ಕೊಪ್ಪಳ : ಕೊಪ್ಪಳದಲ್ಲಿ ಮೇ 25 ಮತ್ತು 26 ರಂದು ಎರಡು ದಿನಗಳ ಕಾಲ ನಡೆಯಲಿರುವ 10ನೇ ಮೇ ಸಾಹಿತ್ಯ ಮೇಳದ ಕರಪತ್ರ ಹಾಗೂ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭವು ದಿನಾಂಕ 16-05-2024ರಂದು ಕೊಪ್ಪಳದ ಅಶೋಕ ವೃತ್ತದ ಬಳಿ ಇರುವ ಸಾಹಿತ್ಯ ಭವನದ ಹೊರ ಆವಣದಲ್ಲಿ ನಡೆಯಿತು.
ಸರಳವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು ಹಾಗೂ ಡಾ. ವಿ. ಬಿ. ರಡ್ಡೇರ್ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅಲ್ಲಮಪ್ರಭು ಬೆಟ್ಟದೂರು “ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳ ರಕ್ಷಣೆಯ ನಿಟ್ಟಿನಲ್ಲಿ ಇಡೀ ನಾಡಿನ ಪ್ರಗತಿಪರರೆಲ್ಲರೂ ಸೇರುತ್ತಿರುವ ಮೇ ಸಾಹಿತ್ಯ ಮೇಳ ಕಾರ್ಯಕ್ರಮಕ್ಕೆ ಎಲ್ಲರೂ ಬನ್ನಿ ಭಾಗವಹಿಸಿ.” ಎಂದು ಕರೆ ನೀಡಿದರು.
ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಇನ್ನೋರ್ವ ಸಾಹಿತಿ ಡಾ. ವಿ. ಬಿ. ರಡ್ಡೇರ್ ಮಾತನಾಡಿ “ಸರ್ವಾಧಿಕಾರದ ವಿರುದ್ದ ಎಲ್ಲರೂ ಹೋರಾಡಬೇಕಾಗಿದೆ. ಸಂವಿಧಾನವನ್ನು ರಕ್ಷಣೆ ಮಾಡಬೇಕಿದೆ . ಈ ನಿಟ್ಟಿನಲ್ಲಿ ಕೊಪ್ಪಳದಲ್ಲಿ ನಡೆಯುತ್ತಿರುವ ಮೇ ಸಾಹಿತ್ಯ ಮೇಳ ಎಲ್ಲರ ಧ್ವನಿಯಾಗಲಿದೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು.” ಎಂದು ಕರೆ ಇತ್ತರು. ಶರಣಪ್ಪ ಬಾಚಲಾಪೂರ, ಪ್ರಕಾಶ ಕಂದಕೂರ ಹಾಗೂ ಮಹಾಂತೇಶ ಮಲ್ಲನಗೌಡರ ಕರಪತ್ರಗಳನ್ನು ಬಿಡುಗಡೆ ಮಾಡಿದರು.
ಬಸವರಾಜ್ ಶೀಲವಂತರ್ ಹಾಗೂ ಡಿ. ಬಿ. ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕಾಸಿಂಸಾಬ ಸರ್ದಾರ್, ಗಾಳೆಪ್ಪ ಮುಂಗೋಲಿ, ಎಸ್. ಎ. ಗಫಾರ್, ಮಹಾಂತೇಶ್ ಕುತಬಾಳ, ರುದ್ರಪ್ಪ ಭಂಡಾರಿ, ಶರಣು ಶೆಟ್ಟರ್, ಲಕ್ಷ್ಮಣ ಪೀರಗಾರ, ಎಂ. ಕೆ. ಸಾಹೇಬ್, ಕಾಶಪ್ಪ ಚಲವಾದಿ, ಬಸವರಾಜ್ ಸೂಳಿಬಾವಿ, ಎಚ್. ವಿ. ರಾಜಾಬಕ್ಷಿ, ಸಿರಾಜ್ ಬಿಸರಳ್ಳಿ ಉಪಸ್ಥಿತರಿದ್ದರು.