ಉಡುಪಿ : ಗಾಂಧಿ ಆಸ್ಪತ್ರೆಯ 30ರ ಸಂಭ್ರಮದ ಪ್ರಯುಕ್ತ ಖ್ಯಾತ ಬಾಲ ಕಲಾವಿದೆ ಹತ್ತು ವರ್ಷದ ಕುಮಾರಿ ಗಂಗಾ ಶಶಿಧರನ್ ಇವರ ವಯೋಲಿನ್ ವಾದನ ಕಛೇರಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಕಿಕ್ಕಿರಿದ ಜನ ಸಂದಣಿಯ ನಡುವೆ ದಿನಾಂಕ 15-05-2024ರಂದು ನಡೆಯಿತು. ಅಪಾರ ಜನಪ್ರಿಯತೆಯನ್ನು ಪಡೆದುಕೊಂಡಿರುವ ಈ ಬಾಲ ಕಲಾವಿದೆಯನ್ನು ಪೂಜ್ಯ ಪರ್ಯಾಯ ಹಿರಿಯ ಮತ್ತು ಕಿರಿಯ ಶ್ರೀಪಾದರು ಶ್ರೀಕೃಷ್ಣ ಪ್ರಸಾದವನ್ನು ನೀಡಿ, ಗೌರವಿಸಿ ಹರಸಿದರು. ಗುರು ವಿದ್ವಾನ್ ಶ್ರೀ ಅನುರೂಪ್ ಹಾಗೂ ಪಕ್ಕವಾದ್ಯದಲ್ಲಿ ಸಹಕರಿಸಿದರನ್ನು ಪ್ರಸಾದ ನೀಡಿ ಗೌರವಿಸಿದರು.
ರಾಜಾಂಗಣದಲ್ಲಿ ನಡೆದ ಕಿಕ್ಕಿರಿದ ಕಲಾಪ್ರಿಯರು ಪಿಟೀಲು ವಾದನದ ಸುಧೆಯನ್ನು ಉಡುಪಿಯ ಪ್ರಸಿದ್ಧ ಗಾಂಧಿ ಆಸ್ಪತ್ರೆಯ ನಿರ್ದೇಶಕ ಡಾ. ಹರಿಶ್ಚಂದ್ರರವರು ತಮ್ಮ ಆಸ್ಪತ್ರೆಯ 30ನೇ ವರ್ಧಂತ್ಯುತ್ಸವದ ಅಂಗವಾಗಿ ಆಯೋಜಿಸಿದ್ದರು. ಆಸ್ಪತ್ರೆಯ ವತಿಯಿಂದ ಗುರು ಹಾಗು ಶಿಷ್ಯೆಯನ್ನು ಅದ್ದೂರಿಯಾಗಿ ಅಭಿನಂದಿಸಲಾಯಿತು. ಶ್ರೀ ಮಠದ ವತಿಯಿಂದ ಎಂ. ಹರಿಶ್ಚಂದ್ರ, ಲಕ್ಷ್ಮಿ ದಂಪತಿಗಳನ್ನು ಪರ್ಯಾಯ ಶ್ರೀಪಾದರು ಶ್ರೀಕೃಷ್ಣ ಪ್ರಸಾದ ನೀಡಿ ಅಭಿನಂದಿಸಿದರು.
ಕುಮಾರಿ ಗಂಗಾಳಿಗೆ ಭಗವದ್ಗೀತೆಯನ್ನು ಬರೆಯುವ ಕೋಟಿ ಗೀತಾ ಲೇಖನ ಯಜ್ಞದೀಕ್ಷೆಯನ್ನು ಪೂಜ್ಯ ಶ್ರೀಪಾದರು ನೀಡಿ ಉಜ್ವಲ ಭವಿಷ್ಯವನ್ನು ಹಾರೈಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ, ಡಾ. ಪಂಚಮಿ ಹರಿಶ್ಚಂದ್ರ, ಶ್ರೀ ಮಠದ ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯ, ರಮೇಶ್ ಭಟ್ ಉಪಸ್ಥಿತರಿದ್ದರು. ಡಾ. ವ್ಯಾಸರಾಜ ತಂತ್ರಿ ಸ್ವಾಗತಿಸಿ, ಪ್ರಸ್ತಾಪಿಸಿದರು. ಸಜನಿ ನಿರೂಪಿಸಿದರು.