ಐವತ್ತರ ದಶಕದಲ್ಲಿ ಕನ್ನಡ ನವೋದಯ ಕಾವ್ಯವು ತನ್ನ ಸತ್ವವನ್ನು ಬಹುಮಟ್ಟಿಗೆ ಕಳೆದುಕೊಂಡಿದ್ದು ಕಾವ್ಯದಲ್ಲಿ ಏಕತಾನತೆ ಕಂಡುಬರತೊಡಗಿತ್ತು. ನಿಸರ್ಗ ಸೌಂದರ್ಯ, ಆದರ್ಶ ಪ್ರೇಮ, ದೇಶಭಕ್ತಿ ಮೊದಲಾದ ಆಶಯಗಳು ಬೇಂದ್ರೆ, ಕುವೆಂಪು, ಪು.ತಿ.ನ. ಇವರೆಲ್ಲರ ಹಾದಿಯಲ್ಲೇ ಪುನರುಕ್ತವಾಗುತ್ತಿದ್ದವು. ಕಾವ್ಯವು ತನ್ನ ಸಿದ್ಧ ಭಾಷೆಯಲ್ಲಿ ಆರಾಧನೆ-ಸಮರ್ಪಣ ಭಾವವನ್ನು ಬಿಟ್ಟು ಬೇರೆ ಯಾವ ಅನುಭವದ ವ್ಯಾಖ್ಯಾನಕ್ಕೂ ಎಡೆಗೊಡುತ್ತಿರಲಿಲ್ಲ. ಇಂಥ ಸಂದರ್ಭದಲ್ಲಿ ಗೋಪಾಲಕೃಷ್ಣ ಅಡಿಗರು ಹೊಸ ಕಾವ್ಯಭಾಷೆಯ ಮೂಲಕ ಹೊಸ ಅನುಭವ, ಭಾವನೆಗಳನ್ನು ವ್ಯಕ್ತಪಡಿಸತೊಡಗಿದರು. ನವೋದಯ ಕಾವ್ಯಕ್ಕೆ ಪ್ರತಿಕ್ರಿಯೆಯಾಗಿ ಬಂದ ನವ್ಯ ಕಾವ್ಯವು ಕ್ರಮೇಣ ಕನ್ನಡ ನಾಡಿನಾದ್ಯಂತ ಹಬ್ಬಿತು. ಕೇರಳದ ಭಾಗವಾಗಿರುವ ಕಾಸರಗೋಡಿನಲ್ಲಿ ನವ್ಯ ಸಾಹಿತ್ಯವನ್ನು ಕಟ್ಟಿ ಬೆಳೆಸುವ ಉದ್ದೇಶದಿಂದ ಕಾವ್ಯ ರಚನೆಯನ್ನು ಮಾಡಿದವರ ಪೈಕಿ ಎಂ. ಗಂಗಾಧರ ಭಟ್ಟರೂ ಒಬ್ಬರು.
ಅವರ ‘ನೆರಳು’ (1967) ಸಂಕಲನದಲ್ಲಿ ಎಲ್ಲ ಉದಯೋನ್ಮುಖ ಕವಿಗಳಲ್ಲಿರುವಂತೆ ನೋವು, ಹತಾಶೆ, ಹಟ ಮತ್ತು ಪ್ರತಿಭಟನೆಗಳಿವೆ. ಕಾವ್ಯದ ವಿನ್ಯಾಸದಲ್ಲಿ ಭಿನ್ನತೆಯನ್ನು ತರಬಯಸುವ ತುಡಿತವಿದೆ. ನವ್ಯ ಸಾಹಿತ್ಯವನ್ನು ಪ್ರಭಾವಿಸಿದ ಭ್ರಮ ನಿರಸನ, ಯಾಂತ್ರಿಕ ಜೀವನ, ಮೌಲ್ಯಗಳ ಅಳಿವು, ಯುದ್ಧಗಳು ತಂದ ಸಾವುನೋವುಗಳು ಅವರ ಕಾವ್ಯ ಸಂದರ್ಭಗಳನ್ನು ನಿರ್ಮಿಸಿವೆ. “ಅದರಲ್ಲಿ ಕವಿಯೊಬ್ಬನ ಪ್ರಥಮ ಸಂಕಲನದಲ್ಲಿ ಕಾಣಿಸಿಕೊಳ್ಳಬಹುದಾದ ಎಲ್ಲ ಬಗೆಯ ಚಡಪಡಿಕೆಗಳೂ ಇದ್ದವು. ಅದರಲ್ಲಿ ಭಾವಾಭಿವ್ಯಕ್ತಿಗಾಗಿ ನಡೆಸಿದ ಹೋರಾಟ ಗಮನಾರ್ಹವಾಗಿತ್ತು. ‘ನೆರಳು’, ‘ಮತ್ತೊಮ್ಮೆ ಮಗುವಾಗಿ’, ‘ಇಗೋ’ ಇಷ್ಟು ಮೊದಲಾದ ಕವನಗಳು ಸೀಮಿತ ಅರ್ಥದಲ್ಲಾದರೂ ಇಂದಿಗೂ ಖುಷಿ ಕೊಡುವ ಕವನಗಳಾಗಿವೆ” ಎಂದು ಸುಬ್ರಾಯ ಚೊಕ್ಕಾಡಿಯವರು ಮುನ್ನುಡಿಯಲ್ಲಿ ಅಭಿಪ್ರಾಯಪಟ್ಟದ್ದು ಗಮನಾರ್ಹವಾಗಿದೆ.
‘ಮುಪ್ಪಿಲ್ಲ ನೆನಪುಗಳಿಗೆ’ (1981) ಪ್ರಕಟವಾಗುವ ಹೊತ್ತಿಗೆ ನವ್ಯ ಸಾಹಿತ್ಯದ ವ್ಯಕ್ತಿ ಪ್ರಧಾನ ದೃಷ್ಟಿಕೋನ, ಭಾಷಾಶೈಲಿ ಮತ್ತು ವಸ್ತುವಿಚಾರಗಳೆಲ್ಲವೂ ಕಟು ಟೀಕೆಗೊಳಗಾಗಿದ್ದವು. ನವ್ಯ ಸಾಹಿತ್ಯವು ಜನಪರವಲ್ಲ. ಅದು ತನ್ನ ಸುತ್ತುಮುತ್ತಲನ್ನು ಗಮನಿಸುತ್ತಿಲ್ಲ. ನವ್ಯರು ತಮ್ಮ ಅಸ್ತಿತ್ವದ ಕುರಿತು ಮಾತ್ರ ಚಿಂತಿಸುತ್ತಾರೆ. ವಿಪರೀತ ಇಂಗ್ಲೀಷ್ ಮೋಹ ಮತ್ತು ವಿದೇಶೀ ಕೃತಿಗಳ ಅಂಧಾನುಕರಣೆಯೇ ಅವರ ಬಂಡವಾಳ. ನವ್ಯ ಕಾವ್ಯದ ವಸ್ತುಗಳಿಗೂ ನೆಲದ ವಾಸ್ತವಕ್ಕೂ ಸಂಬಂಧವಿಲ್ಲ. ಅವರ ಶೈಲಿ ಯಾರಿಗೂ ಅರ್ಥವಾಗುವುದಿಲ್ಲ. ಇಂಥ ಸಾಹಿತ್ಯದಿಂದಾಗಿ ಸಾಂಸ್ಕೃತಿಕ ವಿಸ್ಮೃತಿ ಹೆಚ್ಚಾಗುತ್ತದೆ ಎಂಬ ಆರೋಪಗಳು ಬೇರೂರಿದ್ದವು. ‘ಮುಪ್ಪಿಲ್ಲ ನೆನಪುಗಳಿಗೆ’ ಎಂಬ ಕೃತಿಯು ಈ ಹೇಳಿಕೆಯು ತಪ್ಪು ಎಂದು ಸಾಬೀತುಪಡಿಸಲು ಯತ್ನಿಸುವಂತಿದೆ. ಇಲ್ಲಿನ ‘ಐಸ್‌ಕೇಂಡಿಯವನು’ ಎಂಬ ಕವನವು ದೈನಂದಿನ ಬದುಕಿನ ಸಾಧಾರಣ ಸನ್ನಿವೇಶವೊಂದರಲ್ಲಿ ನಿಜ ಜೀವನದ ತತ್ವವನ್ನು ಹಿಡಿದಿಡುತ್ತದೆ. ಇತರರಿಗೆ ಕ್ಷುದ್ರಕ್ಷುಲ್ಲಕವೆಂದು ತೋರುವ ಐಸ್‌ಕ್ಯಾಂಡಿ ಮಾರುವವನ ಚಿತ್ರವನ್ನು ಸರಳ ಮಾತಿನಲ್ಲಿ ಕಟ್ಟಿಕೊಡುವುದರ ಜೊತೆಗೆ ಕೊಂಡವರ ಮತ್ತು ಕೊಳ್ಳಲಾಗದವರ ಅಸಹಾಯಕತೆಯ ಚಿತ್ರವೂ ನಿರ್ಮಾಣವಾಗಿ ಕ್ಷಣಿಕ ಸುಖವನ್ನೇ ಪರಮಾರ್ಥವೆಂದು ನಂಬುವ ಮನುಷ್ಯನ ವ್ಯರ್ಥ ಬದುಕಿನ ನಶ್ವರತೆಯು ಅನಾವರಣಗೊಳ್ಳುತ್ತದೆ. ಚೀಪಿದಷ್ಟೂ ಬಣ್ಣ ಕಳೆದುಕೊಂಡು ಬಿಳುಚಿಕೊಳ್ಳುವ ಐಸ್‌ಕ್ಯಾಂಡಿಯು ಮನುಷ್ಯನ ದೇಹ, ಅರ್ಥ ಕಳೆದುಕೊಳ್ಳುತ್ತಿರುವ ಜೀವನ ಮೌಲ್ಯಗಳಿಗೆ ಸಂಕೇತವಾದರೆ ಕೊನೆಗೆ ಕೈಯಲ್ಲಿ ಉಳಿಯುವ ಬಿದಿರುಕೋಲು ಜೀವನದ ಅಂತಿಮ ಸತ್ಯದ ಸೂಚಕವಾಗಿದೆ. ವಾಸ್ತವದಲ್ಲಿ ನಿಂತುಕೊಂಡು ಸತ್ಯದರ್ಶನವನ್ನು ಮಾಡುತ್ತಾ ವಾಸ್ತವದಾಚೆಗೂ ಕೈ ಚಾಚುತ್ತದೆ. ಇಲ್ಲಿನ ರೂಪಕವನ್ನು ಪಶ್ಚಿಮದಿಂದ ಎರವಲು ತಂದದ್ದಲ್ಲ. ಈ ನೆಲದಿಂದ ಸಹಜವಾಗಿ ಮೂಡಿಬಂದದ್ದು. ಅಂತೆಯೇ ವಾಸ್ತವ ಚಿತ್ರಗಳ ಹಿಂದಿನ ಸೂಕ್ಷ್ಮಗಳನ್ನು ಬೆಳಗಿಸಲು ಒತ್ತಾಯದ ಸಮಾಸಪದಗಳ ಬಳಕೆಯಾಗದಿರುವುದು ಉಲ್ಲೇಖನೀಯ. ಸರಳ ಮಾತುಗಳಲ್ಲೇ ಹೆಚ್ಚಿನ ಅರ್ಥವಂತಿಕೆಯನ್ನು ತರಬಹುದು ಎಂಬುದಕ್ಕೆ ಇವರ ಕವನಗಳು ಉದಾಹರಣೆಯಾಗುತ್ತವೆ.
ಗಂಗಾಧರ ಭಟ್ಟರ ಕವನಗಳಲ್ಲಿ ಕಂಡುಬರುವ ಪ್ರಮುಖ ಚಿಂತನೆಗಳೆಂದರೆ ಬದುಕಿನಲ್ಲಿ ಹಾಸುಹೊಕ್ಕಿರುವ ವ್ಯಂಗ್ಯ ವೈರುಧ್ಯಗಳು. ‘ಅಕಾಲ’, ‘ಅಪರಿಚಿತರು’, ‘ಪೇಟೆಯ ಸುಖ’, ‘ಕಾಟ’, ‘ಹೋದವರು’, ‘ಗಾಂಧಿ ಇದ್ದನೆ?’ ಮುಂತಾದ ರಚನೆಗಳು ಇದಕ್ಕೆ ಉದಾಹರಣೆಗಳಾಗಿವೆ. ಇವುಗಳು ಸಾಮಾಜಿಕ, ರಾಜಕೀಯ ಕ್ಷೇತ್ರಗಳ ದಯನೀಯ ಪರಿಸ್ಥಿತಿ ಮತ್ತು ಆಷಾಢಭೂತಿತನವನ್ನು ವಿಡಂಬಿಸುತ್ತಾ ಇವುಗಳ ನಡುವೆ ನಲುಗುವ ಜನಸಾಮಾನ್ಯರ ಬದುಕಿನ ಅರ್ಥವೇನು ಎಂದು ಪ್ರಶ್ನಿಸುತ್ತವೆ. ಈ ಪೈಕಿ ‘ಅಪರಿಚಿತರು’ ಮತ್ತು ‘ಹೋದವರು’ ಮುಂತಾದ ಕವನಗಳು ಕಾವ್ಯಾತ್ಮಕತೆಯನ್ನು ಮೀರದಿದ್ದರೂ ಹಲವೆಡೆ ವಾಚ್ಯವಾಗಿದೆ.
ನಾವು ಕಳೆದುಕೊಂಡದ್ದು
ಮಣ್ಣಡಿಗೆ ಬಿದ್ದ ಮೊಹೆಂಜೋದಾರೊಗಳನ್ನು
ಜನರನ್ನು ಮರೆತ ಶಹರುಗಳನ್ನು
ಕನಸಿನ ಮಧ್ಯೆ ಜಾರಿದ ವಾಸ್ತವಗಳನ್ನು
ಮಾತಿನ ಮಧ್ಯೆ ಸೋರಿದ ಮೌನಗಳನ್ನು (ಕಳೆದುಕೊಂಡದ್ದು)
ನಾವು ಕಳೆದುಕೊಂಡ ಸಂಸ್ಕೃತಿ, ಪರಂಪರೆ, ಮಾನವೀಯತೆ ಮತ್ತು ವಾಸ್ತವಗಳನ್ನು ಕೇವಲ ವೈಯಕ್ತಿಕ ಮಟ್ಟದಲ್ಲಿ ಗ್ರಹಿಸದೆ ಜನಾಂಗವೊಂದರ ಜೊತೆ ಬೆಸೆದುಕೊಂಡ ರೀತಿಯಲ್ಲಿ ಅವಲೋಕಿಸಿರುವುದು ಕವನದ ವ್ಯಾಪ್ತಿಯನ್ನು ಹಿಗ್ಗಿಸುತ್ತದೆ. ‘ಮುಪ್ಪಿಲ್ಲ ನೆನಪುಗಳಿಗೆ’ ಈ ಸಂಕಲನದ ಪ್ರಾತಿನಿಧಿಕ ಕವನ. ಇಲ್ಲಿ ನಾಯಕನು ವರ್ತಮಾನದ ಬದಲಾವಣೆಗಳನ್ನು ಅವಲೋಕಿಸುತ್ತಿದ್ದಂತೆ ಗತಕಾಲದ ನೆನಪುಗಳೂ ಕೆದರುತ್ತಾ ಹೋಗಿ ಎರಡೂ ಒಂದೇ ಪಾತಳಿಯಲ್ಲಿ ಕೆಲಸ ಮಾಡತೊಡಗುತ್ತವೆ. ಇಪ್ಪತ್ತು ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ನಾಯಕನು ಹಿಂತಿರುಗಿ ಬಂದಾಗ ಊರು ನಗರವಾಗಿ ಬದಲಾಗಿದೆ. ಅಸಾಧ್ಯ ವೇಗದಲ್ಲಿ ಚಿಮ್ಮುವ ವಾಹನಗಳ ದಟ್ಟಣೆ, ಗೂಡಂಗಡಿಯ ಜಾಗದಲ್ಲಿ ತಲೆಯೆತ್ತಿದ ಸುಸಜ್ಜಿತ ಹೋಟೆಲ್‌ಗಳು, ಹೆಂಡದ ಅಂಗಡಿಗಳು ಮತ್ತು ಬೀದಿಯ ಸಂದಿಗೊಂದಿಗಳಲ್ಲಿ ನಡೆಯುವ ಅನೈತಿಕ ವ್ಯವಹಾರಗಳನ್ನು ಕಂಡಾಗ ನಾಯಕನು ಈ ನೆಲ ತನ್ನದಲ್ಲ ಎಂದು ತಲ್ಲಣಿಸಿ ಒಮ್ಮೆಲೆ ಪರಕೀಯನೆನಿಸಿಕೊಳ್ಳುತ್ತಾನೆ. ಆದರೆ ತನ್ನ ಗೆಳತಿಯ ತಂದೆಯನ್ನು ಕಂಡಾಗ ಅವಳ ನೆನಪು ಮೂಡಿ ಮನಸ್ಸಿಗೆ ಹಿತವೆನಿಸುತ್ತದೆ. ನಾಯಕನು ತನ್ನ ಭೂತಕಾಲದ ನೆನಪಿಗೆ ಮರಳುವ ಮೂಲಕ ಮನಸ್ಸಿಗೆ ನಿರಾಳತೆಯನ್ನು ತಂದುಕೊಳ್ಳಲು ಯತ್ನಿಸಿದರೂ ವರ್ತಮಾನದ ಅರ್ಥಹೀನ ಬದುಕು ನಿರಂತರ ಕಾಡುತ್ತಲೇ ಇರುವುದರಿಂದ ಅವನು ಕೊನೆಯವರೆಗೂ ಪರಕೀಯನಾಗಿಯೇ ಉಳಿಯುತ್ತಾನೆ.
ಗಂಗಾಧರ ಭಟ್ಟರ ಮೂರನೇ ಸಂಕಲನ ‘ನಾಕ ನರಕ’ (1987) ನವ್ಯದೊಂದಿಗೆ ನವೋದಯದ ಸಾರವನ್ನು ಹೀರಿಕೊಂಡು ಮೈದಾಳಿದೆ. ಭಾವಗೀತೆಯ ಕಂಪು ಮತ್ತೆ ವ್ಯಾಪಿಸತೊಡಗಿದ ಹೊತ್ತಿಗೆ ಅರಳಿದ ಈ ಕಾವ್ಯ ಗುಚ್ಛದಲ್ಲಿ ‘ನಾಕ ನರಕ’, ‘ಎಲ್ಲಿರುವೆ ಆನಂದ ಬಾರಾ’, ‘ಹಾಡಿತು ಮೌನ’ ಮೊದಲಾದ ಸುಂದರ ಭಾವಗೀತೆಗಳಿವೆ. ‘ಗಾಂಪಗೀತೆ’, ‘ಸೇತುಬಂಧನ’, ‘ಹತ್ತನೆಯ ಅವತಾರ’, ಶಾಂತಿ, ತ್ರಿಮೂರ್ತಿಗಳಿಗೆ, ಬೆಳಗಿನ ಹೊತ್ತು, ಆತ್ಮಗತ ಮೊದಲಾದ ಕವನಗಳು ಛಂದೋಬದ್ಧವಾಗಿದ್ದರೂ ನವ್ಯಸಂವೇದನೆಯನ್ನು ಒಳಗೊಂಡಿವೆ. ಆ ಹೊತ್ತಿನಲ್ಲಿ ಪ್ರಾಸಬದ್ಧ ರಚನೆಗಳ ಮೂಲಕ ನವೋದಯ – ನವ್ಯಕ್ಕಿಂತ ಭಿನ್ನ ಸಂವೇದನೆಗಳನ್ನು ತುಂಬತೊಡಗಿದ ಎಚ್.ಎಸ್. ವೆಂಕಟೇಶಮೂರ್ತಿಯವರ ದಾರಿಗೆ ಬದಲಾಗಿ ಗಂಗಾಧರ ಭಟ್ಟರು ತಮ್ಮದೇ ಹಾದಿಯನ್ನು ನಿರ್ಮಿಸಿಕೊಳ್ಳುವ ಪ್ರಯತ್ನದಲ್ಲಿದ್ದರು ಎಂಬುದಕ್ಕೆ ‘ಇತಿಹಾಸ’ ಕವನವೇ ಸಾಕ್ಷಿ. ಇತಿಹಾಸವನ್ನು ವೈಭವೀಕರಿಸುತ್ತಾ ವರ್ತಮಾನದ ಬಗ್ಗೆ ಕುರುಡಾಗಿರುವ ನಮ್ಮ ಸಂಸ್ಕೃತಿ ಮತ್ತು ಶಿಕ್ಷಣ ಪದ್ಧತಿಯನ್ನು ಸೂಕ್ಷ್ಮವಾಗಿ, ಹರಿತವಾಗಿ ವಿಡಂಬಿಸುವ ಮೂಲಕ ನಾಡಿನ ಆರ್ಥಿಕ ಅಸಮಾನತೆಯ ಮೇಲೆ ಬೆಳಕು ಚೆಲ್ಲುವ ಈ ಕವನವು ಅವರ ಅನನ್ಯ ರಚನೆಗಳಲ್ಲೊಂದು.
ಹವಾ ನಿಯಂತ್ರಿತ ಸೌಧಗಳಲ್ಲಿ
ಬಿಸಿಕಾಯಗಳು ಬೆಸೆಯುತಿವೆ
ಸ್ಲಮ್ಮಿನ ಟಿನ್ನಿನ ಗುಡಿಸಲುಗಳಲಿ
ಜೀವಚ್ಛವಗಳು ಬೇಯುತಿವೆ (ಮುಂಬಯಿ ಗೀತೆ)
ಎಂಬ ಸಾಲುಗಳು ಆರ್ಥಿಕ ಅಸಮಾನತೆಯ ಕರಾಳ ವಿವರಗಳನ್ನು ಗಟ್ಟಿ ದನಿಯಲ್ಲಿ ಹೇಳುತ್ತವೆ. ಆದರೆ ‘ಖಡ್ಗವಾಗಲಿ ಕಾವ್ಯ’ ಎಂಬ ಆಶಯವು ಇಲ್ಲಿ ಕಾಣಸಿಗುವುದಿಲ್ಲ. ಯಾಕೆಂದರೆ
ನಮಗೆ ಗೊತ್ತು ನಿಮಗೂ ಗೊತ್ತು
ನಮ್ಮ ಶಬ್ದಗಳು ಯಾರ ಕದವನ್ನೂ ತಟ್ಟುವುದಿಲ್ಲ
ನಮ್ಮ ಅಕ್ಷರಗಳು ಯಾರ ಹೃದಯದಲ್ಲೂ ಬರೆಯುವುದಿಲ್ಲ
ಅವೆಲ್ಲ ನಿರ್ಜೀವ ಶಬ್ದಗಳು ಬರೇ ಶಬ್ದಗಳು (ಭಾವೈಕ್ಯವೆಂಬ ಹಳೆಯ ಹಾಡು)
ಸಮಾಜ ಎದುರಿಸುತ್ತಿರುವ ವ್ಯಾಪಕ ಭ್ರಷ್ಟಾಚಾರ, ಸುಲಿಗೆ, ಅನ್ಯಾಯಗಳ ವಿರುದ್ಧ ದನಿ ಎತ್ತುವ ಕವಿಯು ತನ್ನ ಅನುಭವಗಳನ್ನು ಸಶಕ್ತ ಭಾಷೆಯಲ್ಲಿ, ಸೂಕ್ತ ಆಕೃತಿಗಳಲ್ಲಿ ಕಟ್ಟಿಕೊಡುತ್ತಾ ನಮ್ಮ ಸಂವೇದನೆಯನ್ನು ಕೆದಕಿದರೂ ಅದರಿಂದ ಯಾವುದೇ ರೀತಿಯ ಸಾಮಾಜಿಕ-ರಾಜಕೀಯ ಬದಲಾವಣೆಯಾಗುವುದಿಲ್ಲ ಎಂಬ ವಿಷಾದವನ್ನು ಕಾಣುತ್ತೇವೆ.
ಗಂಗಾಧರ ಭಟ್ಟರು ಸೂಕ್ಷ್ಮ ಪ್ರಜ್ಞೆಯ ಕವಿ. ಅವರ ಕವನಗಳೆಂದರೆ ಬರೇ ಅನಿಸಿಕೆಯಲ್ಲ. ಭಾಷಣವಲ್ಲ. ಹರಟೆಯಲ್ಲ. ಅದು ಸಾಮಾಜಿಕ ರಾಜಕೀಯ ವಿದ್ಯಮಾನಗಳಿಗೆ ಸ್ಪಂದಿಸುವ ಜವಾಬ್ದಾರಿಯುತ ಕಾವ್ಯ.
ಡಾ. ಸುಭಾಷ್ ಪಟ್ಟಾಜೆ :
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡಿನ ಸರಕಾರಿ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ, ಡಾ. ಯು. ಮಹೇಶ್ವರಿಯವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು: ಒಂದು ತೌಲನಿಕ ಅಧ್ಯಯನ’ ಸಂಶೋಧನ ಮಹಾ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಬರೆದ ಕತೆ, ಕವನ, ಲೇಖನ ಮತ್ತು ಸುಮಾರು 200ಕ್ಕೂ ಹೆಚ್ಚು ಪುಸ್ತಕ ವಿಮರ್ಶೆಗಳು ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ ಮತ್ತು ಅಂತರ್ಜಾಲ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರವಾಗಿವೆ.
ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ), ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್ (ವ್ಯಕ್ತಿ ಚಿತ್ರಣ), ಕಥನ ಕಾರಣ (ಸಂಶೋಧನ ಕೃತಿ), ನುಡಿದು ಸೂತಕಿಗಳಲ್ಲ (ಸಂಪಾದಿತ) ಎಂಬ ಕೃತಿಗಳನ್ನು ಪ್ರಕಟಿಸಿರುವ ಇವರು ಕಾಸರಗೋಡು ಜಿಲ್ಲೆಯ ಶೇಣಿ ಗ್ರಾಮದ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯಾಪಕವಾದ ಓದು, ವಿಸ್ತಾರವಾದ ಅಧ್ಯಯನಕ್ಕೆ ಹೆಸರಾಗಿರುವ ಇವರು ಉತ್ಸಾಹಿ ಸಂಘಟಕರಾಗಿದ್ದು ನಾಡಿನ ವಿವಿಧೆಡೆಗಳಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಮುಂಚೂಣಿಯ ಪಾತ್ರವನ್ನು ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ವೇದಿಕೆಯ ಸಂಚಾಲಕರಲ್ಲಿ ಒಬ್ಬರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.