ಕುರುಡಪದವು : ಕುರಿಯ ವಿಠಲ ಶಾಸ್ತ್ರೀ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಕುರುಡಪದವು ಇದರ ವತಿಯಿಂದ ಸಂಸ್ಮರಣೆ, ಸಮ್ಮಾನ ಮತ್ತು ಯಕ್ಷಗಾನ ಬಯಲಾಟ ಪ್ರದರ್ಶನವು ದಿನಾಂಕ 10-05-2024ರಂದು ಸಂಜೆ ಗಂಟೆ 3-00ರಿಂದ ಕುರುಡಪದವು ಕುರಿಯ ವಿಠಲ ಶಾಸ್ತ್ರೀ ಸ್ಮಾರಕ ಪ್ರೌಢ ಶಾಲೆಯಲ್ಲಿ ಜರಗಲಿದೆ.
ಈ ಕಾರ್ಯಕ್ರಮದಲ್ಲಿ ದಿವಂಗತ ಕುರಿಯ ವಿಠಲ ಶಾಸ್ತ್ರೀ, ದಿವಂಗತ ನೆಡ್ಲೆ ನಹಸಿಂಹ ಭಟ್ಟ ಹಾಗೂ ದಿವಂಗತ ಕರುವೋಳು ದೇರಣ್ಣ ಶೆಟ್ಟಿ ಇವರ ಸಂಸ್ಮರಣಾ ಕಾರ್ಯಕ್ರಮ ನಡೆಯಲಿದೆ. ಇದೇ ಸಮಾರಂಭದಲ್ಲಿ ಖ್ಯಾತ ಸ್ತ್ರೀ ವೇಷಧಾರಿ ಶ್ರೀ ಪುಂಡರೀಕಾಕ್ಷ ಉಪಾಧ್ಯಾಯ ಅವರಿಗೆ ‘ವಿಠಲ ಶಾಸ್ತ್ರಿ ಪ್ರಶಸ್ತಿ’, ಹಿರಿಯ ಮದ್ಲೆಗಾರ ಶ್ರೀ ಮೋಹನ ಶೆಟ್ಟಿಗಾರು ಮಿಜಾರು ಅವರಿಗೆ ‘ನೆಡ್ಲೆ ನರಸಿಂಹ ಭಟ್ಟ ಪ್ರಶಸ್ತಿ’, ಕೋಟಿ ಖ್ಯಾತಿಯ ಶ್ರೀ ಕೆ.ಎಚ್. ದಾಸಪ್ಪ ರೈ ಅವರಿಗೆ ‘ದೇರಣ್ಣ ದೇರಣ್ಣ ಶೆಟ್ಟಿ ಪ್ರಶಸ್ತಿ’ ಪ್ರದಾನ ನಡೆಯಲಿದೆ. ಯಕ್ಷಗಾನ ಸಂಘಟಕ ಪಣಂಬೂರು ಮಧುಕರ ಭಾಗವತರು ಅಧ್ಯಕ್ಷತೆ ವಹಿಸಲಿರುವರು. ಸಂಸ್ಮರಣ ಮತ್ತು ಅಭಿನಂದನ ಭಾಷಣವನ್ನು ಡಾ. ಮುರಳೀಧರ ಶೆಟ್ಟಿ ಮಾಡಲಿರುವರು.
ಗಂಟೆ 3-00ರಿಂದ ಪುತ್ತೂರಿನ ವೈಷ್ಣವಿ ನಾಟ್ಯಾಲಯ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಇವರ ವಿದ್ಯಾರ್ಥಿಗಳಿಂದ ‘ನೃತ್ಯಾರ್ಪಣಂ’ ಭರತನಾಟ್ಯ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಕುರಿಯ ವಿಟ್ಠಲ ಶಾಸ್ತ್ರೀ ಸ್ಮಾರಕ ಲಲಿತಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ‘ಗಿರಿಜಾ ಕಲ್ಯಾಣ’, ‘ಕಾರ್ತವೀರ್ಯಾರ್ಜುನ ಕಾಳಗ’, ‘ಭಾರ್ಗವ ವಿಜಯ’ ಮತ್ತು ‘ಅಗ್ರ ಪೂಜೆ’ ಎಂಬ ಪ್ರಸಂಗಗಳ ಯಕ್ಷಗಾನ ಬಯಲಾಟ ಜರಗಲಿದೆ.