ಬಂಟ್ವಾಳ : ಹೊಸ ಚಿಗುರು ಹಳೆಬೇರು ಕೂಡಿರಲು ಮರ ಸೊಬಗು ಎಂಬಂತೆ ಕಳೆದ 13 ವರ್ಷಗಳಿಂದ ಸನಾತನ ಭಾರತೀಯ ಸಂಸ್ಕೃತಿಯ ಜೊತೆಗೆ ಆಧುನಿಕ ಶಿಕ್ಷಣವನ್ನು ಒದಗಿಸುತ್ತಾ, ಪಠ್ಯ-ಪಠ್ಯೇತರ ಚಟುವಟಿಕೆಗಳಿಗೆ ಮಹತ್ವ ಕೊಡುತ್ತಾ ಬಂದಿರುವ ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ 2023-24ನೇ ವರ್ಷದ ವಾರ್ಷಿಕೋತ್ಸವ ‘ಆಕರ್ಷ್’ – ಪ್ರತಿಭಾ ಪುರಸ್ಕಾರ ಹಾಗೂ ಪ್ರತಿಭಾ ದಿನೋತ್ಸವವು ದಿನಾಂಕ 18-05-2024ರಂದು ಸಂಪನ್ನಗೊಂಡಿತು.
ವಿದ್ಯಾಕೇಂದ್ರದ ಸಂಸ್ಥಾಪಕರು, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರೂ ಆದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸಿಕ್ಕಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮನ್ನು ತಾವೇ ಬೆಳೆಸಿಕೊಳ್ಳಬೇಕು ಎಂಬ ಕಿವಿಮಾತು ನುಡಿದರು.
ಖ್ಯಾತ ಯಕ್ಷಗಾನ ಭಾಗವತರು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಸತೀಶ್ ಶೆಟ್ಟಿ ಪಟ್ಲ, ಖ್ಯಾತ ಯೂಟ್ಯೂಬರ್ ಕಂಟೆಂಟ್ ಕ್ರಿಯೇಟರ್ ಧನರಾಜ್ ಆಚಾರ್ಯ, ಪ್ರಜ್ಞಾ ಧನರಾಜ್ ಹಾಗೂ ಹಿರಿಯ ವಿದ್ಯಾರ್ಥಿ ಹಾಗೂ ಬೆಂಗಳೂರು ರಾಜವೃಕ್ಷ ರಿಲೇಟರ್ಸ್ ಪೈ.ಲಿ.ನ ನಿರ್ದೇಶಕ ಲಕ್ಷ್ಮೀಶ್ ಕೆ.ಜೆ. ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು. ಮಕ್ಕಳ ಪ್ರತಿಭಾ ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
2023-24ನೇ ಸಾಲಿನ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು, ವಿವಿಧ ಕಾಲೇಜು ಮಟ್ಟದ, ವಿಶ್ವವಿದ್ಯಾಲಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಬಹುಮಾನಗಳನ್ನಿತ್ತು ಅಭಿನಂದಿಸಲಾಯಿತು. ಇದೇ ವೇಳೆ ದತ್ತಿನಿಧಿಯನ್ನು ವಿತರಿಸಲಾಯಿತು. ಶ್ರೀ ರಾಮ ವಿದ್ಯಾಕೇಂದ್ರವು ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಒಂದು ಹೊಸ ಹೆಜ್ಜೆಯನ್ನು ಇಡುವ ನಿಟ್ಟಿನಲ್ಲಿ ‘ರಾಮಧ್ವನಿ’ ಹೆಸರಿನ ಯೂಟ್ಯೂಬ್ ಚಾನೆಲ್‌ನ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು.
ಮಾಜಿ ಶಾಸಕರು, ಆಡಳಿತ ಮಂಡಳಿ ಸದಸ್ಯ ಪದ್ಮನಾಭ ಕೊಟ್ಟಾರಿ, ರಾ.ಸೇ. ಸಮಿತಿಯ ಕಾವೂರು ವಿಭಾಗದ ಕಾರ್ಯವಾಹಿಕಾ ಸದಸ್ಯೆ ಅಕ್ಷತಾ, ರಾ.ಸೇ. ಸಮಿತಿಯ ದಕ್ಷಿಣ ಪ್ರಾಂತ್ಯದ ಕಾರ್ಯಕಾರಿಣಿ ಸದಸ್ಯೆ ಕಮಲಾ ಪ್ರಭಾಕರ ಭಟ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ಶ್ರೀ ಕೃಷ್ಣ ಪ್ರಸಾದ್ ಕಾಯರಕಟ್ಟೆ ವಾರ್ಷಿಕ ಚಟುವಟಿಕೆಗಳ ವರದಿ ವಾಚಿಸಿದರು. ಕು. ಚೈತ್ರಾ ಸ್ವಾಗತಿಸಿ, ಪುನೀತ್ ವಂದಿಸಿದರು. ಕು.ಪ್ರತೀಕಾ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ನಡೆಯಿತು.