ಮೂಡುಬಿದಿರೆ : ಶಿವರಾಮ ಕಾರಂತ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ಈ ಬಾರಿಯ ಡಾ. ‘ಶಿವರಾಮ ಕಾರಂತ ಪುರಸ್ಕಾರ’ಕ್ಕೆ ನಾಲ್ವರು ಸಾಹಿತಿಗಳ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಎಚ್.ಆರ್. ಲೀಲಾವತಿಯವರ ಆತ್ಮ ಕಥನ – ‘ಹಾಡಾಗಿ ಹರಿದಾಳೆ’, ಡಾ. ಬಿ. ಜನಾರ್ದನ ಭಟ್ ಇವರ ‘ವಿನೂತನ ಕಥನ ಕಾರಣ’, ಪ್ರೊ. ಎಚ್.ಟಿ. ಪೋತೆ ಇವರ ‘ಅಂಬೇಡ್ಕರ್ ಮತ್ತು…’, ಡಾ. ನಿತ್ಯಾನಂದ ಬಿ. ಶೆಟ್ಟಿಯವರ ‘ಮಾರ್ಗಾನ್ವೇಷಣೆ’ ಕೃತಿಗಳಿಗೆ ನೀಡಲಾಗಿದೆ. ಪುರಸ್ಕಾರವು ರೂ.10 ಸಾವಿರ ನಗದು ಗೌರವ ಸಂಭಾವನೆ ಹೊಂದಿದೆ ಎಂದು ಶಿವರಾಮ ಕಾರಂತ ಪ್ರತಿಷ್ಠಾನದ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ಡಾ. ಜಯಪ್ರಕಾಶ್ ಮಾವಿನಕುಳಿ ತಿಳಿಸಿದ್ದಾರೆ.
ಎಚ್.ಆರ್. ಲೀಲಾವತಿ ಇವರು ಆಕಾಶವಾಣಿ ಮೈಸೂರಿನ ‘ಎ’ ದರ್ಜೆಯ ಸಂಗೀತ ಸಂಯೋಜಕ ಕಲಾವಿದೆ. ಹಲವಾರು ಶ್ರೇಷ್ಟ ಸಂಗೀತ ಅಧ್ಯಾಪಕರಿಂದ ಶಾಸ್ತ್ರೀಯ ಸಂಗೀತದೊಂದಿಗೆ ಭಾವಗೀತೆ ಭಜನೆಗಳಂತಹ ಸಂಗೀತದ ಬೇರೆ ಬೇರೆ ವಿಭಾಗಗಳನ್ನು ಕಲಿತು ಕರಗತ ಮಾಡಿಕೊಂಡವರು. ಮೈಸೂರು ಬೆಂಗಳೂರು ಕಲ್ಕತ್ತ ಮಾತ್ರವಲ್ಲದೆ, ಭಾರತದಾದ್ಯಂತ ಬೇರೆ ಬೇರೆ ರಾಜ್ಯಗಳ ಆಕಾಶವಾಣಿ ನಿಲಯಗಳಲ್ಲಿ ಹಾಡಿದ ಕೀರ್ತಿಯೊಂದಿಗೆ ದೇಶ ವಿದೇಶಗಳಲ್ಲಿ ಸುಗಮ ಸಂಗೀತ ಗೀತ ಗಾಯನ ಮಾಡಿದ ಖ್ಯಾತಿ ಇವರದು. ಸುಮಾರು ಎಂಟಕ್ಕಿಂತಲೂ ಹೆಚ್ಚು ವಿವಿಧ ರಾಜ್ಯಗಳಲ್ಲಿ ನಡೆದ ಸಂಗೀತ ಸಮ್ಮೇಳನಗಳ ಅಧ್ಯಕ್ಷ ಸ್ಥಾನವನ್ನು ನಿರ್ವಹಿಸಿದ್ದಾರೆ. ಪ್ರಪ್ರಥಮವಾಗಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಹುಟ್ಟು ಹಾಕಿದ ಖ್ಯಾತಿ ಇವರದು. ಮಾತ್ರವಲ್ಲದೆ ಲೇಖನಗಳು ಕಥೆಗಳು, ಕವನಗಳು, ಮಕ್ಕಳ ಕಥೆಗಳು, ಹಾಸ್ಯ ಲೇಖನಗಳನ್ನು ವಿವಿಧ ಪತ್ರಿಕೆಗಳಿಗೆ ಬರೆದಂತಹ ಲೇಖಕಿಯೂ ಆಗಿದ್ದಾರೆ. ಇವರ ಸಾಹಿತ್ಯ ಸೇವೆಗೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳೂ ಇವರನ್ನರಸಿ ಬಂದಿವೆ.
ಡಾ. ಬಿ. ಜನಾರ್ದನ ಭಟ್ ಇವರು ಪದವಿ ಪೂರ್ವ ಕಾಲೇಜುಗಳಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ಮಣ್ಣು ಇಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕನ್ನಡದ ಸವ್ಯಸಾಚಿ ಸಾಹಿತಿಯಾಗಿರುವ ಜನಾರ್ದನ ಭಟ್ ಇವರು ಕತೆ, ಕಾದಂಬರಿ, ವಿಮರ್ಶೆ, ಅನುವಾದ, ಗ್ರಂಥ ಸಂಪಾದನೆಯೂ ಸೇರಿದಂತೆ ಒಟ್ಟು 100 ಕೃತಿಗಳನ್ನು ಇದುವರೆಗೆ ಪ್ರಕಟಿಸಿದ್ದಾರೆ. ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಮಾಲೆಯ 240 ಪುಸ್ತಕಗಳನ್ನು ಸಂಪಾದಿಸಿಕೊಟ್ಟಿದ್ದಾರೆ. ಸುಮಾರು 18ಕ್ಕೂ ಹೆಚ್ಚು ಅನುವಾದ ಕೃತಿಗಳನ್ನು ಪ್ರಕಟಿಸಿದ ಇವರು ಕೃತಿಗಳನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಮತ್ತು ಕನ್ನಡದಿಂದ ಇಂಗ್ಲೀಷಿಗೆ ಅನುವಾದ ಮಾಡುವ ಪಾಂಡಿತ್ಯವನ್ನು ಮೈಗೂಡಿಸಿಕೊಂಡಿದ್ದಾರೆ. ‘ಉತ್ತರಾಧಿಕಾರ’, ‘ಹಸ್ತಾಂತರ’ ಮತ್ತು ‘ಅನಿಕೇತನ’ ಸೇರಿದಂತೆ ಏಳು ಕಾದಂಬರಿಗಳ ರಚನೆ, ‘ಮೊದಲನೆಯ ಇಲಿ’, ‘ಪುಂಡಗೋಳಿಯ ಕ್ರಾಂತಿ’ ಇತ್ಯಾದಿ 7 ಕಥಾ ಸಂಕಲನಗಳು ಇವರ ಲೇಖನಿಯಿಂದ ಬೆಳಕು ಕಂಡಿವೆ. 37 ಸಾಹಿತ್ಯ ವಿಮರ್ಶೆಯ ಕೃತಿಗಳು ಲೋಕಾರ್ಪಣೆ ಗೊಂಡಿವೆ. ‘ದಕ್ಷಿಣ ಕನ್ನಡದ ಶತಮಾನದ ಕಾವ್ಯ’, ‘ದಕ್ಷಿಣ ಕನ್ನಡದ ಶತಮಾನದ ಕತೆಗಳು’, ‘ಉಡುಪಿ ಜಿಲ್ಲೆಯ ಶತಮಾನದ ಕತೆಗಳು’, ‘ಓಬೀರಾಯನ ಕಾಲದ ಕತೆಗಳು’, ‘ಓಬೀರಾಯನ ಕಾಲದ ಕಥೆಗಳಲ್ಲಿ ಸ್ವಾತಂತ್ರ್ಯದ ತೆರೆಗಳು’ ಇತ್ಯಾದಿ ಐದು ಇವರ ಪ್ರಮುಖ ಸಂಪಾದಿತ ಗ್ರಂಥಗಳು. 10ಕ್ಕಿಂತಲೂ ಹೆಚ್ಚು ಪ್ರತಿಷ್ಟಿತ ಪ್ರಶಸ್ತಿಗಳು, ಮಾನ, ಸಮ್ಮಾನಗಳು ಇವರ ಸಾಹಿತ್ಯ ಕೃಷಿಗೆ ಒಳಿದು ಬಂದಿರುವುದು ಹೆಮ್ಮೆಯ ವಿಚಾರ.
ಪ್ರೊ. ಎಚ್.ಟಿ. ಪೋತೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿಯವರು. ನಾಡಿನ ಸಂವೇದನಾಶೀಲ ಕಥೆಗಾರ, ಕಾದಂಬರಿಕಾರ, ಪ್ರಬಂಧಕಾರ, ವಿಮರ್ಶಕ, ಅನುವಾದಕ-ಚಿಂತಕ, ಜಾನಪದ ವಿದ್ವಾಂಸ ಹಾಗೂ ಸಂಶೋಧಕರಾಗಿದ್ದಾರೆ. ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ, ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆ, ಪ್ರಸಾರಾಂಗದ ನಿರ್ದೇಶಕ, ಬಿ.ಆರ್. ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನ ಸಂಸ್ಥೆಯ ನಿರ್ದೇಶಕ, ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಇತ್ಯಾದಿ ಜವಾಬ್ದಾರಿಯುತ ಆಡಳಿತದ ಅನುಭವ ಹೊಂದಿದ್ದಾರೆ. ಜಾನಪದದ ವಿವಿಧ ಆಯಾಮಗಳಲ್ಲಿ ಹದಿನೈದಕ್ಕೂ ಹೆಚ್ಚು ಕೃತಿಗಳ ರಚನೆ, ದಲಿತ ಸಾಹಿತ್ಯದಲ್ಲಿ ಮೂವತ್ತಕ್ಕೂ ಹೆಚ್ಚು ಕೃತಿಗಳು, ಬಾಬಾಸಾಹೇಬರೆಡೆಗೆ ಖರ್ಗೆ…, ಅಂಬೇಡ್ಕರ್ ಫಸಲು, ಪೆರಿಯಾರ್, ಅಂಬೇಡ್ಕರ್ ಭಾರತ, ಕುಮಾರ ಕಕ್ಕಯ್ಯ ಪೋಳ, ಶಾಹೂ ಮಹಾರಾಜ, ಬಿ. ಶ್ಯಾಮಸುಂದರ್ ಹದಿನೈದಕ್ಕೂ ಹೆಚ್ಚು ಜೀವನ ಕಥನ ಕೃತಿಗಳು, ಚಮ್ಮಾವುಗೆ, ಬೆತ್ತಲಾದ ಚಂದ್ರ, ಕರುಳರಿಯುವ ಹೊತ್ತು, ಮಾದನಕರೆಂಟ್ ಕತಂತ್ರ, ಆನೇಕಲವ್ಯ ಒಟ್ಟು ಐದು ಕಥಾ ಸಂಕಲನಗಳು, ಬಯಲೆಂಬೊ ಬಯಲು, ಮಹಾಬಿಂದು ಹಾಗೂ ರಮಾಬಾಯಿ (ಅನುಸಜನ) ಇತ್ಯಾದಿ ಕಾದಂಬರಿಗಳು ಇವು ಇವರ ಸಾಹಿತ್ಯ ಪಾಂಡಿತ್ಯದ ಕುರಿತಾದ ಸಾಕ್ಷಿಗಳು. ಇವರಿಗೆ ದೊರೆತ ಸುಮಾರು ಹತ್ತಕ್ಕೂ ಮಿಕ್ಕಿದ ಪ್ರಶಸ್ತಿಗಳು, ಮಾನ, ಸಮ್ಮಾನ, ಗೌರವಗಳು ಇವರ ಸಾಹಿತ್ಯಿಕ ಪಾಂಡಿತ್ಯಕ್ಕೆ ಸಂದ ಗೌರವ.
ನಿತ್ಯಾನಂದ ಬಿ. ಶೆಟ್ಟಿಯವರು ಮೂಲತಃ ಮಂಗಳೂರಿನವರು (ಸೋಮೇಶ್ವರ-ಕೋಟೆಕಾರು). ಮೂಡಬಿದಿರೆಯ ಶ್ರೀ ಮಹಾವೀರ ಕಾಲೇಜಿನಲ್ಲಿ ಸೇವೆಗೆ ಸೇರಿದ ಇವರು ಪ್ರಸ್ತುತ ತುಮಕೂರು ವಿಶ್ವವಿದ್ಯಾಲಯದಲ್ಲಿ ಡಿವಿಜಿ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥರಾಗಿ ಹಾಗೂ ಪ್ರಸಾರಾಂಗದ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಸಂಶೋಧನಾ ಪತ್ರಿಕೆ ‘ಲೋಕಜ್ಞಾನ’ದ ಮತ್ತು ಹೆಸರಾಂತ ವಿದುಷಿ ಪ್ರೊ. ಕಪಿಲಾ ವಾತ್ಸಾಯನ ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡ ‘ಕಲಾತತ್ವಕೋಶ’ದ ಹದಿನಾರು ಸಂಪುಟಗಳಲ್ಲಿ ಮೊದಲ ನಾಲ್ಕು ಸಂಪುಟಗಳನ್ನು ಕನ್ನಡದಲ್ಲಿ ಅನುವಾದಿಸುವ ಯೋಜನೆಯ ಸಂಪಾದಕರಾಗಿರುವ ಹೆಗ್ಗಳಿಕೆ ಇವರದು. ಸಾಹಿತ್ಯ ಸಂಶೋಧನೆಯ ತತ್ವ ವಿಚಾರಗಳನ್ನು ಗುರು-ಶಿಷ್ಯರ ಸಂಭಾಷಣೆಯ ರೂಪದಲ್ಲಿರುವ ‘ಮಾರ್ಗಾನ್ವೇಷಣೆ’ ಕೃತಿ ಸಂಶೋಧನಾ ಮೀಮಾಂಸೆಗೆ ಸಂಬಂಧಿಸಿದ ಕೃತಿ. ‘ಹಾ.ಮಾ. ನಾಯಕ ಪ್ರಶಸ್ತಿ’ಯನ್ನು ಪಡೆದಿರುವ ಪ್ರೊ. ನಿತ್ಯಾನಂದ ಬಿ. ಶೆಟ್ಟಿಯವರ ಅಂಕಣ-ಲೇಖನಗಳು ಪ್ರಜಾವಾಣಿ, ಹೊಸಮನುಷ್ಯ, ಸಮಾಜಮುಖಿ, ಬುಕ್ ಬ್ರಹ್ಮ, ವಾರ್ತಾಭಾರತಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.