ಕುರುಡಪದವು : ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಪ್ರತಿಷ್ಠಾನದ ವತಿಯಿಂದ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 10-05-2024ರಂದು ಕುರುಡಪದವಿನಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ ನಿವೃತ್ತ ಯೋಧ ಮಧುಕರ ಭಾಗವತರು ತಾವು ವಿಠಲ ಶಾಸ್ತ್ರಿಗಳಿಂದ ಪ್ರಭಾವಿತರಾದ ನೆನೆಪುಗಳನ್ನು ಸ್ಮರಿಸಿಕೊಂಡು ಮಾತನಾಡುತ್ತಾ “ಕುರಿಯ ಎನ್ನುವ ಹೆಸರು ಯಕ್ಷಗಾನ ಇರುವಷ್ಟು ಕಾಲ ಉಳಿಯಬಲ್ಲ ಮನೆತನ. ಯಾಕೆಂದರೆ ಕಲಾ ಕ್ಷೇತ್ರದಲ್ಲಿ ಅದರ ಬೇರು ಅಷ್ಟು ಗಟ್ಟಿಯಾಗಿದೆ. ವಿಠಲ ಶಾಸ್ತ್ರಿಗಳ ಒಡನಾಡಿಗಳಾದ ನೆಡ್ಲೆ ನರಸಿಂಹ ಭಟ್ಟ ಹಾಗೂ ಕರುವೋಳು ದೇರಣ್ಣ ಶೆಟ್ಟಿರ ಹೆಸರಿನಲ್ಲಿ ಕೊಡ ಮಾಡುವ ಪ್ರಶಸ್ತಿಗಳು ಶ್ರೇಷ್ಟ ವಾದವುಗಳು. ಗಣಪತಿ ಶಾಸ್ತ್ರಿಗಳು ಕೂಡ ಕುರಿಯದ ಖ್ಯಾತಿಯನ್ನು ವಿಸ್ತರಿಸಿದ್ದಾರೆ” ಎಂದು ಹೇಳಿದರು.
ಸಂಸ್ಮರಣಾ ಭಾಷಣ ಮಾಡಿದ ಡಾ. ಮುರಳೀಧರ ಶೆಟ್ಟಿ ಮೂರು ಹಿರಿಯ ಚೇತನಗಳ ಸಾಧನೆ ಹಾಗೂ ವ್ಯಕ್ತಿತ್ವವನ್ನು ಮನೋಜ್ಞವಾಗಿ ಮಂಡಿಸಿದರು. ವಿಠಲ ಶಾಸ್ತ್ರಿ ಪ್ರಶಸ್ತಿಯನ್ನು ಶ್ರೀ ಪುಂಡರೀಕಾಕ್ಷ ಉಪಾಧ್ಯಾಯರಿಗೆ, ನೆಡ್ಲೆ ನರಸಿಂಹ ಭಟ್ಟ ಪ್ರಶಸ್ತಿಯನ್ನು ಮಿಜಾರು ಶ್ರೀ ಮೋಹನ ಶೆಟ್ಟಿಗಾರರಿಗೆ ಹಾಗೂ ದೇರಣ್ಣ ಶೆಟ್ಟಿ ಪ್ರಶಸ್ತಿಯನ್ನು ಶ್ರೀ ಕೆ.ಎಚ್. ದಾಸಪ್ಪ ರೈಗಳಿಗೆ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪಡೆದವರನ್ನು ಅಭಿನಂದಿಸಿ ಶಿಕ್ಷಕ ದೀವಿತ್ ಎಸ್.ಕೆ. ಪೆರಾಡಿಯವರು ಮಾತನಾಡಿದರು. ಇತ್ತೀಚೆಗೆ ನಿಧನರಾದ ಕುರಿಯ ವೆಂಕಟ್ರಮಣ ಶಾಸ್ತ್ರಿ ಹಾಗೂ ಸುಬ್ರಹ್ಮಣ್ಯ ಧಾರೇಶ್ವರ ಇವರನ್ನು ನೆನಪಿಸುತ್ತಾ ಸೇರಾಜೆ ಸೀತಾರಾಮ ಭಟ್ಟರು ನುಡಿ ನಮನ ಸಲ್ಲಿಸಿದರು. ಪ್ರತಿಷ್ಠಾನದ ಸಂಚಾಲಕ ಕುರಿಯ ಗೋಪಾಲಕೃಷ್ಣ ಶಾಸ್ತ್ರಿ ಸ್ವಾಗತಿಸಿ, ಶ್ರೀರಾಮ ಶಾಸ್ತ್ರಿ ಕುರಿಯ ಧನ್ಯವಾದವಿತ್ತರು. ಈ ಕಾರ್ಯಕ್ರಮವನ್ನು ಶ್ರೀನಿವಾಸ ಭಟ್ ಸೇರಾಜೆ ನಿರೂಪಿಸಿದರು. ಕಾರ್ಯಕ್ರಮದ ಮೊದಲು ವೈಷ್ಣವಿ ನಾಟ್ಯಾಲಯದ ವಿದುಷಿ ಶ್ರೀಮತಿ ಯೋಗೀಶ್ವರಿ ಜಯಪ್ರಕಾಶ್ ಶಿಷ್ಯೆಯರ ಭರತನಾಟ್ಯ ಕಾರ್ಯಕ್ರಮ ಮತ್ತು ನಂತರ ಕುರಿಯ ವಿಟ್ಠಲ ಶಾಸ್ತ್ರಿ ಸ್ಮಾರಕ ಲಲಿತಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಬಾಯಾರು ರಮೇಶ ಶೆಟ್ಟರ ಮಾರ್ಗದರ್ಶನದಲ್ಲಿ ‘ಗಿರಿಜಾ ಕಲ್ಯಾಣ’, ‘ಕಾರ್ತವೀರ್ಯಾರ್ಜುನ ಕಾಳಗ’, ‘ಭಾರ್ಗವ ವಿಜಯ’ ಮತ್ತು ‘ಅಗ್ರಪೂಜೆ’ ಎಂಬ ಪ್ರಸಂಗಗಳನ್ನು ಬಯಲಾಟವಾಗಿ ಪ್ರದರ್ಶಿಸಲಾಯಿತು.