ಇವರು ಮಡಿಕೇರಿ ತಾಲೂಕು ಚೇರಂಬಾಣೆ-ಕೋಪಟ್ಟಿ ಗ್ರಾಮದ ಕೊಟ್ಟು ಕತ್ತೀರಾ ಕಾರ್ಯಪ್ಪ ಮತ್ತು ರಾಗಿಣಿ ದಂಪತಿಯರ ಪುತ್ರ. ತಮ್ಮ ವಿದ್ಯಾಭ್ಯಾಸವನ್ನು ಕಾಲೂರು ಹಾಗೂ ಗಾಳಿಬೀಡು ಶಾಲೆಯಲ್ಲಿ ಮುಗಿಸಿ 1983ರಲ್ಲಿ ಭಾರತೀಯ ಸೇನೆಗೆ ಸೇರಿ ಜಮ್ಮು, ಕಾಶ್ಮೀರ, ಪಂಜಾಬ್ ಬ್ಲೂ ಸ್ಟಾರ್, ಗ್ವಾಲಿಯರ್, ಐ. ಪಿ. ಕೆ. ಎಫ್, ಶ್ರೀಲಂಕಾ ಮತ್ತು ನಾರ್ತ್ ಈಸ್ಟ್ ಸೆಕ್ಟರ್, ಅರುಣಾಚಲ ಪ್ರದೇಶ, ಅಸ್ಸಾಂ, ನಾಗಾಲ್ಯಾಂಡ್ ಗ್ರಿಪ್ ಲ್ ಡೆಪ್ಯೂಟೇಷನ್ ಮತ್ತು ರಾಜಸ್ತಾನ್, ಪಂಜಾಬ್ ಬಾರ್ಡರ್, ಕಾರ್ಗಿಲ್ ಯುದ್ದದ ಸಂದರ್ಭದಲ್ಲಿ ಅಟ್ಯಾಚ್ಮೆಂಟ್ ಆಗಿ ಕೆಲಸ ಮಾಡಿರುತ್ತಾರೆ. 2000ರಲ್ಲಿ ಸೇನಾ ನಿವೃತ್ತಿ ಹೊಂದಿ ಬೆಂಗಳೂರಿನ ಜಾಲಹಳ್ಳಿಯಲ್ಲಿ ‘ಸ್ವಸ್ತಿಕ್ ಕನ್ಸ್ಟ್ರಕ್ಷನ್ ಮತ್ತು ಸ್ವಸ್ತಿಕ್ ಕಾಂಕ್ರೀಟ್ ಪ್ರಾಡಕ್ಟ್’ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ಕನ್ನಡ ಭಾಷೆಯಲ್ಲಿ ‘ಬೈಸಿಕಲ್’, ‘ವೀರ ಚಕ್ರ’, ‘ಮೋಹ ಪಾಶ’ ಹಾಗೂ ‘ಕರಗಿದ ಬದುಕು’ ಎನ್ನುವ 4 ಕೃತಿಗಳನ್ನು ರಚಿಸಿ ಲೋಕಾರ್ಪಣೆ ಮಾಡಿದ್ದಾರೆ. ಇವರು ಕೊಡವ ಭಾಷೆಯಲ್ಲಿ ಬರೆದ ‘ವಿಧಿರ ಕಳಿಲ್’ ಎನ್ನುವ ಕಾದಂಬರಿಯು ‘ಪೋಮ್ಮಲೆ ಕೊಡಗ್’ ಎನ್ನುವ ಕೊಡವ ಸಿನಿಮಾವಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಳ್ಳಲಿದೆ. ಅಲ್ಲದೆ ‘ಪೊಲಂದ ಬಾಳ್’ ಎನ್ನುವ ಕೊಡವ ಕಥೆ ಪುಸ್ತಕ ಹಾಗೂ ‘ಪ್ರೇಮದ ಹಾದಿಯಲ್ಲಿ’ ಎಂಬ ಕನ್ನಡ ಕಥಾ ಪುಸ್ತಕ ಅಚ್ಚಿನಲ್ಲಿದ್ದು ಲೋಕಾರ್ಪಣೆಗೊಳ್ಳಲು ಸಿದ್ಧಗೊಂಡಿದೆ.
ಇವರು ಗ್ವಾಲಿಯರ್‌ನಲ್ಲಿ ಆರ್ಮಿ ಯೂನಿಟ್‌ನ ಭಾಜ್ ಥಿಯೇಟರ್ ವರ್ಕ್ಸ್ ಮಾಡುತ್ತಿರುವ ಸಮಯದಲ್ಲಿಯೇ ನಾಟಕದ ಹುಚ್ಚನ್ನು ಹಚ್ಚಿಕೊಂಡವರು.. ನಂತರ ಬೆಂಗಳೂರಿನಲ್ಲಿ ಕೊಡಗಿನ ಸಿನಿಮಾ ನಿರ್ದೇಶಕರಾದ ಅಪಾಡಂಡ ಟಿ. ರಘು ಇವರ 3 ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಜೊತೆಗೆ 16 ಚಲನಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿರುತ್ತಾರೆ, ತಾವೇ ಸ್ವಂತವಾಗಿ ‘ಸ್ವಸ್ತಿಕ್ ಎಂಟರ್ಟೈನ್ಮೆಂಟ್’ ಮತ್ತು ‘ಕೂರ್ಗ್ ಕಾಫಿ ವುಡ್ ಮೂವೀಸ್’ ಎಂಬ ಸ್ವಂತ ಪ್ರೊಡಕ್ಷನ್ ಸಂಸ್ಥೆಯನ್ನು ಪ್ರಾರಂಭಿಸಿದರು. ಈ ಮುಖಾಂತರ ‘ಬಾಕೆ ಮನೆ’, ‘ಕೊಡಗ್‌ರ ಸಿಪಾಯಿ’, ‘ನಾಡ ಪೆದ ಆಶಾ’, ‘ಆಶ್ರಯ ಧಾಮ’, ‘ಮೇಸ್ಟ್ರು ದೇವರು’, ‘ಸ್ಮಶಾನ ಮೌನ’, ‘ಮಕ್ಕಳ ತೀರ್ಪು’, ‘ಪರ್ಜನ್ಯ’, ‘ಧೀಕ್ಷಾ’, ‘ಸತ್ತ ಸೂತಕದ ಸುತ್ತ’ ಹಾಗೂ ‘ಅಬ್ದುಲ್ಲಾ’ .ಎಂಬ ಕನ್ನಡ ಹಾಗೂ ಕೊಡವ ಭಾಷೆಯೂ ಸೇರಿ 11 ಚಲನಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ‘ಸ್ಮಶಾನ ಮೌನ’, ‘ಬಾಕೆ ಮನೆ’, ‘ಕೊಡಗ್‌ರ ಸಿಪಾಯಿ’ ಹಾಗೂ ‘ನಾಡ ಪೆದ ಆಶಾ’ ಎಂಬ 4 ಚಿತ್ರಗಳು ಕಲ್ಕತ್ತಾ ಹಾಗೂ ಬೆಂಗಳೂರು ಅಂರ‍್ರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿರುತ್ತವೆ. ಅಶ್ರಯ ಧಾಮ ಕನ್ನಡ ಚಲನಚಿತ್ರ 2017ರ ‘ಅತ್ಯುತ್ತಮ ಮಕ್ಕಳ ಚಿತ್ರ’ ಪ್ರಶಸ್ತಿಗೆ ಭಾಜನವಾಗಿದೆ. ‘ಅಬ್ದುಲ್ಲಾ’ ಚಲನಚಿತ್ರದ ನಿರ್ಮಾಪಕ ಪಾಲುದಾರರಾಗಿದ್ದು ‘ದೀಕ್ಷಾ’ ಮಕ್ಕಳ ಚಲನಚಿತ್ರ, ‘ಪರ್ಜನ್ಯ’ ಕನ್ನಡ ಚಿತ್ರದ ನಿರ್ಮಾಪಕರಾಗಿದ್ದು, ‘ಮಕ್ಕಳ ತೀರ್ಪು’ ಮತ್ತು ‘ನಾಡ ಪೆದ ಆಶಾ’ ಚಿತ್ರದ ನಿರ್ದೇಶಕರಾಗಿರುತ್ತಾರೆ. ನಾಲ್ಕು ಕೊಡವ ಸಿನಿಮಾ ನಿರ್ಮಿಸಿ ನಿರ್ದೇಶನ ಮಾಡಿದ ಮೊದಲ ಡೈರೆಕ್ಟರ್ ಮತ್ತು ಪ್ರೊಡ್ಯೂಸರ್ ಎಂಬ ಹೆಗ್ಗಳಿಕೆ ಇವರದಾಗಿದೆ. ಪ್ರಕಾಶ್ ಕಾರ್ಯಪ್ಪನವರ ಅಭಿಮಾನಿಗಳು ಕೊಡವ ಸಿನಿ ರಂಗದ ಭೀಷ್ಮ ಎಂದು ಬಣ್ಣಿಸುತ್ತಿದ್ದಾರೆ. ‘ನಾಡಪೆದ ಆಶಾ’ ಸಿನಿಮಾ ಜಿಲ್ಲೆಯಲ್ಲಿ 123 ಯಶಸ್ವಿ ಪ್ರದರ್ಶನ ಕಂಡಿದ್ದು ದಾಖಲೆ ನಿರ್ಮಿಸಿದೆ. ಈ ಹಿಂದೆ ಇವರ ‘ಕೊಡಗ್ ರ ಸಿಪಾಯಿ’ 108 ಪ್ರದರ್ಶನದ ದಾಖಲೆಯನ್ನು ಮುರಿದಿದೆ. ಪ್ರಸ್ತುತ ‘ಪೊಮ್ಮಾಲೆ ಕೊಡಗ್’ ಎನ್ನುವ ಕೊಡವ ಸಿನಿಮಾ ನಿರ್ಮಾಣ ಮತ್ತು ನಿರ್ದೇಶನ ನಿರ್ವಹಿಸಿದ್ದಾರೆ. ಕೊಡವ ಭಾಷೆಯ ಸಿನಿಮಾಗಳಲ್ಲಿ ಪದ್ಧತಿ ಪರಂಪರೆ ಸಂಸ್ಕೃತಿಯನ್ನು ಅಳವಡಿಸಿಕೊಂಡು ತೆರೆಗೆ ತರುವುದರ ಮುಖಾ೦ತರ ಕೊಡವ ಭಾಷೆಯನ್ನು ದೇಶ ವಿದೇಶಗಳಲ್ಲಿ ಗುರುತಿಸುವ ಕೆಲಸವನ್ನು ಮಾಡುತ್ತಿದ್ದಾರೆ. ‘ವಿಧಿರ ಕಳಿ’, ‘ಪೊಲ್ಂದ ಬಾಳ್’,’ಬೇರ್’ ಮತ್ತು ‘ನಾಡ ಕೊಡಗ್’ ಎಂಬ ಕೊಡವ ಭಾಷೆಯ ಕೃತಿಗಳು, ‘ಕರಗಿದ ಬದುಕು’, ‘ವೀರ ಚಕ್ರ’, ‘ಮೋಹ ಪಾಶ’, ‘ಪ್ರೇಮದ ಹಾದಿಯಲ್ಲಿ’ ಹಾಗೂ ’ಹೊಂಬೆಳಕು’ ಕನ್ನಡ ಕೃತಿಗಳನ್ನು ಇತ್ತೀಚೆಗೆ ಲೋಕಾರ್ಪಣೆ ಮಾಡಿದ್ದಾರೆ. ಇವುಗಳಲ್ಲಿ ಹಲವು ಕಥೆಗಳನ್ನು ಚಲನಚಿತ್ರ ಮಾಡಿದ್ದಾರೆ. ಜೊತೆಗೆ ಯಾವುದೇ ಪ್ರಚಾರವಿಲ್ಲದೆ ಹಲವು ಸಾಮಾಜಿಕ ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪತ್ನಿ ಶ್ರೀಮತಿ ಯಶೋದ ಮತ್ತು ಎರಡು ಹೆಣ್ಣು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಇವರ ಮುಂದಿನ ಎಲ್ಲ ಕಾರ್ಯಗಳು ಮತ್ತು ಬದುಕು ಜನಾನುರಾಗಿಯಾಗಲೆಂದು ಹಾರೈಸೋಣ ಬನ್ನಿ.