10 ಫೆಬ್ರವರಿ 2023: ಚಿಕ್ಕ, ಚೊಕ್ಕ, ಶುದ್ಧ ಹಾಸ್ಯಭರಿತ ಸುಂದರ ಪ್ರಸ್ತುತಿ ಸೀತು ಮದುವೆ .ಅಂದಿನ ಕನ್ನಡದ ಹಾಸ್ಯ ಚಕ್ರವರ್ತಿ ಬೀಚಿ ಅವರ ಸಣ್ಮ ಕಥೆಯನ್ನು ನಾಟಕ ರೂಪದಲ್ಲಿ ಪ್ರಸ್ತುತ ಪಡಿಸಿದ ಶೈಲೇಶ್ ಅವರ ಸೈಡ್ ಸೈಡ್ ವಿಂಗ್ ತಂಡ ಅಭಿನಂದನಾರ್ಹರು. ಭಾಷಾ ಶುದ್ಧತೆ, ಸಮಯೋಚಿತ ಸಂಭಾಷಣೆ, ನಾಟಕವನ್ನು ಅಂತ್ಯದವರೆಗೂ ಜೀವಂತವಾಗಿಟ್ಟು ಹಾಸ್ಯದ ನಗೆಗಡಲಲ್ಲಿ ತೇಲಿಸುತ್ತದೆ.
ಅಭಿನಯದಲ್ಲಿ ಭರತ್ ಅಜ್ಜಿಯ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ನಾಟಕದ ಜೀವಾಳವಾಗಿದ್ದಾನೆ. ನಟ ಭಯಂಕರ, ನಟ ರಾಕ್ಷಸ!!!! ತನ್ನ ಜೀವಂತಿಕೆಯಿಂದ ಮಿಕ್ಕೆಲ್ಲಾ ಪಾತ್ರಗಳನ್ನು ಬಡಿದು ಬಾಯಿಗೆ ಹಾಕ್ಕೊಂಡಿದ್ದಾನೆ. ವಿನಾ ವೆಂಕಟೇಶಂ ನನತೋ ನನಾತಃ ಅನ್ನುವ ಬದಲು ವಿನಾ ಭರತಂ ನನತೋ ನ ನಾಟಕಃ ಅನ್ನುವುದು ಸೂಕ್ತವೇನೋ. ಅಭಿನವ ಪಂಡರೀಬಾಯಿ ಆಸ್ಥಾನ ಕಲಾವಿದೆ ಲತಾ ಮೇಡಂ ಅವರು ಸೀತುನ ಶರೀರವನ್ನು ಆಗಾಗ ಕೆಡಿಸಿದ್ದರೂ ತಮ್ಮ ಅಭಿನಯವನ್ನು ಎಲ್ಲೂ ಕೆಡಿಸಲಿಲ್ಲ. ಸಿಂಚನ ಅಲಿಯಾಸ್ ಸೀತು ಹಿಂದಿ ಭಾಷೆಯಲ್ಲಿ ಪ್ರವೀಣೆ, ಸಂಗೀತ ಕಲಾನಿಧಿ ಪುರಂದರದಾಸರ ಕಾಲದ ಅಜ್ಜಿಯ ಮೊಮ್ಮಗಳು, ಸಹಜ ಅಭಿನಯ.. ಮನ ಸೆಳೆಯುತ್ತಾಳೆ. ಪ್ರತಿಭಾನ್ವಿತ ಕಲಾವಿದೆ.
ಮಿಕ್ಕೆಲ್ಲಾ ಕಲಾವಿದರೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. “ಹೊಸ ಚಿಗುರು, ಹಳೇ ಬೇರು ಕೂಡಿರಲು ಮರ ಸೊಬಗು” ಕವಿವಾಣಿ… “ಹಾಡು ಹಳೆಯದಾದರೇನು ಭಾವ ನವನವೀನ” ಗೀತೆ.. ಎಲ್ಲವೂ ಮೇಳೈಸಿತ್ತು… ನಾವು ಕೊಟ್ಟಿದ್ದನ್ನು ಪ್ರೇಕ್ಷಕ ಸ್ವೀಕರಿಸಬೇಕು ಎನ್ನುವ ಅಹಂಗಿಂತ ಪ್ರೇಕ್ಷಕ ಏನು ಬಯಸುತ್ತಾನೋ ಅದನ್ನು ಕೊಡುವ ಕಲೆ ಶೈಲೇಶ್ ತಂಡಕ್ಕೆ ಚೇನ್ನಾಗಿ ಗೊತ್ತಿದೆ. ತುಂಬಿದ ಗೃಹ, ಸಂತೃಪ್ತ ಪ್ರೇಕ್ಷಕರೇ ಇದಕ್ಕೆ ಸಾಕ್ಷಿ. ಫುಲ್ ಪೈಸಾ ವಸೂಲ್. ಮಾಲಾ – ಶೈಲೇಶ್ ಹಾಗೂ ತಂಡಕ್ಕೆ ಅಭಿಮಾನಪೂರ್ವಕ ವಂದನೆಗಳು.
ಬೀಚಿಯವರು ಜೀವನದ ಮಹೋನ್ನತ ಫಿಲಾಸಫಿಗಳನ್ನು ಮೊನಚಾದ ಹಾಸ್ಯದ ಲೇಪನದೊಂದಿಗೆ ತಮ್ಮ ಬರಹಗಳ ಮೂಲಕ ಬಿತ್ತಿದವರು. ಆ ಕಾರಣಕ್ಕಾಗಿಯೇ ಅವರು ಸುಲಭವಾಗಿ ನಾಟಕಕ್ಕೆ ದಕ್ಕುವವರಲ್ಲ. ನಿನ್ನೆ ಸೀತು ಮದುವೆಗೆ ಹೋದ ಮೇಲೆ ಬೀಚಿಯವರ ನಾಟಕವೊಂದನ್ನು ರೂಪಾಂತರಿಸಿ ರಂಗದ ಮೇಲೆ ತಂದ ವೈಖರಿ ವಿಸ್ಮಯಗೊಳಿಸಿತು. ಅಸ್ಖಲಿತ ಸಂಭಾಷಣೆಗಳನ್ನು ಬದಲಾಯಿಸಿಕೊಂಡು ಎಂಟು ಮಂದಿ ಕಲಾವಿದರು ನಾಟಕದುದ್ದಕ್ಕೂ ಪ್ರೇಕ್ಷಕರಲ್ಲಿ ನಗೆಯ ಅಲೆಗಳನ್ನು ಹಬ್ಬಿಸುತ್ತಾ ಸಾಗಿದರು. ಮೂರು ತಲೆಮಾರುಗಳೊಳಗೆ ನಡೆಯುವ ವಿದ್ಯಮಾನಗಳನ್ನು ಕಾಲದೊಂದಿಗೆ ಬದಲಾಗುವ ಸಾಂಸಾರಿಕ, ಸಾಮಾಜಿಕ ಬದಲಾವಣೆಗಳಿಗೆ ನಾಟಕ ಸಾಕ್ಷಿಯಾಗುತ್ತದೆ. ತಂಡದ ರೂವಾರಿ ದಂಪತಿಗಳಾದ ಶೈಲೇಶ್ ಕುಮಾರ್ ಮತ್ತು ಮಾಲಾ ಶೈಲೇಶ್ ಅವರಿಗೆ ಹಾಗೂ ನಾಟಕದ ಪೂರ್ಣ ಪ್ರಮಾಣದ ಜೀವಂತಿಕೆಗೆ ಕಾರಣರಾದ ಕಲಾವಿದರಿಗೂ, ನೇಪಥ್ಯದ ಹೊಣೆಗಾರಿಕೆಯನ್ನು ನಿರ್ವಹಿಸಿದವರಿಗೂ ಅಭಿನಂದನೆಗಳು.
ಸೀತು ಮದುವೆ ಬಗ್ಗೆ: ಮದುವೆಯನ್ನೂದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಅಂತಾರೆ. ಅದಕ್ಕೆ ಎನೋ ಕೆಲವರಿಗೆ ಸ್ವರ್ಗ ಸೇರೋವರಿಗೂ ಮದ್ವೆನೇ ಆಗೋದಿಲ್ಲ. ಆ ಕಾಲ, ಅರವತ್ತರ ಆಸುಪಾಸಿನಲ್ಲಿ ಇಪ್ಪತ್ತರ ಹರೆಯದ ಹೆಣ್ಣಿಗೆ ಮದುವೆಯಾಗಿಲ್ಲ ಅಂದ್ರೆ! ಛೆ ಛೆ.. ಎಂಥಾ ಅಪರಾಧ.. ದೊಡ್ಡ ಕನಸುಗಳನ್ನು ಹೊತ್ತು ಮದುವೆಯೆಂದರೆ ಮೂತಿ ಮುರಿಯೋ ಮದುವೆ ಹುಡುಗಿ ಒಂದೆಡೆ.. ಆಕೆಗೆ ಮದುವೆ ಮಾಡುವುದನ್ನೇ ದೊಡ್ಡ ಕನಸಾಗಿಸಿಕೊಂಡ ಮನೆಯವರು ಒಂದೆಡೆ..ಈ ಎರಡೆಡೆಯಲ್ಲಿರುವವರು ಒಂದೆಡೆಗೆ ಸೇರುತ್ತಾರೋ? ಬೀಚಿಯವರ ಕಚಗುಳಿಯಿಡುವ ಸಾಲುಗಳೊಂದಿಗೆ ಅರವತ್ತರ ಆಸುಪಾಸಿನ ರಸವತ್ತಾದ ಕಥನ ! “ಸೀತೂ ಮದುವೆ !?”
ರಚನೆ – ನಿರ್ಮಾಣ – ನಿರ್ದೇಶನ : ಶೈಲೇಶ್ ಕುಮಾರ್ ಎಂ.ಎಂ.
ಉದ್ಯಮಿಯಾಗಿದ್ದು ರಂಗಭೂಮಿಯಲ್ಲಿನ ಆಸಕ್ತಿಯಿಂದಾಗಿ ರಂಗಭೂಮಿಯಲ್ಲಿ ಡಿಪ್ಲೋಮ ಪದವಿ ಪಡೆದು, ಸತತವಾಗಿ ನಾಟಕಗಳನ್ನು ಮಾಡುವ ನಿಟ್ಟಿನಲ್ಲಿ ಸಮಾನ ಮನಸ್ಕರೊಂದಿಗೆ ಸೇರಿ ” ಸೈಡ್ ವಿಂಗ್ ” ತಂಡವನ್ನು ಆರಂಭಿಸಿದರು. ಮಕ್ಕಳಿಗಾಗಿ ಅನೇಕ ನಾಟಕ ಬರೆದಿರುವ ಇವರು ಹಿರಿಯರಿಗಾಗಿ “ಸಡನ್ನಾಗ್ ಸತ್ತೋದ್ರೆ… ! ? “, “ಕನ್ನಡಿಯೋಳಗಿನ್ಕರ್ದಂಟು ” ಯಶಸ್ವಿ ಪ್ರದರ್ಶನಗಳನ್ನು ಕಾಣುತ್ತಿದ್ದು ಇವರು ರಚಿಸಿ ನಿರ್ದೇಶಿಸಿರುವ ” ಇಲ್ಲ… ಅಂದ್ರೆ… ಇದೆ ? ” ನಾಟಕವು 80ಕ್ಕೂ ಹೆಚ್ಚು ಪ್ರದರ್ಶನಗಳನ್ನು ರಾಜ್ಯಾದ್ಯಂತ – ರಾಷ್ಟ್ರದ್ಯಂತ ಸಮಾರಂಭಗಳಲ್ಲಿ, ರಾಷ್ಟ್ರೀಯ ನಾಟಕೋತ್ಸವದಲ್ಲಿ ಕಂಡು ಮನ್ನಣೆಗಳಿಸಿದೆ.
ತಂಡ : ಸೈಡ್ ವಿಂಗ್ ಬೆಂಗಳೂರು
ರಂಗಭೂಮಿಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಆರಂಭವಾದ ತಂಡ “ಸೈಡ್ ವಿಂಗ್ “. ಆರಂಭವಾದ ನಾಲ್ಕೇ ವರ್ಷದಲ್ಲಿ 12ಕ್ಕೂ ಹೆಚ್ಚಿನ ನಾಟಕಗಳ 150ಕ್ಕೂ ಹೆಚ್ಚು ಪ್ರದರ್ಶನಗಳನ್ನು,6ಕ್ಕೂ ಹೆಚ್ಚು ಬೀದಿ ನಾಟಕಗಳ 50ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದೆ. “ಇಲ್ಯಾಡ್ಗಣ್ಣ” “ಕನ್ನಡಿಯೊಳಗಿನ್ಕರ್ದಂಟು”, “ಸಡನ್ನಾಗ್ ಸತ್ತೋದ್ರೆ..!?”, “ಇಲ್ಲ… ಅಂದ್ರೆ… ಇದೆ!” “ಸ್ವರ್ಗ “.”ಈ ಪ್ರೇಮಲೋಕದಾ ಗೀತೆಯೂ ” ನಾಟಕಗಳೊಡನೆ ಡಾ ll ಗಿರೀಶ್ ಕರ್ನಾಡ್ ಅವರ ರಚನೆಯ ಕಡೆಯ ನಾಟಕ “ರಾಕ್ಷಸ – ತಂಗಡಿ ” ಶ್ರೀ ಕುವೆಂಪು ವಿರಚಿತ ” ಶ್ರೀ ರಾಮಾಯಣ ದರ್ಶನಮ್ ” ನ ಆಯ್ದ ಭಾಗ ” ದಶಾನನ ಸ್ವಪ್ನ ಸಿದ್ಧಿ “ನಾಟಕಗಳನ್ನು ರಂಗದ ಮೇಲೆ ತಂದಿದೆ. ಡಾ ll ಚಂದ್ರಶೇಖರ ಕಂಬಾರ ಅವರ ರಚನೆಯ “ನಾಯೀಕತೆ ” ನಾಟಕವು ರಾಜ್ಯಮಟ್ಟದ ನಟಕೋತ್ಸವದಲ್ಲಿ “ಉತ್ತಮ ನಾಟಕ “ಸೇರಿ ಎಂಟು ಪ್ರಶಸ್ತಿಗಳನ್ನು ಪಡೆದಿದೆ. ಹಾಗೂ ಪ್ರತಿಷ್ಠಿತ “ರಂಗಭೂಮಿ ಉಡುಪಿ” ಸಂಸ್ಥೆ ಆಯೋಜಿಸುವ ನಾಟಕ ಸ್ಪರ್ಧೆಯಲ್ಲಿ ಮೂರು ಪ್ರಶಸ್ತಿಗಳನ್ನು ಪಡೆದಿದೆ. ಇನ್ನು ಹೆಚ್ಚಿನ ನಾಟಕಗಳ ಪ್ರಯೋಗಗಳ ಯೋಜನೆಯೊಂದಿಗೆ ತಂಡ ಮುನ್ನುಗ್ಗುತ್ತಿದೆ.