ಮಂಗಳೂರು : ಮಂಗಳೂರಿನ ಕೋಡಿಕಲ್ಲಿನ ಸರಯೂ ಮಕ್ಕಳ ಮೇಳದ ‘ಸರಯೂ ಸಪ್ತಾಹ-2024’ ಸಾಧಕ ಸನ್ಮಾನ, ಬಯಲಾಟಗಳು ಮತ್ತು ಮಹಿಳಾ ತಾಳ ಮದ್ದಳೆ ಕಾರ್ಯಕ್ರಮದ ನಾಲ್ಕನೇ ದಿನದ ಕಾರ್ಯಕ್ರಮವು ದಿನಾಂಕ 28-05-2024ರಂದು ಮಂಗಳೂರಿನ ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ದೇವಳದ ರಾಜಾಂಗಣದಲ್ಲಿ ನಡೆಯಿತು.
ಕಾರ್ಯಕ್ರಯಮದಲ್ಲಿ ಅತಿಥಿಯಾಗಿ ಭಾಗವಹಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ವಿಮರ್ಶಕ ಡಾ. ಎಂ.ಪ್ರಭಾಕರ ಜೋಷಿ “ವಿಶ್ವದ ರಂಗಭೂಮಿ ಅದ್ಭುತವಾಗಿ ಬೆಳೆದಿದೆ. ಅಂತೆಯೇ ಯಕ್ಷಗಾನ ರಂಗಭೂಮಿಯೂ ತನ್ನನ್ನು ತಾನು ತೆರೆದುಕೊಂಡು ವಿಶಾಲ ಭಾವದಿಂದ ವಿಕಾಸಗೊಳ್ಳಬೇಕಾಗಿದೆ. ಮಕ್ಕಳ ಯಕ್ಷಗಾನ, ಮಹಿಳಾ ಯಕ್ಷಗಾನ ಹೀಗೆಲ್ಲಾ ಎಗ್ಗೆಗಳು ಆರಂಭವಾಗಿದೆ ಆ ದೃಷ್ಟಿಯಲ್ಲಿ ರಜತ ವರ್ಷದ ಹೊಸ್ತಿಲಲ್ಲಿರುವ ಸರಯೂ ಮಕ್ಕಳ ಮೇಳವೂ ಯೋಚಿಸಬೇಕು. ಪ್ರಬುದ್ಧ ಕಾರ್ಯಕ್ರಮಗಳ ಮೂಲಕ ಬೆಳೆಯಬೇಕು. ಹಿರಿಯರ ಮಾರ್ಗದರ್ಶನ, ಕಿರಿಯರ ಬಾಗೀದಾರಿಕೆಯಿಂದ ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ತಲುಪಿ ಸರಯೂ ಮನೆ ಮಾತಾಗಲಿ.” ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಪ್ರೋತ್ಸಾಹಕ ಹಾಗೂ ತೆಂಕು-ಬಡಗಿನ ಸಮನ್ವಯಕಾರ ಕೆರೆಮನೆ ಶ್ರೀಶಿವಾನಂದ ಹೆಗಡೆ ಹಾಗೂ ಯಕ್ಷ ಸಂಘಟಕ ಪಣಂಬೂರು ಮಧುಕರ ಭಾಗವತರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್, ಆಕಾಶವಾಣಿಯ ಕಾರ್ಯನಿರ್ವಾಹಕ ಸೂರ್ಯನಾರಾಯಣ ಭಟ್, ಹಾಸ್ಯಗಾರ ಸೀತಾರಾಂ ಕಟೀಲು, ವಸಂತ ಪಂಜ, ಪ್ರದೀಪ ಕುಮಾರ್ ಗಟ್ಟಿ, ವೃಷಭ ಶೆಟ್ಟಿ, ನಿಹಾಲ್, ಅದ್ವಿತ್, ದೃಶಾಲ್, ಸಂಸ್ಥೆಯ ಅಧ್ಯಕ್ಷ ಮಧುಸೂದನ ಅಲೆವೂರಾಯ ಉಪಸ್ಥಿತರಿದ್ದರು. ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರ್ವಹಿಸಿ, ಅಲೆವೂರಾಯರು ಧನ್ಯವಾದ ಸಮರ್ಪಿಸಿದರು
ಸಭಾಕಾರ್ಯಕ್ರಮದ ಬಳಿಕ ‘ರತಿ ಕಲ್ಯಾಣ’ ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.