ಕಾರ್ಕಳ : ಅಮಿತ್ ಎಸ್. ಪೈ ಸ್ಮಾರಕ ಯೋಗ ಧ್ಯಾನ ಮಂದಿರ ಪೆರ್ವಾಜೆಯಲ್ಲಿ ಹೊಸಸಂಜೆ ಪ್ರಕಾಶನದ 33ನೆಯ ಪ್ರಕಟಣೆ ಲೇಖಕ ಕೆ.ಎ. ಶೆಟ್ಟಿ ಕುಂಜತ್ತೂರು ಇವರ ‘ಭಾಂಧವ್ಯದ ಬೆಸುಗೆ’ ಕೃತಿ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 19-05-2024ರಂದು ನಡೆಯಿತು.
ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಕಾರ್ಕಳ ಸಾಹಿತ್ಯ ಸಂಘದ ಗೌರವಾಧ್ಯಕ್ಷ ತುಕಾರಾಮ ನಾಯಕ್ “ಆಧುನಿಕ ಬದುಕಿನಲ್ಲಿ ಬಹುವಿಧದ ತಂತ್ರಜ್ಞಾನ ಕೈಯಳತೆಯಲ್ಲಿದೆ. ಇದರಿಂದ ನಮ್ಮ ಬದುಕು ಸುಲಲಿತವಾಗಿದೆ ಎಂಬುದು ಸತ್ಯ. ಆದರೆ ಇದರ ಅತಿಯಾದ ಬಳಕೆಯಿಂದ ಮನುಷ್ಯನ ಬದುಕು ಕೂಡ ಅಸ್ತವ್ಯಸ್ತವಾಗಿದೆ ಎಂಬುದನ್ನು ಮರೆಯುವಂತಿಲ್ಲ. ಮೊಬೈಲ್, ಕಂಪ್ಯೂಟರ್, ಇಂಟರ್ ನೆಟ್ ಗಳಂತಹ ಆಧುನಿಕ ಸೌಲಭ್ಯಗಳನ್ನು ಮಿತವಾಗಿ ಬಳಸುವ ಮೂಲಕ ನಮ್ಮ ಬದುಕಿನಲ್ಲಿ ಸೌಕರ್ಯಗಳು ಸೃಷ್ಟಿಸುವ ಅನಾಹುತಗಳನ್ನು ತಪ್ಪಿಸಬಹುದು. ನೆಮ್ಮದಿಯ ಬದುಕು ಬೇಕಿದ್ದರೆ ಇಂತಹ ಸಾಧನಗಳ ಅತಿಬಳಕೆ ಬಿಟ್ಟು ಪುಸ್ತಕಗಳನ್ನು ಓದುವ ಮತ್ತು ಬರೆಯುವ ಮೂಲಕ ಬದಲಾವಣೆ ತಂದುಕೊಳ್ಳಬೇಕು” ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಕ್ವಾರಿ ಮತ್ತು ಕೃಷರ್ಸ್ ಓನರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ಅಧ್ಯಕ್ಷತೆ ವಹಿಸಿ ಮಾತಾಡಿದರು. ನಿವೃತ್ತ ಚಾರ್ಟರ್ಡ್ ಅಕೌಂಟೆಂಟ್ ಕಾರ್ಕಳ ಕಮಲಾಕ್ಷ ಕಾಮತ್, ಸುವರ್ಣಾ ನಾಯಕ್, ಕಾರ್ಕಳ ತಾಲೂಕು ಬಂಟ ಮಹಿಳಾ ಸಂಘದ ಅಧ್ಯಕ್ಷೆ ಸವಿತಾ ವಿಜಯ ಶೆಟ್ಟಿ, ಯಕ್ಷಗಾನ ಕಲಾವಿದೆ ಜಯಶ್ರೀ ಕೆ.ಎ. ಶೆಟ್ಟಿ, ಮಂದಿರದ ಪ್ರವರ್ತಕರಾದ ಶ್ರೀನಿವಾಸ ಪೈ, ನಿರ್ಮಲಾ ಪೈ, ಹೊಸಸಂಜೆ ಬಳಗದ ಅಧ್ಯಕ್ಷ ಆರ್. ದೇವರಾಯ ಪ್ರಭು ಇವರೆಲ್ಲ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು. ನಿವೃತ್ತ ಅಧ್ಯಾಪಿಕೆ ಲಲಿತಾ ಮುದ್ರಾಡಿ ಕೃತಿ ವಿಮರ್ಶೆ ಮಾಡಿದರು. ಪೂರ್ವಿ ಶೆಟ್ಟಿ ಸ್ವಾಗತಿಸಿ, ಲೇಖಕ ಕೆ.ಎ. ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ, ವಿಶ್ವಕುಮಾರ್ ಭಟ್ ಮುಂಡ್ಕೂರು ಕಾರ್ಯಕ್ರಮ ನಿರ್ವಹಿಸಿ ಹಾಗೂ ಶಮಿತ್ ಶೆಟ್ಟಿ ವಂದಿಸಿದರು.