ಕಾರ್ಕಳ : ಗುಪ್ತಗಾಮಿನಿ ಸಾಹಿತ್ಯ ಶಾಲೆ ಈದು ಕಾರ್ಕಳ ಇದರ ವತಿಯಿಂದ ಅನಂತಶಯನ ವಿಶ್ವೇಶ್ವರ ವೇಣುಗೋಪಾಲ ದೇವಸ್ಥಾನದ ಸಭಾಂಗಣದಲ್ಲಿ ಅಭಿಜಾತ ಕವಯಿತ್ರಿ ಕೊಪ್ಪಲ ಸುಶೀಲಾಬಾಯಿ ಮರಾಠೆ ನೆನಪಿನ ಕಾರ್ಯಕ್ರಮದಲ್ಲಿ ‘ಜೈಮಿನಿ ಭಾರತ ಕಾವ್ಯ ಸೌಂದರ್ಯ’ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವು ದಿನಾಂಕ 21-04-2024ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ವಿದ್ವಾಂಸ, ಅಷ್ಟಾವಧಾನಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜರವರು “ಕಾವ್ಯದಲ್ಲಿ ಇರಬೇಕಾದ ಲಯ, ರಸಸೃಷ್ಟಿ ಮತ್ತು ಗೇಯಗುಣದಿಂದ ಲಕ್ಷ್ಮೀಶನ ಜೈಮಿನಿ ಭಾರತ ಕನ್ನಡ ಕಾವ್ಯ ಪರಂಪರೆಯ ಸಾರ್ವಕಾಲಿಕವಾದ ಶ್ರೇಷ್ಠ ಮಹಾಕಾವ್ಯ. ಕನ್ನಡ ಸಾಹಿತ್ಯ ಲೋಕದಲ್ಲಿ ಕವಿಗಳ ಪಾಲಿಗೆ ಅದೊಂದು ದೊಡ್ಡ ನಿಧಿಯಾಗಿದೆ” ಎಂದು ನುಡಿದರು.
ಕಾರ್ಕಳ ತಾಲೂಕು ಚಿತ್ಪಾವನ ಬ್ರಾಹ್ಮಣ ಸಮಾಜದ ಅಧ್ಯಕ್ಷ ರತ್ನಾಕರ ಮರಾಠೆ, ಗಾಯಕ ಅನಂತಪದ್ಮನಾಭ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಶ್ರಾವಣಿ ಶಾಸ್ತ್ರಿ ಸ್ವಾಗತಿಸಿ, ಕೆ. ಶ್ರೀಕರ ಭಟ್ ಪ್ರಾಸ್ತಾವಿಕ ಮಾತನಾಡಿದರು. ವಿಜಯ ನಾರಾಯಣ ಕಾರ್ಯಕ್ರಮ ನಿರ್ವಹಿಸಿ, ಜಗದೀಶ ಗೋಖಲೆ ವಂದಿಸಿದರು.