ಶಾಸ್ತ್ರೀಯ ನೃತ್ಯ ಕ್ಷೇತ್ರದಲ್ಲಿ ವಿದುಷಿ. ಸರಿತಾ ಪ್ರಸಾದ್ ಕೊಟ್ಟಾರಿ ಉತ್ತಮ ಭರತನಾಟ್ಯ ಕಲಾವಿದೆ ಹಾಗೂ ದಕ್ಷ ಗುರುಗಳಾಗಿ ಹೆಸರು ಮಾಡಿದ್ದಾರೆ. ‘ಚಿಗುರು ನೃತ್ಯಾಲಯ’ದ ಸ್ಥಾಪಕಿ . ತಮ್ಮ ಶಿಷ್ಯರ ಬೆಳವಣಿಗೆಗೆ ಪೂರಕವಾಗುವಂತೆ ನಾಡಿನಾದ್ಯಂತ ಅನೇಕ ವೇದಿಕೆಗಳನ್ನು ಒದಗಿಸಿ ಉದಯೋನ್ಮುಖ ಕಲಾವಿದರ ಪ್ರತಿಭೆಯನ್ನು ಬೆಳೆಸುತ್ತಿರುವ ಪ್ರಗತಿಪರ ಮನೋಭಾವದ ಮಾರ್ಗದರ್ಶಕಿ ಕೂಡ. ಇವರ ನುರಿತ ಗರಡಿಯಲ್ಲಿ ತಯಾರಾಗುತ್ತಿರುವ ಭರವಸೆಯ ಪ್ರತಿಭೆ ಕೆ. ಎ. ತುಷಾರ ಇವರು ಶ್ರೀ ಕಮಲೇಶ್ ಮತ್ತು ನಂದಾ ಅವರ ಪುತ್ರಿ. ನೃತ್ಯದ ಬಗ್ಗೆ ಅಪಾರ ಆಸಕ್ತಿಯುಳ್ಳ ಹನ್ನೆರಡು ವರ್ಷದ ಈ ಬಾಲಪ್ರತಿಭೆ ದಿನಾಂಕ 18-05-2024 ರಂದು ಸಂಜೆ 5 ಗಂಟೆಗೆ ಜಯನಗರದ ಜೆ.ಎಸ್.ಎಸ್. ಆಡಿಟೋರಿಯಂನಲ್ಲಿ ವಿದ್ಯುಕ್ತವಾಗಿ ತನ್ನ ರಂಗಪ್ರವೇಶವನ್ನು ನೆರವೇರಿಸಿಕೊಳ್ಳಲಿದ್ದಾಳೆ.ಅವಳ ಸುಂದರ ನರ್ತನ ವಲ್ಲರಿಯನ್ನು ಕಣ್ತುಂಬಿಕೊಳ್ಳಲು ಎಲ್ಲರಿಗೂ ಆದರದ ಸುಸ್ವಾಗತ.
ಪುಟ್ಟಬಾಲಕಿ ತುಷಾರಳಿಗೆ ಬಾಲ್ಯದಿಂದಲೂ ನೃತ್ಯ ಎಂದರೆ ಅತೀವ ಆಸಕ್ತಿ. ಸಾಂಸ್ಕೃತಿಕ ಕುಟುಂಬದ ವಾತಾವರಣ. ಗಾಯನ-ನರ್ತನದಲ್ಲಿ ಆಸಕ್ತಿ ತೋರಿದ ಮಗಳ ಪ್ರತಿಭೆಗೆ ತಂದೆ ಕಮಲೇಶ್ ಮತ್ತು ತಾಯಿ ನಂದಾ ಸಂಪೂರ್ಣ ಬೆಂಬಲ ನೀಡಿ, ನುರಿತ ನೃತ್ಯಗುರು ಸರಿತಾ ಪ್ರಸಾದ್ ಅವರ ನೃತ್ಯ ಶಾಲೆಗೆ ಆರನೆಯ ವಯಸ್ಸಿಗೇ ಅವಳನ್ನು ಸೇರಿಸಿದರು. ತುಷಾರ ಬಾಲಪ್ರತಿಭೆ, ಚುರುಕು ಮೇಧಾಶಕ್ತಿ, ಅತ್ಯಾಸಕ್ತಿ ಹಾಗೂ ಪರಿಶ್ರಮದಿಂದ ಬಹು ಬೇಗ ನೃತ್ಯ ಕಲಿಕೆಯಲ್ಲಿ ಪ್ರಗತಿ ಸಾಧಿಸಿದಳು. ‘ಚಿಗುರು ನೃತ್ಯಾಲಯ’ದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತನ್ನ ನೃತ್ಯಪ್ರತಿಭೆಯನ್ನು ಪ್ರಕಾಶಿಸಿದಳು.
ಬೆಂಗಳೂರಿನ ದಕ್ಷಿಣ ‘ಡೆಲ್ಲಿ ಪಬ್ಲಿಕ್ ಶಾಲೆ’ಯಲ್ಲಿ 8 ನೆಯ ತರಗತಿಯಲ್ಲಿ ಓದುತ್ತಿರುವ ಇವಳು ಓದಿನಲ್ಲಿ ಬುದ್ಧಿವಂತೆ ಮಾತ್ರವಲ್ಲದೆ ಎಲ್ಲ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಮುಂದು. ಅನೇಕ ಬಹುಮಾನಗಳನ್ನು ಪಡೆದಿರುವ ಇವಳು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿಯುತ್ತಿದ್ದು, ತಾನೇ ಹಾಡುಗಳನ್ನು ರಚಿಸಿ ಹಾಡಬಲ್ಲಳು ಕೂಡ. ಸ್ಕೇಟಿಂಗ್, ಸ್ವಿಮ್ಮಿಂಗ್ ಮತ್ತು ಯೋಗದಲ್ಲೂ ಪರಿಶ್ರಮ ಹೊಂದಿರುವುದು ಇವಳ ಅಗ್ಗಳಿಕೆ.
ಕು. ತುಷಾರಳ ಹೆಜ್ಜೆ-ಗೆಜ್ಜೆಗಳ ಕಲಿಕೆಗೆ ನಿಸ್ವಾರ್ಥ ಅಂತಃಕರಣದಿಂದ ವಿದ್ಯಾ ಧಾರೆ ಎರೆಯುತ್ತಿರುವ ಗುರು ಸರಿತಾ ಅವರ ಗುರು ಪರಂಪರೆಯ ಜ್ಞಾನ-ವಿದ್ಯಾರ್ಜನೆ- ಸರಳ ಸ್ವಭಾವ ಕಾರಣವಾದರೆ, ತುಷಾರಳ ಹೆತ್ತವರ, ಪ್ರತಿಭಾ ಪೋಷಣೆಯ ನಿರ್ಮಲ ಕಲಾಪ್ರೀತಿ- ನಿಷ್ಠೆ -ಕಾಳಜಿಗಳು ಅವಳ ಉತ್ಸಾಹ ಕಾರಂಜಿಯ ಹಿಂದಿನ ಶಕ್ತಿಯಾಗಿದೆ ಎಂದರೆ ಅತಿಶಯೋಕ್ತಿಯಲ್ಲ.
ವೈ. ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.