ಮಂಗಳೂರಿನ ದುರ್ಗಾಮಹಿ ಪ್ರಕಾಶನ ಪ್ರಕಟಿಸಿರುವ ಕವಯಿತ್ರಿ ಮತ್ತು ಸಂಘಟಕಿ ಗೀತಾ ಲಕ್ಷ್ಮೀಶ್ ಅವರ ‘ಪೆರ್ಗದ ಸಿರಿ’ (ಪ್ರಕಾಶನ: 2023) ಮೂವತ್ತು ಕವನಗಳಿರುವ ಒಂದು ತುಳು ಕವನ ಸಂಕಲನ. ಪುಟದ ಎಡಭಾಗದಲ್ಲಿ ತುಳುಲಿಪಿಯಲ್ಲಿ ಕವನವನ್ನು ಮುದ್ರಿಸಲಾಗಿದ್ದು ಪುಟದ ಬಲಗಡೆ ಅದೇ ಕವನವನ್ನು ಕನ್ನಡ ಲಿಪಿಯಲ್ಲಿ ಮುದ್ರಿಸಿರುವುದು ಈ ಸಂಕಲನದ ವೈಶಿಷ್ಟ್ಯ. ತುಳುಲಿಪಿಯನ್ನು ಪ್ರಚುರಪಡಿಸುವುದು ಕೂಡ ತನ್ನ ಉದ್ದೇಶಗಳಲ್ಲೊಂದು ಎಂದು ಕವಯಿತ್ರಿ ಹೇಳಿಕೊಂಡಿದ್ದಾರೆ. ಅದು ನಿಜವೂ ಹೌದು; ಈ ಕೃತಿಯಲ್ಲಿ ತುಳುಲಿಪಿಯ ಪರಿಚಯ ಕೂಡ ಮಾಡಿಕೊಡಲಾಗಿದೆ. ತುಳುವಿನ ಸ್ವರಾಕ್ಷರಗಳು, ವ್ಯಂಜನಗಳು, ಗುಣಿತಾಕ್ಷರಗಳು ಮತ್ತು ಒತ್ತಕ್ಷರಗಳನ್ನು ನೀಡಲಾಗಿದ್ದು ತುಳುಲಿಪಿಯನ್ನು ಕಲಿಯುವವರಿಗೆ ಅನುಕೂಲವಾಗಲಿದೆ.
‘ಪೆರ್ಗದ ಸಿರಿ’ ಎಂದರೆ ಸ್ವರ್ಗದ ಶ್ರೀಮಂತಿಕೆ ಎಂದು ಅರ್ಥ. ನಮ್ಮ ಈ ತುಳುನಾಡು ಸ್ವರ್ಗದಂತಹ ಭೂಮಿ ಎಂದು ಕವಯಿತ್ರಿ ಹೇಳುತ್ತಾರೆ. ನಂದಿನಿ ನದಿಯ ತಟದಲ್ಲಿ ಕಟೀಲಿನ ದುರ್ಗಾಂಬಿಕೆಯ ವರದಹಸ್ತದ ನೆರಳಿನಲ್ಲಿ ಸಮೃದ್ಧಿಯ ಜೀವನ ನಡೆಸುತ್ತಿರುವ ನಾವು ಪುಣ್ಯವಂತರು ಎಂದು ಜನ್ಮ ನೀಡಿದ ತಾಯಿಯನ್ನು ಮತ್ತು ಪೊರೆಯುವ ಭೂಮಿಯನ್ನು ನೆನೆಯುತ್ತಾರೆ:
‘ಪೈರುಪಚ್ಚೆಗಳಿಲ್ಲಿ ಉಕ್ಕುತ್ತದೆ ಹಾಲಿನ ಹಾಗೆ
ನಂದನವಾಯಿತು ನಮ್ಮ ಬದುಕು
ಭೂಮಿತಾಯಿಯ ಮಡಿಲು ತುಂಬಿತು
ಸ್ವರ್ಗವಾಯಿತು ನಮ್ಮ ಪುಣ್ಯಭೂಮಿ’
(ಅನುವಾದ ನನ್ನದು)
ಎಂದು ‘ಪೆರ್ಗದಸಿರಿ’ ಎಂಬ ಕವನದಲ್ಲಿ ತಾಯಿಗೆ ಕೃತಜ್ಞತೆ ಸಲ್ಲಿಸುತ್ತಾರೆ.
ಈ ಸಂಕಲನದಲ್ಲಿ ಕೆಲವು ಭಾವಗೀತೆಗಳೂ ಇವೆ. ‘ನನ್ನ ಎದೆಯ ಗರ್ಭಗುಡಿಯಲ್ಲಿ’ ಎಂಬುದು ಅಂತಹ ಒಂದು ಭಾವಗೀತೆ. ಬೆಳ್ಳಿ ನಕ್ಷತ್ರವನ್ನು ಸದಾಶಯದ ಒಂದು ಪ್ರತಿಮೆಯಾಗಿ ಧ್ಯಾನಿಸಿಕೊಂಡು ಬರೆದ ಕವನದಲ್ಲಿ ರೂಪಕವು ಒಟ್ಟಂದದ ಚಿತ್ರಣವಾಗಿ ಮೈದಾಳಿರುವುದನ್ನು ಕಾಣಬಹುದು:
‘ನನ್ನ ಹೃದಯದ ಗರ್ಭಗುಡಿಯಲ್ಲಿ ದೇವರಾಗಿ
ಮೆರೆಯಲಾರೆಯಾ ಬಾನ ಬೆಳ್ಳಿಯೇ
ಕಣ್ಣಿನಲ್ಲಿ ಕನಸಾಗಿ ಬಯಕೆಗಳ
ತುಂಬಿಸಲಾರೆಯಾ ಬಾನ ಬೆಳ್ಳಿಯೇ’
(ಅನುವಾದ ನನ್ನದು)
ಎಂದು ಎದೆಯ ಹಂಬಲಿಕೆಯನ್ನು ಹೇಳಿಕೊಳ್ಳುವ ಪರಿ ಸೊಗಸಾಗಿದೆ.
ಕೊನೆಯಲ್ಲಿ-
‘ರಾತ್ರಿ ಮನ ಮರುಳಾಗಿಸುತ್ತದೆ
ಮಿಂಚುಹುಳುಗಳ ಪಚ್ಚೆರಂಗು
ಬರಡು ಬದುಕಿಗೆ ಪ್ರೀತಿಯ ಸಿಂಚನ
ಹಾರಿಸಲಾರೆಯಾ ಬೆಳ್ಳಿ ನಕ್ಷತ್ರವೇ’
(ಅನುವಾದ ನನ್ನದು)
ಎಂದು ಹಾರೈಸುವುದು ಕವಿತೆಯನ್ನು ಬೇರೊಂದು ಸ್ತರಕ್ಕೆ ಕೊಂಡೊಯ್ಯುತ್ತದೆ.
ಗಜಲ್ ಮಾದರಿಯಲ್ಲಿ ಬರೆದ ಕೆಲವು ಕವಿತೆಗಳು ಇಲ್ಲಿವೆ. ಸಾಮಾನ್ಯವಾಗಿ ಪ್ರೇಮ, ಉಛೃಂಖಲತೆ ಮತ್ತು ವಿರಹ ಗಜಲ್’ನ ವಸ್ತುವಾದರೂ ನಿರ್ವೇದವೇ ಮುಖ್ಯವಾಗಿರುವ ಅಭಿವ್ಯಕ್ತಿ ಇಲ್ಲಿ ಕಾಣಿಸಿಕೊಂಡಿರುವುದು ವಿಶೇಷವಾಗಿದೆ.
‘ನಾನು ನನ್ನದು ಎಂಬ ಸ್ವಾರ್ಥದಲ್ಲಿ
ಬದುಕಬಾರದು ತಿಳಿಯಿತೇ
ಮಾನ ಉಳಿಸಿಕೊಳ್ಳದೆ ಜನರ ನಡುವೆ
ಮಾರಿಕೊಂಡೆಯಾ ನಿನ್ನ ನರಜಂತುವೇ’
(ಅನುವಾದ ನನ್ನದು).
ಶೃಂಗಾರ ಮತ್ತು ವಿರಹವನ್ನು ಬಿಟ್ಟು, ಹೀಗೆ ತಾತ್ವಿಕ ನಿಲುವಿನ ಮೂಲಕ ಗಜಲ್ ಕವಿತೆಯಲ್ಲಿ ಉಪದೇಶ ಹೇಳುವ ಕ್ರಮ ಕುತೂಹಲ ಹುಟ್ಟಿಸುತ್ತದೆ.
ಬಿಸುಪರ್ಬ, ಮರೆತಡ ಅವು ಬದುಕತ್ತ್, ನೇಸರೆ ಮುಂತಾದ ಕವನಗಳು ತಮ್ಮ ಭಾವ, ಭಾಷೆ ಮತ್ತು ನಿರೂಪಣಾ ವಿಧಾನದಿಂದಾಗಿ ಗಮನ ಸೆಳೆಯುತ್ತವೆ.
ಹಿರಿಯ ಕವಿಗಳಾದ ಡಾ. ವಸಂತಕುಮಾರ ಪೆರ್ಲ ಅವರು ಈ ಸಂಕಲನಕ್ಕೆ ಮೌಲಿಕವಾದ ಮುನ್ನುಡಿಯೊಂದನ್ನು ಬರೆದಿದ್ದು, ಕವಯಿತ್ರಿಯ ಶಕ್ತ ಅಂಶಗಳನ್ನು ಸರಿಯಾಗಿಯೇ ಗುರುತಿಸಿದ್ದಾರೆ. ಮುಂದೆ ಸಾಗಬೇಕಾದ ಕಡೆಗೆ ತೋರುಬೆರಳನ್ನು ತೋರಿಸಿದ್ದಾರೆ.
ಗೀತಾ ಲಕ್ಷ್ಮೀಶ್ ಅವರು ಓದಿದ್ದು ನರ್ಸಿಂಗ್ ಡಿಪ್ಲೋಮಾ ಆದರೂ ಸಾಹಿತ್ಯ, ಸಂಸ್ಕೃತಿ ಮತ್ತು ಸಂಘಟನೆಯ ಕಡೆಗೆ ಒಲವು ಬೆಳೆಸಿಕೊಂಡುದು ವಿಶೇಷವಾಗಿದೆ. ತುಳುಲಿಪಿಯ ಶಿಕ್ಷಕಿಯಾಗಿ ಸ್ವಂತ ಆಸಕ್ತಿಯಿಂದ ತುಳುವಪ್ಪೆಯ ಸೇವೆ ಮಾಡುತ್ತಿದ್ದಾರೆ. ಜಿಲ್ಲೆಯ ಬೇರೆ ಬೇರೆ ಶಾಲೆಗಳಿಗೆ ಹೋಗಿ ಮತ್ತು ಸಂಘ ಸಂಸ್ಥೆಗಳಿಗೆ ತೆರಳಿ ತರಗತಿಗಳನ್ನು ನಡೆಸಿ ಆಸಕ್ತರಿಗೆ ತುಳುಲಿಪಿ ಕಲಿಸುತ್ತಿದ್ದಾರೆ. ಜೊತೆಗೆ ತನ್ನ ಆಸಕ್ತಿಯ ಸಾಹಿತ್ಯ ವ್ಯವಸಾಯ ಕೂಡ ಮಾಡುತ್ತಿದ್ದಾರೆ. ಅವರ ಪ್ರಯತ್ನದಲ್ಲಿ ಅವರಿಗೆ ಯಶಸ್ಸು ದೊರೆಯಲಿ ಎಂದು ಹಾರೈಸೋಣ.
– ಶೈಲಾಕುಮಾರಿ ಕೆ. (ಮೊ.9448773747)
‘ಮುದ್ದುಗಿಣಿಯ ಸಾಕಿ’ (ಕಥಾ ಸಂಕಲನ) ಮತ್ತು ‘ಆವರಣ ಇಲ್ಲದ ಮನೆಗಳು’ (ಕವನ ಸಂಕಲನ) ಮೂಲಕ ಹೆಸರು ಗಳಿಸಿದ ಕಥೆಗಾರ್ತಿ ಶೈಲಾಕುಮಾರಿ ಕೆ. ಇವರು ಅಂಕಣ ಲೇಖನಗಳನ್ನು ಕೂಡ ಬರೆದಿದ್ದಾರೆ. ಕರ್ಣಾಟಕ ಶಾಸ್ತ್ರೀಯ ಸಂಗೀತ ಅಭ್ಯಸಿಸಿದ್ದಾರೆ. ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಇವರ ಕಥೆ ಕವನಗಳು ಪ್ರಸಾರವಾಗಿವೆ. ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಇದೀಗ ಒಂದು ಕಥಾ ಸಂಕಲನ ಮತ್ತು ಕವನ ಸಂಕಲನ ಪ್ರಕಟಣೆಯ ಹಾದಿಯಲ್ಲಿದೆ. ಮಕ್ಕಳಾದ ವಿದುಷಿ ಅರ್ಥಾ ಪೆರ್ಲ ಮತ್ತು ವಿದುಷಿ ಅಯನಾ ಪೆರ್ಲ ರಾಷ್ಟ್ರೀಯ ಮಟ್ಟದ ಭರತನಾಟ್ಯ ಕಲಾವಿದೆಯರಾಗಿ ಪ್ರಸಿದ್ಧರಾಗಿದ್ದಾರೆ.
ಲೇಖಕಿ ಗೀತಾ ಲಕ್ಷ್ಮೀಶ್ – ತುಳು ಲಿಪಿ ಶಿಕ್ಷಕಿ, ತುಳು ಕನ್ನಡ ಸಾಹಿತಿ, ಕಲಾವಿದರು, ಸಮಾಜಸೇವಕರು