ಮೂಡುಬಿದಿರೆ : ನಾಡು ಕಂಡ ಚಿಂತನಾಶೀಲ ಲೇಖಕರಾಗಿದ್ದ ಡಾ. ಶಿವರಾಮ ಕಾರಂತರ ಹೆಸರಿನಲ್ಲಿ ಮೂಡುಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನವು ಪ್ರತಿವರ್ಷವೂ ನೀಡುತ್ತಾ ಬಂದಿರುವ ‘ಶಿವರಾಮ ಕಾರಂತ ಪ್ರಶಸ್ತಿ’ಗೆ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಖ್ಯಾತ ಕವಿಗಳು ಬರಹಗಾರರು ಆಗಿರುವ ಬೆಂಗಳೂರಿನ ಡಾ. ಚಿನ್ನಸ್ವಾಮಿ ಮೂಡ್ನಾಕೂಡು, ಖ್ಯಾತ ಜಾನಪದ ವಿದ್ವಾಂಸರು ಸೃಜನಶೀಲ ಲೇಖಕರು ಆಗಿರುವ ಮೈಸೂರಿನ ಪ್ರೊ. ಕೃಷ್ಣಮೂರ್ತಿ ಹನೂರ, ಕನ್ನಡದ ಕೀಲಿಮಣೆ ವಿನ್ಯಾಸ ಸಂಶೋಧಿಸಿ ಕನ್ನಡ ಭಾಷೆಗೆ ವಿಶಿಷ್ಟ ಕೊಡುಗೆ ನೀಡಿದ ಉಡುಪಿಯ ಕೆ.ಪಿ. ರಾವ್ ಇವರುಗಳಿಗೆ ಮತ್ತು ಸಂಸ್ಕೃತಿಯನ್ನು ಕಟ್ಟುವ ಕಾಯಕದಲ್ಲಿ ಅರ್ಪಣಾ ಭಾವದಿಂದ 75 ವರ್ಷಗಳ ಕಾಲ ಬದ್ಧತೆಯಿಂದ ಕೆಲಸ ಮಾಡುತ್ತಿರುವ ಹೆಗ್ಗೋಡಿನ ನೀನಾಸಂ ಸಂಸ್ಥೆಗೆ ಈ ವರ್ಷದ ‘ಶಿವರಾಮ ಕಾರಂತ ಪ್ರಶಸ್ತಿ’ಯನ್ನು ನೀಡಲು ಪ್ರತಿಷ್ಠಾನ ನಿರ್ಧರಿಸಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಅಮರನಾಥ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ಡಾ. ಜಯಪ್ರಕಾಶ್ ಮಾವಿನ ಕುಳಿ ತಿಳಿಸಿದ್ದಾರೆ.