ಕಾಸರಗೋಡಿನ ಹಿರಿಯ ತಲೆಮಾರಿನ ಕವಿಗಳಲ್ಲಿ ಒಬ್ಬರಾದ ಕೃಷ್ಣ ಭಟ್ಟ ಪಟ್ಟಾಜೆಯವರ ‘ಭಾವಾಂಜಲಿ’ಯು ಉತ್ತಮ ಕವಿತೆಗಳ ಸುಂದರ ಗುಚ್ಛ. ಇಲ್ಲಿ ಕೆಲವನ್ನು ರಾಗಬದ್ಧವಾಗಿ ಹಾಡಬಹುದಾದರೆ ಮತ್ತೆ ಕೆಲವನ್ನು ಭಾವಬದ್ಧವಾಗಿ ಓದಬಹುದು. ಇವುಗಳ ಹೃದ್ಯವಾದ ಭಾವ ಸಾಮರಸ್ಯದಲ್ಲಿ ನವ್ಯ-ನವೋದಯಗಳ ಕಲ್ಪನೆಯೇ ಒಮ್ಮೆ ಮರೆತುಹೋಗುತ್ತದೆ. ‘ಒಂದು ರಾತ್ರೆ’, ‘ಹಾಡು ಕೋಗಿಲೆ’, ‘ಹೇಮಂತ’, ‘ನಲಿದಾಡು ಕಂದ’, ‘ಬಾ ಕಾಡಿಗೆ’ ಮೊದಲಾದ ಕವಿತೆಗಳು ಮೊದಲ ಓದಿಗೇ ಸುಲಭವಾಗಿ ತೆರೆದುಕೊಳ್ಳುತ್ತವೆ. ಒಳನೋಟ-ಹೊರನೋಟಗಳಲ್ಲಿ ಮುಚ್ಚುಮರೆ, ಸಂದಿಗ್ಧತೆ ಮತ್ತು ಕ್ಲಿಷ್ಟತೆಗಳಿಲ್ಲ. ಪ್ರತಿಮೆ-ಸಂಕೇತಗಳ ಹಂಗುತೊರೆದ ಸರಳ ಅಭಿವ್ಯಕ್ತಿಯೇ ಇಲ್ಲಿನ ಕವಿತೆಗಳ ವೈಶಿಷ್ಟ್ಯ.
ಹೊಗೆಯಾಡುತಿಹುದೊಂದು ಕಿಡಿಸಿಡಿಸಿದರದೆ ಸಾಕು
ಆಗ ನೋಡಲ್ಲೆಲ್ಲು ಅಗ್ನಿ ವರ್ಷ
ಆಸನ್ನವೈ ದೇವದಾನವರ ಯುದ್ಧವಿದು
ಯುದ್ಧ ಯಜ್ಞದ ಫಲವೇ ಲೋಕನಾಶ (ಶಾಂತಿ)
ಜಗತ್ತು ಎದುರಿಸುತ್ತಿರುವ ಬಹುಮುಖ್ಯ ಸಮಸ್ಯೆಯ ಬಗ್ಗೆ ಆತಂಕವನ್ನು ವ್ಯಕ್ತಪಡಿಸುವ ಈ ಸಾಲುಗಳು ಮನುಷ್ಯರ ನಡುವಿನ ಸ್ನೇಹದ ಬೆಸುಗೆಯನ್ನು ಇಲ್ಲವಾಗಿಸುತ್ತಿರುವ ಯುದ್ಧ ಮತ್ತು ಭಯೋತ್ಪಾದನೆಗಳನ್ನು ನೆನೆದು ತಲ್ಲಣಿಸುತ್ತವೆ. ಹೊತ್ತಿ ಉರಿಯುತ್ತಿರುವ ಯುದ್ಧಜ್ವಾಲೆಯ ಪರಿಣಾಮಗಳನ್ನು ಸೆರೆಹಿಡಿಯುತ್ತವೆ.
ಪೂರ್ವಜರ ವಿಮಲ ಸಚ್ಚಾರಿತ್ರ್ಯ ಮುಕುರಕ್ಕೆ
ಕರೆಗೊಡಲಾವ್ ಬಿಡೆವು ಧೀರರಾಗಿ
ಹೋರಾಡುವೆವು ನಿನ್ನ ಕಂಬನಿಯನ್ನೊರೆಸುವೆವು
ದುಡಿಯುವೆವು ಸತ್ಯಕ್ಕೆ ನ್ಯಾಯಕ್ಕಾಗಿ (ಭಾರತ ಮಾತೆಗೆ)
ಎಂಬ ಧೀರ ನುಡಿಯು ತಾಯ್ನಾಡಿನ ಬೇರನ್ನು ಅಲುಗಿಸುವ ದುಷ್ಟ ಶಕ್ತಿಗಳ ನಿಗ್ರಹಕ್ಕೆ ಕಟಿಬದ್ಧರಾಗುವ ವೀರ ಸಂಕಲ್ಪವನ್ನು ತೊಡುತ್ತದೆ. ಬಾಳ್ವೆಯ ನೋವನ್ನು ಕಂಡು ಮರುಗುವ ಕವಿಯ ಆರ್ದ ಹೃದಯವು ಸಮಾಜದ ದೌರ್ಜನ್ಯದ ವಿರುದ್ಧ ರೊಚ್ಚಿಗೇಳುವುದಿಲ್ಲ. ಆದ್ದರಿಂದ ಕವಿಗೆ ತಮ್ಮ ಕಾವ್ಯದಲ್ಲಿ ಸಂಯಮವನ್ನು ರೂಢಿಸಿಕೊಳ್ಳಲು ಸಾಧ್ಯವಾಗಿದೆ. ಕವಿತೆಗಳ ವಸ್ತು, ಭಾಷೆ, ಛಂದೋವಿನ್ಯಾಸ, ಧೋರಣೆ, ಮೌಲ್ಯ ವಿವೇಚನೆಗಳನ್ನು ಗಮನಿಸಿದರೆ ಕವಿಯು ನವೋದಯದ ಹಾದಿಯಲ್ಲಿ ಸಾಗಿರುವುದು ಸ್ಪಷ್ಟವಾಗುತ್ತದೆ. ಇವರ ಕಾವ್ಯವು ಪದಪ್ರಯೋಗದ ಹಿಡಿತ, ಅರ್ಥಭಾವಗಳ ಮಿಡಿತದ ಮೂಲಕ ಓದುಗರಲ್ಲಿ ಉಲ್ಲಾಸವನ್ನು ಮಾತ್ರ ಉಂಟು ಮಾಡದೆ ಬದುಕಿನ ಕುರೂಪ ಮತ್ತು ಕ್ಷುದ್ರತೆಗಳ ಕುರಿತು ಚಿಂತಿಸುವಂತೆ ಮಾಡುತ್ತದೆ.
ಇಲ್ಲಿ ಮಿಡಿಯುವ ನುಡಿಯು ಕನ್ನಡ
ಇಲ್ಲಿ ಮಿಡಿಯುವ ಹೃದಯ ಕನ್ನಡ
ಇಲ್ಲಿ ಯೋಚಿಪ ಮನಸು ಕನ್ನಡ
ಇಲ್ಲಿ ಕಾಣುವ ಕನಸು ಕನ್ನಡ (ಕಾಸರಗೋಡು)
ಮಾತೃಭೂಮಿಯಂತೆ ಮಾತೃಭಾಷೆಯ ಮೇಲಿನ ಪ್ರೀತಿ ಗೌರವಗಳು ಉಸಿರಾಟದಷ್ಟೇ ಸಹಜವಾದದ್ದು. ಅದನ್ನು ಉಳಿಸಿ ಬೆಳೆಸಬೇಕೆಂಬ ಆಶಯ ಇಲ್ಲಿದೆ. ನಿಸರ್ಗ, ದೇಶ, ಭಾಷೆ ಮುಂತಾದ ಪರಿಚಿತ ವಿಷಯಗಳನ್ನು ಆಯ್ದು ಆಕರ್ಷಕವಾಗಿ ನೇಯ್ದ ಕವಿತೆಯಲ್ಲಿನ ಸಾಲುಗಳು ತಮ್ಮ ತಾಯ್ನೆಲವಾದ ಕಾಸರಗೋಡು ಮತ್ತು ಮಾತೃ ಭಾಷೆಯಾದ ಕನ್ನಡದ ಮೇಲೆ ಕವಿಗಿರುವ ಉತ್ಕಟ ಅಭಿಮಾನವನ್ನು ಎತ್ತಿ ಹಿಡಿಯುತ್ತದೆ. ಗೋವಿಂದ ಪೈಯವರ ‘ತನು ಕನ್ನಡ ಮನ ಕನ್ನಡ ನುಡಿ ಕನ್ನಡವೆಮ್ಮವು’ ಎಂಬ ಸಾಲಿನ ಭಾವ ವಿಸ್ತಾರವೆಂಬಂತೆಯೂ ಕಂಡುಬರುತ್ತದೆ. ತನ್ನ ಉಸಿರಿನ ಕೊನೆಯ ಗಳಿಗೆಯವರೆಗೂ ಕನ್ನಡದ ದೀಕ್ಷೆಯನ್ನು ತೊಟ್ಟು, ಕನ್ನಡಮಾತೆಯ ದೇಗುಲದಲ್ಲಿ ನಂದಾದೀಪವನ್ನು ಹಚ್ಚಿಟ್ಟು, ಕಣ್ಣೀರ ಬಾಳುವೆಯಲ್ಲಿ ನವೆದು ಅಕಾಲದಲ್ಲಿ ಅಗಲಿ ಹೋದ ಮುದ್ದಣನ ಮರಣದಿಂದ ಕನ್ನಡ ಸಾರಸ್ವತ ಲೋಕಕ್ಕೆ ಉಂಟಾದ ನಷ್ಟ ಮತ್ತು ಜೀವನಸಾಧನೆಗಳನ್ನು ಕುರಿತ ವಿವರಗಳು ‘ನುಡಿನಮನ’ ಎಂಬ ಕವಿತೆಯ ಮೂಲಕ ವ್ಯಕ್ತವಾಗುತ್ತದೆ.
ಕವಿಯು ಕೃಷಿಯನ್ನು ಪರಿಭಾವಿಸಿದ, ಅರ್ಥಮಾಡಿಕೊಂಡ ಮತ್ತು ಅದರ ಸೂಕ್ಷ್ಮವನ್ನು ಅರಿತ ಕ್ರಮವನ್ನು ತಿಳಿದುಕೊಳ್ಳಬೇಕಾದರೆ ಕೆಳಗಿನ ಸಾಲುಗಳನ್ನು ಗಮನಿಸಬೇಕು.
ಬೇಸರದ ಕಳೆಕಿತ್ತು ನೇಗಿಲುಗುರಿಂದುತ್ತು
ಏರುತಗ್ಗುಗಳನ್ನು ಮುಟ್ಟಿ ಸವರಿ
ಬೆದೆಯರಿತು ಬೀಜವನು ಬಿತ್ತು ನೀ ಹದಗಾರ
ತಣಿಸು ನೆಲ ಜಲ ಸುರಿಯೆ ಮೈಯೆಲ್ಲ ಬೆವರಿ (ಬಾ ಕೃಷಿಕ)
ಆರ್ಥಿಕ ನಷ್ಟಕ್ಕೆ ಗುರಿಯಾಗಿ ಬೇಸಾಯಕ್ಕೆ ವಿಮುಖನಾಗಿರುವ ಕೃಷಿಕನನ್ನು ಮತ್ತೆ ಅದೇ ಕೆಲಸಕ್ಕೆ ಸೆಳೆಯಬಯಸುವ ಸಾಲುಗಳಂತೆ ಮೂಡಿದ ಕವಿತೆಯ ಆಳದಲ್ಲಿ ಕವಿಯು ಲೈಂಗಿಕ ಪ್ರತಿಮೆಯನ್ನು ಕಟ್ಟಿಕೊಟ್ಟಿರುವುದು ಗಮನಾರ್ಹ. ಇನಿಯನ ಬರವನ್ನು ಕಾದು ಮಲಗಿದ ಹೆಣ್ಣಿನ ಬಯಕೆಯ ಪ್ರತಿಫಲನವೆಂಬಂತೆಯೂ ಈ ಕವಿತೆಯನ್ನು ಪರಿಭಾವಿಸಬಹುದು.
ತ್ಯಾಗವೇ ಸುಖವು ಜನಸೇವೆಯೇ
ಸೌಖ್ಯವೈ ನಮ್ಮ
ತಾಯ್ನಾಡಿನುದ್ಧಾರಕಾಗಿ ದುಡಿ
ಯುವುದೊಂದೇ ಧರ್ಮ (ಸುಖ ಬಯಸಬೇಡ)
ಭೋಗವನ್ನು ಮೀರಿದ ಸುಖ ಬೇರೆಯೇ ಇದೆ ಎಂಬ ವಿಚಾರವನ್ನು ತಿಳಿಸುವ ಮೂಲಕ ಕವಿತೆಯು ವ್ಯಕ್ತಿಕೇಂದ್ರಿತ ನೆಲೆಯನ್ನು ದಾಟಿ ಸಾಮಾಜಿಕ ನೆಲೆಯತ್ತ ಹೊರಳುತ್ತದೆ. ‘ಭದ್ರಂ ಕರ್ಣೇಭಿ ಶ್ರುಣಯಾಮ’ ಎಂಬ ವೇದ ಮಂತ್ರವನ್ನು ಕನ್ನಡಕ್ಕೆ ಅನುವಾದಿಸಿದ ರೀತಿ ಬಹಳ ಸೊಗಸಾಗಿದೆ.
ನಮ್ಮ ಕಿವಿಗಳಿಂದ ಸದಾ ಒಳಿತ ಕೇಳುವ
ನಮ್ಮ ಚೆಲುವ ಕಂಗಳಿಂದ ಒಳಿತ ನೋಡುವ
ಒಳಿತಿನಿಂದ ಒಳಿತು ಹಬ್ಬಿ ಜಗದಿ ಬೆಳಗಲಿ
ದಾನವತ್ವ ನಾಶವಾಗಿ ಪ್ರೀತಿ ಬೆಳೆಯಲಿ
ಭಾಷಿಕ ಕಾರಣಗಳಿಂದಾಗಿ ಜನಸಾಮಾನ್ಯರಿಂದ ದೂರವಾಗಿರುವ ಸೂಕ್ತಿಗಳ ಸಂದೇಶ ಎಲ್ಲರಿಗೂ ಅರ್ಥವಾಗಲು ಇಂಥ ಸರಳ ಅನುವಾದದ ಅಗತ್ಯವಿದೆ. ‘ಹಿಮಶರ್ಕರ’ವು ಕಂದವೃತ್ತಗಳನ್ನು ಉಪಯೋಗಿಸಿ ರಚನೆಯಾಗಿದ್ದರೂ ಅದು ಐಸ್ ಕ್ಯಾಂಡಿ ಮಾರಾಟಗಾರ ಮತ್ತು ಕೊಳ್ಳುವವರ ಬಾಹ್ಯವಿವರಣೆಗಳಿಗಷ್ಟೇ ಸೀಮಿತವಾಗಿದೆ. ಸಾಮಾನ್ಯ ಸಂಗತಿಯೊಂದರ ನಿರೂಪಣೆಗಾಗಿ ಕವಿಯು ಹಳಗನ್ನಡ ಛಂದಸ್ಸನ್ನು ಶಕ್ತಿಮೀರಿ ದುಡಿಸಿಕೊಂಡಿದ್ದರೂ ವಿಶೇಷ ಒಳನೋಟವನ್ನು ನೀಡುವುದರಲ್ಲಿ ಯಶಸ್ವಿಯಾಗಿಲ್ಲ. ಹೊಸಗನ್ನಡ ಛಂದಸ್ಸಿನಲ್ಲಿರುವ ‘ಒಂದು ಕನಸು’ ಭ್ರಾಮಕ ವಾತಾವರಣವನ್ನು ನಿರ್ಮಿಸುವುದಕ್ಕೆ ಮಾತ್ರ ಕುತೂಹಲವನ್ನು ತಾಳಿದೆ. ನವೋದಯ ಮಾರ್ಗವು ಕವಿಗೆ ಹೆಚ್ಚು ಪ್ರಿಯವಾಗಿದ್ದರೂ ಕನ್ನಡ ಕಾವ್ಯವು ಹೊಸ ಹಾದಿಯ ಕಡೆ ತಿರುಗಿದ್ದರ ಕುರಿತು ಅವರಿಗೆ ಅರಿವಿಲ್ಲದೆ ಇಲ್ಲ. ‘ಸಂಜೆಸೂರ್ಯ’, ‘ವರ್ಷಋತು’, ‘ನಿರೀಕ್ಷೆ’ ಎಂಬ ಕವನಗಳು ನವ್ಯ ಎನ್ನಬಹುದಾದ ರೀತಿಯಲ್ಲಿ ಮೂಡಿ ಬಂದಿವೆ. ಆದರೆ ಬುದ್ಧಿಗಿಂತ ಭಾವಕ್ಕೇ ಮಹತ್ವ ಹೆಚ್ಚು. ಏನಿದ್ದರೂ ಇವರ ಕವಿತ್ವ ವ್ಯಕ್ತವಾಗುವುದು ನವೋದಯ ಮಾದರಿಯ ಕವಿತೆಗಳ ಮೂಲಕವೇ. ಸಾಮಾಜಿಕ ರಾಜಕೀಯ ಸಂದರ್ಭವನ್ನು ಬಯಲುಗೊಳಿಸುವ ಕೆಲವು ಚುಟುಕುಗಳೂ ಇಲ್ಲಿವೆ.
ಈ ಚುನಾವಣೆಯಲ್ಲಿ ತಾನೊಂದು ಪಕ್ಷ
ಮುಂದಿನ ಚುನಾವಣೆಗೆ ಮತ್ತೊಂದು ಪಕ್ಷ
ತತ್ವ ನಿಷ್ಠೆಗಳಿಲ್ಲ ಸ್ವಾರ್ಥವೇ ಲಕ್ಷ್ಯ
ಈ ಮಂದಿಯಿಂದಹುದೆ ದೇಶಕ್ಕೆ ಮೋಕ್ಷ
ಜನರಿಂದ ಚುನಾಯಿತರಾದ ಪ್ರತಿನಿಧಿಗಳೇ ಜನರ ಹಿತಾಸಕ್ತಿಗಳಿಗೆ ಅಡ್ಡಿ ಆತಂಕಗಳನ್ನು ಉಂಟುಮಾಡಿ ಬದುಕನ್ನು ದುಸ್ತರಗೊಳಿಸುವ ವಿರೋಧಾಭಾಸವನ್ನು ಕವಿ ಲೇವಡಿ ಮಾಡಿದ್ದಾರೆ. ಅಧಿಕಾರಕ್ಕೋಸ್ಕರ ತತ್ವನಿಷ್ಠೆಗಳನ್ನು ಮರೆತು ಪಕ್ಷದಿಂದ ಪಕ್ಷಕ್ಕೆ ನೆಗೆಯುವವರನ್ನು ಟೀಕಿಸಿದ್ದಾರೆ. ಇಲ್ಲಿನ ಚುಟುಕುಗಳು ದಿನಕರ ದೇಸಾಯಿಯವರನ್ನು ನೆನಪಿಸುವಂತಿದ್ದರೂ ತನ್ನದೇ ಆದ ಛಾಪು ಹೊಂದಿರುವುದನ್ನು ಅಲ್ಲಗೆಳೆಯುವಂತಿಲ್ಲ.
ಬಂಧ ಸಡಿಲವಾಗದೆ, ಅರ್ಥ ಜಾಳಾಗದೆ, ಮಾತು ಅತಿಯಾಗದೆ ಓದುಗರ ಮನಸ್ಸನ್ನು ಸೆರೆಹಿಡಿಯಬಲ್ಲ ಕವಿತೆಗಳು ಭಾವಾಂಜಲಿಯಲ್ಲಿವೆ. ಲಯ ಪ್ರಾಸಗಳ ಮೂಲಕ ಕಾವ್ಯದ ಅಂತರಂಗವನ್ನು ಹಂತ ಹಂತವಾಗಿ ಪ್ರವೇಶಿಸಲು ಸಹಕರಿಸುವ ಕವಿತೆಗಳು ಕೇವಲ ಭಾವಗಳನ್ನಲ್ಲದೆ ಬದುಕಿನ ಸಂಘರ್ಷ, ಸಂಕೀರ್ಣತೆಗಳನ್ನು ಅಭಿವ್ಯಕ್ತಿಸುತ್ತವೆ. ಸಮಾಜವು ಎದುರಿಸುತ್ತಿರುವ ಭಾವನಾತ್ಮಕ ತಳಮಳಗಳನ್ನು ಸ್ಪರ್ಶಿಸುತ್ತವೆ. ಸಮಕಾಲೀನ ಪ್ರಜ್ಞೆ, ಸಮಾಜ ವಿಮರ್ಶೆ, ಪರಿಸರದ ಬಗ್ಗೆ ಕಾಳಜಿ, ಸಾಂಸ್ಕೃತಿಕ ಜಾಗೃತಿ, ಸಾಮಾಜಿಕ ಸಂದೇಶ, ಆದರ್ಶವಾದ, ಹಿತೋಪದೇಶಗಳನ್ನು ಹೊಂದಿರುವ ಕವಿತೆಗಳಲ್ಲಿ ಉದಾತ್ತ ಚಿಂತನೆಯ ಹೊಳಹುಗಳಿವೆ. ಕವಿತೆಗಳು ನಿಗೂಢವಾಗಿ ಹೆಚ್ಚೇನೂ ಹೇಳದಿದ್ದರೂ ಬದುಕಿನಲ್ಲಿ ನಾವು ಅರ್ಥಮಾಡಿಕೊಳ್ಳದ, ತುರ್ತಾಗಿ ಅರ್ಥಮಾಡಿಕೊಳ್ಳಬೇಕಾದ ಅದೆಷ್ಟೋ ವಿಚಾರಗಳಿವೆ ಎಂಬುದನ್ನು ಶಕ್ತವಾಗಿ ಧ್ವನಿಸುತ್ತವೆ. ಇಂದಿನ-ಹಿಂದಿನ ಕಾವ್ಯಪರಂಪರೆಯ ಪರಿಚಯ ಮತ್ತು ಸಂಸ್ಕಾರಗಳಿಂದ ಪಕ್ವಗೊಂಡ ಕಾವ್ಯವು ಸುತ್ತಲಿನ ಆಗುಹೋಗುಗಳಿಗೆ ಸ್ಪಂದಿಸುವ ಸೂಕ್ಷ್ಮ ಸಂವೇದನೆಯನ್ನು ಪಡೆದುಕೊಂಡಿದೆ. ಅವರ ಮನಸ್ಸು ಪ್ರಾಸಪ್ರೀತಿಗೊಲಿದರೂ ಸಂಪ್ರದಾಯವಾದಿಯಾಗದೆ ಆಧುನಿಕ ಸಮಸ್ಯೆಗಳಿಗೆ ಸ್ಪಂದಿಸುತ್ತದೆ. ಕಾವ್ಯದ ವಿನ್ಯಾಸವು ಕನ್ನಡದಲ್ಲಿ ಈಗಾಗಲೇ ಆಗಿಹೋದ ನವೋದಯದ ಕೊಡುಗೆಗಳೆಂಬಂತೆ ತೋರಿದರೂ ಅವುಗಳು ಕವಿಯ ವಿಶಿಷ್ಟ ಅನುಭವ ಮತ್ತು ಒಳನೋಟಗಳನ್ನು ಹೊಂದಿವೆ. ನವ್ಯದ ನೆರಳಿನಲ್ಲಿ ಮೂಡಿದ ರಚನೆಗಳು ಗದ್ಯವೆನಿಸಿಕೊಳ್ಳದೆ ಚಲನಶೀಲತೆಯನ್ನು ಉಳಿಸಿಕೊಂಡಿವೆ. ಮಾನವೀಯತೆಯೇ ನಿಜವಾದ ಧರ್ಮ ಎಂದು ಕಾವ್ಯದ ಮೂಲಕ ಪ್ರತಿಪಾದಿಸಿದ ಭಾವಂಜಲಿಯು ಕನ್ನಡ ಸಾಹಿತ್ಯ ಲೋಕಕ್ಕೆ ಸಂದ ಅಮೂಲ್ಯ ಕಾಣಿಕೆಯಾಗಿದೆ.
ಪುಸ್ತಕದ ಹೆಸರು : ಭಾವಾಂಜಲಿ (ಕವನ ಸಂಕಲನ)
ಲೇಖಕರು ಮತ್ತು ಪ್ರಕಾಶಕರು : ವಿದ್ವಾನ್ ಕೃಷ್ಣ ಭಟ್ಟ ಪಟ್ಟಾಜೆ, ಪೆರಡಾಲ, ಕಾಸರಗೋಡು
ಪುಟಗಳು : 32
ಬೆಲೆ : 25 ರೂಪಾಯಿಗಳು
ಡಾ. ಸುಭಾಷ್ ಪಟ್ಟಾಜೆ :
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡಿನ ಸರಕಾರಿ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ, ಡಾ. ಯು. ಮಹೇಶ್ವರಿಯವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು: ಒಂದು ತೌಲನಿಕ ಅಧ್ಯಯನ’ ಸಂಶೋಧನ ಮಹಾ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಬರೆದ ಕತೆ, ಕವನ, ಲೇಖನ ಮತ್ತು ಸುಮಾರು 200ಕ್ಕೂ ಹೆಚ್ಚು ಪುಸ್ತಕ ವಿಮರ್ಶೆಗಳು ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ ಮತ್ತು ಅಂತರ್ಜಾಲ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರವಾಗಿವೆ.
ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ), ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್ (ವ್ಯಕ್ತಿ ಚಿತ್ರಣ), ಕಥನ ಕಾರಣ (ಸಂಶೋಧನ ಕೃತಿ), ನುಡಿದು ಸೂತಕಿಗಳಲ್ಲ (ಸಂಪಾದಿತ) ಎಂಬ ಕೃತಿಗಳನ್ನು ಪ್ರಕಟಿಸಿರುವ ಇವರು ಕಾಸರಗೋಡು ಜಿಲ್ಲೆಯ ಶೇಣಿ ಗ್ರಾಮದ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯಾಪಕವಾದ ಓದು, ವಿಸ್ತಾರವಾದ ಅಧ್ಯಯನಕ್ಕೆ ಹೆಸರಾಗಿರುವ ಇವರು ಉತ್ಸಾಹಿ ಸಂಘಟಕರಾಗಿದ್ದು, ನಾಡಿನ ವಿವಿಧೆಡೆಗಳಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಮುಂಚೂಣಿಯ ಪಾತ್ರವನ್ನು ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ವೇದಿಕೆಯ ಸಂಚಾಲಕರಲ್ಲಿ ಒಬ್ಬರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.
ಲೇಖಕ ವಿದ್ವಾನ್ ಕೃಷ್ಣಭಟ್ಟ ಪಟ್ಟಾಜೆ ಅವರು ಕಾಸರಗೋಡಿನ ಹಿರಿಯ ತಲೆಮಾರಿನ ಕವಿಗಳು, ಪ್ರಬಂಧಕಾರರು. ಅನೇಕ ವರ್ಷಗಳ ಕಾಲ ಪ್ರೌಢ ಶಾಲೆಗಳಲ್ಲಿ ಕನ್ನಡ ಬೋಧನೆಯನ್ನು ನಿರ್ವಹಿಸಿ, ವಿದ್ಯಾರ್ಥಿಗಳ ಮನಸ್ಸನ್ನು ಗೆದ್ದ ಪರಿಣತ ಶಿಕ್ಷಕರು. ಕವನಗಳಲ್ಲಿ ಛಂದಸ್ಸಿನ ಹಾಗೂ ವಸ್ತುವಿನ ದೃಷ್ಟಿಯಿಂದ ವೈವಿಧ್ಯ ಪೂರ್ಣವಾದ ರಚನೆಗಳನ್ನು ಆಯ್ದು ತಮ್ಮ ಭಾವಾಂಜಲಿಯಿಂದ ಲೋಕಕ್ಕೆ ಸಮರ್ಪಿಸಿದ್ದಾರೆ. ನವೋದಯ ಕಾಲಘಟ್ಟದಲ್ಲಿ ಬಳಕೆಯಲ್ಲಿದ್ದ ಛಂದೋ ಬಂಧಗಳನ್ನು ಇಲ್ಲಿಯ ಹೆಚ್ಚಿನ ಕವನಗಳಿಗೂ ಅಳವಡಿಸಿಕೊಂಡಿದ್ದಾರೆ. ಶ್ರೀ ಕೃಷ್ಣಭಟ್ಟರ ಕವಿತಾ ರಚನೆಯ ಪ್ರತಿಭಾ ಕೌಶಲ ಮತ್ತು ಶಕ್ತಿಯನ್ನೂ ಮನವರಿಕೆ ಮಾಡಿಸುತ್ತವೆ.