ಮಂಗಳೂರು : ಮಂಗಳೂರು ಪ್ರೆಸ್‌ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾದ ‘ಮಂಗಳೂರು ಪ್ರೆಸ್‌ಕ್ಲಬ್ ಗೌರವ ಅತಿಥಿ’ ಕಾರ್ಯಕ್ರಮವು ಪತ್ರಿಕಾ ಭವನದಲ್ಲಿ ದಿನಾಂಕ 30-04-2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಸ್ಥಾಪಕಾಧ್ಯಕ್ಷ, ಪ್ರಸಿದ್ಧ ಭಾಗವತ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ “ಸಾಂಸ್ಕೃತಿಕ ಲೋಕಕ್ಕೆ ಅದ್ವಿತೀಯ ಕೊಡುಗೆ ನೀಡಿರುವ ಕರಾವಳಿಯ ಹೆಮ್ಮೆಯ ಯಕ್ಷಗಾನ ಕಲೆಯನ್ನು ಉಳಿಸಿ, ಬೆಳೆಸುವ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಯಕ್ಷ ಶಿಕ್ಷಣ ನೀಡಲು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮುಂದಾಗಿದೆ. ಈಗಾಗಲೇ 4 ಸಾವಿರಕ್ಕೂ ಅಧಿಕ ಮಕ್ಕಳಿಗೆ ತರಬೇತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅವರಿಗೆ ವೇದಿಕೆ ಒದಗಿಸುವ ಪ್ರಯತ್ನವೂ ನಡೆಯಲಿದೆ. ಈಗಾಗಲೇ ಆಳ್ವಾಸ್ ಶಿಕ್ಷಣ ಫೌಂಡೇಶನ್ ಸಹಯೋಗದಲ್ಲಿ ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ ಯಶಸ್ವಿಯಾಗಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಹೆಚ್ಚಿನ ಸೌಲಭ್ಯಗಳು ಇರುವುದಿಲ್ಲ. ಅವರಿಗೆ ಬಾಲ್ಯದಲ್ಲೇ ಯಕ್ಷಗಾನದ ಬಗ್ಗೆ ಜ್ಞಾನ ಹಾಗೂ ಅಭಿರುಚಿ ಮೂಡಿಸುವುದು ಟ್ರಸ್ಟಿನ ಉದ್ದೇಶವಾಗಿದೆ. ಹಿರಿಯ ಕಲಾವಿದರ ಪೈಕಿ ಕೆಲವರು ಶಾಲಾ ಶಿಕ್ಷಣ ಪಡೆಯದಿದ್ದರೂ ರಂಗದಲ್ಲಿ ಅದ್ಭುತ ಭಾಷಾ ಪಾಂಡಿತ್ಯ, ವಾಕ್ ಚಾತುರ್ಯದ ಮೂಲಕ ಪ್ರಸಿದ್ಧಿ ಸಂಪಾದಿಸಿದ್ದಾರೆ. ಅದುವೇ ಯಕ್ಷಗಾನದ ಕಲೆಗೆ ಇರುವ ಶಕ್ತಿ. ದಶಕಗಳ ಹಿಂದೆ ಯಕ್ಷಗಾನ ಕಲಾವಿದರು ಕನಿಷ್ಠ ಸಂಬಳ ಪಡೆದು ಮೇಳದಲ್ಲಿ ಕೆಲಸ ಮಾಡುತ್ತಿದ್ದರು. ಆದರೂ ತಮ್ಮ ಕುಟುಂಬದ ನಿರ್ವಹಣೆಯ ಜತೆ ಕಲೆಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಕಲಾವಿದರು ಯಾವುದೇ ತೊಂದರೆಗೊಳಗಾದರೆ ಬದುಕು ಸಾಗಿಸುವುದೇ ಕಷ್ಟಕರವಾಗಿತ್ತು ಇಂತಹ ಸ್ಥಿತಿಯನ್ನು ಕಂಡು ಕಲಾವಿದರಿಗೆ ಯಾವುದಾದರೂ ರೀತಿಯಲ್ಲಿ ಸಹಾಯ ಮಾಡಬೇಕೆನ್ನುವ ಆಶಯ ಉಂಟಾಯಿತು. ದೇವರ ದಯೆಯಿಂದ ನನ್ನನ್ನು ಪ್ರೀತಿಸುವ ಯಕ್ಷಗಾನ ಕಲೆಯನ್ನು ಗೌರವಿಸುವ ದೊಡ್ಡ ಜನ ಸಮೂಹದ ಬೆಂಬಲ ನನಗೆ ದೊರೆಯಿತು. ಇದರಿಂದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪನೆ ಮಾಡಲಾಯಿತು” ಎಂದು ಹೇಳಿದರು.
ಹಿರಿಯ ಪತಕರ್ತ ಯು.ಕೆ. ಕುಮಾರನಾಥ್ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟಿನ ಅಧ್ಯಕ್ಷ ರಾಮಕೃಷ್ಣ ಆರ್. ಕಾರ್ಯಕ್ರಮ ಸಂಯೋಜಕ ದಯಾ ಕುಕ್ಕಾಜೆ, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು. ಪ್ರೆಸ್‌ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಡಸ್ಥಳ ವಂದಿಸಿ, ಜಿತೇಂದ್ರ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿದರು.