ಮಂಗಳೂರು : ‘ನಾದ ನೃತ್ಯ’ ಸ್ಕೂಲ್ ಆಫ್ ಆರ್ಟ್ಸ್ ಎಂಡ್ ಕಲ್ಚರಲ್ ಟ್ರಸ್ಟ್ (ರಿ.) ಮಂಗಳೂರು ಆಯೋಜಿಸಿದ ‘ನೃತ್ಯಾಂಜಲಿ’ ನೃತ್ಯ ಬಂಧಗಳ ಕಲಿಕಾ ಕಾರ್ಯಾಗಾರದ ಉದ್ಘಾಟನಾ ಸಮಾರಂಭವು ದಿನಾಂಕ 14-05-2024ರಂದು ಮಂಗಳೂರಿನ ಹಿಂದಿ ಪ್ರಚಾರ ಸಮಿತಿಯಲ್ಲಿ ನಡೆಯಿತು.
ಕಾರ್ಯಗಾರವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದ ಶಾಂತಲಾ ಪ್ರಶಸ್ತಿ ಪುರಸ್ಕೃತ ನಾಟ್ಯಗುರು ವಿದ್ವಾನ್ ಶ್ರೀ ಉಳ್ಳಾಲ ಮೋಹನ್ ಕುಮಾರ್ ಮಾತನಾಡಿ “ಭರತನಾಟ್ಯ ಎಲ್ಲಾ ಶಾಸ್ತ್ರೀಯ ನೃತ್ಯಗಳಿಗೆ ತಾಯಿ ಸಮಾನವಾದ ನೃತ್ಯ ಪ್ರಕಾರ. ಗುರುಗಳ ಸೂಕ್ತ ಮಾರ್ಗದರ್ಶನದಿಂದ ಈ ಕಲೆಯಲ್ಲಿ ದೈವತ್ವವನ್ನು ಕಾಣಬಹುದು. ಇತ್ತೀಚಿನ ದಿನಗಳಲ್ಲಿ ಒಂದೆರಡು ಹಾಡುಗಳಿಗೆ ನೃತ್ಯ ಕಲಿತು ಪ್ರದರ್ಶನ ನೀಡುವ ಪದ್ದತಿ ಆರಂಭವಾಗಿದ್ದು, ಅದರ ಬದಲಿಗೆ ಗುರುಗಳ ಮಾರ್ಗದರ್ಶನದಲ್ಲಿ ಉತ್ತಮ ಕಲಾವಿದೆಯಾಗಿ ರೂಪುಗೊಳ್ಳಿ.” ಎಂದು ಕಿವಿಮಾತು ಹೇಳಿದರು.
ಕಾರ್ಯಾಗಾರದ ಅವಲೋಕನಕಾರರಾಗಿ ಭಾಗವಹಿಸಿದ ವಿದ್ವಾನ್ ಚಂದ್ರಶೇಖರ್ ನಾವಡ ಮಾತನಾಡಿ “ಇಂದು ವಿದ್ಯಾರ್ಥಿಗಳಿಗೆ ಕಲಿಯುವ ಅವಕಾಶ ವಿಫುಲವಾಗಿದೆ. ತಮ್ಮ ಗುರುಗಳಾದ ಭ್ರಮರಿ ಶಿವಪ್ರಕಾಶ್ ಅವರ ಗುರುಗಳಾದ ವಿದುಷಿ ವಸುಂದರಾ ದೊರೆಸ್ವಾಮಿ ಅವರಿಂದ ಭರತನಾಟ್ಯದ ಚೌಕಟ್ಟಿನ ಒಳಗೆ ಇರುವ ಸೂಕ್ಷ್ಮ ವಿಷಯಗಳನ್ನು ತಿಳಿಸಿಕೊಡುವ ಈ ಕಾರ್ಯಾಗಾರ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು.” ಎಂದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಿದುಷಿ ವಸುಂಧರಾ ದೊರೆಸ್ವಾಮಿ ನೃತ್ಯ ಮತ್ತು ಅಭಿನಯದ ಪ್ರಾತ್ಯಕ್ಷಿಕೆ ಜೊತೆಗೆ ತರಗತಿ ನಡೆಸಿಕೊಟ್ಟರು. ಈ ಕಾರ್ಯಗಾರವು ಮೇ 19ರ ವರೆಗೆ ನಡೆಯಲಿದೆ.