ಪುತ್ತೂರು : ನಿವೃತ್ತ ಪ್ರಾಧ್ಯಾಪಕ, ಸಾಹಿತಿ, ಅರ್ಥಧಾರಿ ಮತ್ತು ಮಾಧ್ಯಮ ತಜ್ಞ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರಿಗೆ ‘ಹುಟ್ಟೂರ ಸಮ್ಮಾನ’ ಕಾರ್ಯಕ್ರಮವು ದಿನಾಂಕ 24-05-2024ರ ಶುಕ್ರವಾರದಂದು ಜರಗಲಿದೆ. ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪತ್ತನಾಜೆ ಉತ್ಸವ ಸಂದರ್ಭ ಕ್ಷೇತ್ರದ ‘ಬಿಲ್ವ ಶ್ರೀ’ ಸಭಾಂಗಣದಲ್ಲಿ ನಡೆಯಲಿರುವ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘದ ವಾರ್ಷಿಕೋತ್ಸವ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಬೆಳಿಗ್ಗೆ ಗಂಟೆ 10.00ರಿಂದ ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಪುತ್ತೂರು ಶಿವಬ್ರಾಹ್ಮಣ ಸ. ಸೇ. ಸಂಘದ ನಿರ್ದೇಶಕ ಬೆಟ್ಟಂಪಾಡಿ ಅಶೋಕ ಕುಮಾರ ಉದ್ಘಾಟಿಸುವರು. ಪುತ್ತೂರು ಪೆರ್ಲಡ್ಕದ ಎಸ್. ಡಿ. ಪಿ. ರೆಮಿಡೀಸ್ ಆಂಡ್ ರೀಸರ್ಚ್ ಸೆಂಟರ್ ನಿರ್ದೇಶಕ ಡಾ. ಹರಿಕೃಷ್ಣ ಪಾಣಾಜೆ, ಬೆಟ್ಟಂಪಾಡಿ ನವೋದಯ ವಿದ್ಯಾ ಸಮಿತಿ ಅಧ್ಯಕ್ಷ ಡಿ. ಎಂ. ಬಾಲಕೃಷ್ಣ ಭಟ್ ಘಾಟೆ ಮತ್ತು ಪ್ರಗತಿಪರ ಕೃಷಿಕ ಎಂ. ಮುತ್ತಣ್ಣ ಶೆಟ್ಟಿ ಚೆಲ್ಯಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಸಭೆಯಲ್ಲಿ ಶಿಕ್ಷಣ, ಸಾಹಿತ್ಯ, ಯಕ್ಷಗಾನ ಮತ್ತು ಮಾಧ್ಯಮ ಸೇವೆಗಾಗಿ ಪ್ರೊ .ಭಾಸ್ಕರ ರೈ ಕುಕ್ಕುವಳ್ಳಿ ಅವರನ್ನು ಸನ್ಮಾನಿಸಲಾಗುವುದು. ಇದೇ ಸಂದರ್ಭದಲ್ಲಿ ನಿವೃತ್ತ ಅಧ್ಯಾಪಕ ನಾರಾಯಣ ಭಟ್ ಕುಂಚಿನಡ್ಕ ಮತ್ತು ಕಲಾಪೋಷಕ ಜನಾರ್ಧನ ರಾವ್ ಬೆಟ್ಟಂಪಾಡಿ ಅವರನ್ನು ಗೌರವಿಸಲಾಗುವುದು.
ಸಭಾ ಕಾರ್ಯಕ್ರಮದ ಬಳಿಕ ಯಕ್ಷಗಾನ ತಾಳಮದ್ದಳೆ ಹಾಗೂ ಬಯಲಾಟ ಜರಗುವುದು. ಡಾ. ಎಂ. ಪ್ರಭಾಕರ ಜೋಶಿ ಮತ್ತು ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅರ್ಥಧಾರಿಗಳಾಗಿ ಭಾಗವಹಿಸಲಿರುವ ಈ ತಾಳಮದ್ದಳೆಯಲ್ಲಿ ಪ್ರಶಾಂತ ರೈ ಪುತ್ತೂರು ಅವರ ಭಾಗವತಿಗೆಯಿದೆ.
ಬಹುಮುಖೀ ಸಾಧಕ ಭಾಸ್ಕರ ರೈ ಕುಕ್ಕುವಳ್ಳಿ:
ಯಕ್ಷಗಾನ, ಸಾಹಿತ್ಯ, ಶಿಕ್ಷಣ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿಯವರು ವಿರಳ ಪಂಕ್ತಿಗೆ ಸೇರಿದ ಓರ್ವ ಬಹುಶ್ರುತ ವಿದ್ವಾಂಸರು. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪ್ರತಿಷ್ಠಿತ ಬಾಲ್ಯೊಟ್ಟು ಗುತ್ತು ಇರ್ದೆ-ಬೆಟ್ಟಂಪಾಡಿಯಲ್ಲಿ ದಿ, ಕಲ್ಲಡ್ಕ ಕರಿಯಪ್ಪ ರೈ ಮತ್ತು ಗಿರಿಜಾ ರೈ ಕುಕ್ಕುವಳ್ಳಿ ದಂಪತಿಯ ಸುಪುತ್ರರು. ಭಾರತೀಯ ಅಂಚೆ ಇಲಾಖೆಯಲ್ಲಿ ವೃತ್ತಿ ಜೀವನ ಆರಂಭಿಸಿದ ಮೇಲೆ ಶಿಕ್ಷಣ ಇಲಾಖೆಯನ್ನು ಸೇರಿ ಪೆರ್ಮನ್ನೂರು ಪ್ರೌಢ ಶಾಲೆಯಿಂದ ಪದೋನ್ನತಿ ಪಡೆದು ಚೇಳಾಯರು ಪ. ಪೂ. ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಮುಂದೆ ಗುರುಪುರ ಸರ್ಕಾರಿ ಕಿರಿಯ ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದರು.
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ದುಡಿಯುವುದರೊಂದಿಗೆ ತಮ್ಮದೇ ಆದ ಶೈಲಿಯಲ್ಲಿ ಬರಹಗಾರರಾಗಿ, ಯಕ್ಷಗಾನ ಅರ್ಥ ಧಾರಿಯಾಗಿ, ಪ್ರವಚನಕಾರರಾಗಿ, ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರಾಗಿ, ಶಿಕ್ಷಣ ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತರಾಗಿದ್ದಾರೆ.
ಲೇಖನಗಳ ಸಂಗ್ರಹ, ಕಾವ್ಯ ಗುಚ್ಛ, ತುಳು ಕವನ ಸಂಕಲನ ಹಾಗೂ ಯಕ್ಷಗಾನಕ್ಕೆ ಸಂಬಂಧಪಟ್ಟಂತೆ ಸುಮಾರು 30ಕ್ಕೂ ಹೆಚ್ಚು ಕೃತಿಗಳನ್ನು ಹಾಗೂ ಹತ್ತಕ್ಕಿಂತಲೂ ಹೆಚ್ಚು ನಾಟಕಗಳ ರಚನೆ ಮಾಡಿದ್ದಾರೆ. ‘ನಮ್ಮ ಕುಡ್ಲ’ , ’ವಿ4 ಮೀಡಿಯಾ’, ‘ನಮ್ಮ ಟಿವಿ’’, ‘ಡೈಜಿ ವರ್ಲ್ಡ್ ಮತ್ತು ದೂರದರ್ಶನ ‘ಚಂದನ’ ಇತ್ಯಾದಿ ವಾಹಿನಿಗಳಲ್ಲಿ ನೂರಾರು ಯಶಸ್ವೀ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಮಂಗಳೂರು ಆಕಾಶವಾಣಿಯಲ್ಲಿ ಮತ್ತು ಸಾರಂಗ್ ರೇಡಿಯೋದಲ್ಲಿ ಸರಣಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ.
‘ಆರ್ಯಭಟ ಪ್ರಶಸ್ತಿ’, ‘ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ’, ‘ವಿದ್ಯಾರತ್ನ ಪ್ರಶಸ್ತಿ’ , ‘ಸೌರಭ’, ‘ಸಾಧನಾ’, ‘ನೂಪುರ’, ‘ಕಾರಂತ ಸದ್ಭಾವನಾ’ ಪ್ರಶಸ್ತಿಗಳು, ‘ಮುಂಬಯಿ ಕಾವ್ಯ ಪ್ರಶಸ್ತಿ’, ‘ಪೆರ್ಮೆದ ತುಳುವೆ’ ಪ್ರಶಸ್ತಿ, ‘ಬಂಟ ವಿಭೂಷಣ’ ಇತ್ಯಾದಿ ಪ್ರಶಸ್ತಿಗಳು ಯಕ್ಷಗಾನ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಇವರು ಮಾಡಿದ ಸಾಧನೆಗೆ ಒಲಿದು ಬಂದವುಗಳು.