ಉದ್ಯಾವರ : ಉದ್ಯಾವರ ಮಾಡ ಶ್ರೀ ದೈವಗಳ ಜಾತ್ರಾ ಮಹೋತ್ಸವದ ಪೂರ್ವಭಾವಿಯಾಗಿ ಹರಿಕಥಾ ಪರಿಷತ್ ಸಹಯೋಗದೊಂದಿಗೆ ಆಯೋಜಿಸಿದ ‘ಹರಿಕಥಾ ಸಪ್ತಾಹ’ದ ಉದ್ಘಾಟನಾ ಸಮಾರಂಭವು ದಿನಾಂಕ 01-05-2024ರಂದು ಉದ್ಯಾವರ ಮಾಡ ಶ್ರೀ ದೈವಗಳ ಕ್ಷೇತ್ರದ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಅರಸು ಮಂಜಿಸ್ನಾರ್ ಶ್ರೀ ದೈವಗಳ ಕ್ಷೇತ್ರದ ಆಡಳಿತ ಮೊಕ್ತೇಸರ ಕಿರಣ್ ಶೆಟ್ಟಿ “ನಮ್ಮ ಸಾಂಸ್ಕೃತಿಕ ಪರಂಪರೆಯಲ್ಲಿ ಸಮಾಜಕ್ಕೆ ಭಕ್ತಿ ಶ್ರದ್ಧೆಗಳ ಸುಸಂಸ್ಕೃತ ಜೀವನ ಸಂದೇಶ ನೀಡುವ ಕಲೆ ಹರಿಕಥೆ ಆಗಿದೆ. ಜಾತ್ರೆಯಲ್ಲಿ ಬಂದು ಭಾಗವಹಿಸುವ ಭಕ್ತರಿಗೆ ಅದರ ಉದ್ದೇಶ ಮತ್ತು ಇನ್ನಷ್ಟು ಆಧ್ಯಾತ್ಮ ಸಂಗತಿಗಳ ತಿಳುವಳಿಕೆಗಾಗಿ ವಿವಿಧ ಹರಿಕಥಾ ಕಲಾವಿದರಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.” ಎಂದರು.
ಹರಿಕಥಾ ಪರಿಷತ್ ಅಧ್ಯಕ್ಷ ಕೆ. ಮಹಾಬಲ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅರಸು ಮಂಜಿಸ್ನಾರ್ ವ್ಯಾಯಾಮ ಶಾಲೆಯ ಅಧ್ಯಕ್ಷ ಸದಾನಂದ ಮಾಡ, ಶ್ರೀ ದೈವಗಳ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಹರ್ಷಿತ್ ಮಾಡ, ನಿವೃತ್ತ ಅಧ್ಯಾಪಕ ಈಶ್ವರ ಮಾಸ್ಟರ್ ಅತಿಥಿಗಳಾಗಿ ಭಾಗವಹಿಸಿದ್ದರು. ಉತ್ಸವ ಸಮಿತಿಯ ಸಂಜೀವ ಶೆಟ್ಟಿ, ಹರಿಕಥಾ ಪರಿಷತ್ತಿನ ನಾರಾಯಣ್ ರಾವ್, ಶ್ರೀನಿವಾಸ ಭಟ್ ಕಣ್ವತೀರ್ಥ ಮತ್ತಿತರರು ಉಪಸ್ಥಿತರಿದ್ದರು. ಶ್ರೀ ದೈವಗಳ ಉತ್ಸವ ಸಮಿತಿ ಅಧ್ಯಕ್ಷ ಹರೀಶ್ ಮಾಡ ಸ್ವಾಗತಿಸಿ, ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಹರಿದಾಸ ತೋನ್ಸೆ ಪುಷ್ಕಳ ಕುಮಾರ್ ಅವರಿಂದ “ಭಕ್ತ ಸುಧಾಮ” ಹರಿಕಥೆ ಜರಗಿತು. ಇವರಿಗೆ ಹಿನ್ನೆಲೆಯಲ್ಲಿ ಶ್ರೀಪತಿ ಭಟ್ ಹಾಗೂ ಕೌಶಿಕ್ ಮಂಜನಾಡಿ ಸಹಕರಿಸಿದರು.