ಮಂಗಳೂರು: ಮಂಗಳೂರಿನ ಚಿಣ್ಣರ ಚಾವಡಿ ಮತ್ತು ಸಂತ ಮದರ್ ತೆರೇಸ ವಿಚಾರ ವೇದಿಕೆ ಆಶ್ರಯದಲ್ಲಿ ಜೆಪ್ಪು ಸಂತ ಜೆರೋಸಾ ಶಾಲೆಯಲ್ಲಿ ‘ಚಿಣ್ಣರ ಕಲರವ-2024’ ಮಕ್ಕಳ ಕಲಿಕಾ ಕಾರ್ಯಾಗಾರವು ದಿನಾಂಕ 13-05-2024 ರಂದು ಉದ್ಘಾಟನೆಗೊಂಡಿತು.
ಶಿಬಿರವನ್ನು ಉದ್ಘಾಟಿಸಿದ ಜನಪದ ವಿದ್ವಾಂಸ ಹಾಗೂ ನಿವೃತ್ತ ಶಿಕ್ಷಕ ಕೆ.ಕೆ ಪೇಜಾವರ ಮಾತನಾಡಿ “ಸಮಾಜವು ಮನುಷ್ಯ ಪ್ರೀತಿಯನ್ನು ಮರೆತಿದೆ, ಮಾನವೀಯ ಮೌಲ್ಯಗಳ ಕೊರತೆಯು ಆಧುನಿಕ ಸಮಾಜದಲ್ಲಿ ಎದ್ದು ಕಾಣುತ್ತಿದೆ. ಸಮಾಜವು ಅಸ್ವಸ್ಥಗೊಂಡಾಗ ಮಕ್ಕಳು ಕೂಡ ಬದಲಾಗುತ್ತಾರೆ. ಹಾಗಾಗಿ ಮಾನವೀಯ ಗುಣಗಳನ್ನು ಮರು ಸ್ಥಾಪಿಸುವ ಕೆಲಸ ಶಿಕ್ಷಣದಿಂದ ಆಗಬೇಕು. ಮಾನವೀಯ ಮೌಲ್ಯಗಳನ್ನು ಬೆಳೆಸುವುದೇ ನಿಜವಾದ ಶಿಕ್ಷಣ.” ಎಂದು ಹೇಳಿದರು.
ಸೇಂಟ್ ಜೆರೋಸಾ ಶಾಲೆಯ ಮುಖ್ಯಶಿಕ್ಷಕಿ ಸಿಸ್ಟರ್ ಅರ್ಪಿತಾ ಮಾತನಾಡಿ “ಮಕ್ಕಳು ತಮ್ಮ ಆಸಕ್ತಿಯ ಕ್ಷೇತ್ರದ ಬಗ್ಗೆ ಗಮನ ಹರಿಸಿ ನಿರಂತರ ಶ್ರಮ ಪಟ್ಟು ಅಧ್ಯಯನ ಮಾಡಿ ಗುರಿಯತ್ತ ಮುನ್ನಡೆಯಬೇಕು. ನಿರಂತರ ಅಭ್ಯಾಸ ಮಾತ್ರ ಮಕ್ಕಳನ್ನು ಬೆಳೆಸಬಲ್ಲದು.” ಎಂದರು.
ಚಿಂತಕ ಮಾಕ್ಸಿಂ ಡಿಸೋಜ ಬೋಂದೆಲ್ ಹಾಗೂ ಸಮುದಾಯ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಮನೋಜ್ ವಾಮಂಜೂರು ಶಿಬಿರಾರ್ಥಿಗಳಿಗೆ ಶುಭಹಾರೈಸಿದರು.
ಸಂತ ಮದರ್ ತೆರೇಸ ವಿಚಾರ ವೇದಿಕೆಯ ಕೋಶಾಧಿಕಾರಿ ಡೊಲ್ಫಿ ಡಿ’ಸೋಜ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತೆರೇಸ ವಿಚಾರ ವೇದಿಕೆಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ, ಮುಖಂಡ ಮೆಲ್ವಿನ್ ಪಾಯಸ್, ಚಿಂತಕ ಬಿ. ಎನ್. ದೇವಾಡಿಗ, ವಸಂತ ಕುಮಾರ್, ಸ್ಪ್ಯಾನಿ ಲೋಬೋ, ಮರ್ಲಿನ್ ರೇಗೊ ಮೊದಲಾದವರು ಉಪಸ್ಥಿತರಿದ್ದರು.
ಈ ಶಿಬಿರದಲ್ಲಿ ಒಟ್ಟು 150 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಶಿಬಿರದ ನಿರ್ದೇಶಕ ಪ್ರವೀಣ್ ಬಜಾಲ್ ವಿಸ್ಮಯ ತಿಳಿಸಿದರು. ಚಿಣ್ಣರ ಚಾವಡಿ ಸಂಚಾಲಕ ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ, ಚಿಣ್ಣರ ಚಾವಡಿಯ ಯೋಗಿತಾ ಉಳ್ಳಾಲ ವಂದಿಸಿದರು.