ಧಾರವಾಡ : ಕರ್ನಾಟಕ ಶಾಸನ ಸಾಹಿತ್ಯ ಪರಿಷತ್ತು ಧಾರವಾಡ, ಜನತಾ ಶಿಕ್ಷಣ ಸಮಿತಿ ವಿದ್ಯಾಗಿರಿ ಧಾರವಾಡ ಮತ್ತು ರಾಷ್ಟ್ರೀಯ ದೃಶ್ಯಕಲಾ ಅಕಾಡೆಮಿ ಧಾರವಾಡ ಇವರುಗಳ ಸಹಯೋಗದಲ್ಲಿ ಕರ್ನಾಟಕ ಶಾಸನ ಸಾಹಿತ್ಯ ಪರಿಷತ್ತಿನ ಮೊದಲ ಮಹಾಧಿವೇಶನ -2024’ವು ದಿನಾಂಕ 29-04-2024 ಮತ್ತು 30-04-2024ರಂದು ಧಾರವಾಡ ವಿದ್ಯಾಗಿರಿ ಇಲ್ಲಿರುವ ಜನತಾ ಶಿಕ್ಷಣ ಸಮಿತಿಯ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಸಭಾಂಗಣದಲ್ಲಿ ನಡೆಯಲಿದೆ.
ದಿನಾಂಕ 29-04-2024ರಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಇವರ ಸರ್ವಾಧ್ಯಕ್ಷತೆಯಲ್ಲಿ ಹುಬ್ಬಳ್ಳಿಯ ಹಿರಿಯ ವಿದ್ವಾಂಸರಾದ ಡಾ. ಬಿ.ವಿ. ಶಿರೂರ ಇವರು ಈ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀಮತಿ ಹನುಮಾಕ್ಷಿ ಗೋಗಿ ಇವರ ‘ಕಾಳಗಿ ಇತಿಹಾಸ ಮತ್ತು ಸಂಸ್ಕೃತಿ’ ಮತ್ತು ‘ಮುದನೂರು ಮತ್ತು ಯಡ್ರಾಮಿ ಶಾಸನಗಳು’ ಹಾಗೂ ಪ್ರೊ. ಎಸ್.ಸಿ. ಪಾಟೀಲ ಇವರ ‘ದೃಶ್ಯಕಲಾ ಸಂಚಯ’, ‘ವಚನಕಾರ ಹಂಡೆ ಚಂದಿಮರಸನ ಶಾಸನಗಳು’ ಮತ್ತು ಹಂಡೆ ಅರಸರ ಸಾಂಸ್ಕೃತಿಕ ಚರಿತ್ರೆ’ ಎಂಬ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಶ್ರೀಮತಿ ಹನುಮಾಕ್ಷಿ ಗೋಗಿ ಇವರು ಸ್ಥಾಪಿಸಿದ ‘ಡಾ. ಎಂ.ಎಂ. ಕಲ್ಬುರ್ಗಿ ಶಾಸನ ಸಾಹಿತ್ಯ ಪ್ರಶಸ್ತಿ’ಯನ್ನು ಹುಬ್ಬಳ್ಳಿಯ ಹಿರಿಯ ವಿದ್ವಾಂಸರಾದ ಡಾ. ಬಿ.ವಿ. ಶಿರೂರ ಇವರಿಗೆ ಮತ್ತು ಪ್ರೊ. ಎಸ್.ಸಿ. ಪಾಟೀಲ ಇವರು ಸ್ಥಾಪಿಸಿದ ‘ಡಾ. ಬಿ.ಆರ್. ಹಿರೇಮಠ ಸಂಶೋಧನಶ್ರೀ ಪ್ರಶಸ್ತಿ’ಯನ್ನು ಬೆಂಗಳೂರಿನ ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷರಾದ ಡಾ. ದೇವರಕೊಂಡಾ ರೆಡ್ಡಿ ಇವರಿಗೆ ಪ್ರದಾನ ಮಾಡಲಾಗುವುದು. ಮಧ್ಯಾಹ್ನ ಗಂಟೆ 2-00ರಿಂದ ದತ್ತಿ ಉಪನ್ಯಾಸಗಳು ನಡೆಯಲಿರುವುದು.
ದಿನಾಂಕ 30-04-2024ರಂದು ಬೆಳಿಗ್ಗೆ ಗಂಟೆ 9-30ರಿಂದ ಗೋಷ್ಠಿಗಳು ಮತ್ತು ದತ್ತಿ ಉಪನ್ಯಾಸಗಳು ನಡೆಯಲಿರುವುದು. ಸಂಜೆ ಗಂಟೆ 4-00ಕ್ಕೆ ಧಾರವಾಡದ ಜನತಾ ಶಿಕ್ಷಣ ಸಮಿತಿ ಸಮೂಹ ಸಂಸ್ಥೆಗಳು ಇದರ ಕಾರ್ಯದರ್ಶಿಯಾದ ಡಾ. ಅಜಿತ ಪ್ರಸಾದ ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಇದೇ ಸಂದರ್ಭದಲ್ಲಿ 2023ನೆಯ ಸಾಲಿನಲ್ಲಿ ಶಾಸನ ಕ್ಷೇತ್ರದಲ್ಲಿ ಪಿಯಚ್.ಡಿ. ಪದವಿ ಪಡೆದವರಿಗೆ ಸನ್ಮಾನ ಮತ್ತು ಚಿತ್ರಕಲಾ ಸ್ಪರ್ಧೆಯ ಬಹುಮಾನಿತರಿಗೆ ಪುರಸ್ಕಾರ ನಡೆಯಲಿರುವುದು.