ಕಾಸರಗೋಡು : ಬೇಕಲದ ಗೋಕುಲಂ ಗೋಶಾಲೆಯಲ್ಲಿ ದಿನಾಂಕ 08-05-2024ರಿಂದ 16-05-2024ರ ತನಕ ಗೆಜ್ಜೆಯ ನಾದ ಕೇಳಿಬರಲಿದೆ. ಕಾಸರಗೋಡು ಜಿಲ್ಲೆಯ ಮೊದಲ ದೇಶೀಯ ನೃತ್ಯೋತ್ಸವ ಇದಾಗಿದ್ದು, ಪ್ರತೀವರ್ಷ ದೀಪಾವಳೀ ಸಂಗೀತೋತ್ಸವವನ್ನು ನಡೆಸಲಾಗುತ್ತಿದೆ. ಈ ಬಾರೀ ಅದಕ್ಕೂ ಮೊದಲು ಒಂಭತ್ತು ದಿನಗಳ ದೇಶೀಯ ನೃತ್ಯೋತ್ಸವ ಜರಗಲಿದೆ. ಪ್ರತೀದಿನ ಸಂಜೆ 5ರಿಂದ 9 ಗಂಟೆಯ ತನಕ ನಡೆಯುವ ನೃತ್ಯೋತ್ಸವದಲ್ಲಿ ದೇಶದ ಹೆಸರಾಂತ ಕಲಾವಿದರು ಪಾಲ್ಗೊಳ್ಳಲಿದ್ದಾರೆ.
ಪ್ರತೀವರ್ಷ ಪೆರಿಯ ಗೋಕುಲಂ ಗೋಶಾಲೆಯಲ್ಲಿ ದೀಪಾವಳಿ ಸಂಗೀತೋತ್ಸವವು ವಿಜೃಂಭಣೆಯಿಂದ ಜರಗುತ್ತಿದ್ದು ಭಾರತದ ನಾನಾ ಭಾಗಗಳಿಂದ ನುರಿತ ಸಂಗೀತ ಕಲಾವಿದರು ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನೃತ್ಯಕಲಾವಿದರಿಗೂ ಅವಕಾಶವನ್ನು ಕಲ್ಪಿಸುವ ಸಲುವಾಗಿ ದೇಶೀಯ ನೃತ್ಯೋತ್ಸವ 9 ದಿನಗಳ ಕಾಲ ನಡೆಯಲಿದೆ. ದಿನಾಂಕ 08-05-2024ರಂದು ಸಂಜೆ 5ರಿಂದ ಗಾಯತ್ರಿ ರಾಜಾಜಿ, ತೀರ್ಥ ಇ.ಪೊದುವಾಳ್, ವರ್ಷಾ ರಾಜಕುಮಾರ್, ಕಲಾಕ್ಷೇತ್ರ ಎಂ.ಎಸ್. ಸನೀಶ್ ಅವರಿಂದ ಭರತನಾಟ್ಯ ನಡೆಯಲಿದೆ. ಮೇ.16ರ ತನಕ ಮುಂದುವರಿಯಲಿರುವ ನೃತೋತ್ಸವದಲ್ಲಿ ದೇಶದ ನಾನಾ ಭಾಗಗಳ 372 ಮಂದಿ ನೃತ್ಯ ಕಲಾವಿದರು ಪಾಲ್ಗೊಳ್ಳಲಿದ್ದಾರೆ.
ಪೆರಿಯ ಗೋಕುಲಂ ಗೋಶಾಲೆಯು ಕೇವಲ ಒಂದು ಕಪಿಲ ಹೋರಿ ಮತ್ತು ವೆಚೂರ್ ತಳಿಯ ಹಸುವಿನೊಂದಿಗೆ ಪ್ರಾರಂಭವಾಗಿದ್ದು, ಇಂದು ಸುಮಾರು 200ಕ್ಕೂ ಹೆಚ್ಚು ವಿವಿಧ ದೇಶೀಯ ತಳಿಯ ಗೋವುಗಳ ಆವಾಸ ಸ್ಥಾನವಾಗಿದೆ. ಗೋಶಾಲೆಯ ಮಧ್ಯದಲ್ಲೇ ನಡೆಯುವ ಸಂಗೀತೋತ್ಸವ, ನೃತ್ಯದ ಸಂದರ್ಭ ಗೋವುಗಳೂ ತಲೆದೂಗಿಸುವುದು, ಆಸ್ವಾದಿಸುವುದನ್ನು ಕಣ್ತುಂಬಿಕೊಳ್ಳಬಹುದಾಗಿದೆ. 2021ರಲ್ಲಿ ವಿಷ್ಣುಪ್ರಸಾದ ಹೆಬ್ಬಾರ್ ಅವರ ನೇತೃತ್ವದಲ್ಲಿ ವೇದ-ವೇದಾಂಗ ವಿದ್ಯೆಗಳನ್ನು ಕಲಿಸುವ ನಿಟ್ಟಿನಲ್ಲಿ ಪರಂಪರಾ ವಿದ್ಯಾಪೀಠವನ್ನು ಸ್ಥಾಪಿಸಲಾಯಿತು. ಗೋಶಾಲೆಯ ಡಾ. ನಾಗರತ್ನ ಹೆಬ್ಬಾರ್ ಅವರೊಂದಿಗೆ ಪ್ರಸಿದ್ಧ ಕಲಾವಿದರಾದ ಪಯ್ಯನ್ನೂರು ಗೋವಿಂದ ಪ್ರಸಾದ್ ಹಾಗೂ ಕರ್ನಾಟಕ ಸಂಗೀತಗಾರ್ತಿ ವೈಷ್ಣವಿ ಆನಂದ್ ಅವರ ಮುಂದಾಳುತ್ವದಲ್ಲಿ ಗೋಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಸಿದ್ಧ ನೃತ್ಯಕಲಾವಿದೆ ಪದ್ಮವಿಭೂಷಣ ಡಾ. ಪದ್ಮಾಸುಬ್ರಹ್ಮಣ್ಯಂ ಅವರ ನಿರ್ದೇಶನದಲ್ಲಿ 9 ದಿನಗಳ ಕಾಲ ಸಂಜೆ 4ರಿಂದ ರಾತ್ರಿ 9ರ ತನಕ ಜರಗಲಿರುವ ನೃತ್ಯೋತ್ಸವದಲ್ಲಿ ಕೇರಳ, ಕರ್ನಾಟಕ, ಆಂದ್ರ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್ ಮೊದಲಾದ ರಾಜ್ಯಗಳಿಂದ ಪ್ರಸಿದ್ಧ ನೃತ್ಯಪಟುಗಳು ಕಲಾಸಕ್ತರ ಮನತಣಿಸಲಿದ್ದಾರೆ.