ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ದಿನಾಂಕ 14-05-2024ರ ಮಂಗಳವಾರ ನಡೆದ ಕಲಾವಿದರ ಯಕ್ಷಪಯಣದ ಸ್ವಗತ ‘ಯಕ್ಷಾಯಣ- ದಾಖಲೀಕರಣ’ ಸರಣಿ -4 ಕಾರ್ಯಕ್ರಮದಲ್ಲಿ ಯಕ್ಷಗಾನ ಹಿರಿಯ ಕಲಾವಿದರಾದ ಶ್ರೀ ಚೆನ್ನಪ್ಪ ಗೌಡ ಸಜಿಪ ಅವರು ತಮ್ಮ ಯಕ್ಷಪಯಣದ ಅನುಭವವನ್ನು ಹಂಚಿಕೊಂಡರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ಚೆನ್ನಪ್ಪ ಗೌಡ “ಹಿಂದೆ ರಾತ್ರಿಯಿಡೀ ನಡೆಯುತ್ತಿದ್ದ ಯಕ್ಷಗಾನದಲ್ಲಿ ಪಾತ್ರಗಳನ್ನು ಸಾವಧಾನವಾಗಿ ಭಾವಪ್ರಧಾನವಾಗಿ ಕಟ್ಟಿಕೊಡಲು ಸಾಧ್ಯವಾಗುತ್ತಿತ್ತು. ಪ್ರಸಂಗದ ನಡೆಯನ್ನು ಕ್ರಮಬದ್ಧವಾಗಿ ನಿರೂಪಿಸಲು ಸಾಧ್ಯವಾಗುತ್ತಿತ್ತು. ಕಾಲಮಿತಿಯ ಪ್ರದರ್ಶನದಲ್ಲಿ ಪಾತ್ರಗಳು ಬಂದಷ್ಟೇ ವೇಗದಲ್ಲಿ ನಿರ್ಗಮಿಸುತ್ತವೆ. ಹಾಗಾಗಿ ಯಕ್ಷಗಾನದ ಮೂಲ ಸೌಂದರ್ಯ ಮತ್ತು ಪರಂಪರೆಗೆ ಧಕ್ಕೆಯಾಗುತ್ತಿದೆ. ಅಂದಿನ ರಂಗಸ್ಥಳವೆಂದರೆ ಅಡಕೆ ಮರದ ಕಂಬ ಅದರ ಮೇಲೆ ಹಾಸಿದ ಮಡಲು, ಆಚೀಚೆ ಎರಡು ದೊಂದಿ ಅಥವಾ ಗ್ಯಾಸ್ಲೈಟ್ ತೂಗಿದ ರಂಗಸ್ಥಳ. ಆದರೆ ಆ ಕಾಲದ ಕಲಾವಿದರಿಗೆ ಕುಣಿತದಲ್ಲಿ ಉದಾಸೀನ ಇರಲಿಲ್ಲ. ನಾವೆಲ್ಲ ಹಿರಿಯರ ಕುಣಿತ ವೇಷವನ್ನು ನೋಡಿಯೇ ಕಲಿತದ್ದು. ಪ್ರತ್ಯೇಕ ಯಕ್ಷ ಶಿಕ್ಷಣ ಇರಲಿಲ್ಲ. ಪ್ರೇಕ್ಷಕರೂ ಅಷ್ಟೇ ಕೋಡಂಗಿ ವೇಷ ಬರುವಾಗಲೇ ಹಾಜರು. ಆಟ ಪೂರ್ತಿ ಮುಗಿದೇ ಹೊರಡುವವರು. ಮರುದಿನ ನಾನು ಮತ್ತು ಪೆರುವಡಿ ನಾರಾಯಣ ಭಟ್ಟರು ನಡೆದುಕೊಂಡು ಹೋಗುತ್ತಿದ್ದರೆ ಗೂಡಂಗಡಿಯವರು ಕೂಡ ಕರೆದು ನಿನ್ನೆಯ ಪಾಪಣ್ಣ ಮತ್ತು ಗುಣಸುಂದರಿ ನಿಮ್ಮಿಬ್ಬರದು ಅದ್ಭುತ ಎನ್ನುವವರೇ. ಈಗ ಕಲಾವಿದ ಪ್ರೇಕ್ಷಕರ ನಡುವೆ ಈ ಬಾಂಧವ್ಯ ಎಲ್ಲಿದೆ?.
ಎಲ್ಲಾ ರೀತಿಯ ಪಾತ್ರಗಳನ್ನೂ ನಾನು ಮಾಡಿದ್ದೇನೆ. ದೇವಿ ಮಹಾತ್ಮೆಯಲ್ಲಿ ರಕ್ತಬೀಜಾಸುರ ಹೊರತುಪಡಿಸಿ ಎಲ್ಲಾ ಪಾತ್ರಗಳನ್ನು ಮಾಡಿದ್ದೇನೆ. ಆದರೆ ಹೆಚ್ಚು ಮಾಡಿದ್ದು ಸ್ರ್ತೀವೇಷವನ್ನೇ. ಪಾತಾಳರು ನನಗೆ ಪ್ರೇರಣೆ ಹಾಗೂ ಮಾದರಿ. ಕುಟ್ಯಪ್ಪು, ಚಂದ್ರಗಿರಿ ಅಂಬು, ಶೇಣಿ, ಹೊಸಹಿತ್ಲು, ಬಣ್ಣದ ಮಾಲಿಂಗರಂತಹ ಅನೇಕ ಪ್ರತಿಭಾವಂತ ಕಲಾವಿದರ ಜೊತೆಗೆ ವೇಷ ಮಾಡಿದ್ದೇನೆಂಬ ಸಂತೋಷ ನನ್ನದು. ಕುರಿಯ ವಿಠಲ ಶಾಸ್ತ್ರಿಗಳು, ಅಗರಿ ಬಲಿಪ ಭಾಗವತರ ನಿಷ್ಠೆ, ಯಕ್ಷಗಾನದ ಪ್ರೀತಿ ನಮಗೆ ಆದರ್ಶ.” ಎಂದರು.
ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಧನಂಜಯ ಕುಂಬ್ಳೆ ಮಾತನಾಡಿ “94 ವರ್ಷದ ಹಿರಿಯರಾದ ಚೆನ್ನಪ್ಪ ಗೌಡರದ್ದು ಏಳು ದಶಕಗಳ ಯಕ್ಷಗಾನ ಸೇವೆ. ಸ್ತ್ರೀವೇಷಧಾರಿಯಾಗಿ ಮತ್ತು ಎಲ್ಲಾ ಬಗೆಯ ವೇಷಗಳ ಮೂಲಕ ಅವರು ಯಕ್ಷಗಾನಕ್ಕೆ ನೀಡಿದ ಕೊಡುಗೆ ಅಪಾರ. ಮೂಲತ: ಕನ್ಯಾನದವರಾದ ಇವರು ತನ್ನ 14ನೇ ವಯಸ್ಸಿನಲ್ಲಿಯೇ ಯಕ್ಷರಂಗವನ್ನು ಪ್ರವೇಶಿಸಿ ಕೂಡ್ಲು, ಧರ್ಮಸ್ಥಳ, ಮೂಲ್ಕಿ, ಕೊಲ್ಲೂರು, ಬಪ್ಪನಾಡು, ನಂದಾವರ, ಅರುವ, ಪೇಜಾವರ, ಇಡಗುಂಜಿ, ಕಟೀಲು ಮೊದಲಾದ ಮೇಳಗಳಲ್ಲಿ ಕಲಾವಿದರಾಗಿ ಆಯಾ ಮೇಳಗಳಲ್ಲಿ ಪ್ರಧಾನ ವೇಷಧಾರಿಯಾಗಿದ್ದವರು. ಅವರ ಗುಣಸುಂದರಿ, ದೇವಿ, ದಾಕ್ಷಾಯಿನಿ, ದ್ರೌಪದಿ, ದೇಯಿ, ಕಿನ್ನಿದಾರು ಮೊದಲಾದ ಸ್ತ್ರೀ ಪಾತ್ರಗಳು ಜನಪ್ರಿಯವಾದವು. ಚೆನ್ನಪ್ಪ ಗೌಡರು ಹೆಚ್ಚು ಪ್ರಸಿದ್ಧಿಗೆ ಬಾರದ ಯಕ್ಷಗಾನದ ಅಪ್ಪಟ ಪ್ರತಿಭೆ.” ಎಂದು ಹೇಳಿದರು.
ಬಳಿಕ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಹಿರಿಯ ಕಲಾವಿದರಾದ ಚೆನ್ನಪ್ಪ ಗೌಡ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರದ ಸಂಶೋಧನಾ ಅಧಿಕಾರಿ ಡಾ.ಸತೀಶ್ , ಸಿಬ್ಬಂದಿ ಸ್ವಾತಿ ರಾವ್, ಯಕ್ಷಮಂಗಳದ ವಿದ್ಯಾರ್ಥಿ ಅಭಿರಾಮ್, ಯಕ್ಷಗಾನ ಕಲಾವಿದರಾದ ಅಶ್ವಥ್ ಮಂಜನಾಡಿ, ವಿವಿಧ ಪೀಠಗಳ ಸಂಶೋಧನಾ ಸಹಾಯಕರಾದ ಯತೀಶ್ , ದಿಲೀಪ್, ಪ್ರಸಾದ್, ಸಿಬ್ಬಂದಿಗಳಾದ ಸರಿತ, ಪ್ರಸಾದ್, ಕಿರಣ್ ಮೊದಲಾದವರು ಉಪಸ್ಥಿತರಿದ್ದರು. ಕನ್ನಡ ಅಧ್ಯಯನ ವಿಭಾಗದ ಚಂದ್ರಶೇಖರ್ ಎಂ. ಬಿ. ಅವರು ದಾಖಲೀಕರಣದಲ್ಲಿ ಸಹಕರಿಸಿದರು.