಸ್ತಾರಗಳನ್ನು ಹೊಕ್ಕು ಅಗೆದು ಬಗೆದು ಅಪರಂಜಿಗಳನ್ನು ಮಿಂಚಿಸಿದವರು. ಬದುಕಿನ ಮೂಲದ್ರವ್ಯಗಳನ್ನು ವೃತ್ತಿಧರ್ಮ, ವೃತ್ತಿ ನೀತಿ ಮತ್ತು ಮೌಲ್ಯಗಳ ಎಚ್ಚರದ ಮೂಸೆಯಲ್ಲಿ ಪುಟಕ್ಕಿಟ್ಟು ಬೆಳೆದವರು. ಪತ್ರಿಕೋದ್ಯಮವನ್ನು ತಿಳಿದವರಿದ್ದಾರೆ. ಆದರೆ ತಿಳಿಯುವಂತೆ ತಿಳಿಸಿಕೊಡುವವರು ಕಡಿಮೆಯಾಗುತ್ತಿರುವ ಹೊತ್ತಿನಲ್ಲಿ ತಾವು ತಿಳಿದ ವಿಷಯಗಳನ್ನು ಎಲ್ಲರಿಗೂ ದಕ್ಕುವಂತೆ ವಿವರಿಸುವ ಹದವನ್ನು ರೂಢಿಸಿಕೊಂಡ ಲೇಖಕರು ಪತ್ರಿಕೋದ್ಯಮ ಕ್ಷೇತ್ರಕ್ಕೆ ಅನನ್ಯ ಕೊಡುಗೆಯನ್ನು ನೀಡಿರುವುದರಿಂದ ವಿಶೇಷ ಅಭಿನಂದನೆಗೆ ಅರ್ಹರಾಗಿದ್ದಾರೆ.

    ಪುಸ್ತಕದ ಹೆಸರು : ‘ಪತ್ರಿಕಾ ರಂಗ ಪ್ರವೇಶ’
    ಪ್ರಕಾಶಕರು : ಕೊಡಂಕಿರಿ ಪ್ರಕಾಶನ, ನರಿಮೊಗರು, ಪುತ್ತೂರು
    ವರ್ಷ : 2014
    ಪುಟಗಳು : 76
    ಬೆಲೆ : 45

    ಡಾ. ಸುಭಾಷ್ ಪಟ್ಟಾಜೆ :


    ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡಿನ ಸರಕಾರಿ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ, ಡಾ. ಯು. ಮಹೇಶ್ವರಿಯವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು: ಒಂದು ತೌಲನಿಕ ಅಧ್ಯಯನ’ ಸಂಶೋಧನ ಮಹಾ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಬರೆದ ಕತೆ, ಕವನ, ಲೇಖನ ಮತ್ತು ಸುಮಾರು 200ಕ್ಕೂ ಹೆಚ್ಚು ಪುಸ್ತಕ ವಿಮರ್ಶೆಗಳು ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ ಮತ್ತು ಅಂತರ್ಜಾಲ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರವಾಗಿವೆ.

    ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ), ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್‌ (ವ್ಯಕ್ತಿ ಚಿತ್ರಣ), ಕಥನ ಕಾರಣ (ಸಂಶೋಧನ ಕೃತಿ), ನುಡಿದು ಸೂತಕಿಗಳಲ್ಲ (ಸಂಪಾದಿತ) ಎಂಬ ಕೃತಿಗಳನ್ನು ಪ್ರಕಟಿಸಿರುವ ಇವರು ಕಾಸರಗೋಡು ಜಿಲ್ಲೆಯ ಶೇಣಿ ಗ್ರಾಮದ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯಾಪಕವಾದ ಓದು, ವಿಸ್ತಾರವಾದ ಅಧ್ಯಯನಕ್ಕೆ ಹೆಸರಾಗಿರುವ ಇವರು ಉತ್ಸಾಹಿ ಸಂಘಟಕರಾಗಿದ್ದು ನಾಡಿನ ವಿವಿಧೆಡೆಗಳಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಮುಂಚೂಣಿಯ ಪಾತ್ರವನ್ನು ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ವೇದಿಕೆಯ ಸಂಚಾಲಕರಲ್ಲಿ ಒಬ್ಬರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.

    ಲೇಖಕ ಪ್ರೊ. ವಿ.ಬಿ. ಅರ್ತಿಕಜೆ :

    ಇತಿಹಾಸ ಪ್ರಾಧ್ಯಾಪಕರಾಗಿ ದುಡಿದು ನಿವೃತ್ತರಾಗಿರುವ ಪ್ರೊ. ವಿ.ಬಿ. ಅರ್ತಿಕಜೆ ಅವರು ಇತಿಹಾಸ ಮತ್ತು ಕನ್ನಡ ಭಾಷೆ ಎರಡರಲ್ಲೂ ಸ್ನಾತಕೋತ್ತರ ಪದವಿಗಳನ್ನು ಚಿನ್ನದ ಪದಕ ಮತ್ತು ಪ್ರಥಮ ಸ್ಥಾನದೊಂದಿಗೆ ಗಳಿಸಿದವರು. ಅವರ ಆಸಕ್ತಿಯ ಕ್ಷೇತ್ರ ಅಧ್ಯಾಪನ, ಪತ್ರಿಕೋದ್ಯಮ ಮತ್ತು ಸಾಹಿತ್ಯ. ನಾಲ್ಕಾರು ಪತ್ರಿಕೆಗಳಿಗೆ ದೀರ್ಘಕಾಲ ವರದಿಗಾರರಾಗಿ ದುಡಿದ ಅವರು ಜನಪ್ರಿಯ ಅಂಕಣಕಾರರೂ ಹೌದು. ‘ಹೀಗೊಂದು ವೃತ್ತಾಂತ’, ‘ಮಾರ್ದನಿ’, ‘ಹಾಸ್ಯೋಲ್ಲಾಸ’, ‘ಜೇನುಹನಿ’, ‘ಅನನ್ಯ ಸಾಧಕರು’ ಅವರ ಪ್ರಕಟಿತ ಕೃತಿಗಳು. ತನ್ನ ಆಡುಭಾಷೆ ಹವ್ಯಕವನ್ನು ಅಂಕಣದಲ್ಲಿ ಉಪಯೋಗಿಸಿದ, ಆ ಭಾಷೆಯಲ್ಲೇ ಸಾಹಿತ್ಯ ಸೃಷ್ಟಿಸಿದ ಹಿರಿಮೆ ಅವರದು.

    Share. Facebook Twitter Pinterest LinkedIn Tumblr WhatsApp Email
    Previous Articleಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ವತಿಯಿಂದ ಒಂದು ದಿನದ ‘ನೃತ್ಯ ಕಾರ್ಯಾಗಾರ’
    Next Article ಅಮೃತಪ್ರಕಾಶ ಪತ್ರಿಕೆಯ ವತಿಯಿಂದ ಕಥಾ ಸಂಕಲನ ಲೋಕಾರ್ಪಣೆ | ಏಪ್ರಿಲ್ 29
    roovari

    Add Comment Cancel Reply


    Related Posts

    ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಡಾ. ಪ್ರಜ್ಞಾ ಮತ್ತಿಹಳ್ಳಿ ಇವರ ‘ಬೆಳದಿಂಗಳ ಸೋನೆಮಳೆ’ ಕವನ ಸಂಕಲನ ಆಯ್ಕೆ

    May 28, 2025

    ಕುಂದಾಪುರದಲ್ಲಿ ‘ಅರಿವಿನ ಬೆಳಕು’ ಉಪನ್ಯಾಸ ಮಾಲೆ-5 ಮತ್ತು ಕೃತಿ ಲೋಕಾರ್ಪಣೆ | ಮೇ 29

    May 28, 2025

    ಕಾವೇರಿ ಕಾಲೇಜಿನಲ್ಲಿ ಮೂರು ಪುಸ್ತಕಗಳ ಲೋಕಾರ್ಪಣೆ ಹಾಗೂ ದತ್ತಿನಿಧಿ ಕಾರ್ಯಕ್ರಮ | ಮೇ 31

    May 28, 2025

    ಉತ್ತರ ಕರ್ನಾಟಕ ಲೇಖಕಿಯರ ಸಂಘದ ಪ್ರಶಸ್ತಿ ಪ್ರಕಟ

    May 28, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.