ಮಂಗಳೂರು : ಮಂಗಳೂರು ರಥಬೀದಿ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಗುರುಸೇವಾ ಪರಿಷತ್ತು ಮಂಗಳೂರು ಘಟಕ ವತಿಯಿಂದ ಕಳೆದ 7 ದಿನಗಳಿಂದ ನಡೆದ ‘ಜ್ಞಾನ ವಿಕಾಸ ಶಿಬಿರ’ದ ಸಮಾರೋಪ ಸಮಾರಂಭವು ದಿನಾಂಕ 19-05-2024ರಂದು ದೇವಸ್ಥಾನದ ಪಟ್ಟೆ ಲಿಂಗಪ್ಪಾಚಾರ್ಯ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪಡುಕುತ್ಯಾರು ಇಲ್ಲಿನ ಪೀಠಾಧಿಪತಿ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ “ನಾವು ಯಾವ ವ್ಯಕ್ತಿಗಳ ಸ್ನೇಹವನ್ನು ಅಥವಾ ಸಂಗವನ್ನು ಹೊಂದಿರುತ್ತೇವೆಯೋ ಅದುವೇ ನಮ್ಮ ವ್ಯಕ್ತಿತ್ವ ಹಾಗೂ ಬದುಕನ್ನು ನಿರ್ಧರಿಸುತ್ತದೆ. ಬೀಜವೊಂದನ್ನು ಭೂಮಿಯಲ್ಲಿ ಬಿತ್ತಿದಾಗ ಅದು ಕೊಳೆತು ಹೋಗುವುದನ್ನು ‘ವಿಕಾರ’ ಎನ್ನಬಹುದು. ಒಂದು ವೇಳೆ ಅದೇ ಬೀಜ ಚಿಗುರಿಕೊಂಡರೆ ಅದನ್ನೇ ‘ವಿಕಾಸ’ ಎನ್ನುತ್ತೇವೆ. ಶಿಬಿರದಲ್ಲಿ ಶಿಬಿರಾರ್ಥಿಗಳು ಪಡೆದ ಜ್ಞಾನ ಅವರೆಲ್ಲರ ಬುದ್ಧಿ ವಿಕಾಸಕ್ಕೆ ಹಾಗೂ ಬದುಕಿನ ವಿಕಾಸಕ್ಕೆ ನಾಂದಿಯಾಗಲಿ.” ಎಂದು ಹರಸಿದರು. ಅತಿಥಿಯಾಗಿ ಆಗಮಿಸಿದ ವೆಂಕಟರಮಣ ಆಚಾರ್ಯ ಮಾತನಾಡಿ “ಮಕ್ಕಳಲ್ಲಿ ಜ್ಞಾನ ಮತ್ತು ತಂತ್ರಜ್ಞಾನ ಮಿಳಿತಗೊಂಡಾಗ ಅದ್ಭುತವಾದ ಬದಲಾವಣೆ ಸಾಧ್ಯ.”ಎಂದರು.
ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತಾಧಿಕಾರಿ ಕೆ. ಉಮೇಶ್ ಆಚಾರ್ಯ ಪಾಂಡೇಶ್ವರ, ಆನೆಗುಂದಿ ಸಂಸ್ಥಾನ ಸರಸ್ವತೀ ಪೀಠ ಎಜುಕೇಷನ್ ಟ್ರಸ್ಟಿನ ಅಧ್ಯಕ್ಷ ಬಿ. ಸೂರ್ಯ ಕುಮಾರ್ ಹಳೆಯಂಗಡಿ, ಶಿಕ್ಷಣ ತಜ್ಞ ವೆಂಕಟರಮಣ ಆಚಾರ್ಯ, ಗುರುಸೇವಾ ಪರಿಷತ್ತಿನ ಕೇಂದ್ರ ಸಮಿತಿಯ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು, ಮಂಗಳೂರು ವಲಯಾಧ್ಯಕ್ಷ ಎಂ.ಶೇಖರ ಆಚಾರ್ಯ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ರತ್ನಾವತಿ ಜೆ. ಬೈಕಾಡಿ ಹಾಗೂ ರಮೇಶ್ ಬಿ. ಜಿ. ಇವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಶಿಬಿರಾರ್ಥಿಗಳು ಅನುಭವಗಳನ್ನು ಹಂಚಿಕೊಂಡರು. ಶಿಬಿರಾರ್ಥಿಗಳೆಲ್ಲರಿಗೂ ಸ್ವಾಮೀಜಿಯವರು ಪ್ರಶಂಸಾ ಪತ್ರ ಮತ್ತು ಅನುಗ್ರಹ ಮಂತ್ರಾಕ್ಷತೆ ಸಹಿತ ಹಿತೈಷಿಗಳು ನೀಡಿರುವ ಉಡುಗೊರೆಯನ್ನಿತ್ತು ಆಶೀರ್ವದಿಸಿದರು.