‘ಮೊದಲು ಹಿರಿಯ ಸಾಹಿತಿಗಳು ಬರೆದ ಒಳ್ಳೆಯ ಕೃತಿಗಳನ್ನು ಓದಿ. ಅನಂತರ ಬರೆಯಿರಿ’ ಎಂದು ನಾವು ತರುಣ ಬರಹಗಾರರಿಗೆ ಯಾವಾಗಲೂ ಸಲಹೆ ನೀಡುತ್ತಿರುತ್ತೇವೆ. ಇವತ್ತು ನಾವು ನೋಡುತ್ತಿರುವ ಅನೇಕ ತರುಣ ಲೇಖಕರಲ್ಲಿ ಒಂದು ರೀತಿಯ ಅಪಕ್ವತೆ, ಯಾಂತ್ರಿಕತೆ ಮತ್ತು ಅನುಭವದ ಕೊರತೆಯಿಂದ ಉಂಟಾಗುವ ಚರ್ವಿತ-ಚರ್ವಣಗಳನ್ನು ನಾವು ಕಾಣುತ್ತಿರುವುದು ಸುಳ್ಳಲ್ಲ. ಆದರೆ ಸಲಹೆಗಳನ್ನು ಬರೇ ಬಾಯಿ ಮಾತಿನಲ್ಲಿ ಹೇಳಿದರೆ ಸಾಕಾಗುವುದಿಲ್ಲ. ಇದನ್ನು ಮನಗಂಡ ಪ್ರಬುದ್ಧ ವಿಮರ್ಶಕ ನರೇಂದ್ರ ಪೈಯವರು ಜಾಗತಿಕ ಸಾಹಿತ್ಯದಲ್ಲಿ ಬಹಳಷ್ಟು ಹೆಸರು ಮಾಡಿ ಶ್ರೇಷ್ಠ ಲೇಖಕರು ಅನ್ನಿಸಿಕೊಂಡ ಹದಿನಾಲ್ಕು ಮಂದಿ ಲೇಖಕರ ಹದಿನಾರು ಕೃತಿಗಳನ್ನು ಓದಿ ತಮ್ಮ ಸೂಕ್ಷ್ಮ ಅವಲೋಕನದ ಮೂಲಕ ಅವುಗಳನ್ನು ವಿಶ್ಲೇಷಣೆ ಮತ್ತು ವಿಮರ್ಶೆಗೆ ಒಳಪಡಿಸಿ ‘ಸಾವಿರದ ಒಂದು ಪುಸ್ತಕ’ ಎಂಬ 180 ಪುಟಗಳ ಒಂದು ಕೃತಿಯನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಸಮರ್ಪಿಸಿದ್ದಾರೆ.
ಈ ಶೀರ್ಷಿಕೆಯನ್ನು ಮೊದಲು ನೋಡಿದಾಗ ನನಗೆ ಥಟ್ಟನೆ ಅರೇಬಿಯನ್ ನೈಟ್ಸ್ ನ ‘ಸಾವಿರದ ಒಂದು ರಾತ್ರಿ’ಯು ನೆನಪಾಯಿತು. ಅದರಲ್ಲಿ ಕ್ರೂರಿಯಾದ ರಾಜನ ಮನಃಪರಿವರ್ತನೆ ಮಾಡಲು ಜಾಣ ಹೆಣ್ಣೊಬ್ಬಳು ಜಾಣತನದಿಂದ ನಿಜವಾಗಿಯೂ ಸಾವಿರದ ಒಂದು ರಾತ್ರಿಗಳ ಕಾಲ ಕಥೆಗಳನ್ನು ಹೇಳುತ್ತಾಳೆ. ಹಾಗೆ ಇಲ್ಲಿಯೂ ಸಾವಿರದ ಒಂದು ಪುಸ್ತಕಗಳ ವಿಮರ್ಶೆ ಇರಬಹುದು ಎಂದು ನಾನು ಎಣಿಸಿದೆ. ಆದರೆ ಪೈಯವರದೇ ಮಾತುಗಳ ಮೂಲಕ ಗೊತ್ತಾಯಿತು ‘ಇದು ಗಣಪತಿ ಜಾಣನಾಗಿ ಅಪ್ಪ ಅಮ್ಮನಿಗೆ ಸುತ್ತು ಬಂದು ಅದು ಮೂರು ಲೋಕ ಸುತ್ತಿದ್ದಕ್ಕೆ ಸಮ’ ಎಂದು ಹೇಳಿದಂತೆ ಎಂದು. ಗಣಪತಿಯ ಮಾತೂ ಸುಳ್ಳಲ್ಲ, ಈ ಕೃತಿಯಲ್ಲಿ ಉಲ್ಲೇಖಿಸಿರುವ ಕೃತಿಗಳ ಓದು ಸಾವಿರದ ಒಂದು ಪುಸ್ತಕಗಳ ಓದಿಗೆ ಸಮ ಎಂಬ ಪೈಯವರ ಮಾತೂ ಸಮರ್ಥನೀಯವೆಂದು ಅನ್ನಿಸಿತು.
ಮೊದಲೇ ಹೇಳಿದಂತೆ ಈ ಕೃತಿಯಲ್ಲಿ ಹದಿನಾಲ್ಕು ಮಂದಿ ಸಮಕಾಲೀನ ಪ್ರಮುಖ ಲೇಖಕರ ಕೆಲವು ಇಂಗ್ಲಿಷ್ ಕೃತಿಗಳು ಮತ್ತು ಇನ್ನು ಕೆಲವು ಅನುವಾದದ ಮೂಲಕ ಇಂಗ್ಲೀಷಿಗೆ ಬಂದ ಕೃತಿಗಳ ಕುರಿತಾದ ಲೇಖಕರ ಅನ್ನಿಸಿಕೆ- ಅಭಿಪ್ರಾಯಗಳಿವೆ. ಎಲ್ಲವೂ ಮನುಷ್ಯ ಮನಸ್ಸಿನ ಒಳನೋಟವನ್ನು ಆಳದಲ್ಲಿ ಸ್ಪರ್ಶಿಸುವ ಕೃತಿಗಳು. ಏಕಕಾಲದಲ್ಲಿ ಅತ್ಯಂತ ಒಳ್ಳೆಯವನೂ ಅತ್ಯಂತ ಕೆಟ್ಟವನೂ ಆಗಬಲ್ಲ ಮನುಷ್ಯನ ಒಳಗನ್ನು ತೆರೆದು ತೋರಿಸುವ Afro-Australian ಲೇಖಕ ಜೆ.ಎಂ. ಕೊಟ್ಸಿಯ ‘Disgrace’, ಮನೋಲೋಕದ ಗಡಿಗಳನ್ನು ಗುರುತಿಸಲು ಪ್ರಯತ್ನಿಸುವ ಮೇಘಾಲಯದ ಲೇಖಕಿ ಅಂಜುಂ ಹಸನ್ ಅವರ ‘Lunatic in my Head’, ಅಪ್ರಬುದ್ಧ ಮನಸ್ಸುಗಳ ಪೊಸೆಸಿವ್ ನೆಸ್, ಪ್ರೇಮ-ಕಾಮ, ನೈತಿಕತೆ, ಪಾಪಪ್ರಜ್ಞೆ, ಅಸ್ವಸ್ಥ ಮನಸ್ಥಿತಿಗಳೇ ಕೇಂದ್ರವಾಗುಳ್ಳ Czek-French ಲೇಖಕ ಮಿಲನ್ ಕುಂದೇರಾ ಅವರ ‘Life is Elsewhere’, ಜೆರಾರ್ಡ್ಡಿ ನೆರ್ವಾಲೋನ ‘ಸಿಲ್ವಿ’ ಎಂಬ ಅಪೂರ್ವ ಕಾದಂಬರಿಯ ಅದ್ಭುತ ವಿಶ್ಲೇಷಣೆಯನ್ನು ತನ್ನ ಆರು ಸಂಶೋಧನಾತ್ಮಕ ಲೇಖನಗಳಲ್ಲಿ ಮಾಡಿದಂತಹ Italian ಲೇಖಕ ಇಕೋ ಉಂಬರ್ತೋನ ಕೃತಿ ‘Six Walks in the Fictional Woods’, ಬರವಣಿಗೆಯ ಒಳಮರ್ಮಗಳನ್ನೂ ಅದರ ಕಷ್ಟಗಳನ್ನೂ, ಬರಹಗಾರನಿಗೆ ಇರಬೇಕಾದ ಪರಿಶ್ರಮ ಇತ್ಯಾದಿಗಳ ಬಗ್ಗೆ ಸಾಕಷ್ಟು ಒಳನೋಟಗಳನ್ನು ಕೊಡುವ ಇಕೋ ಉಂಬರ್ತೋನ ‘The Confessions of a Young Novelist’, ಜಾನಪದ, ಇತಿಹಾಸ, ಚಿತ್ರಕಲೆ, ಪಾಶ್ಚಾತ್ಯ ಪ್ರಭಾವ, ದೇಶದ ಸಂಸ್ಕೃತಿಯ ಮೇಲೆ ಪೂರ್ವ ದೇಶಗಳ ಛಾಯೆ, ಜನಸಾಮಾನ್ಯರ ಸಾಂಸಾರಿಕ ಸಂಕಷ್ಟಗಳು, ಮಕ್ಕಳ ಆಟ ಪಾಠಗಳು, ಸಮುದ್ರ ತೀರ, ನಾವೆಗಳ ಓಡಾಟ, ಕೋರ್ಟು ಕಛೇರಿ, ಪುಸ್ತಕಗಳ ಕುರಿತು ಸಮೃದ್ಧವಾದ ಚರ್ಚೆಗಳಿರುವ Turkish ಲೇಖಕ ಓರ್ಹಾನ್ ಪಮುಕನ ‘The Other Colours’, ಜಾತಿ ವರ್ಗ ಧರ್ಮಗಳ ಭೇದವಿಲ್ಲದೆ ಸಾಮರಸ್ಯದ ಬದುಕನ್ನು ಸಾಗಿಸುತ್ತಿದ್ದ ಮುಂಬಯಿ ಮಹಾನಗರದಲ್ಲಿ ಧರ್ಮ ರಾಜಕೀಯವು ಬಿತ್ತಿದ ವಿಷಬೀಜವು ಹೇಗೆ ಅಲ್ಲಿನ ಬದುಕನ್ನು ಹೊಸಕಿ ಹಾಕಿದೆ ಎಂಬುದನ್ನು ವಿಷಾದದೊಂದಿಗೆ ಚಿತ್ರಿಸುವ ಮುಂಬಯಿ ಲೇಖಕ ಸೈರಸ್ ಮಿಸ್ಟ್ರಿಯ ‘The Radiance of Ashes’, ವಿಷಮ ಪರಿಸ್ಥಿತಿಯಲ್ಲಿ ನಿರಾಶ್ರಿತರಾಗಿ ತಮ್ಮ ಊರಿಗೆ ಬಂದು ನೆಲೆಸಿದ ಅಸಹಾಯಕ ಮಂದಿಯನ್ನು ಸ್ವೀಕರಿಸುವುದೋ ಬೇಡವೋ ಎಂಬ ದೇಶೀಯರ ಸಂದಿಗ್ಧ ಮನಸ್ಥಿತಿಯ ಕುರಿತಾದ ಜರ್ಮನ್ ಲೇಖಕಿ ಜೆನ್ನಿ ಎರ್ಪೆನ್ ಬೆಕ್ ಇವರ ‘Go Went Gone’, ಕೇರಳದ ಕೃಷಿ ಮತ್ತು ಮೀನುಗಾರಿಕೆಯ ಬದುಕಿನ ವಿವರಗಳು, ಅಲ್ಲಿನ ಸಮಾಜದ ಮೇಲ್ವರ್ಗ ಮತ್ತು ಕೆಳವರ್ಗಗಳ ನಡುವಣ ಸಂಬಂಧ, ಜಾತಿ ಪದ್ಧತಿ, ಶೋಷಣೆಯ ಹಿನ್ನೆಲೆ, ಅಡುಗೆ, ತಿನಿಸುಗಳು, ಗಂಡು ಹೆಣ್ಣು ಸಂಬಂಧಗಳ ಕುರಿತಾದ ಮಹಾ ಪುರಾಣದಂತಿರುವ ಕೇರಳದ ಲೇಖಕ ಎಸ್. ಹರೀಶ್ ಅವರ ‘The Moustache’, 1948ರಲ್ಲಿ ಪ್ಯಾಲೆಸ್ಟೈನ್ ಮೇಲೆ ಇಸ್ರೇಲ್ ನಡೆಸಿದ ಆಕ್ರಮಣ ಹಾಗೂ ದೌರ್ಜನ್ಯಗಳಿಂದಾಗಿ ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದು ಇಂದು ಇತಿಹಾಸವಾದರೂ ಅದನ್ನು ನೈತಿಕ ನೆಲೆಯಲ್ಲಿ ಮತ್ತು ಯುದ್ಧದ ಹಿನ್ನೆಲೆಯಲ್ಲಿ ವರ್ತಮಾನದ ಹಿಂಸೆಯಯನ್ನಾಗಿಸಿ ಅದೊಂದು ನಿತ್ಯ ಕಥೆ ಎಂಬಂತೆ ಬಿಂಬಿಸುವ ಪ್ಯಾಲೆಸ್ಟೈನ್ ಲೇಖಕ ಅದಾನಿಯಾ ಶಿಬ್ಲಿಯವರ ‘The Minor Details’, ಎಲೆಯ ಮರೆಯಲ್ಲೇ ಉಳಿದು ಅಕಾಲ ಮೃತ್ಯುವಿಗೀಡಾದ ಕೇರಳದ ಪ್ರತಿಭಾವಂತ ಕವಿ ಅಜಿತನ್ ಕುರುಪ್ ಅವರ ಆಯ್ದ ಕವಿತೆಗಳ ಸಂಗ್ರಹಗಳಾದ ‘A Fistful of Twilight’ and ‘The Metaphysics of the Tree frogs Silence’, ಎಳೆಯ ವಯಸ್ಸಿನಲ್ಲಿಯೇ ದೌರ್ಜನ್ಯಕ್ಕೊಳಗಾಗಿ, ಅಲೆಮಾರಿಯಾಗಿ, ನಿರ್ಗತಿಕಳಾಗಿ, ನಿಂದೆಗೊಳಗಾಗಿ, ಬದುಕಿನಲ್ಲಿ ಮುಂದೆ ಬಂದು ಸಮಾಜ ಸೇವಕಿಯಾಗಿ ಅಸಹಾಯಕ ಮಂದಿಯ ಪಾಲಿಗೆ ಬೆಳಕಾದ ವ್ಯಕ್ತಿಯ ಕಥೆ ಹಿಂದಿ ಲೇಖಕಿ ಗೀತಾಂಜಲಿ ಶ್ರೀಯವರ (ಡೈಸಿ ರಾಕ್ವೆಲ್ ಇಂಗ್ಲೀಷಿಗೆ ಅನುವಾದಿಸಿದ) :The Tomb of Sand’ ಆಡುಮಾತಿಗೂ ಬರೆಯುವ ಭಾಷೆಗೂ ನಡುವಣ ಅಂತರವನ್ನು ಶೋಧಿಸುವ ಯಾನ್ ಫಾಸ್ಸೆಯವರ ಉಪನ್ಯಾಸಗಳು, ಮನುಷ್ಯನ ಪಂಚೇಂದ್ರಿಯಗಳ ಮೂಲಕ ಸಾಧ್ಯವಾಗುವ ಗ್ರಹಿಕೆಯ ಇತಿಮಿತಿ, ಮನಸ್ಸಿನ ವಿಶ್ಲೇಷಣ ಸಾಮರ್ಥ್ಯ ಮತ್ತು ನೆನಪಿನ ಸಾಮರ್ಥ್ಯ, ಒಂದಕ್ಕೊಂದನ್ನು ಜೋಡಿಸಿಕೊಡುವ ಸಾಮರ್ಥ್ಯಗಳಿಗಿರುವ ಇತಿಮಿತಿಗಳಾಚೆ ಪ್ರಜ್ಞೆಯನ್ನು ಜಾಗೃತವಾಗಿರಿಸಿಕೊಂಡು ಬದುಕುವ ಸವಾಲಿನ ಸುತ್ತ ಇರುವ ಬಾಂಗ್ಲಾ ದೇಶದಲ್ಲಿ ಹುಟ್ಟಿದ ಬ್ರಿಟಿಷ್ ಲೇಖಕ ಜಿಯಾ ಹೈದರ್ ರೆಹಮಾನರ ‘In the Light of What We Know’, ಕಾಮ, ಪ್ರೇಮ, ಸ್ನೇಹ, ಕೊಲೆ, ಪಾಪಪ್ರಜ್ಞೆ, ಹೊಟ್ಟೆ ಪಾಡು ಮತ್ತು ನಾಗರಿಕ ಜಗತ್ತಿನ ಮನುಷ್ಯ, ಅವನ ಮನಶ್ಶಾಸ್ತ, ಲೈಂಗಿಕ ಸ್ವಾತಂತ್ರ್ಯ ಪ್ರಜ್ಞೆ, ಡ್ರಗ್ ಸಂಸ್ಕೃತಿ, ಕಾರ್ಮಿಕ -ಬಂಡವಾಳಶಾಹಿಗಳ ನಡುವಣ ಸಂಘರ್ಷಗಳನ್ನು ಚಿತ್ರಿಸುವ ಪಾಕಿಸ್ತಾನಿ ಬ್ರಿಟಿಷ್ ಲೇಖಕ ಹನೀಫ್ ಕುರೇಶಿಯವರ ‘Something to Tell You’ – ಎಂಬೀ ಹದಿನಾರು ಕೃತಿಗಳ ಮನೋಜ್ಞ ವಿಶ್ಲೇಷಣೆಗಳು ಇಲ್ಲಿವೆ.
ನರೇಂದ್ರ ಪೈಯವರ ಓದಿನ ವಿಸ್ತಾರ ಬಹಳ ದೊಡ್ಡದು. ಕನ್ನಡ ಮತ್ತು ಇಂಗ್ಲಿಷ್ (ಇತರ ಹಲವು ಭಾಷಾ ಕೃತಿಗಳು ಇಂಗ್ಲಿಷ್ ಅನುವಾದ ಸೇರಿದಂತೆ) ಸಾಹಿತ್ಯಗಳ ನೂರಾರು ಉತ್ತಮ ಕೃತಿಗಳನ್ನು ಓದಿ ಚಿಂತನೆ ಮಾಡಿದ ಅನುಭವ ಅವರದ್ದು. ಓದುವುದು ಮಾತ್ರವಲ್ಲದೆ ಆ ಕೃತಿಗಳ ಸೂಕ್ಷ್ಮ ಒಳನೋಟಗಳನ್ನು ಬಹಳ ಅಚ್ಚುಕಟ್ಟಾಗಿ ಪ್ರಸ್ತುತ ಪಡಿಸುವ ಬರವಣಿಗೆಯ ಕಲೆಯೂ ಅವರಿಗೆ ಸಿದ್ಧಿಸಿದೆ. ಅದರ ಜೊತೆಗೇ ಯುವ ಜನರು ತಾವು ಹೇಳುವುದನ್ನು ಓದಿ ಅರ್ಥ ಮಾಡಿಕೊಳ್ಳಬೇಕು ಎಂಬ ಕಾಳಜಿಯೂ ಅವರಲ್ಲಿ ಬಹಳಷ್ಟು ಇದೆ. ಆದ್ದರಿಂದಲೇ ಒಂದು ತರಗತಿಯಲ್ಲಿ ಅಧ್ಯಾಪಕರು ವಿದ್ಯಾರ್ಥಿಗಳಿಗೆ ತಿಳಿಯ ಹೇಳುವಂತೆ ಎತ್ತಿಕೊಳ್ಳುವ ವಿಷಯಗಳಿಗೆ ಸೂಕ್ತವಾಗಿ ವಿದ್ಯಾರ್ಥಿಗಳಿಗೆ ಪರಿಚಿತವಾಗಿರಬಹುದಾದ ಕನ್ನಡದ ಜಾನಪದ ಗೀತೆಗಳು, ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ, ಸಾಹಿತಿಗಳಾದ -ಅಡಿಗರು, ಅನಂತಮೂರ್ತಿ, ಕಾರಂತ, ಭೈರಪ್ಪ, ಕಾರ್ನಾಡ್, ಬೇಂದ್ರೆ, ಚಿತ್ತಾಲ, ವ್ಯಾಸರಾಯ ಬಲ್ಲಾಳ, ಜಯಂತ್ ಕಾಯ್ಕಿಣಿ, ವಿವೇಕ ಶಾನಭಾಗ ಮೊದಲಾದವರ ಸಾಹಿತ್ಯದಿಂದ ಆಯ್ದ ವಿಚಾರಗಳನ್ನು ಅವರು ಸಮಾಂತರವಾಗಿ ಉಲ್ಲೇಖಿಸುತ್ತಾರೆ. ಇಂಗ್ಲೀಷ್ ನಿಂದಲೂ ಟಾಲ್ ಸ್ಟಾಯ್, ದಾಸ್ತೋವ್ ಸ್ಕಿ, ಗಾರ್ಸಿಯಾ ಮಾರ್ಕೆಸ್, ವಿ.ಎಸ್. ನೈಪಾಲ್, ಇಟಾಲೋ ಕೆಲ್ವಿನೋ ಮೊದಲಾದವರ ಕೃತಿಗಳ ಬಗ್ಗೆ ಹೇಳುತ್ತಾರೆ, ಇದು ಪೈಯವರ ವಿಮರ್ಶೆಗೆ ಮೆರುಗನ್ನು ನೀಡುತ್ತದೆ.
ಜಾಗತಿಕ ಮಟ್ಟದ ಸಮಕಾಲೀನ ಸಾಹಿತಿಗಳ ಕೃತಿಗಳ ಕುರಿತಾದ ಇಂಥ ಪಾಂಡಿತ್ಯ ಪೂರ್ಣ ಕೃತಿ ಇಂದಿನ ಅಗತ್ಯ ಕೂಡಾ ಆಗಿದೆ. ಇಂಗ್ಲೀಷ್ ಮತ್ತು ಕನ್ನಡ ಸಾಹಿತ್ಯಗಳಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುವಾಗ ಪ್ರಾಧ್ಯಾಪಕರುಗಳು ಇಂಥ ಕೃತಿಗಳನ್ನು ವಿದ್ಯಾರ್ಥಿಗಳ ಗಮನಕ್ಕೆ ತರಬೇಕಾಗಿದೆ. ಇಂಥ ಒಂದು ಒಳ್ಳೆಯ ಕೃತಿಗಾಗಿ ಪರಿಶ್ರಮಿಸಿ ಅದರಲ್ಲಿ ಯಶಸ್ಸು ಗಳಿಸಿದ ನರೇಂದ್ರ ಪೈ ಅವರಿಗೆ ಅಭಿನಂದನೆಗಳು.
ಡಾ. ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.
ಲೇಖಕ ನರೇಂದ್ರ ಪೈ ಅವರು ಕನ್ನಡದ ಖ್ಯಾತ ವಿಮರ್ಶಕರಲ್ಲಿ ಒಬ್ಬರು. ಸಾಹಿತ್ಯದ ಓದು-ಬರಹಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಇವರು ಎರಡು ಕೃತಿಗಳನ್ನು ರಚಿಸಿದ್ದಾರೆ. ಅವರ ಹಲವಾರು ವಿಮರ್ಶಾ ಲೇಖನಗಳನ್ನು ಕನ್ನಡದ ಹಲವು ದೈನಂದಿನ ಪತ್ರಿಕೆ, ಮಾಸಿಕ ಮ್ಯಾಗಸೈನ್‌ಗಳಲ್ಲಿ ಪ್ರಕಟಗೊಂಡಿವೆ. ಕನ್ನಡದ ನೂರಾರು ಪುಸ್ತಕಗಳನ್ನು ವಿಮರ್ಶಿಸಿ ಪರೋಕ್ಷವಾಗಿ ಲೇಖಕರನ್ನು ತಿದ್ದುವ ಕೆಲಸ ಮಾಡಿದ್ದು, ಈ ಸಲುವಾಗಿ ‘ಟಿಪ್ಪಣಿ ಪುಸ್ತಕ’ ಎಂಬ ಬ್ಲಾಗ್ ತೆರೆದಿದ್ದಾರೆ. ಅವರ ಎಲ್ಲಾ ವಿಮರ್ಶಾ ಲೇಖನಗಳನ್ನು ಅವರ ಬ್ಲಾಗ್ ನಲ್ಲಿಯೂ ಓದಬಹುದಾಗಿದೆ.