ಕಾರ್ಕಳ : ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಇವುಗಳ ಸಹಯೋಗದಲ್ಲಿ ತಿಂಗಳ ಉಪನ್ಯಾಸ ‘ಅರಿವು ತಿಳಿವು’ ಕಾರ್ಯಕ್ರಮವು ದಿನಾಂಕ 11-05-2024ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ‘ಕೇನೋಪನಿಷತ್ತು’ ಇದರ ಕುರಿತು ಉಪನ್ಯಾಸ ನೀಡಿದ ಕರ್ನಾಟಕ ರಾಜ್ಯ ಮುಕ್ತ ವಿ.ವಿ. ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಜ್ಯೋತಿ ಶಂಕರ್ “ಬದುಕನ್ನು ಸರಿಯಾದ ಕ್ರಮದಲ್ಲಿ ಬದುಕುವುದಕ್ಕೆ ಗುರುಗಳ ಮುಖಾಂತರ ಯಾವ ಉಪದೇಶಗಳನ್ನು ಕೇಳಬೇಕೋ ಅದನ್ನು ಕೇಳಿ ತಿಳಿದುಕೊಳ್ಳುವ, ಸಂದೇಹಗಳನ್ನು ನಿವಾರಿಸುವ ಕಾರ್ಯವನ್ನು ಕೇನೋಪನಿಷತ್ತು ಮಾಡುತ್ತದೆ. ಪಂಚೇಂದ್ರಿಯಗಳಿಂದ ಕೂಡಿದ ಈ ಶರೀರದ ಕ್ರಿಯೆಗಳೇ ಒಂದು ವಿಸ್ಮಯವಾದರೂ ಇಂದ್ರಿಯಗಳಿಗೆ ಅತೀತವಾಗಿ ನಿಲ್ಲುವುದೇ ಪರಬ್ರಹ್ಮ, ಗುರುವಿನ ಮತ್ತು ಶಾಸ್ತ್ರಗಳ ವಚನಗಳನ್ನು ಒಟ್ಟಿಗೆ ಮನನ ಮಾಡುವುದರಿಂದ ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ ಬ್ರಹ್ಮನೆಡೆಗೆ ಸಾಗಲು ಸಾಧ್ಯವಾಗುತ್ತದೆ. ಬ್ರಹ್ಮಜ್ಞಾನವನ್ನು ಪಡೆದುಕೊಳ್ಳುವುದರಿಂದ ಸತ್ಯದ ಅರಿವಾಗುತ್ತದೆ. ಅಂಥವರು ಹೇಡಿಗಳಾಗದೆ ಆತ್ಮವಿಶ್ವಾಸ ವೃದ್ಧಿಯೊಂದಿಗೆ ಸತ್ಯವನ್ನು ಎದುರಿಸುವ ಧೀರರಾಗುತ್ತಾರೆ. ಅಸುರೀಭಾವದ ರಾಜಸ, ತಾಮಸ ಗುಣಗಳನ್ನೆಲ್ಲಾ ಕಳೆದುಕೊಂಡು ನಿಜವಾದ ಮನುಷ್ಯರಾಗಿ ಆನಂದದಿಂದಿರಲು ಇದು ನೆರವಾಗುತ್ತದೆ.” ಎಂಬುದಾಗಿ ತಿಳಿಸಿದರು.
ಅತಿಥಿಗಳನ್ನು ಮತ್ತು ಪ್ರಾಯೋಜಕರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಡಾ. ನಾ. ಮೊಗಸಾಲೆ, ನಿತ್ಯಾನಂದ ಪೈ, ಏರ್‌ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್ ಮತ್ತು ಶ್ರೀಮತಿ ಮಿತ್ರಪ್ರಭಾ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಸುಲೋಚನಾ ಬಿ.ವಿ. ಅವರು ಪ್ರಾರ್ಥಿಸಿ, ವೀಣಾ ರಾಜೇಶ್ ಅತಿಥಿಗಳನ್ನು ಪರಿಚಯಿಸಿ, ಬಾಲಕೃಷ್ಣ ರಾವ್ ಅವರು ಕಾರ್ಯಕ್ರಮ ನಿರೂಪಿಸಿ, ಸದಾನಂದ ನಾರಾವಿ ಸ್ವಾಗತಿಸಿ, ಮಿತ್ರಪ್ರಭಾ ಹೆಗ್ಡೆ ವಂದಿಸಿದರು.