ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಮಣಿಪಾಲ ನೀಡುವ ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ – 2024’ಯು ಲೇಖಕ ಡಾ. ಶೈಲೇಶ್ ಕುಮಾರ್ ಶಿವಕುಮಾರ್ ಅವರ ‘ಅನುವಾದವೆಂಬೋ ಸಂಬಂಧ’ ಕವನಸಂಕಲನಕ್ಕೆ ಲಭಿಸಿದೆ. ಪ್ರಶಸ್ತಿಯು 10,000/ ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ. ಕವಿ, ಕಾದಂಬರಿಕಾರ, ನಾಟಕಕಾರ, ಕಥೆಗಾರ, ಪತ್ರಿಕೋದ್ಯಮಿ, ಹೀಗೆ ಕನ್ನಡ ಸಾರಸ್ವತ ಲೋಕದಲ್ಲಿ ಹೆಸರುವಾಸಿಯಾದ ಕಡೆಂಗೋಡ್ಲು ಶಂಕರ ಭಟ್ಟರ ಹೆಸರಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.
ಡಾ. ಶೈಲೇಶ್ ಕುಮಾರ್ ಶಿವಕುಮಾರ್ ಅವರು ಬೆಂಗಳೂರು ವಿ.ವಿಯಿಂದ ಕಂಪ್ಯೂಟರ್‌ಸೈನ್ಸ್ ಇಂಜಿನಿಯರಿಂಗ್ ಪದವಿ, ಕಂಪ್ಯೂಟರ್ ಸೈನ್ಸ್ನಲ್ಲಿ ಪಿ. ಎಚ್. ಡಿ. ಹಾಗೂ ಇನ್‌ಫಾರ್ಮೇಶನ್ ಟೆಕ್ನಾಲಜಿಯಲ್ಲಿ ಎಂ. ಬಿ. ಎ. ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಈಗ ಕನ್ನಡ ಎಂ.ಎ. ಪದವಿ ಪಡೆದು ಪಿ. ಎಚ್. ಡಿ. ಗಾಗಿ ಜೈನ್ ವಿಶ್ವವಿದ್ಯಾಲಯದಲ್ಲಿ ನವ್ಯಕಾವ್ಯದ ಕುರಿತಾದ ಸಂಶೋಧನೆಯ ಅಂತಿಮ ಹಂತದಲ್ಲಿದ್ದಾರೆ. ಹಲವು ಪ್ರತಿಷ್ಠಿತ ಕಂಪೆನಿಗಳಲ್ಲಿ ಕೆಲಸ ಮಾಡಿರುವ ಇವರು ಪ್ರಸ್ತುತ ಅಮೆಜಾನ್ ಕಂಪೆನಿಯಲ್ಲಿ ಸೊಲ್ಯೂಷನ್ಸ್ ಆರ್ಕಿಟೆಕ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಾಹಿತ್ಯ, ಸಂಶೋಧನೆ, ಪುಸ್ತಕ ಬರವಣಿಗೆ ಹಾಗೂ ಮಾಹಿತಿ ತಂತ್ರಜ್ಞಾನದಲ್ಲಿ ಸೃಜನಶೀಲ ಬಹುಮುಖ ಪ್ರತಿಭೆ ಹೊಂದಿರುವ ಶೈಲೇಶ್ ಕುಮಾರ್ ಇವರು 9 ತಾಂತ್ರಿಕ ಪುಸ್ತಕಗಳನ್ನು ಬರೆದಿದ್ದು, ವಿಶ್ವದ ಪ್ರತಿಷ್ಠಿತ ಪ್ರಕಾಶಕರಿಂದ ಪ್ರಕಟವಾಗಿವೆ. ನೂರಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿರುವುದಲ್ಲದೆ, ಇವರು ಬರೆದಿರುವ 39 ಪಠ್ಯಪುಸ್ತಕದ ಅಧ್ಯಾಯಗಳು ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಪಠ್ಯವಾಗಿವೆ. ಇವರು ತಮ್ಮ ಸಂಶೋಧನೆಗಾಗಿ ಎರಡು ಅಮೆರಿಕೆಯ ಪೇಟೆಂಟ್‌ಗಳನ್ನು ಹೊಂದಿದ್ದಾರೆ. ಇವರ ಕವನಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ಪ್ರಜಾವಾಣಿ ದೀಪಾವಳಿ ಕಾವ್ಯಸ್ಪರ್ಧೆ, ಪ್ರತಿಷ್ಠಿತ ವಿಂಗ್ವರ್ಡ್ ರಾಷ್ಟ್ರೀಯ ಕವನ ಸ್ಪರ್ಧೆ ಹಾಗೂ ಇತರ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ.
Subscribe to Updates
Get the latest creative news from FooBar about art, design and business.