ಬಂಟ್ವಾಳ : ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ತು ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ದಿನಾಂಕ 19-05-2024ರಂದು ಬೆಳಗ್ಗೆ 8.30ರಿಂದ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ‘ಪತ್ತನಾಜೆ’ ಜಾನಪದ ಹಬ್ಬ ನಡೆಯಲಿದ್ದು, ಪದ್ಮಶ್ರೀ ಪುರಸ್ಕೃತ ಡಾ. ಮಂಜಮ್ಮ ಜೋಗತಿ ಉದ್ಘಾಟಿಸಲಿದ್ದಾರೆ.
ಪತ್ತನಾಜೆಯ ವಿಶೇಷತೆಯನ್ನು ಜನಮಾನಸಕ್ಕೆ ತಿಳಿಯಪಡಿಸುವ ಜತೆ ತುಳುನಾಡಿನ ಜನಪದ ಆಹಾರ ಪದ್ಧತಿಯನ್ನು ಪರಿಚಯಿಸುವ ದೃಷ್ಟಿಯಿಂದ ‘ಜಾನಪದ ಆಹಾರ ಮೇಳ’, ಜಾನಪದ ಕಲೆಗಳನ್ನು ಪ್ರತಿಬಿಂಬಿಸುವ ಉದ್ದೇಶದಿಂದ ‘ಸಾಂಸ್ಕೃತಿಕ ಮೇಳ’, ತುಳುನಾಡಿನ
ಆಟಕೂಟಗಳ ‘ಜಾನಪದ ಕ್ರೀಡಾ ಕೂಟ’ ಹಾಗೂ ಜನಪದರು ಬಳಸುತ್ತಿದ್ದ ಭೌತಿಕ ಪರಿಕರಗಳ ಪ್ರದರ್ಶನ ‘ಜಾನಪದ ವಸ್ತು ಪ್ರದರ್ಶನ’ವನ್ನು ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 10ಕ್ಕೆ ಉದ್ಘಾಟನಾ ಸಮಾರಂಭದಲ್ಲಿ ಉಜಿರೆ ಎಸ್.ಡಿ.ಎಂ.ನ ಕನ್ನಡ ಸಹಪ್ರಾಧ್ಯಾಪಕಿ ಡಾ. ದಿವಾ ಕೊಕ್ಕಡ ಪತ್ತನಾಜೆ ಬಗ್ಗೆ ವಿಶೇಷ ಉಪನ್ಯಾಸ ನೀಡುವರು. ಕರ್ನಾಟಕ ಜಾನಪದ ಪರಿಷತ್ತು ಬಂಟ್ವಾಳ ಘಟಕದ ಅಧ್ಯಕ್ಷರಾದ ಶ್ರೀಮತಿ ಪ್ರಮೀಳಾ ಮಾಣೂರು ಅಧ್ಯಕ್ಷತೆ ವಹಿಸಲಿದ್ದು, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ರಾಮ ಭಟ್ ಶುಭಾಶಂಸನೆಗೈಯಲಿರುವರು. ವಿಧಾನ ಸಬೆ ಸ್ಪೀಕರ್ ಯು.ಟಿ. ಖಾದರ್, ಮೇಯರ್ ಸುಧೀರ್ ಶೆಟ್ಟಿ, ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ರಮಾನಾಥ ರೈ, ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಅಧ್ಯಕ್ಷ ತುಕಾರಾಮ ಪೂಜಾರಿ, ಪ್ರಮುಖರಾದ ಎ.ಸಿ. ಭಂಡಾರಿ, ರಘುನಾಥ ಸೋಮಯಾಜಿ, ಅರ್ಜುನ್ ಭಂಡಾರ್‌ಕಾರ್, ಡಿ. ಚಂದ್ರಹಾಸ ಶೆಟ್ಟಿ ರಂಗೋಲಿ, ಜಗನ್ನಾಥ ಚೌಟ ಬದಿಗುಡ್ಡೆ, ಸುಧಾಕರ ಆಚಾರ್ಯ, ಪಮ್ಮಿ ಕೊಡಿಯಾಲ್‌ಬೈಲ್ ಭಾಗವಹಿಸಲಿರುವರು.