ಬಂಟ್ವಾಳ : ಲಯನ್ಸ್ ಸೇವಾ ಮಂದಿರ ಬಿ.ಸಿ.ರೋಡಿನಲ್ಲಿ ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ದ.ಕ. ಜಿಲ್ಲಾ ಬಂಟ್ವಾಳ ತಾಲೂಕು ಘಟಕದಿಂದ ಪತ್ತನಾಜೆ ಜಾನಪದ ಹಬ್ಬ ಆಚರಣೆಯ ಅಂಗವಾಗಿ ಏರ್ಪಡಿಸಲಾದ ಆಹಾರ ಮೇಳ, ವಸ್ತುಪ್ರದರ್ಶನ, ಕ್ರೀಡಾಕೂಟ, ಸಾಂಸ್ಕೃತಿಕ ಮೇಳವು ದಿನಾಂಕ 19-05-2024ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ. ಜೋಗತಿ ಮಂಜಮ್ಮ ಮಾತನಾಡಿ “ಮಕ್ಕಳನ್ನು ಕಡ್ಡಾಯವಾಗಿ ಕನ್ನಡ ಶಾಲೆಯಲ್ಲಿ ಹತ್ತನೆ ತರಗತಿವರೆಗೆ ಓದಿಸಿದರೆ ನಮ್ಮ ಭಾಷೆ, ಸಂಸ್ಕಾರ, ಸಂಸ್ಕೃತಿ ಉಳಿಯುತ್ತದೆ. ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಿದರೆ ಅವರಿಗೆ ಬೇರೆ ಕೋಚಿಂಗ್ ಅಗತ್ಯ ವಿಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಸಮಾನತೆಯಿಂದ ಬದುಕುವ ಅವಕಾಶ ಮಾಡಿಕೊಡಬೇಕು. ಶಾಲಾ ಕಾಲೇಜುಗಳಲ್ಲಿ ಜಾನಪದ ಸಂಸ್ಕೃತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮೂಲ ಹಳ್ಳಿಯ ಸಂಸ್ಕೃತಿ ಉಳಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಜಾನಪದ ಕಲೆಯ ಮೂಲಕ ಪದ್ಮಶ್ರೀ ಪ್ರಶಸ್ತಿ ಪಡೆದ ಮೇಲೆ ಎಲ್ಲರೂ ಗೌರವಿಸಿದ್ದಾರೆ. ತೃತೀಯ ಲಿಂಗಿಗಳಿಗೆ ಉತ್ತಮ ಶಿಕ್ಷಣ ನೀಡಿ ಸ್ವಾಭಿಮಾನದಿಂದ ಬದುಕಲು ಅವಕಾಶ ಮಾಡಿಕೊಡಬೇಕು” ಎಂದು ಹೇಳಿದರು.
ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ರಾಮ ಭಟ್ ಶುಭಾಶಂಸನೆ ಮಾಡಿದರು. ಡಾ. ದಿವಾ ಕೊಕ್ಕಡ ಪತ್ತನಾಜೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು. “ಜಾನಪದ ಸಂಸ್ಕೃತಿ ಜೀವನಕ್ಕೆಅಡಿಪಾಯವಾಗಿದ್ದು ಜ್ಞಾನದ ಆಗರವಾಗಿದೆ. ತುಳುನಾಡಿನಲ್ಲಿ ಪತ್ತನಾಜೆಗೆ ವಿಶೇಷ ಪ್ರಾಶಸ್ತ್ಯವಿದೆ” ಎಂದು ತಿಳಿಸಿದರು.
ಮಾಜಿ ಸಚಿವ ರಮಾನಾಥ ರೈ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ, ತುಳು ಅಧ್ಯಯನ ಕೇಂದ್ರ ಅಧ್ಯಕ್ಷ ಡಾ.ತುಕಾರಾಮ ಪೂಜಾರಿ, ಉದ್ಯಮಿ ಅರ್ಜುನ್ ಭಂಡಾರ್ಕರ್, ಕ.ಸಾ.ಪ. ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಪುರಸಭೆ ಮಾಜಿ ಉಪಾಧ್ಯಕ್ಷ ಯಾಸ್ಮಿನ್ ಹಾಮದ್, ಮೋಹನ್ ಶೆಟ್ಟಿ ನರ್ವಲ್ದಡ್ಡ ಮೊದಲಾದವರು ವೇದಿಕೆಯಲ್ಲಿದ್ದು ಶುಭಹಾರೈಸಿದರು. ಡಾ. ಜೋಗತಿ ಮಂಜಮ್ಮರಿಗೆ ‘ಪತ್ತನಾಜೆ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಿವಾ ಕೊಕ್ಕಡರನ್ನು ಸನ್ಮಾನಿಸಲಾಯಿತು.
ಪ್ರಶಾಂತ ಕನಪಾಡಿ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಜಾನಪದ ಪರಿಷತ್ ಅಧ್ಯಕ್ಷೆ ಪ್ರಮೀಳ ಮಾಣೂರು ಇವರು ಸ್ವಾಗತಿಸಿ, ಪ್ರಧಾನ ಸಂಚಾಲಕ ಗೋಪಾಲ ಅಂಚನ್ ಪ್ರಸ್ತಾವನೆ ಗೈದರು. ಹೆಚ್.ಕೆ. ನಯನಾಡು ಮತ್ತು ಅಕಬರ ಅಲಿ ನಿರೂಪಿಸಿ, ಅನಿಲ್ ಪಂಡಿತ್ ವಂದಿಸಿದರು.