ಕೋಟ : ಕೋಟ ಹಂದಟ್ಟಿನಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಹಿತೈಷಿಗಳು ಹಮ್ಮಿಕೊಂಡ ಸೂರ್ಯನಾರಾಯಣ ಉರಾಳ ಸನ್ಮಾನ ಮತ್ತು ಯಕ್ಷಗಾನ ಕಾರ್ಯಕ್ರಮವು ದಿನಾಂಕ 01-05-2024 ರಂದು ಉರಾಳಕೇರಿ ಹಂದಟ್ಟುವಿನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಹಂದಟ್ಟು ಸೂರ್ಯನಾರಾಯಣ ಉರಾಳ ದಂಪತಿಗಳನ್ನು ಸನ್ಮಾನಿಸಿ ಮಾತನಾಡಿದ ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪ ಕುಮಾರ್ ಕಲ್ಕೂರ “ಆಧುನಿಕ ಸೌಲಭ್ಯಗಳಿಲ್ಲದ ಕಾಲದಲ್ಲಿ ಬದುಕಿನ ವೈಯಕ್ತಿಕ ಸುಖ ಸಂತೋಷವನ್ನೆಲ್ಲ ತೊರೆದು ಸಮರ್ಪಣಾ ಭಾವದಿಂದ ಸೇವೆ ಮಾಡಿದ ಕಲಾವಿದರು, ಸಂಘಟಕರು ಹಾಗೂ ಪರಿಚಾರಕರಿಂದಾಗಿ ಯಕ್ಷಗಾನ ಕಲೆ ಇಲ್ಲಿಯವರೆಗೆ ಶ್ರೀಮಂತವಾಗಿ ಉಳಿದಿದೆ. ಶ್ರೀಯುತರು ಬಡಗುತಿಟ್ಟಿನ ಹಲವು ವೃತ್ತಿ ಮೇಳಗಳಲ್ಲಿ ಮೂರು ದಶಕಗಳ ಕಾಲ ತ್ಯಾಗ ಮನೋಭಾವನೆಯಿಂದ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದು ಮಾತ್ರವಲ್ಲದೆ ಕಳಕಳಿಯೊಂದಿಗೆ ಸಾಮಾಜಿಕ ಸಾರ್ಥಕ ಜೀವನವನ್ನೂ ನಡೆಸಿದ್ದಾರೆ. ಯಕ್ಷಾರಾಧಕರಾಗಿರುವ ಉರಾಳರ ಸಾಧನೆ ಅನನ್ಯವಾದುದು ಹಾಗೂ ಅವರ ವೈಯಕ್ತಿಕ ಬದುಕು, ವೃತ್ತಿ ಬದುಕು ಹಾಗೂ ಸಾಮಾಜಿಕ ಬದುಕು ಎಲ್ಲರಿಗೂ ಅನುಕರಣೀಯವಾದುದು.” ಎಂದು ಹೇಳಿದರು.
ಬಂಗಾರದ ಸರ, ಉಂಗುರ, ಬೆಳ್ಳಿಯ ಹರಿವಾಣ ಮತ್ತು ರೂಪಾಯಿ 1 ಲಕ್ಷ ನಗದು ನೀಡಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಉರಾಳ ಕುಟುಂಬಸ್ಥರ ಪರವಾಗಿ ಅಮೃತೇಶ್ವರಿ ಮೇಳದ ಚಂಡೆವಾದಕ ಜನಾರ್ದನ ಆಚಾರ್ ಅವರನ್ನು ಗೌರವಿಸಲಾಯಿತು.
ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಎಸ್. ಕಾರಂತ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯಕ್ಷಗಾನ ವಿಮರ್ಶಕ ಸುರೇಂದ್ರ ಪಣಿಯೂರು, ಗೋಳಿಗರಡಿ ಮೇಳದ ಯಜಮಾನ ವಿಠಲ ಪೂಜಾರಿ, ಕಲಾ ಸಾಹಿತಿ ಜನಾರ್ದನ ಹಂದೆ, ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಪತಿ ಹೇರ್ಳೆ, ವಿವಾಹ ಸಂಪರ್ಕ ವೇದಿಕೆ ಹಂದಟ್ಟಿನ ಶ್ರೀನಿವಾಸ ಭಟ್, ದಾನಗುಂದು ಹಂದಟ್ಟು ಗೆಳೆಯರ ಬಳಗ ಯುವಕ ಸಂಘದ ಪ್ರಕಾಶ, ಬಾರಿಕೆರೆ ಯುವಕ ಮಂಡಲದ ರವೀಂದ ಕುಂದರ್, ಅಭಿಮಾನ ಫ್ರೆಂಡ್ ನಾಗಬನ ಹಂದಟ್ಟು ಇದರ ಅಧ್ಯಕ್ಷರಾದ ವಿಶ್ವನಾಥ ಪೂಜಾರಿ, ಸ್ಥಳೀಯರಾದ ಆನಂದ ಉರಾಳ, ಸುದರ್ಶನ ಉರಾಳ, ಮಂಜುನಾಥ ಉರಾಳ, ಕೂಟ ಮಹಾಜಗತ್ತು ಸಾಲಿಗ್ರಾಮದ ಅಧ್ಯಕ್ಷ ಸತೀಶ ಹಂದೆ ಉಪಸ್ಥಿತರಿದ್ದರು.
ಮಯ್ಯ ಯಕ್ಷ ಬಳಗ ಹಾಲಾಡಿಯ ರಾಘವೇಂದ್ರ ಮಯ್ಯ ಅಭಿನಂದನಾ ಮಾತುಗಳನ್ನಾಡಿದರು. ಮಣಿಪಾಲ ಕೆ. ಎಂ. ಸಿ. ಯ ಡಾ. ಕೌಶಿಕ್ ಉರಾಳ ಸ್ವಾಗತಿಸಿ, ಉಡುಪಿ ಎಂ. ಜಿ. ಎಂ. ಕಾಲೇಜಿನ ಉಪನ್ಯಾಸಕ ರಾಘವೇಂದ್ರ ತುಂಗ ನಿರೂಪಿಸಿದರು.
ಸನ್ಮಾನ ಕಾರ್ಯಕ್ರಮದ ಬಳಿಕ ಬೆಂಗಳೂರಿನ ಹಾಗೂ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಯಕ್ಷದೇಗುಲದ ಕಲಾವಿದರು ಪ್ರಸ್ತುತಪಡಿಸಿದ, ಕೆ. ಮೋಹನ್ ನಿರ್ದೇಶನದ ‘ಪಾಂಚಜನ್ಯ’ ಯಕ್ಷಗಾನ ಬಯಲಾಟವು ಸುದರ್ಶನ ಉರಾಳರ ಸಂಯೋಜನೆಯಲ್ಲಿ ಪ್ರದರ್ಶನಗೊಂಡಿತು. ಯಕ್ಷಗಾನದಲ್ಲಿ ಕಲಾವಿದರಾಗಿ ರಾಘವೇಂದ್ರ ಮಯ್ಯ ಹಾಲಾಡಿ, ಚಂದ್ರಕಾಂತ ಮೂಡುಬೆಳ್ಳೆ, ಲಂಬೋದರ ಹೆಗಡೆ ನಿಟ್ಟೂರು, ರಾಘವೇಂದ್ರ ಹೆಗಡೆ ಯಲ್ಲಾಪುರ, ಶಿವಾನಂದ ಕೋಟ, ಸುದೀಪ್ ಉರಾಳ, ಸ್ಕಂದ ಉರಾಳ, ತಮ್ಮಣ್ಣ ಗಾಂಪೈರ್, ಆದಿತ್ಯ ಭಟ್, ಸ್ಫೂರ್ತಿ ಭಟ್, ದಿನೇಶ್ ಕನ್ನಾರ್, ಜಯರಾಮ ಕೊಠಾರಿ, ರಾಘವೇಂದ್ರ ತುಂಗ, ರಾಜು ಪೂಜಾರಿ, ಉದಯ ಭೋವಿ ಭಾಗವಹಿಸಿದ್ದರು.