ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಆಶ್ರಯದಲ್ಲಿ ಅಡ್ಯಾರ್‌ನ ಅಡ್ಯಾರ್ ಗಾರ್ಡನ್‌ನಲ್ಲಿ ‘ಯಕ್ಷಧ್ರುವ ಪಟ್ಲ ಸಂಭ್ರಮ 2024’ವು ದಿನಾಂಕ 26-05-2024ರಂದು ನಡೆಯಿತು. ಇದರ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ “ದೇಶ-ವಿದೇಶಗಳಲ್ಲಿ 40 ಘಟಕಗಳನ್ನು ಹೊಂದಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಯಕ್ಷಗಾನ ಕಲಾವಿದರಿಗಾಗಿ ಸೇವೆ ಮಾಡುತ್ತಿರುವುದು ಶ್ಲಾಘನೀಯ. ಯಾವ ಕಲೆಗೂ ಇಲ್ಲದ ಸಂಘಟನೆ ಶಕ್ತಿ ಯಕ್ಷಗಾನಕ್ಕೆ ಸಿಕ್ಕಿದೆ. ಒಂಭತ್ತನೆ ವರ್ಷದ ಸಂಭ್ರಮದಲ್ಲಿರುವ ಟ್ರಸ್ಟ್ ಅಶಕ್ತ ಕಲಾವಿದರಿಗೆ ನೆರವಾಗುತ್ತಿರುವುದು ಶ್ಲಾಘನೀಯ ಕಾರ್ಯ. ಟ್ರಸ್ಟಿನ ವ್ಯಾಪ್ತಿ ಇನ್ನಷ್ಟು ವಿಸ್ತಾರವಾಗಿ ಬೆಳೆಯಲಿ” ಎಂದು ಹೇಳಿದರು.
ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಕಟೀಲಿನ ವೆಂಕಟ್ರಮಣ ಆಸ್ರಣ್ಣ “ಪರೋಪಕಾರಕ್ಕೆ ಎಲ್ಲರ ಸಹಕಾರ ಇರುತ್ತದೆ ಎಂಬುದಕ್ಕೆ ಪಟ್ಲ ಟ್ರಸ್ಟ್ ಉದಾಹರಣೆಯಾಗಿದೆ. ಟ್ರಸ್ಟ್ ಮೂಲಕ ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಹಲವು ಯೋಜನೆ ರೂಪಿಸಿರುವುದು ಸ್ತುತ್ಯರ್ಹ” ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಟ್ರಸ್ಟ್ ಗೌರವಾಧ್ಯಕ್ಷ ಕುಳೂರು ಕನ್ಯಾನ ಸದಾಶಿವ ಶೆಟ್ಟಿ “ಸಂಕಷ್ಟದಲ್ಲಿ ಇರುವ ಯಕ್ಷಗಾನ ಕಲಾವಿದರಿಗೆ ಪಟ್ಲ ಟ್ರಸ್ಟ್ ನೆರವಾಗುತ್ತಿದೆ. ಟ್ರಸ್ಟ್ ಮೂಲಕ ಯಕ್ಷಗಾನ ಕಲೆ ಮತ್ತು ಕಲಾವಿದರ ಸಶಕ್ತೀಕರಣ ನಡೆಯುತ್ತಿದೆ. ಈ ಕಾರ್ಯಕ್ಕೆ ಸದಾ ನೆರವು ನೀಡುವೆ. ಮುಂದೆಯೂ ಇನ್ನಷ್ಟು ದಾನಿಗಳ ನೆರವು ಸಂಘಟನೆಗೆ ಬೇಕಿದೆ. ಎಲ್ಲರ ಸಹಕಾರದಿಂದ ಸಂಘಟನೆಯ ಶ್ರಮ ಸಾರ್ಥಕವಾಗಲಿದೆ” ಎಂದು ತಿಳಿಸಿದರು.
ಶುಭಾಶಂಸನೆ ಮಾಡಿದ ಪಾವಂಜೆ ಕ್ಷೇತ್ರದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್ “ಶ್ರೇಷ್ಠವಾದ ಯಕ್ಷಗಾನ ಕ್ಷೇತ್ರದಲ್ಲಿ ಪಟ್ಲ ಸತೀಶ್ ಶೆಟ್ಟಿ ಅವರು ಸಾಮಾಜಿಕ ಕಾರ್ಯ ನಡೆಸುತ್ತಿರುವುದು ಅತ್ಯಂತ ಉತ್ತಮ ಕೆಲಸ. ಪಟ್ಲ ಅವರ ಸಂಘಟನಾ ಚಾತುರ್ಯದಿಂದ ಇದು ಸಾಧ್ಯವಾಗಿದೆ” ಎಂದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ರಘುನಾಥ ಸೋಮಯಾಜಿ, ಬಿ.ಬಿ.ಎಂ.ಪಿ. ಹೆಚ್ಚುವರಿ ಆಯುಕ್ತ ಶಾನಾಡಿ ಅಜಿತ್‌ಕುಮಾರ್ ಹೆಗ್ಡೆ, ನಿಟ್ಟೆ ಪರಿಗಣಿತ ವಿವಿ ಉಪಾಧ್ಯಕ್ಷ ಡಾ. ಬಿ. ಸತೀಶ್ ಕುಮಾರ್ ಭಂಡಾರಿ, ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್, ಉದ್ಯಮಿಗಳಾದ ಭೋಜ ನಾರಾಯಣ ಪೂಜಾರಿ, ರವಿಶಂಕರ್ ಶೆಟ್ಟಿ ಬಡಾಜೆ, ಸಾರಿಗೆ ಉದ್ಯಮಿ ಜಯರಾಮ ಶೇಖ ಆತಿಥಿಗಳಾಗಿದ್ದರು, ಡಾ. ರವೀಶ್ ತುಂಗಾ ಆರೋಗ್ಯ ಶಿಬಿರ ಹಾಗೂ ಡಾ. ಶ್ರೀಧರ ಶೆಟ್ಟಿ ರಕ್ತದಾನ ಶಿಬಿರ ಉದ್ಘಾಟಿಸಿದರು.
ಪ್ರಮುಖರಾದ ಪಟ್ಲಗುತ್ತು ಮಹಾಬಲ ಶೆಟ್ಟಿ, ಭುವನೇಶ್ ಪಚ್ಚಿನಡ್ಕ, ಬಾಲಕೃಷ್ಣ ಹೆಗ್ಡೆ, ಅಶೋಕ್ ಆರ್. ಶೆಟ್ಟಿ ಪೆರ್ಮುದೆ, ಕರುಣಾಕರ ರೈ ದೇರ್ಲ, ಅಶೋಕ ಶೆಟ್ಟಿ ಸರಪಾಡಿ, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಭುಜಬಲಿ ಧರ್ಮಸ್ಥಳ, ಸುಧಾಕರ ಎಸ್. ಪೂಂಜ, ಸಂತೋಷ್ ಕುಮಾರ್ ಶೆಟ್ಟಿ ಬೋಳಿಯಾರ್, ದುರ್ಗಾಪ್ರಕಾಶ್ ರಾವ್, ಶೇಖರ್, ಚಂದ್ರಹಾಸ ಶೆಟ್ಟಿ, ಜಗನ್ನಾಥ ಚೌಟ, ಶಶಿಕಾಂತ ಶೆಟ್ಟಿ, ಪುರುಷೋತ್ತಮ ಕೆ. ಭುಡಾರಿ, ಸುದೇಶ್ ಕುಮಾರ್ ರೈ, ರಾಜೀವ ಪೂಜಾರಿ, ಬಾಳ ಜಗನ್ನಾಥ ಶೆಟ್ಟಿ, ಡಾ. ಮನು ರಾವ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವೈದಿಕ ಕ್ಷೇತ್ರದ ಸಾಧಕ ಡಾ. ಯಾಜಿ ನಿರಂಜನ್ ಭಟ್, ಪತ್ರಕರ್ತ ಚಿದಂಬರ ಬೈಕಂಪಾಡಿ, ನಿವೃತ್ತ ಯೋಧರಾದ ಲೆ.ಕ. ವಿನ್ಸೆಂಟ್ ಡಿಸೋಜ, ಕಮಾಂಡರ್ ಶಾಮ್ ರಾಜ್, ಕಲಾ ಸಂಘಟನೆಯಾದ ದುಬೈನ ಯಕ್ಷಗಾನ ಅಭ್ಯಾಸ ತರಗತಿ, ಶಾಸ್ತ್ರೀಯ ಸಂಗೀತ ಕ್ಷೇತ್ರದ ಕುದುಮಾರು ಎಸ್. ವೆಂಕಟರಾವ್, ಸಾಹಿತಿ ಡಾ. ರಮಾನಂದ ಬನಾರಿ, ಹರಿದಾಸ ಜಗದೀಶ್ ದಾಸ್ ಪೊಳಲಿ, ರಂಗಕರ್ಮಿ ಲಕ್ಷ್ಮಣ ಕುಮಾರ್ ಮಲ್ಲೂರು, ಭರತನಾಟ್ಯ ಕಲಾವಿದ ಬೆಳ್ತಂಗಡಿಯ ಕಮಲಾಕ್ಷ ಆಚಾರ್, ಕಂಬಳ ಕ್ಷೇತ್ರದಲ್ಲಿ ಅಶೋಕ್ ಶೆಟ್ಟಿ ಬೇಲಾಡಿ, ಯಕ್ಷಗಾನ ಎಚ್. ಚಿದಂಬರ ಬಾಬು ಕೋಣಂದೂರು, ಯಕ್ಷಗಾನ (ಬಡಗು) ನಿರ್ಜೆಡ್ಡು ಚಂದ್ರ ಕುಲಾಲ್, ಯಕ್ಷಗುರು ಮಹಾವೀರ ಪಾಂಡಿ, ಹವ್ಯಾಸಿ ಜಗನ್ನಾಥ ಶೆಟ್ಟಿ ಸಚ್ಚರಿಪೇಟೆ, ಮಹಿಳಾ ಯಕ್ಷಗಾನ ಕಲಾವಿದೆ ಪೂರ್ಣಿಮಾ ಯತೀಶ್ ರೈ, ದೈವಾರಾಧನೆ ಕ್ಷೇತ್ರದಲ್ಲಿ ಕೊರಗ ಪಾಣಾರ, ಭಜನೆ ಕ್ಷೇತ್ರದ ಭೋಜ ಸುವರ್ಣ ಕುಲಶೇಖರ ಇವರುಗಳಿಗೆ ‘ಯಕ್ಷಧ್ರುವ ಕಲಾ ಗೌರವ’ ಪ್ರದಾನ ಮಾಡಿ ಸನ್ಮಾನಿಸಲಾಯಿತು. ದಾಮೋದರ ಶರ್ಮಾ ಬಾರ್ಕೂರು ಯಕ್ಷಧ್ರುವ ಕಲಾಗೌರವ ಪುರಸ್ಕೃತರ ವಿವರ ನೀಡಿದರು. ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ರವಿ ಶೆಟ್ಟಿ ಅಶೋಕನಗರ ವಂದಿಸಿದರು. ಬೆಳಗ್ಗೆ ಚೌಕಿ ಪೂಜೆ, ಅಬ್ಬರ ತಾಳ ಹಾಗೂ ಮಹಿಳಾ ಯಕ್ಷಗಾನ ಪ್ರದರ್ಶನ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಯುವ ಭಾಗವತರಿಂದ ‘ಗಾನ ವೈಭವ’, ಯಕ್ಷಧ್ರುವದ ಯಕ್ಷಶಿಕ್ಷಣ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ಹಾಗೂ ಪಾರಂಪರಿಕ ಯಕ್ಷಗಾನ ‘ಕಿರಾತಾರ್ಜುನ’ ಪ್ರದರ್ಶನಗೊಂಡಿತು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಮಾತನಾಡಿ, “ಯಕ್ಷಗಾನ ಎಂದರೆ ಅದೊಂದು ಸಂಸ್ಕೃತಿ ಬದುಕಿಗೆ ಬೆಳಕು ನೀಡುತ್ತದೆ. ಅದರಲ್ಲಿ ಬದುಕಿಗೆ ಒಂದು ಪಾಠವಿದೆ. ಬೇರೆ ಬೇರೆ ವಿಚಾರಗಳನ್ನು ನಮಗೆ ತಿಳಿಸಿಕೊಡುತ್ತದೆ. ಜಗತ್ತನ್ನು ಪ್ರೀತಿಯಿಂದ ಗೆಲ್ಲುವ ಶಕ್ತಿ ಸತೀಶ್ ಪಟ್ಲರಲ್ಲಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಬೆನ್ನೆಲುಬಾಗುವ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಪಟ್ಲ ಫೌಂಡೇಶನ್ ಸಮಾಜಮುಖಿ ಕೆಲಸ ಮಾಡುತ್ತಿರುವುದರಿಂದ ಯಶಸ್ಸು ಕಾಣುತ್ತಿದೆ. ಯಕ್ಷಗಾನ, ದೈವಾರಾಧನೆ, ಕಂಬಳ ಸೇರಿದಂತೆ ವಿವಿಧ ರಂಗದಲ್ಲಿ ಅಶಕ್ತರಿಗೆ ನೆರವು ನೀಡುವ, ಪ್ರತಿಭಾನ್ವಿತರನ್ನು ಗೌರವಿಸುವ, ಅದರೊಂದಿಗೆ ಸೇರಿದವರನ್ನು ರಂಜಿಸುವಂತಹ ಈ ಸಮೃದ್ಧ ಸಮಾರಂಭ ನಡೆಸಿರುವುದು ಪಟ್ಲ ಅವರ ಅರ್ಪಣಾ ಮನೋಭಾವಕ್ಕೆ ಹಾಗೂ ದಾನಿಗಳ ವಿಶಾಲ ಮನೋಭಾವಕ್ಕೆ ನಿದರ್ಶನ” ಎಂದರು.
ಹಿರಿಯ ಯಕ್ಷಗಾನ ಕಲಾವಿದ ರಾಮಚಂದ್ರ ಹೆಗಡೆ ಕೊಂಡದಕುಳಿ ಇವರಿಗೆ 2024ರ ಸಾಲಿನ ‘ಯಕ್ಷಧ್ರುವ ಪಟ್ಲ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. 2024ರ ಸಾಲಿನ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿಯನ್ನು ಸಿ.ಎ. ದಿವಾಕರ್ ರಾವ್ ಮತ್ತು ಶ್ರೀಮತಿ ಶೈಲಾ ದಿವಾಕರ್ ಇವರಿಗೆ ನೀಡಲಾಯಿತು. ಈ ವೇಳೆ ಮಾತನಾಡಿದ ಕೊಂಡದಕುಳಿ ಅವರು, “ಹಿಂದಿನ ತಲೆಮಾರಿನ ಯಕ್ಷಗಾನ ಹಿರಿಯರು ಫಲಪೇಕ್ಷೆಯಿಲ್ಲದೆ ಕಷ್ಟದ ಕಾಲದಲ್ಲೂ ಕಲೆಯನ್ನು ಉಳಿಸಿ ಬೆಳೆಸಿದ್ದಾರೆ. ಅದರ ಫಲವನ್ನು ನಾವೀಗ ಉಣ್ಣುತ್ತಿದ್ದೇವೆ. ಯಾವುದೇ ಭೇದವೆಣಿಸದೆ ಎಲ್ಲರನ್ನೂ ಒಳಗೊಂಡಂತೆ ನಡೆಸುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ನಿನ ಕಾರ್ಯ ಅನುಕರಣೀಯ” ಎಂದರು.
ಯಕ್ಷಧ್ರುವ ಪಟ್ಲ ಸಂಭ್ರಮ ಸಮಾರೋಪದಲ್ಲಿ ಭಾಗವಹಿಸಿದ ನಟ ಕಿಚ್ಚ ಸುದೀಪ್ “ಯಕ್ಷಗಾನದಂತಹ ಅದ್ಭುತ ಕಲೆ ಇರುವುದು ತುಳುನಾಡಿನ ಮಣ್ಣಿನಲ್ಲಿ ಮಾತ್ರವಾಗಿದ್ದು ಬೇರೆಲ್ಲೂ ಇಂತಹ ಸಂಸ್ಕೃತಿ ಸಿಗಲು ಸಾಧ್ಯವಿಲ್ಲ. ಯಕ್ಷಗಾನ ಕಲಾವಿದರ ಮುಂದೆ ನಾವು ಬಹಳ ಚಿಕ್ಕವರಾಗಿದ್ದೇವೆ. 8 ವರ್ಷಗಳಲ್ಲಿ 12 ಕೋಟಿಯ ದಾನವೆಂದರೆ ಅದ್ವಿತೀಯ ಕೆಲಸ. ಪ್ರತಿ ಬಾರಿ ಮಂಗಳೂರಿಗೆ ಆಗಮಿಸಿದಾಗ ಮನಸ್ಸಿಗೆ ಬಹಳ ಖುಷಿಯಾಗುತ್ತದೆ. ತುಳುನಾಡಿನ ಜನರು ಸ್ವಾಭಿಮಾನಿಗಳು. ಅಷ್ಟು ಸುಲಭವಾಗಿ ಯಾರನ್ನೂ ಇಷ್ಟಪಡುವುದಿಲ್ಲ. ನಿಮ್ಮ ಮನಸ್ಸಲ್ಲಿ ನೀವು ನೀಡಿದ ಜಾಗಕ್ಕೆ ಗೌರವಪೂರ್ವಕ ನಮನಗಳು. ನನ್ನ ತಾಯಿ ತುಂಬಾ ಚೆನ್ನಾಗಿ ತುಳು ಮಾತಾನಾಡುತ್ತಾರೆ ಎಂದು ‘ಎಂಚಿನ ಮಾರಾಯರೇ ವನಸ್ ಆಂಡಾ’ ಎಂದು ತುಳುವಿನಲ್ಲಿ ಮಾತನಾಡಿದರು. ಕನ್ನಡ ಚಿತ್ರರಂಗದಲ್ಲಿ ಮಂಗಳೂರಿನ ಕಲಾವಿದರು ಬಂದು ಸಾಧನೆ ಮಾಡುತ್ತಿರುವುದು ಸಂತಸದ ಸಂಗತಿಯಾಗಿದ್ದು, ತುಳು ಚಿತ್ರರಂಗವನ್ನು ಅಭಿನಂದಿಸುತ್ತೇನೆ. ಮಂಗಳೂರು ಚಂದದ ಊರಾಗಿದ್ದು, ನಿಮ್ಮ ಪ್ರೀತಿಗೆ ಚಿರಋಣಿ. ಪಟ್ಲ ಫೌಂಡೇಶನ್ ಪುಣ್ಯದ ಕೆಲಸದಲ್ಲಿ ತೊಡಗಿದ್ದು, ಈ ಸಂಸ್ಥೆ ಇನ್ನೂ ಆಲದ ಮರದಂತೆ ಬೆಳೆಯಲಿ” ಎಂದು ಹೇಳಿದರು.
ಟ್ರಸ್ಟ್ ಗೌರವಾಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ಕಟ್ಟಿಸಿದ ಮನೆಗಳನ್ನು ಸುದೀಪ್, ಕನ್ಯಾನ ಸದಾಶಿವ ಶೆಟ್ಟಿ ಹಾಗೂ ವಕ್ವಾಡಿ ಪ್ರವೀಣ್ ಶೆಟ್ಟಿಯವರು ಕಲಾವಿದರಿಗೆ ಹಸ್ತಾಂತರಿಸಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉದ್ಯಮಿಗಳಾದ ವಕ್ವಾಡಿ ಪ್ರವೀಣ್ ಶೆಟ್ಟಿ, ಹರೀಶ್ ಶೇರಿಗಾರ್, ಉದ್ಯಮಿಗಳಾದ ಕೆ.ಕೆ.ಶೆಟ್ಟಿ, ಕನ್ಯಾನ ರಘುರಾಮ್ ಶೆಟ್ಟಿ, ಇನ್ನಂಜೆ ಶಶಿಧರ ಶೆಟ್ಟಿ, ಕೃಷ್ಣಮೂರ್ತಿ ಮಂಜ, ತಲ್ಲೂರು ಶಿವರಾಮ ಶೆಟ್ಟಿ, ರಘು ಎಲ್. ಶೆಟ್ಟಿ, ಸುಧಾಕರ್ ಶೆಟ್ಟಿ ಸುಗ್ಗಿ, ಗಿರೀಶ್ ಶೆಟ್ಟಿ ಕಟೀಲು, ಅಜಿತ್ ಶೆಟ್ಟಿ, ಅಮೃತೇಶ್ವರಿ ಹಲವುಮಕ್ಕಳ ತಾಯಿ ದೇವಸ್ಥಾನದ ಆಡಳಿತ ಮೊಕ್ತೇಸರ ಆನಂದ ಸಿ. ಕುಂದರ್, ಅಶೋಕ್ ಶೆಟ್ಟಿ ಉಳ್ತೂರು, ಮೋಹನದಾಸ್ ಶೆಟ್ಟಿ, ಎನ್.ಟಿ. ಪೂಜಾರಿ, ಪುತ್ತಿಗೆ ಯೋಗೇಂದ್ರ ಭಟ್ ಉಳಿ, ಗೋಪಾಲ್ ಶೆಟ್ಟಿ, ಟ್ರಸ್ಟಿನ ಪದಾಧಿಕಾರಿಗಳಾದ ಸುದೇಶ್ ಕುಮಾರ್ ರೈ, ಡಾ. ಮನುರಾವ್, ಬಾಳ ಜಗನ್ನಾಥ ಶೆಟ್ಟಿ, ದುರ್ಗಾಪ್ರಸಾದ್, ರಾಜೀವ ಪೂಜಾರಿ, ಉದಯ ಕುಮಾರ್ ಶೆಟ್ಟಿ, ರವಿಚಂದ್ರ ಶೆಟ್ಟಿ ಅಶೋಕನಗರ ಮತ್ತಿತರರು ಉಪಸ್ಥಿತರಿದ್ದರು. ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು. ಕದ್ರಿ ನವನೀತ ಶೆಟ್ಟಿ ನಿರೂಪಿಸಿ, ಪ್ರದೀಪ್ ಆಳ್ವ ಕದ್ರಿ ವಂದಿಸಿದರು. ಸಮಾರೋಪ ಸಮಾರಂಭದ ಬಳಿಕ ಪ್ರಸಿದ್ಧ ಹಾಸ್ಯ ಕಲಾವಿದರು ‘ಯಕ್ಷಗಾನ ಹಾಸ್ಯ ವೈಭವ’ ಪ್ರಸ್ತುತಗೊಳಿಸಿದರು.