ಮೋಹನ ಕುಂಟಾರ್ ಅವರ ‘ಲೋಕಾಂತದ ಕಾವು’ ಉತ್ತಮ ಕವಿತೆಗಳ ಸುಂದರ ಗುಚ್ಛ. ಇಲ್ಲಿ ಕೆಲವನ್ನು ರಾಗಬದ್ಧವಾಗಿ ಹಾಡಬಹುದಾದರೆ ಮತ್ತೆ ಕೆಲವನ್ನು ಭಾವಬದ್ಧವಾಗಿ ಓದಬಹುದು. ಇವುಗಳ ಹೃದ್ಯವಾದ ಭಾವ ಸಾಮರಸ್ಯದಲ್ಲಿ ನವ್ಯ-ನವೋದಯಗಳ ಕಲ್ಪನೆಯೇ ಒಮ್ಮೆ ಮರೆತುಹೋಗುತ್ತದೆ. ಮೊದಲ ಓದಿಗೇ ಸುಲಭವಾಗಿ ತೆರೆದುಕೊಳ್ಳುವ ಕವಿತೆಗಳ ಒಳನೋಟ-ಹೊರನೋಟಗಳಲ್ಲಿ ಮುಚ್ಚುಮರೆ, ಸಂದಿಗ್ಧತೆ ಮತ್ತು ಕ್ಲಿಷ್ಟತೆಗಳಿಲ್ಲ. ಸರಳ ಅಭಿವ್ಯಕ್ತಿಯೇ ಇಲ್ಲಿನ ಕವಿತೆಗಳ ವೈಶಿಷ್ಟ್ಯ.
‘ಕವಿ-ಕವಿತೆ’ ಎಂಬ ರಚನೆಯು ಕವಿತೆಯ ನಿರ್ವಚನದ ಕುರಿತು ಜಿಜ್ಞಾಸೆಯನ್ನು ನಡೆಸಿದರೆ
ಆಟದಲ್ಲಿ ಕೂಟದಲ್ಲಿ
ಬೇಟದಲ್ಲಿ ನೋಟದಲ್ಲಿ
ಹೊಸೆದ ಭಾವದಾಟದಲ್ಲಿ ಮೆರೆಯುತ್ತಿತ್ತು ಕವಿತೆ
ಲೋಕಾಂತದ ಕಾವಿನಲ್ಲಿ
ಏಕಾಂತದ ಧ್ಯಾನದಲ್ಲಿ
ಭಾವ ಭಾರದೊಜ್ಜೆಯಲ್ಲಿ ತಿಣುಕುತ್ತಿತ್ತು ಕವಿತೆ (ಕವಿತೆಯ ಹುಟ್ಟು)
ಎಂಬ ಸಾಲುಗಳು ಬಿ.ಎಂ. ಶ್ರೀಯವರ ಲಯವನ್ನು ಅನುಸರಿಸಿವೆ. ಪಂಜೆಯವರ ‘ತೆಂಕಣಗಾಳಿಯಾಟ’ವನ್ನು ನೆನಪಿಸುವ ‘ಸುಂಟರಗಾಳಿ’ಯು ಪ್ರಾಕೃತಿಕ ವಿದ್ಯಮಾನದ ಒಂದು ಕ್ಷಣವನ್ನು ಸೆರೆಹಿಡಿದರೆ ‘ಕವಿಶೈಲದಲ್ಲಿ ಬೆಳಗು’ ಕುವೆಂಪು ಅವರ ಶೈಲಿಯನ್ನು ನೆನಪಿಸುತ್ತದೆ. ‘ಕೇರಳ’ವು ಸಾಕ್ಷರರ ನಾಡೊಂದರ ವಸ್ತುಸ್ಥಿತಿಯ ಇನ್ನೊಂದು ಮಗ್ಗುಲನ್ನು ವಿವರಿಸುವುದರೊಂದಿಗೆ ರಾಜ್ಯದ ಸಾಮಾಜಿಕ ವ್ಯವಸ್ಥೆಯನ್ನು ಲೇವಡಿ ಮಾಡುತ್ತದೆ.
ಮಡಿಪಂಚೆಯುಟ್ಟು ಭಸ್ಮಲೇಪಿತ
ಭಕ್ತರ ಸಾಲುಗಳ ನಡುವೆ
ಕೆಂಬಾವುಟ ಹಿಡಿದವರ
ಘೋಷಣೆ ಕೂಗುವ ಸದ್ದು
ಎನ್ನುವ ಸಾಲುಗಳು ನಾಡಿನ ವಿರೋಧಾಭಾಸವನ್ನು ವ್ಯಕ್ತಪಡಿಸುತ್ತವೆ. ‘ಮಹಾಬಲಿಯ ಕೇರಳ ದರ್ಶನ’ ಎಂಬ ಕವಿತೆಯಲ್ಲೂ ಇದೇ ಭಾವಲಹರಿಯು ಮುಂದುವರಿದಿದೆ.
ಮಾನವನ ಅಗತ್ಯಗಳನ್ನು ಪೂರೈಸುವ ಶಕ್ತಿ ಭೂಮಿಗೆ ಇದೆ. ಆದರೆ ಅವನ ದುರಾಸೆಗಳನ್ನಲ್ಲ ಎಂಬ ತತ್ವಜ್ಞಾನದ ಮಾತು ಮಾನವನ ಅಂತರಂಗವನ್ನು ಹೊಕ್ಕಿಲ್ಲ. ಪ್ರಾಕೃತಿಕ ಅಸಮತೋಲನ ಮತ್ತು ಕೊಲೆ ಸುಲಿಗೆಗಳಿಗೆ ಮಾನವನ ಕ್ರೌರ್ಯ ದುರಾಸೆಗಳೇ ಕಾರಣವಾಗಿವೆ. ಹಣದ ಬೆನ್ನು ಹತ್ತಿರುವ ಮಾನವನು ಪ್ರಕೃತಿಯನ್ನು ಮತ್ತು ಮನುಷ್ಯರನ್ನು ನಾಶಗೊಳಿಸುತ್ತಿದ್ದಾನೆ. ಇವುಗಳು ಜೀವಜಾಲಗಳ ವಿನಾಶಕ್ಕೆ ಕಾರಣವಾಗಿವೆ. ಇದರಿಂದ ಪ್ರಾಣಿ ಸಂಕುಲದ ನಾಶ, ಹವಾಮಾನ ವೈಪರೀತ್ಯ, ಜಲಮೂಲಗಳ ನಾಶದ ಪ್ರಮಾಣವು ಹೆಚ್ಚಿ ಮಾನವ ಮತ್ತು ಮೃಗ ಸಂಕುಲದ ಬದುಕು ದುರ್ಭರವಾಗುತ್ತಿದೆ. ಪ್ರತಿಯೊಬ್ಬರಲ್ಲೂ ಪ್ರಕೃತಿಯನ್ನು ಬೆಳೆಸುವ, ಮನುಷ್ಯರನ್ನು ಉಳಿಸುವ ಮನೋಭಾವವನ್ನು ಮೂಡಿಸುವ ದಿಕ್ಕಿನಲ್ಲಿ ನಮ್ಮ ಪಯಣ ಸಾಗಬೇಕಿದೆ ಎಂಬ ಆಶಯ ಇಲ್ಲಿದೆ. ಐತಿಹ್ಯದ ಪ್ರಕಾರದ ಓಣಂ ಆಚರಣೆಯ ಸಂದರ್ಭದಲ್ಲಿ ಪ್ರಜೆಗಳನ್ನು ನೋಡಿ ಹೋಗಲು ಬಂದ ಮಹಾಬಲಿಯು ಕೇರಳದ ಪರಿಸ್ಥಿತಿಯನ್ನು ಕಂಡು ದುಃಖಿಸುತ್ತಾ ತನ್ನನ್ನು ಪಾತಾಳಕ್ಕೆ ತಳ್ಳಿದ ವಾಮನನ್ನು ಆಕ್ಷೇಪಿಸುವ ರೀತಿಯಲ್ಲಿ ಕವಿತೆಯು ಮೂಡಿಬಂದಿದೆ. ‘ಕೋಟೆ ಕಾವಲು’, ‘ಇರುವೆ ಬೇಡಿದ ವರ’, ‘ಶಾಕುಂತಲೆ’ ಚಂಪಾ ಅವರ ವ್ಯಂಗ್ಯದ ಶೈಲಿಯನ್ನು ನೆನಪಿಸುತ್ತವೆ.
ಬಾಳ್ವೆಯ ನೋವನ್ನು ಕಂಡು ಮರುಗುವ ಕವಿಯ ಆರ್ದ್ರ ಹೃದಯವು ಸಮಾಜದ ದೌರ್ಜನ್ಯದ ವಿರುದ್ಧ ರೊಚ್ಚಿಗೇಳುವುದಿಲ್ಲ. ಆದ್ದರಿಂದ ಕವಿಗೆ ತಮ್ಮ ಕಾವ್ಯದಲ್ಲಿ ಸಂಯಮವನ್ನು ರೂಢಿಸಿಕೊಳ್ಳಲು ಸಾಧ್ಯವಾಗಿದೆ. ಹಲವು ವರ್ಷಗಳ ರಚನೆಗಳು ಸೇರ್ಪಡೆಗೊಂಡಿರುವುದರಿಂದ ಗುಣಮಟ್ಟದಲ್ಲಿ ಭಿನ್ನತೆಗಳಿವೆ. ಛಂದಸ್ಸನ್ನು ಇಟ್ಟುಕೊಂಡಿರುವ ಮತ್ತು ಇಟ್ಟುಕೊಳ್ಳದಿರುವ ರಚನೆಗಳೂ ಇವೆ. ಕವಿತೆಗಳ ವಸ್ತು, ಭಾಷೆ, ಛಂದೋವಿನ್ಯಾಸ, ಧೋರಣೆ, ಮೌಲ್ಯ ವಿವೇಚನೆಗಳನ್ನು ಗಮನಿಸಿದರೆ ಕವಿಯು ನವೋದಯದ ಹಾದಿಯಲ್ಲಿ ಸಾಗಿರುವುದು ಸ್ಪಷ್ಟವಾಗುತ್ತದೆ. ಇವರ ಕಾವ್ಯವು ಪದ ಪ್ರಯೋಗದ ಹಿಡಿತ, ಅರ್ಥಭಾವಗಳ ಮಿಡಿತದ ಮೂಲಕ ಓದುಗರಲ್ಲಿ ಉಲ್ಲಾಸವನ್ನು ಮಾತ್ರ ಉಂಟು ಮಾಡದೆ ಬದುಕಿನ ಕುರೂಪ ಮತ್ತು ಕ್ಷುದ್ರತೆಗಳ ಕುರಿತು ಚಿಂತಿಸುವಂತೆ ಮಾಡುತ್ತದೆ. ನವೋದಯದ ಪ್ರಭಾವ, ಪ್ರೇರಣೆಗಳನ್ನು ಅರಗಿಸಿಕೊಂಡು ಅನನ್ಯತೆಯನ್ನು ಉಳಿಸಿಕೊಳ್ಳಲು ಕವಿಗೆ ಸಾಧ್ಯವಾಗಿದೆ. ಸಂಯಮ, ಸಾತ್ವಿಕತೆ, ಗುಣಸ್ವೀಕಾರ, ಪರಿಸರ ಪ್ರೇಮ ಮತ್ತು ದೇಶ ಎದುರಿಸುತ್ತಿರುವ ತಲ್ಲಣಗಳು ಅವರ ಜೀವನದೃಷ್ಟಿಯನ್ನು ಮತ್ತು ಕಾವ್ಯದೃಷ್ಟಿಯನ್ನು ರೂಪಿಸಿವೆ. ಪ್ರಕೃತಿಯ ನಿತ್ಯ ನಿರಂತರತೆಯನ್ನು ಸೆರೆ ಹಿಡಿಯುವ ಉತ್ಸಾಹ, ಬಾಳು ಬೆಳಗುವ ಆದರ್ಶದ ಹಂಬಲ, ಬದುಕಿನ ಎಲ್ಲ ಹಂತಗಳಲ್ಲಿ ಸೌಂದರ್ಯವನ್ನು ಅರಸುವ ಜೀವನ ಪ್ರೀತಿ ಇವು ಈ ಸಂಕಲನದ ಸ್ಥಾಯಿಭಾವಗಳಾಗಿವೆ. ಹೆಚ್ಚಿನ ಕವಿತೆಗಳ ಮೂಲಸ್ರೋತವಾಗಿರುವ ಪ್ರಕೃತಿ ಈ ಸಂಕಲನದುದ್ದಕ್ಕೂ ಕ್ರಿಯಾಶೀಲವಾಗಿದೆ. ಸಂಬಂಧಗಳ ಬೆಸುಗೆಗೆ ಕಾರಣವಾಗಿರುವ ಪ್ರೀತಿ, ಪ್ರೇಮ, ವಾತ್ಸಲ್ಯ, ಸ್ನೇಹ ಮತ್ತು ಇವುಗಳ ಬಗ್ಗೆ ಕವಿ ತಳೆಯುವ ಭಾವಗಳ ಸಾತತ್ಯವಿದೆ. ಕೆಲವು ರಚನೆಗಳು ಭಾವದ ಎಳೆಯನ್ನು ಮಿಂಚಿಸಿ ಮರೆಯಾಗುತ್ತವೆ. ನಗೆಹನಿಗಳೂ ಕವನಗಳಾಗಬಹುದು ಎಂಬುದನ್ನು ಸಾಬೀತುಪಡಿಸುತ್ತವೆ. ಆದರೆ ಅವುಗಳಲ್ಲಿ ಭಾವಸಾಂದ್ರತೆಯು ಇಲ್ಲವಾಗಿದೆ.
‘ಚೆಲುವ ಚಂದ್ರಾಮ’ ಮತ್ತು ‘ಪರೆಯರ ಕುವರಿ’ ಎಂಬ ಎರಡು ಕಥನ ಕವನಗಳು ಜನಪದ ಲಾವಣಿಗಳ ಮಾದರಿಯಲ್ಲಿವೆ. ‘ಚೆಲುವ ಚಂದ್ರಾಮ’ನು ಗೃಹಿಣಿಯೊಬ್ಬಳ ಅನೈತಿಕ ಸಂಬಂಧ ಮತ್ತು ಅದರಿಂದ ಉಂಟಾಗುವ ದುರಂತವನ್ನು ವಿವರಿಸಿದರೆ ಅದರ ವಿರುದ್ಧ ನೆಲೆಯಲ್ಲಿರುವ ‘ಪರೆಯರ ಕುವರಿ’ ಕೃತಿಯು ಊರಗೌಡನ ಕಾಮವನ್ನು ಈಡೇರಿಸಲು ಒಪ್ಪದೆ ಆತ್ಮಹತ್ಯೆ ಮಾಡಿಕೊಳ್ಳುವ ಹೆಣ್ಣಿನ ಕತೆಯಾಗಿದೆ.
ವಸ್ತುವೈವಿಧ್ಯದಿಂದ ಕೂಡಿರುವ ಈ ಸಂಕಲನದಲ್ಲಿ ಆದರ್ಶವು ಮಿಂಚುತ್ತದೆ. ವಾಸ್ತವಿಕತೆ ಹೊಂಚುತ್ತದೆ. ಇಲ್ಲಿ ಸೂಚ್ಯವಾದ ಧ್ವನಿಯಿದೆ. ವಾಚ್ಯವಾದ ಸ್ವರಗಳೂ ಇವೆ. ನವ್ಯ ಸಂವೇದನೆಯಲ್ಲಿ ಮೂಡಿದ ‘ಪ್ರಿ ಓನ್ಡ್ ಕಾರುಗಳು’ ಹೆಣ್ಣಿನ ನೋವಿನ ಕತೆ ಎನ್ನುವುದನ್ನು ವಾಚ್ಯಗೊಳಿಸದಿದ್ದರೆ ಚೆನ್ನಾಗಿತ್ತು. ಆದರೆ ‘ಪಠ್ಯವೊಂದರ ಸ್ವಗತ’ ಇದನ್ನು ಮೀರಿ ನಿಂತಿದೆ. ಭಾಷಾಂತರಕಾರನನ್ನು ಕಾಯುವ ಪಠ್ಯದ ಭಾವವಾಗಿಯೂ, ಪ್ರೀತಿಯನ್ನು ಬಯಸುವ ಮನಷ್ಯನ ಮನಸ್ಥಿತಿಯ ಪ್ರತೀಕವಾಗಿಯೂ ಪರಿಭಾವಿಸಬಹುದು. ‘ಮಾತು ಜ್ಯೋತಿ’ ಎಂಬ ಕವಿತೆಯು ಪ್ರೀತಿಗಾಗಿ ಹಪಹಪಿಸುವುದರಲ್ಲಿ ಸೀಮಿತವಾಗದೆ ಯಾಂತ್ರಿಕತೆ ಮತ್ತು ಬೇಸತ್ತ ಬದುಕಿನ ಕಡೆಗೆ ಬೆಳಕು ಚೆಲ್ಲುತ್ತದೆ. ‘ಐಕ್ಯಗೀತೆ’ಯು ಕವಿಯ ಕಾವ್ಯ ಪ್ರಣಾಳಿಕೆಯಂತಿದೆ.
ಇಂದಿನ-ಹಿಂದಿನ ಕಾವ್ಯಪರಂಪರೆಯ ಪರಿಚಯ ಮತ್ತು ಸಂಸ್ಕಾರಗಳಿಂದ ಪಕ್ವಗೊಂಡ ಕಾವ್ಯವು ಸುತ್ತಲಿನ ಆಗುಹೋಗುಗಳಿಗೆ ಸ್ಪಂದಿಸುವ ಸೂಕ್ಷ್ಮ ಸಂವೇದನೆಯನ್ನು ಪಡೆದುಕೊಂಡಿದೆ. ಅವರ ಮನಸ್ಸು ಪ್ರಾಸಪ್ರೀತಿಗೊಲಿದರೂ ಸಂಪ್ರದಾಯವಾದಿಯಾಗದೆ ಆಧುನಿಕ ಸಮಸ್ಯೆಗಳಿಗೆ ಸ್ಪಂದಿಸುತ್ತದೆ. ಕಾವ್ಯದ ವಿನ್ಯಾಸವು ಕನ್ನಡದಲ್ಲಿ ಈಗಾಗಲೇ ಆಗಿಹೋದ ನವೋದಯ ಮತ್ತು ನವ್ಯದ ಕೊಡುಗೆಗಳೆಂಬಂತೆ ತೋರಿದರೂ ಅವುಗಳು ಕವಿಯ ವಿಶಿಷ್ಟ ಅನುಭವ ಮತ್ತು ಒಳನೋಟಗಳನ್ನು ಹೊಂದಿವೆ. ಪ್ರಣಯ ವಿರಹಗಳಿಗೆ ವಿಮುಖವಾಗಿರುವ ಇಲ್ಲಿನ ಸಾಕಷ್ಟು ಕವನಗಳಲ್ಲಿ ವೈಚಾರಿಕತೆ, ವಿಡಂಬನೆ, ಬದುಕಿನ ಸಾವು ನೋವುಗಳ ಜೀವದ್ರವ್ಯ, ಹುಡುಕಾಟದ ಪ್ರವೃತ್ತಿ, ಬದುಕಿನ ಜಟಿಲತೆಯ ಚಿಂತನೆಗಳು ಕಂಡುಬರುತ್ತವೆ. ಬಾಳುವೆಯ ಸುಕುಮಾರ ಮುಖಗಳೊಂದಿಗೆ ವಿಕಾರ ರೇಖೆಗಳನ್ನು ಗುರುತಿಸಿದ್ದಾರೆ. ಕವಿಯ ಚಿಕಿತ್ಸಕ ಮತ್ತು ಮಾನವೀಯ ದೃಷ್ಟಿಕೋನ ಇಲ್ಲಿ ಕೆಲಸ ಮಾಡಿದೆ. ಶೈಲಿ ಸಾಕಷ್ಟು ಪಳಗಿದ್ದು ಹೃದ್ಯವಾಗಿದೆ. ಕೆಲವೊಮ್ಮೆ ಬಂಧ ಸಡಿಲವಾದರೂ, ಅರ್ಥ ಜಾಳಾಗದೆ, ಮಾತು ಅತಿಯಾಗದೆ ಓದುಗರ ಮನಸ್ಸನ್ನು ಸೆರೆಹಿಡಿಯಬಲ್ಲ ಕವಿತೆಗಳು ಇಲ್ಲಿವೆ. ಲಯ ಪ್ರಾಸಗಳ ಮೂಲಕ ಕಾವ್ಯದ ಅಂತರಂಗವನ್ನು ಹಂತ ಹಂತವಾಗಿ ಪ್ರವೇಶಿಸಲು ಸಹಕರಿಸುವ ಕವಿತೆಗಳು ಕೇವಲ ಭಾವಗಳನ್ನಲ್ಲದೆ ಬದುಕಿನ ಸಂಘರ್ಷ, ಸಂಕೀರ್ಣತೆಗಳನ್ನು ಅಭಿವ್ಯಕ್ತಿಸುತ್ತವೆ. ಸಮಾಜವು ಎದುರಿಸುತ್ತಿರುವ ಭಾವನಾತ್ಮಕ ತಳಮಳಗಳನ್ನು ಸ್ಪರ್ಶಿಸುತ್ತವೆ. ಸಮಕಾಲೀನ ಪ್ರಜ್ಞೆ, ಸಮಾಜ ವಿಮರ್ಶೆ, ಪರಿಸರದ ಬಗ್ಗೆ ಕಾಳಜಿ, ಸಾಂಸ್ಕೃತಿಕ ಜಾಗೃತಿ, ಸಾಮಾಜಿಕ ಸಂದೇಶ, ಆದರ್ಶವಾದ, ಹಿತೋಪದೇಶಗಳನ್ನು ಹೊಂದಿರುವ ಕವಿತೆಗಳಲ್ಲಿ ಚಿಂತನೆಯ ಹೊಳಹುಗಳಿವೆ. ಕವಿತೆಗಳು ನಿಗೂಢವಾಗಿ ಹೆಚ್ಚೇನೂ ಹೇಳದಿದ್ದರೂ ಬದುಕಿನಲ್ಲಿ ನಾವು ಅರ್ಥಮಾಡಿಕೊಳ್ಳದ, ತುರ್ತಾಗಿ ಅರ್ಥಮಾಡಿಕೊಳ್ಳಬೇಕಾದ ವಿಚಾರಗಳಿವೆ ಎಂಬುದನ್ನು ಧ್ವನಿಸುತ್ತವೆ.
ಡಾ. ಸುಭಾಷ್ ಪಟ್ಟಾಜೆ :
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡಿನ ಸರಕಾರಿ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ, ಡಾ. ಯು. ಮಹೇಶ್ವರಿಯವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು: ಒಂದು ತೌಲನಿಕ ಅಧ್ಯಯನ’ ಸಂಶೋಧನ ಮಹಾ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಬರೆದ ಕತೆ, ಕವನ, ಲೇಖನ ಮತ್ತು ಸುಮಾರು 200ಕ್ಕೂ ಹೆಚ್ಚು ಪುಸ್ತಕ ವಿಮರ್ಶೆಗಳು ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ ಮತ್ತು ಅಂತರ್ಜಾಲ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರವಾಗಿವೆ.
ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ), ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್ (ವ್ಯಕ್ತಿ ಚಿತ್ರಣ), ಕಥನ ಕಾರಣ (ಸಂಶೋಧನ ಕೃತಿ), ನುಡಿದು ಸೂತಕಿಗಳಲ್ಲ (ಸಂಪಾದಿತ) ಎಂಬ ಕೃತಿಗಳನ್ನು ಪ್ರಕಟಿಸಿರುವ ಇವರು ಕಾಸರಗೋಡು ಜಿಲ್ಲೆಯ ಶೇಣಿ ಗ್ರಾಮದ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯಾಪಕವಾದ ಓದು, ವಿಸ್ತಾರವಾದ ಅಧ್ಯಯನಕ್ಕೆ ಹೆಸರಾಗಿರುವ ಇವರು ಉತ್ಸಾಹಿ ಸಂಘಟಕರಾಗಿದ್ದು ನಾಡಿನ ವಿವಿಧೆಡೆಗಳಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಮುಂಚೂಣಿಯ ಪಾತ್ರವನ್ನು ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ವೇದಿಕೆಯ ಸಂಚಾಲಕರಲ್ಲಿ ಒಬ್ಬರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು
ನಡೆಸುತ್ತಿದ್ದಾರೆ.
ಡಾ. ಎ. ಮೋಹನ್ ಕುಂಟಾರ್ ಇವರು ಬಿ.ಎ, ಎಂ.ಎ, ಎಂ.ಫಿಲ್ ಪದವೀಧರರು. ಮಲೆಯಾಳಂ ಭಾಷೆಯಲ್ಲಿ ಸರ್ಟಿಫಿಕೇಟ್, ತಮಿಳು ಭಾಷೆಯಲ್ಲಿ ಡಿಪ್ಲೊಮಾ ಹಾಗೂ ತೆಲುಗು ಭಾಷೆಯಲ್ಲಿ ಪಿ.ಎಚ್.ಡಿ. ಪಡೆದಿದ್ದಾರೆ. ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. ಭಾಷಾಂತರ, ಸಾಹಿತ್ಯ, ಸಂಸ್ಕೃತಿ, ಮತ್ತು ಯಕ್ಷಗಾನ ಪ್ರಮುಖ ಆಸಕ್ತಿ ಕ್ಷೇತ್ರಗಳು. ಕೇರಳ ಕಥನ, ಸಮುದಾಯಗಳ ಕನ್ನಡ ಪರಂಪರೆ, ಕನ್ನಡ ಮಲೆಯಾಳಂ ಭಾಷಾಂತರ ಪ್ರಕ್ರಿಯೆ ಇವರ ಪ್ರಮುಖ ಪ್ರಕಟಣೆಗಳು. ಕನ್ನಡ ಅನುವಾದ ಸಾಹಿತ್ಯ, ಸಮುದಾಯಗಳಲ್ಲಿ ಲಿಂಗಸಂಬಂಧಿ ನೆಲೆಗಳು ಪ್ರಮುಖ ಸಂಶೋಧನಾ ಲೇಖನಗಳಾಗಿವೆ. ವಿ.ಎಂ. ಇನಾಂದಾರ್ ಪ್ರಶಸ್ತಿ, ಸೂ.ವೆಂ. ಅರಗ ವಿಮರ್ಶಾ ಪ್ರಶಸ್ತಿ, ಸಾಹಿತ್ಯ ರತ್ನ ಪ್ರಶಸ್ತಿ, ಜಾನಪದ ಸಿರಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿ, ಪುರಸ್ಕಾರ ಹಾಗೂ ಬಹುಮಾನಗಳು ಇವರ ಸಾಹಿತ್ಯ ಕೃಷಿಗೆ ಸಂದ ಗೌರವ.