ಮೂಲ್ಕಿ: ಕೆ. ಪಿ. ಎಸ್. ಕೆ. ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 09-05-2024ರಂದು ಶಾಲಾ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ. ಪಿ. ಎಸ್. ಕೆ. ಪ್ರೌಢ ಶಾಲೆಯ ಸಂಚಾಲಕ ಗಂಗಾಧರ್ ಶೆಟ್ಟಿ ಬರ್ಕೆ “ವಿದ್ಯಾರ್ಥಿಗಳು ಬಾಲ್ಯದಿಂದಲೇ ಸಂಸ್ಕಾರಯುತ ಬದುಕಿನ ಮೌಲ್ಯಗಳನ್ನು ಅರಿತು ಅವರ ನಿತ್ಯ ಬದುಕಿನಲ್ಲಿ ಶಿಕ್ಷಣದ ಜೊತೆಗೆ ಗುರು ಹಿರಿಯರಲ್ಲಿ ಭಕ್ತಿಯಿಂದ ವ್ಯವಹರಿಸಿ ದೇಶಕ್ಕೆ ಸತ್ಪ್ರಜೆಗಳಾಗುವಲ್ಲಿ ಬೇಸಿಗೆ ಶಿಬಿರಗಳ ಕಾರ್ಯಕ್ರಮಗಳು ಮಹತ್ವ ಪಡೆದಿದೆ.” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಭಾರತ್ ಸೌಟ್ ಆ್ಯಂಡ್ ಗೈಡ್ಸ್ ಮೂಲ್ಕಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಎಂ. ಸರ್ವೋತ್ತಮ ಅಂಚನ್ ಅತಿಥಿಗಳಾಗಿ ಭಾಗವಹಿಸಿದರು.
ಹೆತ್ತವರ ಪರವಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಉಪನ್ಯಾಸಕಿ ಶೈಲಜಾ ಮಾತನಾಡಿ “ಮಕ್ಕಳ ಬೆಳವಣಿಗೆಯಲ್ಲಿ ಬೇಸಿಗೆ ಶಿಬಿರ ಅವರಿಗೆ ಹಿತ ಕೊಡುವ ಜೊತೆಗೆ ಮಕ್ಕಳ ತುಂಟತನದಿಂದ ಹೆತ್ತವರ ಕಷ್ಟ ಹಾಗು ಸಮಸ್ಯೆಗಳಿಗೆ ಉತ್ತಮ ಫಲಿತಾಂಶ ಕೊಟ್ಟಿದೆ.” ಎಂದರು.
ವಿದ್ಯಾಪ್ರಚಾರಿಣಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ ಮಾತನಾಡಿ “ಶಾಲೆಯ ಆಡಳಿತದ ಜೊತೆಗೆ ಪ್ರಚಾರಿಣಿ ಸಂಘ ವಿದ್ಯಾರ್ಥಿಗಳ ಏಳಿಗೆಗಾಗಿ ಹಲವು ಯೋಜನೆ ಹೊರತರಲಿದೆ.” ಎಂದರು.
ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ನಿತಿನ್ ಶೆಟ್ಟಿ ಮಾತನಾಡಿ “ಶಾಲೆಯ ವಿದ್ಯಾರ್ಥಿಗಳ ಬಗ್ಗೆ ಹಲವು ಕಾರ್ಯಕ್ರಮಗಳ ನಿಯೋಜನೆಯ ಯೋಚನೆ ನಮಗಿದೆ.” ಎಂದರು.
ಅತಿಕಾರಿಬೆಟ್ಟು ಗ್ರಾ.ಪಂ. ಉಪಾಧ್ಯಕ್ಷ ಮನೋಹರ್ ಕೋಟ್ಯಾನ್, ನಿವೃತ್ತ ಮುಖ್ಯ ಶಿಕ್ಷಕ ನಾಗಭೂಷಣ ರಾವ್, ಶ್ರೀಮಂತ ಕಾಮತ್ ಅತಿಥಿಗಳಾಗಿ ಭಾಗವಹಿಸಿದ್ದರು. ಶಿಬಿರಾಧಿಕಾರಿ ವೆಂಕಟರಮಣ ಕಾಮತ್ (ವೆಂಕಿ ಫಲಿಮಾರ್), ಸಂಪನ್ಮೂಲ ವ್ಯಕ್ತಿಗಳಾದ ವರ್ಣಿತ್ ಕಾಮತ್, ಸ್ವಸ್ತಿಕ್ ಆಚಾರ್ಯ ಉಪಸ್ಥಿತರಿದ್ದರು.
ಶಿಬಿರಾರ್ಥಿಗಳು ತಯಾರಿಸಿದ ಆವೆ ಮಣ್ಣಿನ ಕಲಾಕೃತಿಗಳು, ಬಾಟಲ್ ಪೈಂಟಿಂಗ್, ಗೆರಟೆಯ ಕಲಾಕೃತಿಗಳು, ಮುಖವಾಡಗಳು,ಬಣ್ಣದ ಕಾಗದದ ಹಕ್ಕಿಗಳು, ಸ್ಪೋಂಜಿನ ಗೊಂಬೆಗಳು ಮುಂತಾದವುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.