ಯಕ್ಷಗಾನ ಒಂದು ವಿಶ್ವವಿಖ್ಯಾತ ಕಲೆ. ಗಾನ – ನೃತ್ಯ – ಮಾತುಗಾರಿಕೆ – ವೇಷ ಭೂಷಣಗಳ ಮೇಳೈಕೆ ಈ ಯಕ್ಷಗಾನ. ಇದರಲ್ಲಿ ಪದ್ಯ ಹೇಳುವ ಭಾಗವತರದ್ದು ನಿರ್ದೇಶಕರ ಕೆಲಸ. ನಿರ್ದೇಶನ – ಸಮಯಪ್ರಜ್ಞೆ – ಸೃಜನಶೀಲತೆ ಮುಂತಾದ ಗುಣಗಳು ಇದ್ದಲ್ಲಿ ಮಾತ್ರ ಒಬ್ಬ ಯಶಸ್ವೀ ಭಾಗವತರಾಗುವುದಕ್ಕೆ ಸಾಧ್ಯ. ನಮ್ಮ ನಡುವೆ ಇಂತಹ ನೂರಾರು ಭಾಗವತರಿದ್ದಾರೆ. ಅವರಲ್ಲಿ ಕೆಲವರು ಪ್ರಸಿದ್ಧಿಯನ್ನು ಪಡೆದರೆ, ಇನ್ನೂ ಕೆಲವರು ಎಲೆ ಮರೆಯ ಕಾಯಿಯಂತೆ ಯಕ್ಷಕಲಾ ಸೇವೆಯಲ್ಲಿ ತೊಡಗಿದ್ದಾರೆ. ಅಂತವರಲ್ಲಿ ಒಬ್ಬರು ಶ್ರೀ ಸುರೇಶ್ ಮೊಯ್ಲಿ.
05.05.1975ರಂದು ಸಂಜೀವ ಹಾಗೂ ಗಿರಿಜ ಇವರ ಮಗನಾಗಿ ಜನನ. 9ನೇ ತರಗತಿವರೆಗೆ ವಿದ್ಯಾಭ್ಯಾಸ. ಬಾಲ್ಯದಿಂದಲೂ ಯಕ್ಷಗಾನ ನೋಡುವ ಅಭ್ಯಾಸ. ಹಾಗಾಗಿ ಅದರ ಬಗ್ಗೆ ಆಸಕ್ತಿ. ಮುಂದೊಂದು ದಿನ ನಾನೂ ಕಲಾವಿದನಾಗಬೇಕು ಎನ್ನುವ ಹಂಬಲ. ನಾವಡರು ಹಾಗೂ ಧಾರೇಶ್ವರ ಭಾಗವತರ ಪದ್ಯವೇ ನನಗೆ ಯಕ್ಷಗಾನಕ್ಕೆ ಬರಲು ಪ್ರೇರಣೆ ಎಂದು ಹೇಳುತ್ತಾರೆ ಸುರೇಶ್ ಮೊಯ್ಲಿ.
ಗೋರ್ಪಾಡಿ ವಿಠಲ್ ಪಾಟೀಲ್, ವಿದ್ವಾನ್ ಗಣಪತಿ ಭಟ್, ಹೆರಂಜಾಲು ವೆಂಕಟರಮಣ ಗಾಣಿಗ, ಹೆರಂಜಾಲು ಗೋಪಾಲ ಗಾಣಿಗ ಇವರ ಯಕ್ಷಗಾನ ಗುರುಗಳು.
ಮೇಗರವಳ್ಳಿ, ರಂಜದಕಟ್ಟೆ, ಬಗ್ವಾಡಿ, ಗೋಳಿಗರಡಿ, ಮಡಾಮಕ್ಕಿ, ಮಂದಾರ್ತಿ, ಮಾರಣಕಟ್ಟೆ, ಕಮಲಶಿಲೆ, ಗುತ್ಯಮ್ಮ ಮೇಳ, ಸಿಗಂದೂರು ಮೇಳದಲ್ಲಿ ತಿರುಗಾಟ ಮಾಡಿ ಪ್ರಸ್ತುತ ಕಮಲಶಿಲೆ ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ. ಯಕ್ಷಗಾನ ರಂಗದಲ್ಲಿ ಒಟ್ಟು 32 ವರ್ಷಗಳಿಂದ ತಿರುಗಾಟ ಮಾಡಿದ ಅನುಭವ ಇವರದು.
ಪೌರಾಣಿಕದ ಎಲ್ಲಾ ಪ್ರಸಂಗಗಳೂ ಇಷ್ಟ. ಕಾಲ್ಪನಿಕದಲ್ಲಿ ಚಲುವೆ ಚಿತ್ರಾವತಿ, ಅಮಾತ್ಯನಂದಿನಿ, ಯಕ್ಷಲೋಕವಿಜಯ, ಬನಶಂಕರಿ, ನಾಗಶ್ರೀ, ರತ್ನಾವತಿ ಕಲ್ಯಾಣ ಹಾಗೂ ಕಂದಾವರ ರಘುರಾಮ ಶೆಟ್ರು ರಚಿಸಿದ ಎಲ್ಲಾ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.
ನಾವಡರು, ಧಾರೇಶ್ವರ, ಮರಿಯಪ್ಪ ಆಚಾರ್, ರವೀಂದ್ರ ಕೃಷ್ಣ ಭಟ್, ವಿದ್ವಾನ್ ಗಣಪತಿ ಭಟ್, ಗೋಪಾಲ ಗಾಣಿಗ, ಹಿರಿಯಣ್ಣ ಆಚಾರ್ ಇವರ ನೆಚ್ಚಿನ ಭಾಗವತರು.
ಕಲ್ಯಾಣಿ, ಮೋಹನ, ವೃಂದಾವನ ಸಾರಂಗ, ಹಿಂದೋಳ, ವಾಸಂತಿ, ಆರಭಿ, ಸಿಂದೂಭೈರವಿ, ಶಣ್ಮುಖಪ್ರಿಯ, ಅಠಾಣ, ಹಂಸದ್ವನಿ, ಮಲಯಮಾರುತ ಇತ್ಯಾದಿ ಇವರ ನೆಚ್ಚಿನ ರಾಗಗಳು.
ಗಜಾನನ ದೇವಾಡಿಗ, ಮಂದಾರ್ತಿ ರಾಮಣ್ಣ, ಜನಾರ್ದನ ಆಚಾರ್, ಹುಂಚದಕಟ್ಟೆ ಶ್ರೀನಿವಾಸ ಆಚಾರ್, ದುರ್ಗಪ್ಪ ಗುಡಿಗಾರ್, ಶಂಕರ ಭಾಗವತ್ ಇವರ ನೆಚ್ಚಿನ ಚೆಂಡೆ ಹಾಗೂ ಮದ್ದಳೆವಾದಕರು.
ಇಂದಿನ ಯಕ್ಷಗಾನದ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಮೇಳಗಳ ಸಂಖ್ಯೆ ಜಾಸ್ತಿ ಅಗಿದೆ. ಕಲಾವಿದರಿಗೆ ಬೇಡಿಕೆ ಹೆಚ್ಚಿದೆ, ಕೆಲವು ಕಲಾವಿದರಿಗೆ ಮಳೆಗಾಲದಲ್ಲೂ ಕಾರ್ಯಕ್ರಮ ಸಿಗುತ್ತೆ. ಅದರೆ ಈಗಿನ ಯುವ ಕಲಾವಿದರಲ್ಲಿ ಅಧ್ಯಯನ ಕೊರತೆ ಇದೆ. ಯಕ್ಷಗಾನ ಕ್ಷೇತ್ರ ಉನ್ನತ ಮಟ್ಟದಲ್ಲಿ ಇದೆ. ಉನ್ನತ ಮಟ್ಟದ ಪ್ರದರ್ಶನಗಳನ್ನು ನೀಡಿದರೆ ಪ್ರೇಕ್ಷಕರ ಕೊರತೆ ಆಗುವುದಿಲ್ಲ. ಆದ್ರೆ ಇವತ್ತಿನ ಕಾಲಘಟ್ಟದಲ್ಲಿ ಎಲ್ಲರೂ ಅವರವರ ಕೆಲಸದ ಒತ್ತಡದಲ್ಲಿ ಇರುವುದರಿಂದ ಪೂರ್ಣ ಪ್ರಮಾಣದಲ್ಲಿ ಯಕ್ಷಗಾನ ವೀಕ್ಷಿಸುವುದು ಅಸಾಧ್ಯವಾಗಿದೆ. ವಿಮರ್ಶಕರ ಕೊರತೆ ಇದೆ. ಕಂಠ ತ್ರಾಣ ಇರುವ ಭಾಗವತರು, ವಿಪರೀತ ಕುಣಿದು ಕುಪ್ಪಳಿಸುವವ ಅಸಾಧ್ಯ ಕಲಾವಿದ ಅನ್ನುವ ಮನೋಭಾವದ ಪ್ರೇಕ್ಷಕರೆ ಹೆಚ್ಚು. ಪ್ರಬುದ್ಧ ವಿಮರ್ಶಕರು ತೀರಾ ವಿರಳ.
ಒಂದು ವೇಳೆ ಅವರು ಯಕ್ಷಗಾನಕ್ಕೆ ಬಂದರೂ ಸಹ ಕಲಾವಿದರ ನ್ಯೂನ್ಯತೆಗಳ ಬಗ್ಗೆ ಹೇಳುವುದಿಲ್ಲ. ತೀರ ಅಸಂಬದ್ದ ಆಯ್ತು ಅಂತ ಕಂಡ್ರೆ ಒಂದು ಘಳಿಗೆ ಯಕ್ಷಗಾನ ನೋಡಿ ಮನೆಗೆ ಹೋಗ್ತಾರೆ. ಯಕ್ಷರಂಗದಲ್ಲಿ ನಾನು ಒಂದು ಸಂಘವನ್ನು ಸ್ಥಾಪಿಸಿ ಆ ಮುಖೇನ ನನಗೆ ಸಾಧ್ಯವಾದಷ್ಟು ಯುವ ಕಲಾವಿದರನ್ನು ಪ್ರೋತ್ಸಾಹ ನೀಡಿ ಯಕ್ಷಗಾನದತ್ತ ಒಲವು ಮೂಡಿಸುವ ಉದ್ದೇಶವಿದೆ ಎಂದು ಹೇಳುತ್ತಾರೆ ಸುರೇಶ್ ಮೊಯ್ಲಿ.
ಸನ್ಮಾನ ಹಾಗೂ ಪ್ರಶಸ್ತಿ:-
ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಪರಿಷತ್ ಸನ್ಮಾನ.
ಕೊಪ್ಪ ತಾಲೂಕು ರಾಜ್ಯೋತ್ಸವ ಪ್ರಶಸ್ತಿ.
ಸುರ್ಮೆ ಅಕಾಡೆಮಿ ಧಾರವಾಡ ಸಂಸ್ಥೆಯಿಂದ ಕಲಾ ನವರತ್ನ ಪ್ರಶಸ್ತಿ.
ಹಾಗೂ ಸ್ಥಳೀಯ ಸಂಘ ಸಂಸ್ಥೆಗಳಿಂದ ಹಲವಾರು ಸನ್ಮಾನ ಪ್ರಶಸ್ತಿಗಳು ಲಭಿಸಿರುತ್ತದೆ.
31.01.2001ರಂದು ಸುರೇಶ್ ಮೊಯ್ಲಿ ಅವರು ಚಂದ್ರಾವತಿ ಅವರನ್ನು ಮದುವೆಯಾಗಿ ಮಗಳು ಸಿರಿ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.
ತಂದೆ, ತಾಯಿಯ, ಪತ್ನಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಸುರೇಶ್ ಮೊಯ್ಲಿ.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು.